ತಾಯಿ ಕೊಟ್ಟ ಕೊನೆಯ ಮುತ್ತು ಕಂಬನಿಯಲಿ ನೆನೆಯಲು… ಕೃಷ್ಣಾಷ್ಟಮಿ ದಿನ ಪುತಿನರ ಪದ್ಯ ನೆನಪು

ಚೈತನ್ಯ ಹೆಗಡೆ

ಬಾಹುಬಲಿ ಚಿತ್ರ ನೋಡಿದವರೆಲ್ಲ, ಅದರಲ್ಲಿ ಶಿವಗಾಮಿಯ ಪಾತ್ರವು ಪ್ರವಾಹದಲ್ಲಿ ಮಗುವನ್ನು ರಕ್ಷಿಸಿ ದಡಕೊಯ್ಯುವ ದೃಶ್ಯ ನೋಡಿ, ವಸುದೇವನು ಬಾಲಕೃಷ್ಣನನ್ನುಕರೆದೊಯ್ಯುವ ಸನ್ನಿವೇಶ ಹೋಲುತ್ತದೆ ಅಂತ ನೆನೆದಿದ್ದರು. ಟ್ರೇಲರ್ – ಪೋಸ್ಟರ್ ಗಳಲ್ಲೂ ಈ ದೃಶ್ಯವನ್ನು ಪ್ರಧಾನವಾಗಿ ಬಳಸಲಾಗಿತ್ತು.

ಇವತ್ತು ಕೃಷ್ಣಜನ್ಮಾಷ್ಟಮಿ. ನಡುರಾತ್ರಿ ಕಾರಾಗೃಹದಲ್ಲಿ ಆತ ಹುಟ್ಟಿದ್ದು, ಕಂಸನಿಗೆ ಬಲಿಯಾಗಗೊಡದೇ ವಸುದೇವ ಆತನನ್ನು ಬುಟ್ಟಿಯಲ್ಲಿ ಹಾಕಿ ಗೋಕುಲದತ್ತ ಸಾಗಿದ್ದು, ಭೋರ್ಗರೆವ ನದಿ ಕವಲಾಗಿ ದಾರಿ ಮಾಡಿಕೊಟ್ಟಿದ್ದು… ಇವನ್ನೆಲ್ಲ ದೃಶ್ಯಗಳಾಗಿ ಕಲ್ಪಿಸಿಕೊಂಡರೆ ಈಗಲೂ ರೋಮಾಂಚನ.
ಈಗೇನೋ ವಿಎಫ್ಎಕ್ಸ್ , ಆ್ಯನಿಮೇಷನ್ ಅಂತೆಲ್ಲ ದೃಶ್ಯವೈಭೋಗ ಮೂಡಿಸುವ ತಂತ್ರಜ್ಞಾನಗಳಿವೆ. ಇವನ್ನು ಬಳಸಿಕೊಂಡು ಸೃಜನಶೀಲನಾದವನು ದ್ವಾಪರ, ತ್ರೇತಾಯುಗಗಳನ್ನೆಲ್ಲ ಈಗ ಓಡುತ್ತಿರುವ ಈ ಕಾಲದ ನಡುವೆಯೇ ಅರಳಿಸಿಯಾನು. ಆದರೆ ದಶಕಗಳ ಹಿಂದೆ ಅಕ್ಷರಗಳಿಗೆ, ಹಾಡು-ಹಸೆಗಳಿಗೆ ಮಾತ್ರ ಹೀಗೆ ಮನ್ವಂತರಗಳಿಗೆ ನಮ್ಮನ್ನು ಜೀಕಿಸುವ ಶಕ್ತಿ ಇತ್ತು.
ಆಗ…
ಅದೋ ಕೃಷ್ಣ ಹುಟ್ಟಿದ್ದಾನೆ… ವಸುದೇವನಿಗೆ ಕಂದನನ್ನು ಸುರಕ್ಷಿತ ಗೂಡಿಗೆ ತಲುಪಿಸುವ ಅಡಾವುಡಿ.. ದೇವಕಿಗೆ ಹಡೆದ ಕೂಸನ್ನು ಕ್ಷಣದಲ್ಲೇ ದೂರ ಕಳಿಸಬೇಕಾದ ನೋವು.. ಮತ್ಯಾವುದೋ ತೀರದಲ್ಲಿ ಕೃಷ್ಣನನ್ನುಸ್ವಾಗತಿಸುವ ನಲಿವು…
ಪು. ತಿ. ನರಸಿಂಹಾಚಾರ್ಯಯರು ಕಾವ್ಯದಲ್ಲಿ ಆ ಕಾಲವನ್ನು ಬಂಧಿಸಿದ್ದಾರೆ.
——–
ಮಳೆಯು ನಾಡ ತೊಯ್ಯುತಿರೆ
ಮಿಂಚಿಗಿರುಳು ಹೆದರುತಿರೆ
ಗೂಡ ಮುದ್ದು ಗೊಲ್ಲನೆಡೆಯಳೊಂದು ಹಣತೆ ಮಿನುಗುತಿರೆ
ಮುದವದೊಂದು ಮೊಳೆವುದು
ಬಗೆಯ ಕಣ್ಣ ತೆರೆವುದು

ಹಿಂದೆ ಸೆರೆಗೆ ಸಿಲುಕುತ
ಕಂಸಭಯಕೆ ನಡುಗುತ..
‘ಹಡೆದ ಕೂಸು ಬಾಳ್ವುದೆಂತು’ ಎನುತ ತಲ್ಲಣಿಸುತ
ನೊಂದ ಪಿತರ ಚಿತ್ರವ
ಕಾಂಬೆ, ಕೃಷ್ಣನುದಯವ

ಒಲುಮೆ ತೊಡರ ಕಳಚಲು
ತಂದೆ ಶಿಶುವನಪ್ಪಲು,
ತಾಯಿ ಕೊಡುವ ಕೊನೆಯ ಮುತ್ತು
ಕಂಬನಿಯೊಳು ನೆನೆಯಲು
ಒಯ್ದನಂದು ಶಿಶುವನು
ಬೆಳಗೆ ಗೋಪಗೃಹವನು

ಸಾಸಿರ ಹೆಡೆ ಸರ್ಪವು
ಸೋನೆಗಾಗೆ ಛತ್ರವು,
ಮಾಯೆನಿದ್ರೆಗೆಂದು ಜಗವ ಕೆಡೆಯಲಡೆಗೆ ಶಬ್ದವು,
ಯಮುನೆ ಬತ್ತಿ ಬಟ್ಟೆಗೊಡೆ,
ಶಿಶುವ ಬಿಟ್ಟ ಗೊಲ್ಲನೆಡೆ.

ಮಾಯೆ ಹರಿಯೆ ಬಾಲನಳೆ,
ಗೋಪಿ ಹರುಷ ಕೋಡಿಗೊಳೆ
ನಂದಗೋಪ ನೋಡಿ ನೋಡಿ ಸುತನ ಮುದ್ದ ಸೂರೆಗೊಳೆ,

ಅಂದು ಎಲ್ಲ ಗೋಕುಲ
ಹರುಷಕಾಯ್ತು ದೇಗುಲ

ಇಂತು ಗೊಲ್ಲನಾಗಿ ಹರಿ
ಕೊಳಲು ಕರದಿ, ನವಿಲುಗರಿ
ಶಿಖೆಯೊಳೆಸೆಯೆ, ಬೃಂದಾವನದೊಳಾಡಿ ಗೋವ ಕಾದ ಪರಿ
ಜಗಕೆ ರಮ್ಯವಾದುದು
ಇಂದೂ ಮೋದವೀವುದು!

(ಲೇಖಕನ ವರ್ಷದ ಹಿಂದಿನ ಬ್ಲಾಗ್ ಬರಹದ ಮರುಪ್ರಕಟಣೆ)

Leave a Reply