‘ಮಾನನಷ್ಟ ಮೊಕದ್ದಮೆ ರಾಜಕೀಯ ಅಸ್ತ್ರವಲ್ಲ…’ ಜಯಲಲಿತಾಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ಡಿಜಿಟಲ್ ಕನ್ನಡ ಟೀಮ್:

ಸರ್ಕಾರದ ವಿರುದ್ಧದ ಟೀಕೆಯನ್ನು ಹತ್ತಿಕ್ಕಲು ಮಾನನಷ್ಟ ಮೊಕದ್ದಮೆ ಎಂಬ ಆಯುಧ ಬಳಸಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.

ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಡಿಎಂಡಿಕೆ ಮುಖ್ಯಸ್ಥ ಎ.ವಿಜಯಕಾಂತ್ ಅವರ ಮೇಲೆ ತಮಿಳುನಾಡು ಸರ್ಕಾರ ಮಾನನಷ್ಟ ಮೊಕದ್ದಮೆ ಹೂಡಿತ್ತು. ಹೀಗಾಗಿ ಸರ್ಕಾರ ತಮ್ಮ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆಯನ್ನು ರದ್ದು ಮಾಡಬೇಕೆಂದು ವಿಜಯಕಾಂತ್ ಅವರು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಬುಧವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಜಯಲಲಿತಾ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಜಯಲಲಿತಾ ಅವರಿಗೆ ಸುಪ್ರೀಂ ಹೇಳಿದ್ದೇನು? ಇಲ್ಲಿದೆ ನೋಡಿ..

‘ಪ್ರಜಾಪ್ರಭುತ್ವದ ಉಸಿರುಗಟ್ಟಿಸಲು ಮಾನನಷ್ಟ ಮೊಕದ್ದಮೆಯನ್ನು ಸಾಧನವನ್ನಾಗಿ ಬಳಸುವಂತಿಲ್ಲ. ಇದನ್ನು ಒಪ್ಪಲು ಸಾಧ್ಯವೂ ಇಲ್ಲ. ಸಾರ್ವಜನಿಕ ಜೀವನದಲ್ಲಿ ಹೆಚ್ಚು ಗುರುತಿಸಿಕೊಂಡಿರುವ ನೀವು ಟೀಕೆಗಳನ್ನು ಎದುರಿಸುವುದನ್ನು ಕಲಿಯಬೇಕು. ಸರ್ಕಾರ ತಮ್ಮ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಈ ಮಾನನಷ್ಟ ಮೊಕದ್ದಮೆ ಬಳಸಬಾರದು. ಟೀಕಾಕರರ ವಿರುದ್ಧ ಈ ಮೊಕದ್ದಮೆ ದಾಖಲಿಸುವ ಬದಲು ಸರ್ಕಾರ ಉತ್ತಮ ಆಡಳಿತದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಪ್ರಜಾಪ್ರಭುತ್ವದಲ್ಲಿ ಟೀಕೆಗೆ ಅವಕಾಶವಿರಬೇಕು. ಹೀಗಾಗಿ ಮಾನನಷ್ಟ ಎಂಬುದು ರಾಜಕೀಯ ಅಸ್ತ್ರವಾಗಬಾರದು. ಸರ್ಕಾರವನ್ನು ಟೀಕಿಸಿದ ಮಾಧ್ಯಮದವರ ಮೇಲೂ ಹೆಚ್ಚಿನ ಪ್ರಮಾಣದಲ್ಲಿ ಮಾನನಷ್ಟ ಮೊಕದ್ದಮೆ ಹಾಕಲಾಗುತ್ತಿದೆ. ಕೇವಲ ಮುಖ್ಯಮಂತ್ರಿಗಳ ಆರೋಗ್ಯ ಸ್ಥಿತಿಯ ಬಗ್ಗೆ ವರದಿ ಮಾಡಿದರೂ ಈ ಮೊಕದ್ದಮೆ ಹೂಡುತ್ತಿದ್ದೀರಿ. ಇದರೊಂದಿಗೆ ಈ ಮೊಕದ್ದಮೆಯ ಅವಕಾಶವನ್ನು ತಮಿಳುನಾಡು ಸರ್ಕಾರ ದುರುಪಯೋಗ ಪಡಿಸಿಕೊಂಡಷ್ಟು ಇನ್ಯಾವುದೇ ರಾಜ್ಯ ಸರ್ಕಾರ ದುರುಪಯೋಗ ಮಾಡಿಲ್ಲ.’

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಕಾಂತ್ ಹಾಗೂ ವರ ಪತ್ನಿ ಪ್ರೇಮಲತಾ ಅವರ ವಿರುದ್ಧ ನೀಡಲಾಗಿದ್ದ ಜಾಮೀನುರಹಿತ ಬಂಧನ ವಾರೆಂಟ್ ಅನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದಿದೆ.

Leave a Reply