ಪಾಕ್ ಆಕ್ರಮಿತ ಕಾಶ್ಮೀರದ ಉಗ್ರದಾಳಿ ಸಂತ್ರಸ್ತರಿಗೂ ಕೇಂದ್ರದ ಪರಿಹಾರ, ಪಾಕಿಸ್ತಾನಕ್ಕೆ ಮೋದಿ ಸರ್ಕಾರದ ಮತ್ತೊಂದು ಪ್ರಹಾರ!

ಡಿಜಿಟಲ್ ಕನ್ನಡ ಟೀಮ್:

ಉಗ್ರದಾಳಿಗೆ ಬಲಿಯಾಗುವ ಭಾರತೀಯರಿಗೆ ಕೇಂದ್ರ ಸರ್ಕಾರವು ಪರಿಹಾರಗಳನ್ನು ಹೆಚ್ಚಿಸಿ ಇದಕ್ಕೆ ಸ್ಪಷ್ಟ ಮಾರ್ಗಸೂಚಿ ರೂಪಿಸಿದೆ. ವಿಶೇಷ ಹಾಗೂ ಬುದ್ಧಿವಂತಿಕೆಯ ನಡೆ ಎಂದರೆ ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರದ ಜನರೂ ಈ ಪರಿಹಾರಕ್ಕೆ ದಾಖಲೆ ಸಲ್ಲಿಸಬಹುದು ಎಂದು ಹೇಳಿದೆ!

ಈ ಬಗ್ಗೆ ಪ್ರಧಾನಿ ಕಚೇರಿಯ ಸಹಾಯಕ ಸಚಿವರಾಗಿರುವ ಜಿತೇಂದ್ರ ಸಿಂಗ್ ಸ್ಪಷ್ಟಪಡಿಸಿರುವುದು ಹೀಗೆ- ‘ಪಾಕಿಸ್ತಾನ ಆಕ್ರಮಿತ ಜಮ್ಮು-ಕಾಶ್ಮೀರವೂ ಭಾರತಕ್ಕೆ ಸೇರಿರುವ ಭಾಗವೇ ಆದ್ದರಿಂದ ಅಲ್ಲಿನ ನಾಗರಿಕರಿಗೂ ಪರಿಹಾರ ಕೇಳುವ ಹಕ್ಕಿದೆ. ಭಾರತ ಸಂವಿಧಾನದ ಪ್ರಕಾರ ನಿಯಮಗಳು ಅಲ್ಲಿಗೂ ಒಂದೇ. ಅಲ್ಲಿನ ನಾಗರಿಕರೂ ಇಂಥ ಪರಿಸ್ಥಿತಿಯ ಬಲಿಪಶುಗಳಾಗುತ್ತಿದ್ದಾರೆ’ ಎಂದಿದ್ದಾರೆ.

ಕೇಂದ್ರ ಸಂಪುಟವು ಅನುಮೋದಿಸಿರುವ ಯೋಜನೆಯ ಹೆಸರೇ ‘ಭಾರತದ ನೆಲದಲ್ಲಿ ಉಗ್ರವಾದ/ ಕೋಮುಗಲಭೆ/ಎಡಪಂಥೀಯ ತೀವ್ರವಾದ, ಗಡಿಯಾಚೆಯಿಂದ ಗುಂಡಿನ ದಾಳಿ/ ಐಇಡಿ ಸ್ಫೋಟಗಳಲ್ಲಿ ಸಂತ್ರಸ್ತರಾಗುವ ನಾಗರಿಕರಿಗೆ ಕೇಂದ್ರದ ಸಹಾಯ’ ಎಂಬುದಾಗಿದೆ.

ಇದನ್ನು ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರಕ್ಕೂ ವಿಸ್ತರಿಸಿರುವುದು ಜಮ್ಮು-ಕಾಶ್ಮೀರದ ಕುರಿತು ಮೋದಿ ಸರ್ಕಾರದ ಬದಲಾದ ಗಡಸು ನೀತಿಗೆ ಅನುಗುಣವಾಗಿಯೇ ಇದೆ. ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ಪಾಕ್ ಪ್ರೇರಿತ ದಮನಕಾರಿ ಉಗ್ರನೀತಿ ಕೆಲಸ ಮಾಡುತ್ತಿದೆ. ಅಫಘಾನಿಸ್ತಾನ ಗಡಿಗೆ ಹೊಂದಿಕೊಂಡಿರುವುದರಿಂದ ಆಗಾಗ ತಾಲಿಬಾನ್ ಉಗ್ರರ ಉಪಟಳವೂ ಕಂಡುಬರುತ್ತದೆ. ಈ ಪೈಕಿ ಕೆಲವೇ ಸಂತ್ರಸ್ತರು ಪರಿಹಾರಕ್ಕಾಗಿ ಭಾರತ ಸರ್ಕಾರಕ್ಕೆ ಅರ್ಜಿ ಹಾಕಿದರೂ ದೀರ್ಘಾವಧಿಯಲ್ಲಿ ನಮ್ಮಲ್ಲೊಂದು ಮಾಹಿತಿ ನಿರ್ಮಾಣವಾಗುತ್ತದೆ. ಬಹಳ ಮುಖ್ಯವಾಗಿ ಪಾಕ್ ಆಕ್ರಮಿತ ಕಾಶ್ಮೀರದ ವಿಷಯದಲ್ಲಿ ಭಾರತವು ತನ್ನ ಬದ್ಧತೆ ಸಾಬೀತುಪಡಿಸುತ್ತಿರುವ ಗುರುತರ ಹೆಜ್ಜೆ ಇದಾಗಿದೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನದ ಆಡಳಿತಾತ್ಮಕ ಉಪೇಕ್ಷೆ ಇರುವುದರಿಂದ ತಮಗೆ ಭಾರತೀಯ ಶಿಕ್ಷಣ ಸಂಸ್ಥೆಗಳಲ್ಲಿ ಅವಕಾಶ ಮಾಡಿಕೊಡಬೇಕು ಎಂಬ ಒತ್ತಾಯ ಬಹಳ ಹಿಂದೆ ಕೇಳಿಬಂದಿತ್ತಾದರೂ, ನಕಾಶೆಯಲ್ಲಿ ಮಾತ್ರ ಆ ಪ್ರದೇಶಗಳನ್ನು ನಮ್ಮದೆಂದು ತೋರಿಸಿ ಉಳಿದಂತೆ ಉಸಾಬರಿ ಏಕೆ ಎಂದು ಸುಮ್ಮನಿದ್ದ ಸರ್ಕಾರಗಳ ನೀತಿಯಿಂದ ಅಂಥ ಧ್ವನಿಗಳು ಗಟ್ಟಿಯಾಗಿರಲೇ ಇಲ್ಲ. ಗಿಲ್ಗಿಟ್- ಬಾಲ್ಟಿಸ್ತಾನದಲ್ಲಿ ಪಾಕಿಸ್ತಾನದ ವಿರುದ್ಧ ಧ್ವನಿ ಎತ್ತಿ ವಿದೇಶಗಳಲ್ಲಿ ಆಶ್ರಯ ಪಡೆದಿರುವ ಕೆಲವರು ಭಾರತದ ಸಂಪರ್ಕದಲ್ಲಿದ್ದಾರೆ. ಇಲ್ಲಿನ ವಿಚಾರಕೂಟಗಳಲ್ಲಿ ಪಾಲ್ಗೊಂಡು ಅಲ್ಲಿನ ಕೆಟ್ಟ ಸ್ಥಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಹೀಗಾಗಿ ಇಂಥದೊಂದು ನೀತಿ ಜಮ್ಮು-ಕಾಶ್ಮೀರದ ವಿಚಾರದಲ್ಲಿ ತೆರೆದುಕೊಂಡಿರುವ ಬೌದ್ಧಿಕ ಸಮರದಲ್ಲಿ ಒಂದು ಬಹುಮುಖ್ಯ ನಡೆ. ಯೋಜನೆ ಘೋಷಿಸಿದಾಕ್ಷಣ ಅಲ್ಲಿನ ಸಂತ್ರಸ್ತರೆಲ್ಲ ಭಾರತ ಸರ್ಕಾರಕ್ಕೆ ಅರ್ಜಿ ಹಾಕಿಬಿಡುತ್ತಾರೆಯೇ ಎಂಬ ಪ್ರಶ್ನೆ ಇಲ್ಲಿ ಗೌಣ.

ಉಳಿದಂತೆ, ಈ ದೇಶವ್ಯಾಪಿ ಯೋಜನೆಯ ಮುಖ್ಯಾಂಶಗಳು ಹೀಗಿವೆ.

  • ಪರಿಹಾರ ಮೊತ್ತವನ್ನು ಹಿಂದಿದ್ದ ₹3 ಲಕ್ಷದಿಂದ ₹5 ಲಕ್ಷಕ್ಕೆ ಏರಿಸಲಾಗಿದೆ. ಮೃತನ ಅತಿ ಹತ್ತಿರದ ಸಂಬಂಧಿಗೆ ಪರಿಹಾರದ ಮೊತ್ತ ಸಿಗುತ್ತದೆ. ಮೇಲೆ ಪಟ್ಟಿ ಮಾಡಲಾದ ಕಾರಣಗಳಲ್ಲಿ ಒಂದಕ್ಕೆ ಸಿಲುಕಿ ಶೇ. 50ರಷ್ಟು ಗಾಯಗೊಂಡವರಿಗೂ ₹5 ಲಕ್ಷ ಪರಿಹಾರ ಸಿಗುತ್ತದೆ.
  • ಪರಿಹಾರಕ್ಕೆ ಅರ್ಹವಾಗಬೇಕೆಂದರೆ ಅನುಕಂಪದ ಆಧಾರದಲ್ಲಿ ಸಂತ್ರಸ್ತ ಕುಟುಂಬದವರು ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ನೌಕರಿ ಪಡೆದಿರಬಾರದು ಎಂಬ ನಿಯಮವಿದೆ.
  • ಪರಿಹಾರ ನಿಯಮಗಳು 2008ರಲ್ಲೇ ಜಾರಿಯಾಗಿವೆ. ಮುಖ್ಯವಾಗಿ ಗಡಿಯಾಚೆಗಿನ ಗುಂಡಿನ ದಾಳಿಯ ಸಂತ್ರಸ್ತರನ್ನೂ ಯೋಜನೆಗೆ ಸೇರಿಸಿರುವುದು, ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರಕ್ಕೆ ಯೋಜನೆ ವಿಸ್ತರಣೆ ಹಾಗೂ ಪರಿಹಾರ ಮೊತ್ತ ಏರಿಕೆ ಈಗ ಕೈಗೊಂಡಿರುವ ಹೊಸಕ್ರಮಗಳು. ಉಳಿದಂತೆ, ಯೋಜನೆ ಶುರುವಾದಾಗಿನಿಂದ ₹35.89 ಕೋಟಿಗಳನ್ನು ಪರಿಹಾರಕ್ಕೆ ವ್ಯಯಿಸಲಾಗಿದೆ.

Leave a Reply