ಮಂಗ್ಳೂರಲ್ಲಿ ರಮ್ಯಾಗೆ ಮೊಟ್ಟೆ ಎಸೆತ, ವಿಭಿನ್ನ ಪ್ರಕರಣದಲ್ಲಿ ಶಶಿಧರ್ ಮತ್ತು ಮರಿಗೌಡಗೆ ಸಿಕ್ತು ಜಾಮೀನು, ಕೃಷ್ಣ ಜನ್ಮಾಷ್ಟಮಿ ಸಡಗರ…

ಬೆಂಗಳೂರಿನ ಇಸ್ಕಾನಿನಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮದ ದೃಶ್ಯ. ಅತ್ತ ಉಡುಪಿ ಕೃಷ್ಣಮಠದಲ್ಲೂ ಶ್ರೀ ವಿಶ್ವೇಶ ತೀರ್ಥರ ಸಾರಥ್ಯದಲ್ಲಿ ಕೃಷ್ಣಪೂಜೆ, ಮಕ್ಕಳಿಗೆ ಕೃಷ್ಣನ ವೇಷ ತೊಟ್ಟು ಸಂಭ್ರಮಿಸಿದ ಪಾಲಕರು ಇವೆಲ್ಲ ಸಡಗರದ ಭಾಗ. ಅತ್ತ ಮಹಾರಾಷ್ಟ್ರದಲ್ಲಿ ಮಾತ್ರ ಮೊಸರು ಕುಡಿಕೆ ಒಡೆಯುವ ಸಾಹಸಕ್ಕೆ ಸುಪ್ರೀಂಕೋರ್ಟ್ ಕೆಲ ನಿಬಂಧನೆಗಳನ್ನು ಹಾಕಿದ್ದರ ವಿರುದ್ಧ ಆಕ್ರೋಶವೂ ವ್ಯಕ್ತವಾಯಿತು. ಕೆಲವರು ತಾವು ನಿಯಮ ಪಾಲಿಸುವುದಿಲ್ಲ ಎಂದಿದ್ದೂ ವರದಿಯಾಗಿದೆ. ಇವೆಲ್ಲದರ ನಡುವೆಯೂ ಅಪಾರ ಸಂಖ್ಯೆಯಲ್ಲಿ ಜನ ಆಯಾ ಪ್ರದೇಶಗಳಲ್ಲಿ ಮಾನವ ಪಿರಮಿಡ್ ಮೇಲೇರಿ ಮೊಸರು ಕುಡಿಕೆ ಒಡೆಯುವ ಸಾಹಸವನ್ನು ವೀಕ್ಷಿಸಿದರು.

ಡಿಜಿಟಲ್ ಕನ್ನಡ ಟೀಮ್:

ರಮ್ಯಾ ಕಾರಿನತ್ತ ಮೊಟ್ಟೆ ಎಸೆತ

ಪಾಕಿಸ್ತಾನವನ್ನು ಹೊಗಳಿದ್ದ ಹೇಳಿಕೆ ಸಮರ್ಥಿಸಿಕೊಳ್ಳುವ ಭರದಲ್ಲಿ ‘ಮಂಗಳೂರಿನಲ್ಲೂ ನರಕ’ ಇದೆ ಎಂದಿದ್ದ ಮಾಜಿ ಸಂಸದೆ ರಮ್ಯಾ ವಿರುದ್ಧ ಮಂಗಳೂರಿನ ಜನರು ಆಕ್ರೋಶಗೊಂಡಿದ್ದಾರೆ. ಮಂಗಳೂರಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳುತ್ತಿದ್ದ ವೇಳೆ ನೂರಾರು ಮಂದಿ ಕಪ್ಪು ಬಾವುಟ ಪ್ರದರ್ಶಿಸಿ ಘೇರಾವ್ ಹಾಕಿದರು. ಈ ವೇಳೆ ರಮ್ಯಾ ಕಾರಿನ ಮೇಲೆ ಮೊಟ್ಟೆ ಎಸೆದರು. ಈ ವೇಳೆ ಪ್ರತಿಭಟನೆ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನದಲ್ಲಿ ನರಕದಂತಹ ಪರಿಸ್ಥಿತಿ ಇದೆ ಎಂಬಂತಹ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ್ದ ರಮ್ಯಾ ‘ನರಕದ ಪರಿಸ್ಥಿತಿ ಎಲ್ಲಿಲ್ಲ ಹೇಳಿ? ಹಾಗೆ ನೋಡಿದರೆ, ಮಂಗಳೂರಿನಲ್ಲೂ ನರಕ ಇದೆ’ ಎಂದಿದ್ದರು.

ಮರಿಗೌಡಗೆ ಜಾಮೀನು

ಮೈಸೂರು ಮಾಜಿ ಜಿಲ್ಲಾಧಿಕಾರಿ ಶಿಖಾ ಅವರಿಗೆ ಧಮಕಿ ಹಾಕಿದ್ದ ಪ್ರಕರಣದಲ್ಲಿ ಬಂಧನವಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಮರಿಗೌಡಗೆ ಜಾಮೀನು ಸಿಕ್ಕಿದೆ. ಗುರುವಾರ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿದೆ. ಶಿಖಾ ಅವರಿಗೆ ಧಮಕಿ ಹಾಕುವುದರ ಜತೆಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಮರಿಗೌಡ ಸುಮಾರು ಒಂದು ತಿಂಗಳ ಕಾಲ ತಲೆಮರೆಸಿಕೊಂಡಿದ್ದರು. ನಂತರ ಇದೇ ತಿಂಗಳು 3ನೇ ತಾರಿಕಿನಂದು ಪೊಲೀಸರಿಗೆ ಶರಣಾಗಿದ್ದರು.

ಶಶಿಧರ್ ಗೂ ಸಿಕ್ತು ಬೇಲ್

ಸಾಮೂಹಿಕ ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಕರೆ ನೀಡಿ ರಾಜದ್ರೋಹದ ಆರೋಪದ ಮೇಲೆ ಬಂಧಿತರಾಗಿದ್ದ ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ಅವರಿಗೆ ಹೈಕೋರ್ಟ್ ಜಾಮೀನು ನೀಡಿದೆ. ಗುರುವಾರ ಶಶಿಧರ್ ಅವರಿಗೆ ಬೇಲ್ ಸಿಕ್ಕಿದ್ದು, ಬಂಧನವಾಗಿ ಸುದೀರ್ಘ 84 ದಿನಗಳಾದ ನಂತರ ಷರತ್ತುಬದ್ಧ ಜಾಮೀನು ಪ್ರಾಪ್ತಿಯಾಗಿದೆ. ಹಲವು ಷರತ್ತುಗಳನ್ನು ವಿಧಿಸಿರುವ ನ್ಯಾಯಾಲಯ ₹ 50 ಸಾವಿರ ಬಾಂಡ್ ಮತ್ತು ಶೂರಿಟಿ ಆಧಾರದ ಮೇಲೆ ಜಾಮೀನು ನೀಡಿದೆ.

ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು…

  • ನಿರ್ಭಯ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳ ಪೈಕಿ ಒಬ್ಬನಾದ ವಿನಯ್ ಶರ್ಮಾ ತಿಹಾರ್ ಜೈಲಿನಲ್ಲೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಬುಧವಾರ ಟವೆಲ್ ಮೂಲಕ ನೇಣು ಬಿಗಿದುಕೊಳ್ಳಲು ಪ್ರಯತ್ನಿಸಿದ್ದಾನೆ. ನಂತರ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ವೇಳೆ ಪ್ರತಿಕ್ರಿಯೆ ನೀಡಿರುವ ಅತ್ಯಾಚಾರಕ್ಕೊಳಗಾದ ಜ್ಯೋತಿ ಸಿಂಗ್ ಪೋಷಕರು, ‘ಅಪರಾಧಿಗಳು ಇನ್ನು ಬದುಕಿರೋದೆ ದೊಡ್ಡ ವಿಷಯ. ಅವರು ಆದಷ್ಟು ಬೇಗ ಸಾಯಲಿ’ ಎಂದು ಶಪಿಸಿದರು.
  • ಉಗ್ರವಾದ ಮತ್ತು ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ನಾವು ಸಿದ್ಧ ಎಂದು ಭಾರತ ಪಾಕಿಸ್ತಾನಕ್ಕೆ ಪತ್ರ ಬರೆದಿದೆ. ಪಾಕಿಸ್ತಾನ ನೆಲದಲ್ಲಿರುವ ಭಯೋತ್ಪಾದನೆ ಕೇವಲ ಭಾರತವನ್ನಷ್ಟೇ ಗುರಿ ಮಾಡಿಲ್ಲ, ಇತರರ ರಾಷ್ಟ್ರಗಳ ಮೇಲೂ ಗುರಿ ಇಡಲಾಗಿದೆ. ಇದರೊಂದಿಗೆ ಭಾರತ ಮೊದಲ ಬಾರಿಗೆ ಪಾಕಿಸ್ತಾನದ ಜತೆ ಮಾತುಕತೆಗಾಗಿ ಆಹ್ವಾನ ನೀಡಲು ಪತ್ರ ಬರೆದಿದೆ. ಉಭಯ ದೇಶಗಳ ನಡುವಣ ಮಾತುಕತೆ ಕೇವಲ ಭಯೋತ್ಪಾದನೆ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ವಿಷಯಕ್ಕೆ  ಮಾತ್ರ ಸೀಮಿತ ಎಂದು ಸ್ಪಷ್ಟವಾಗಿ ತಿಳಿಸಿದೆ.
  • ಬುಧವಾರ ಇಟಲಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 250 ರ ಗಡಿ ದಾಟಿದೆ. ಭೂಕಂಪದಲ್ಲಿ ನೂರಾರು ಮಂದಿ ಗಾಯಗೊಂಡಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ಅವಶೇಷಗಳಡಿ ಸಿಲುಕಿರುವವರನ್ನು ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.
  • ಫ್ರೀಬೆಸಿಕ್ಸ್ ಎಂಬ ಪ್ರಯೋಗಕ್ಕೆ ಮುಂದಾಗಿ ಮುಗ್ಗರಿಸಿದ್ದ ಫೇಸ್ ಬುಕ್, ಈಗ ಭಾರತದಲ್ಲಿ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದೆ. ಅದೇನಂದ್ರೆ ಶೀಘ್ರದಲ್ಲೇ ಭಾರತದಲ್ಲಿರುವ ರೈಲ್ವೇ ನಿಲ್ದಾಣಗಳಲ್ಲಿ ಇಂಟರ್ ನೆಟ್ ಹಾಟ್ ಸ್ಪಾಟ್ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಿದೆ.

Members of ABVP submit Memorandum to Human Rights Commission Cha

ಆಮ್ನೆಸ್ಟಿ ವಿರುದ್ಧದ ಪ್ರತಿಭಟನೆ ವೇಳೆಯಲ್ಲಿ ತಮ್ಮ ಮೇಲೆ ಲಾಠಿಚಾರ್ಜ್ ಮಾಡಿದ ಡಿಸಿಪಿ ಸತೀಶ್ ವಿರುದ್ಧ ಕ್ರಮ ಜರುಗಿಸಬೇಕೆಂದು ಎಬಿವಿಪಿ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿತು.

Leave a Reply