ಬಾಡಿಗೆ ತಾಯ್ತನಕ್ಕೆ ಕೇಂದ್ರದ ಅಂಕುಶ, ಸೆಲೆಬ್ರಿಟಿ ಖಾಂದಾನುಗಳ ಇನ್ನೊಂದು ಅಸಹಿಷ್ಣುತಾ ಪರ್ವ ನಿರೀಕ್ಷಿತ?

ಡಿಜಿಟಲ್ ಕನ್ನಡ ವಿಶೇಷ:

 – ಈ ಸರ್ಕಾರ ನಮ್ಮ ಬೆಡ್ರೂಮಿಗೇ ಬರುತ್ತಿದೆ…

– ಸರ್ಕಾರವನ್ನು ಕೇಳಿ ನಮಗೆ ಬೇಕಾದ ಮಕ್ಕಳನ್ನು ಮಾಡಿಕೊಳ್ಳಬೇಕೇ? ಇದು ಖಾಸಗಿ ಆಯ್ಕೆಯ ಮೇಲಿನ ಅತಿ ಘೋರ ಹೊಡೆತ…

– ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿದ್ದಿದ್ದಾಯ್ತು, ಈಗ ಮಕ್ಕಳನ್ನು ಮಾಡಿಕೊಳ್ಳುವ ಸ್ವಾತಂತ್ರ್ಯಕ್ಕೂ ಕೊಕ್ಕೆ ಹಾಕುವ ಫ್ಯಾಸಿಸ್ಟ್ ಧೋರಣೆ…

ಈ ಮಾದರಿಯ ಬೊಬ್ಬೆಗಳನ್ನು ಕೇಳುವುದಕ್ಕೆ ತಯಾರಾಗಿರಿ. ಇವತ್ತೋ, ನಾಳೆಯೋ ಶುರುವಾದೀತು. ವಿಷಯ ಏನೆಂದರೆ ಕೇಂದ್ರ ಸಚಿವ ಸಂಪುಟ ಬುಧವಾರ ‘ಬಾಡಿಗೆ ಗರ್ಭಧಾರಣೆ ವಿಧಿ ಮಸೂದೆ 2016’ಗೆ ಒಪ್ಪಿಗೆ ನೀಡಿದೆ. ಇದರೊಂದಿಗೆ ಬಾಡಿಗೆ ಗರ್ಭಧಾರಣೆ ವಾಣಿಜ್ಯೀಕರಣವಾಗುತ್ತಿರೋದಕ್ಕೆ ತಡೆ ನೀಡುವುದು ಸರ್ಕಾರದ ಉದ್ದೇಶ.

ಮಕ್ಕಳನ್ನು ಹೊಂದುವುದೆಂದರೆ ಖುಷಿಯ ಸಂಗತಿ ನಿಜ. ಆದರೆ ಅದು ಜವಾಬ್ದಾರಿಯ ಸಂಗತಿಯೂ ಹೌದು. ಮಕ್ಕಳೇಕೆ ಬೇಕು ಅಂತಂದರೆ, ನನ್ನ ಬಳಿ ಹಣವಿದೆ ಅದಕ್ಕಾಗಿ ಬೇಕು ಎಂದಾಗಬಾರದಲ್ಲವೇ? ಮಗು ಎಂಬುದು ಕನಿಷ್ಠ 20 ವರ್ಷದ ಗುರುತರ ಜವಾಬ್ದಾರಿ. ಅದರ ನಂತರವೂ ಹೊಣೆ ಮುಗಿಯಿತೇನೆಂದಲ್ಲ.

ಈ ಎಲ್ಲ ಆಶಯಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಮಸೂದೆ ಬಗ್ಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ನೀಡಿದ ಮಾಹಿತಿಗಳು ಹೀಗಿವೆ:

– ಬಂಜೆತನ ಎದುರಿಸುತ್ತಿರುವ ದಂಪತಿಗೆ ಬಾಡಿಗೆ ತಾಯಿಯ ಮೂಲಕ ಮಗುವನ್ನು ಹೊಂದುವ ಅವಕಾಶವನ್ನು ಮುಕ್ತವಾಗಿಡಲಾಗಿದೆ. ಆದರೆ ಇದು ವ್ಯಾಪಾರವಾಗಬಾರದು. ಹೀಗಾಗಿ ಈ ಬಾಡಿಗೆ ಗರ್ಭಧಾರಣೆ ಉಪಯೋಗ ಪಡೆಯುವ ದಂಪತಿ ಕಾನೂನಿನ ಪ್ರಕಾರ ಮದುವೆಯಾಗಿರಬೇಕು. ಈ ದಂಪತಿ ಪೈಕಿ ಯಾರಿಗೆ ಬಂಜೆತನದ ಸಮಸ್ಯೆ ಇದೆ ಎಂಬುದರ ಬಗ್ಗೆ ವೈದ್ಯಕೀಯ ಹಾಗೂ ಇತರೆ ಅಗತ್ಯ ದಾಖಲೆಗಳನ್ನು ಒದಗಿಸಬೇಕು.

– ಏಕ ಪೋಷಕ, ಲಿವಿಂಗ್ ರಿಲೇಷನ್ ನಲ್ಲಿರುವವರು ಹಾಗೂ ಸಲಿಂಗಿ ಜೋಡಿಗಳು ಈ ಬಾಡಿಗೆ ಗರ್ಭಧಾರಣೆಯ ಉಪಯೋಗ ಪಡೆಯಲು ಸಾಧ್ಯವಿಲ್ಲ.

– ಯಾವುದೇ ದಂಪತಿ ಈ ಬಾಡಿಗೆ ಗರ್ಭಧಾರಣೆಯಿಂದ ಮಗು ಪಡೆಯಬೇಕಾದರೆ ಅವರು ಮದುವೆಯಾಗಿ ಕನಿಷ್ಠ 5 ವರ್ಷವಾಗಿರಬೇಕು.

– ಈ ವಿಧಾನದಲ್ಲಿ ಭಾರತೀಯ ನಾಗರೀಕರು ಮಗು ಪಡೆಯಬಹುದೇ ಹೊರತು ಅನಿವಾಸಿ ಭಾರತೀಯರು ಪಡೆಯಲು ಸಾಧ್ಯವಿಲ್ಲ.

– ಈಗಾಗಲೇ ಮಗು ಹೊಂದಿರುವವರು ಅಥವಾ ಮಗುವನ್ನು ದತ್ತು ಪಡೆದಿರುವವರು ಬಾಡಿಗೆ ಗರ್ಭಧಾರಣೆಯಿಂದ ಮತ್ತೆ ಮಗು ಪಡೆಯಲು ಸಾಧ್ಯವಿಲ್ಲ.

ಇಷ್ಟೇ ಆಗಿದ್ದರೆ ಕೇವಲ ಒಂದು ವರ್ಗದವರು ಪ್ರೈವಸಿ, ಪ್ರತಿಗಾಮಿತನ ಎಂದು ಬಯ್ದುಕೊಳ್ಲುತ್ತಿದ್ದರೇನೋ. ಆದರೆ ಸುಷ್ಮಾ ಸ್ವರಾಜ್ ಒಂದು ಹೆಜ್ಜೆ ಮುಂದೆ ಹೋಗಿ ತಾರಾವರ್ಚಸ್ಸಿಗರ ಬಾಡಿಗೆ ತಾಯ್ತನದ ಖಯಾಲಿಯನ್ನು ಪ್ರಶ್ನಿಸಿದ್ದಾರೆ.

ಮಕ್ಕಳನ್ನು ಹೊಂದಿದ್ದರೂ ಬಾಡಿಗೆ ಗರ್ಭಧಾರಣೆ ಮೂಲಕ ಮತ್ತೊಂದು ಮಗು ಪಡೆಯುವ ಬಾಲಿವುಡ್ ತಾರೆಯರ ನಿರ್ಧಾರದ ಬಗ್ಗೆ ಸುಷ್ಮಾ ಹೇಳಿದ್ದು… ‘ಇದು ತಮಾಷೆಯ ವಿಷಯವಲ್ಲ. ಇತ್ತೀಚಿನ ದಿನಗಳಲ್ಲಿ ಮಗು ಇರುವವರು ಸಹ, ತಮ್ಮ ಪತ್ನಿ ನೋವು ಅನುಭವಿಸಬಾರದು ಎಂಬ ಕಾರಣಕ್ಕೆ ಬಾಡಿಗೆ ಗರ್ಭಧಾರಣೆ ಮೂಲಕ ಮತ್ತೆ ಮಗು ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದಿದ್ದಾರೆ.

ಪತ್ನಿ ಗೌರಿ ಗರ್ಭದಿಂದ ಇಬ್ಬರು ಮಕ್ಕಳನ್ನು ಪಡೆದಿದ್ದ ಶಾರುಖ್ ಖಾನ್, ಬಾಡಿಗೆ ತಾಯ್ತನದ ಮೂಲಕ ಮತ್ತೊಂದು ಗಂಡುಮಗುವನ್ನು ಪಡೆದರು. ಆಮೀರ್ ಖಾನ್ ಮೊದಲ ಮದುವೆಯಿಂದ ವಿಚ್ಛೇದಿತರಾಗಿ ಕಿರಣ್ ರಾವ್ ಅವರನ್ನು ಮದುವೆಯಾದ ನಂತರ, ಮಗುವನ್ನು ಹೊಂದಲು ಕಿರಣ್ ಅವರಿಗೆ ಕೆಲ ತೊಂದರೆಗಳು ಎದುರಾಗಿದ್ದರಿಂದ ಬಾಡಿಗೆ ತಾಯ್ತನದ ಮೂಲಕ ಎರಡನೇ ದಾಂಪತ್ಯಕ್ಕೊಂದು ಮಗು ಪಡೆದರು. ಮೊದಲ ದಾಂಪತ್ಯದ ಮಕ್ಕಳು ಇವರೊಂದಿಗೆ ಸಮರಸದ ಭಾವ ಹೊಂದಿಲ್ಲ ಎಂದೇನೂ ಇಲ್ಲ.

ಇದಕ್ಕೆ ಭಾವನಾತ್ಮಕ ಕಾರಣಗಳನ್ನು ಕೊಡಬಹುದಾದರೂ, ಕೊನೆಗೂ ನನ್ನಲ್ಲಿ ಹಣವಿತ್ತು ಹಾಗಾಗಿ ಮಗುವನ್ನು ಕೊಂಡೆ ಎಂಬುದೇ ಅಲ್ಲಿನ ಸಾರ.

ಆದರೆ ಉಳಿದ ಸಂದರ್ಭಗಳಲ್ಲೆಲ್ಲ ಶೋಷಣೆ, ಸ್ತ್ರೀ ಶೋಷಣೆ ಎಂದೆಲ್ಲ ಮಾತನಾಡುವ ಪ್ರತಿಷ್ಠಿತರು, ಅಭಿಪ್ರಾಯ ನಿರೂಪಕರ ವರ್ಗ ಕೇಂದ್ರದ ಕ್ರಮಗಳನ್ನು ಸ್ವಾಗತಿಸುವುದೋ ಅಥವಾ ಮುಂಬರುವ ದಿನಗಳಲ್ಲಿ ಖಾಸಗಿತನ, ಬೆಡ್ರೂಮ್ ಸ್ವಾತಂತ್ರ್ಯ ಎಂದು ತಕರಾರಿನ ಮಾರ್ಗ ಹಿಡಿಯುವುದೋ ಕಾದು ನೋಡಬೇಕಿದೆ.

ಭಾರತದಲ್ಲಿ ಬಾಡಿಗೆ ತಾಯ್ತನವೆಂಬುದು ಉದ್ಯಮದಂತೆ ಬೆಳೆದಿರುವುದೇ ಸರ್ಕಾರ ಈ ಕ್ರಮಕ್ಕೆ ಮುಂದಾಗಿರಲು ಕಾರಣ. ಗರ್ಭಧಾರಣೆ ಮತ್ತು ಫಲವತ್ತತೆ ವಿಷಯದಲ್ಲಿ ಕೆಲಸ ಮಾಡುವ ಹಲವು ವೈದ್ಯಕೇಂದ್ರಗಳು ಇದನ್ನೇ ದಂದೆಯಾಗಿ ಮಾಡಿಕೊಂಡಿದ್ದರ ಪರಿಣಾಮ, ಭಾರತದಲ್ಲಿ ಇದು ಸುಮಾರು 3 ಸಾವಿರ ಕೋಟಿ ರುಪಾಯಿಗಳ ವಹಿವಾಟಾಗಿ ಬೆಳೆದಿತ್ತೆಂಬ ಅಂಕಿಅಂಶಗಳು ಕೆಲವು ಖಾಸಗಿ ಅಧ್ಯಯನಗಳು ಸಾರಿವೆ. ನಿಜ ಆತಂಕ ಏನೆಂದರೆ, ಇದರಲ್ಲಿ ಬಾಡಿಗೆ ತಾಯಿ ಆಗುತ್ತಿದ್ದವರ ಆರೋಗ್ಯ ಕಾಳಜಿ ಮರೆಯಾಗಿ, ಇದೊಂದು ಚೌಕಾಶಿಯ ವ್ಯಾಪಾರವಾಗಿತ್ತು. ಇಲ್ಲಿ ಕೆಲವು ಮಾನಸಿಕ ಆಘಾತಗಳೂ ಆಗುತ್ತಿದ್ದವು. ನವಮಾಸ ತನ್ನ ಗರ್ಭದಲ್ಲಿ ಬೇರೆ ಹೆಣ್ಣಿನ ಅಂಡಾಣುವಿನ ಜೀವವನ್ನೇ ಹೊತ್ತರೂ, ಬಾಡಿಗೆ ತಾಯಿ ಶಿಶುವಿನೊಂದಿಗೆ ಮಾನಸಿಕವಾಗಿ ಬೆರೆತು ತೊಳಲಾಟಕ್ಕೆ ಸಿಲುಕಿದ ಕತೆಗಳೆಲ್ಲ ಸುದ್ದಿಯಾಗದೇ ಉಳಿದಿವೆ. ಅನಾಮಿಕತೆಯೇ ಪ್ರಧಾನವಾಗಿರುವ ಈ ವಲಯದಿಂದ ವ್ಯಥೆಗಳು ಬೆಳಕಿಗೆ ಬಾರದೇ ಕತ್ತಲಲ್ಲೇ ಸಮಾಧಿಯಾಗುತ್ತವೆ.

2012ರಲ್ಲಿ ಆಸ್ಟ್ರೋಲಿಯದ ದಂಪತಿ ಇಲ್ಲಿ ಗೊತ್ತುಮಾಡಿಕೊಂಡಿದ್ದ ಬಾಡಿಗೆ ತಾಯಿಗೆ ಅವಳಿ ಮಕ್ಕಳು ಹುಟ್ಟಿದಾಗ, ತಮ್ಮ ಒಪ್ಪಂದ ಒಂದಕ್ಕೆ ಮಾತ್ರ ಹಾಗೂ ಎರಡನ್ನು ಸಾಕಲಾರದೆಂದು ಹೇಳಿ ಮಗುವೊಂದನ್ನು ಇಲ್ಲಿಯೇ ಬಿಟ್ಟುಹೋದ ಘಟನೆ ವರದಿಯಾಗಿತ್ತು. ವರ್ಷಕ್ಕೆ ಸುಮಾರು 12 ಸಾವಿರ ವಿದೇಶಿಗರು ಭಾರತಕ್ಕೆ ಬಾಡಿಗೆ ತಾಯಂದಿರ ಸೇವೆ ಪಡೆಯಲು ಬರುತ್ತಾರೆಂಬುದು ಒಂದು ಅಂದಾಜು. ಇದಲ್ಲಿ ಹೆಚ್ಚಿನವರು ಇಂಗ್ಲೆಂಡಿನವರು. ಇಂಗ್ಲೆಂಡ್, ಫ್ರಾನ್ಸ್, ಇಟಲಿ, ಸ್ಪೇನ್ ಇಲ್ಲೆಲ್ಲ ಬಾಡಿಗೆ ತಾಯ್ತನಕ್ಕೆ ನಿಷೇಧವಿದೆ. ಹೀಗಾಗಿ ಭಾರತ ಇವರಿಗೆಲ್ಲ ಹೆರಿಗೆ ಬಟ್ಟಲು. ಅಮೆರಿಕದಲ್ಲಿ ನಿಬಂಧನೆ ಇಲ್ಲವಾದರೂ ಇಲ್ಲಿನ ಬಾಡಿಗೆ ತಾಯಿ ತುಲನಾತ್ಮಕವಾಗಿ ಅತಿ ಕಡಿಮೆ ಬೆಲೆಗೆ ಲಭ್ಯವಾದ್ದರಿಂದ ಇಲ್ಲಿಗೇ ಬರುತ್ತಾರೆ.

ಇಂಥ ಕಳವಳದ ಅಂಶಗಳೇನಿದ್ದರೂ, ಈ ಕಾಯ್ದೆ ಮಕ್ಕಳನ್ನು ಪಡೆಯುವ ಮೂಲಭೂತ ಸ್ವಾತಂತ್ರ್ಯಕ್ಕೆ ಹೇಗೆಲ್ಲ ಅಡ್ಡಿ ಉಂಟುಮಾಡಲಿದೆ ಎಂಬ ಘನಘೋರ ಲೇಖನಗಳು ಅದಾಗಲೇ ಡಿಜಿಟಲ್ ವೇದಿಕೆಯಲ್ಲಿ ಶುರುವಾಗಿದ್ದು, ಕಾಯ್ದೆಯ ರೂಪುರೇಷೆಗಳು ಇನ್ನಷ್ಟು ಸ್ಪಷ್ಟವಾಗುತ್ತಿದ್ದಂತೆ ಪ್ರತಿಷ್ಠಿತ ವಲಯದ ಅಸಹಿಷ್ಣುತಾ ಗದ್ದಲ ಇನ್ನೊಮ್ಮೆ ಶುರುವಾಗುವ ಎಲ್ಲ ಸಾಧ್ಯತೆಗಳಿವೆ.

Leave a Reply