ಪೆಲ್ಲೆಟ್ ಏಟು ಬಿದ್ದಿರೋದು ಭದ್ರತಾ ಪಡೆಯ ಮೇಲೆ ದಾಳಿ ಮಾಡಿದವರಿಗೆ, ಚಾಕ್ಲೆಟ್ ತರಲು ಹೋದವರಿಗಲ್ಲ: ಪ್ರತ್ಯೇಕತಾವಾದಿಗಳ ಪರ ಪುಂಗಿ ಊದಿದವರ ವಿರುದ್ಧ ಮೆಹಬೂಬಾ ಕಿಡಿ!

 

ಡಿಜಿಟಲ್ ಕನ್ನಡ ಟೀಮ್:

ಕಳೆದ ಒಂದೂವರೆ ತಿಂಗಳಿನಿಂದ ಹಿಂಸಾಚಾರಕ್ಕೆ ಸಿಲುಕಿ ತತ್ತರಿಸಿರುವ ಕಣಿವೆ ರಾಜ್ಯದಲ್ಲಿ ಮಾತುಕತೆ ಮೂಲಕ ಶಾಂತಿ ಮರು ಸ್ಥಾಪನೆಗಾಗಿ ಗೃಹ ಸಚಿವ ರಾಜನಾಥ ಸಿಂಗ್ ಕಾಶ್ಮೀರಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿರುವುದು ಸರಿಯಷ್ಟೆ.

ಗುರುವಾರ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಜತೆ ರಾಜನಾಥ್ ಸಿಂಗ್ ಜಂಟಿ ಪತ್ರಿಕಾಗೋಷ್ಟಿ ನಡೆಸಿದರು. ರಾಷ್ಟ್ರೀಯ ವಾಹಿನಿಗಳನ್ನು ನೋಡುವವರಿಗೆ ಮಾಧ್ಯಮದ ಬಹುದೊಡ್ಡ ವರ್ಗದ ಪ್ರತಿಪಾದನೆ ಏನೆಂಬುದು ಆಗಲೇ ನಿಚ್ಚಳವಾಗಿದೆ. ದೆಹಲಿಯ ಈ ಪ್ರತಿಷ್ಠಿತ ಅಭಿಪ್ರಾಯ ನಿರೂಪಕರ ಪ್ರಕಾರ ಭಾರತ ಸರ್ಕಾರವು ಪ್ರತ್ಯೇಕತಾವಾದಿ ಹುರಿಯತ್, ಬಂದೂಕು ಹಿಡಿದಿರುವ ಉಗ್ರರು, ಪಾಕಿಸ್ತಾನ ಎಲ್ಲರ ಜತೆಯೂ ಜಮ್ಮು-ಕಾಶ್ಮೀರವನ್ನು ಚರ್ಚಿಸಬೇಕು. ಆದರೆ ಇವರೇ ಮೈಕು ಹಿಡಿದು ಮಾತನಾಡಿಸಿರುವ ಪ್ರತ್ಯೇಕತಾವಾದಿ ವಿದ್ವಾಂಸರು ಹಾಗೂ ವಿಧ್ವಂಸಕರಿಬ್ಬರೂ ಭಾರತದ ಸಾರ್ವಭೌಮತೆ ಹಾಗೂ ಸಂವಿಧಾನದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳುವುದಕ್ಕೆ ಚೂರು ಸಿದ್ಧರಿಲ್ಲ. ಭಾರತದ ಸಂವಿಧಾನ ತಮಗೆ ಸಂಬಂಧವೇ ಇಲ್ಲ ಎಂಬ ಮಾತು ಈ ತೀವ್ರವಾದಿಗಳಿದ್ದು.

ಪತ್ರಿಕಾಗೋಷ್ಟಿಯಲ್ಲಿ ಸಹ ಇದೇ ಪ್ರತ್ಯೇಕತಾವಾದಿ ತೀವ್ರಗಾಮಿಗಳ ಪರವಾದ ಪ್ರಶ್ನೆಗಳೇ ತೇಲಿಬಂದವು. ಅವರ ಜತೆ ಮಾತುಕತೆ ಏಕಿಲ್ಲ, ಇವರ ಜತೆ ಏಕಿಲ್ಲ ಎಂದೇ ಪ್ರಶ್ನೆಗಳು ಆರಂಭವಾದವು. ಗೃಹ ಸಚಿವ ರಾಜನಾಥ ಸಿಂಗ್ ತಮ್ಮ ಎಂದಿನ ಗಾಂಭೀರ್ಯದ, ಸಂಯಮ ಮೀರದ ಧ್ವನಿಯಲ್ಲಿ ಮತ್ತೆ ತಮ್ಮ ನಿಲುವನ್ನು ಹೇಳುತ್ತಿದ್ದರು. ‘ ಕಾಶ್ಮೀರದ ಮಕ್ಕಳ ಕೈಯಲ್ಲಿ ಪುಸ್ತಕವಿರಬೇಕೇ ಹೊರತು ಕಲ್ಲಲ್ಲ. ಈ ಪುಟ್ಟ ಮಕ್ಕಳ ಕೈಗೆ ಕಲ್ಲು ಕೊಟ್ಟವರಾರು? ರಾಜ್ಯದಲ್ಲಿರುವ ಮಕ್ಕಳ ಭವಿಷ್ಯದ ಜತೆ ಆಟವಾಡದಂತೆ ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತೇನೆ. ಭಾರತದ ಜತೆಗಿನ ಕಾಶ್ಮೀರದ ಭವಿಷ್ಯವನ್ನು ಯಾರೂ ಬೇರೆ ಮಾಡಲು ಸಾಧ್ಯವಿಲ್ಲ. ಕಾಶ್ಮೀರದ ಉಜ್ವಲ ಭವಿಷ್ಯವಿಲ್ಲದೇ ಭಾರತದ ಭವಿಷ್ಯವೂ ಅಸಾಧ್ಯ. ಹೀಗಾಗಿ ದೇಶದ ಇತರೆ ಯುವಕರೊಟ್ಟಿಗೆ ಕಾಶ್ಮೀರಿ ಯುವಕರೂ ಕೈಹಿಡಿದು ಭವಿಷ್ಯದತ್ತ ಹೆಜ್ಜೆ ಹಾಕಬೇಕು. ಭಿನ್ನ ವಿಚಾರ ಹೊಂದಿದವರನ್ನೂ ಸೇರಿಸಿ 300 ಮಂದಿ ಜತೆ ಸಮಾಲೋಚನೆ ಮಾಡಿದ್ದೇನೆ. ಪೆಲ್ಲೆಟ್ ಗನ್ನಿಗೆ ಸಹ ಕೆಲವೇ ದಿನಗಳಲ್ಲಿ ಪರ್ಯಾಯ ಬರುತ್ತದೆ. ಆದರೆ ಇದೇ ಸಂದರ್ಭದಲ್ಲಿ ಕಾಶ್ಮೀರಿಗರಿಗೂ ಮನವಿ ಮಾಡುತ್ತೇನೆ- ಇದೇ ಯೋಧರೇ ನಿಮ್ಮನ್ನು ಪ್ರವಾಹದಲ್ಲಿ ರಕ್ಷಿಸಿದ್ದೆಂಬುದನ್ನು ನೆನಪು ಮಾಡಿಕೊಂಡು ಹಿಂಸೆ ತ್ಯಜಿಸಿ..’ ಎಂದೆಲ್ಲ ಶಾಂತಚಿತ್ತರಾಗಿಯೇ ಉತ್ತರಿಸಿದರು.

ಆದರೆ ಇವ್ಯಾವುದನ್ನೂ ಪರಿಗಣಿಸದೇ ಮಾಧ್ಯಮದ ದೊಡ್ಡ ಗುಂಪು, ಹಿಂಸಾಚಾರಕ್ಕೆ ಬಿಜೆಪಿ-ಪಿಡಿಪಿಯೇ ಕಾರಣ ಎಂಬ ಪ್ರತಿಪಾದನೆ ಹೊತ್ತ ಪ್ರಶ್ನೆಗಳನ್ನು ತೂರಿದಾಗ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕನಲಿ ಕೆಂಡವಾಗಿ ಹೋದರು. ಇದೀಗ ಅದೇ ಮಾಧ್ಯಮ ಗುಂಪು ‘ತಾಳ್ಮೆ ಕಳೆದುಕೊಂಡ ಮೆಹಬೂಬಾ’ ಎಂದು ವರದಿ ಮಾಡುತ್ತಿದೆಯಾದರೂ ಸಿಟ್ಟಿನಲ್ಲೂ ಮುಫ್ತಿ ಎತ್ತಿದ ಪ್ರಶ್ನೆಗಳಲ್ಲಿ ತರ್ಕವಿತ್ತು.

‘ನೀವು 2010ರ ಪ್ರಕರಣಗಳಿಗೂ ಈಗಿನದಕ್ಕೂ ತಾಳೆ ಮಾಡಬೇಡಿ. ಆಗ ಸೇನೆಯ ಕಡೆಯಿಂದ ಮೂರು ನಾಗರಿಕರ ನಕಲಿ ಎನ್ಕೌಂಟರ್ ಆಗಿತ್ತು. ಆಗ ಜನಾಕ್ರೋಶ ಸ್ಫೋಟಗೊಂಡಿದ್ದರಲ್ಲಿ ಅರ್ಥವಿತ್ತು. ಈಗ ಪ್ರತಿಭಟನೆ ಮಾಡುತ್ತಿರುವವರ ಉದ್ದೇಶವೇನು? ಮಿಲಿಟರಿಯವರು ಉಗ್ರರನ್ನು ಕೊಂದಿದ್ದಕ್ಕೂ ನೀವು ಸರ್ಕಾರವನ್ನು ದೂಷಿಸುತ್ತೀರಾ? ಪೆಲ್ಲೆಟ್ ದಾಳಿಯ ಉದಾಹರಣೆಗಳನ್ನು ಹೇಳುತ್ತೀರಲ್ಲಾ.. ನಿಮಗೆ ಗೊತ್ತಿರಲಿ, ಗಾಯಗೊಂಡವರು ಸೇನಾ ಪೋಸ್ಟ್ ಬಳಿ ಚಾಕ್ಲೆಟ್ ತೆಗೆದುಕೊಳ್ಳುವುದಕ್ಕೆ ಹೋಗಿದ್ದರೇನು? ಭದ್ರತಾ ಪಡೆ ಮೇಲೆ ದಾಳಿ ಮಾಡಲು ಹೋದರೆ ಇನ್ನೇನಾಗುತ್ತದೆ? ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದ 15 ವರ್ಷದ ಯುವಕ ಅಲ್ಲಿ ಹಾಲು ಖರೀದಿಸಲು ಹೋಗಿದ್ದನೇ?’ ಎಂದು ಮೆಹಬೂಬಾ ಧ್ವನಿ ಎತ್ತರಿಸಿದರು. ಅವರು ಧ್ವನಿ ಎತ್ತರಿಸಿದ್ದಕ್ಕೇ ಟೀಕೆಗಳು ಶುರುವಾದವೆಂಬುದನ್ನು ಬಿಟ್ಟರೆ, ಅವರ ಪ್ರಶ್ನೆಗಳಿಗೆ ಮಾತ್ರ ಯಾರಲ್ಲೂ ಸಮಜಾಯಿಷಿ ಇರಲಿಲ್ಲ.

ಕಣಿವೆಯಲ್ಲಾಗುತ್ತಿರುವ ಹಿಂಸಾಚಾರಕ್ಕೆ ಸೀಮಿತ ಗುಂಪು ಕಾರಣ ಎಂಬ ತಮ್ಮ ಪ್ರತಿಪಾದನೆಯನ್ನು ಮತ್ತೆ ಸ್ಪಷ್ಟಗೊಳಿಸಿದರು ಮುಖ್ಯಮಂತ್ರಿ ಮೆಹಬೂಬಾ. ‘ಕಾಶ್ಮೀರದ ಶೇ. 95 ರಷ್ಟು ಜನ ರಾಜ್ಯದಲ್ಲಿ ಶಾಂತಿ ನೆಲೆಸಲೆಂದು ಇಚ್ಛಿಸುತ್ತಾರೆ. ಆದರೆ ಉಳಿದ ಶೇ.5 ರಷ್ಟು ಮಂದಿ ತಮ್ಮ ಹಿತಾಸಕ್ತಿ ಈಡೇರಿಕೆಗೆ ಹಿಸೆಗಿಳಿದಿದ್ದಾರೆ. ಇವರು ಮಕ್ಕಳನ್ನು ರಕ್ಷಾಕವಚವನ್ನಾಗಿ ಬಳಸಿ ಭದ್ರತಾ ಪಡೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಈಗ ರಾಜ್ಯದಲ್ಲಿ ಸತ್ತಿರುವವರ ಪೈಕಿ ಶೇ.95 ರಷ್ಟು ಮಂದಿ ಅಮಾಯಕ ಕುಟುಂಬದವರು. ಹೀಗಾಗಿ ಶಾಂತಿಯನ್ನು ಬಯಸುವವರಿಗೂ ಹಾಗೂ ಹಿಂಸೆಗೆ ಪ್ರಚೋದಿಸುತ್ತಿರುವವರ ಮಧ್ಯೆ ಸ್ಪಷ್ಟ ವ್ಯತ್ಯಾಸವನ್ನು ಕಾಣಬೇಕಿದೆ. ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮದ ಅಗತ್ಯವೂ ಇದೆ…’ ಎಂದು ಎಚ್ಚರಿಕೆ ನೀಡುವ ಮೂಲಕ ಪತ್ರಿಕಾಗೋಷ್ಠಿಗೆ ತೆರೆ ಎಳೆದರು ಮುಫ್ತಿ.

ಮುಫ್ತಿ ಆಕ್ರಮಣ ಧೋರಣೆ ನಿರಾಸೆ ತಂದಿದೆ. ಹೀಗಾದರೆ ರಾಜಕೀಯ ಪರಿಹಾರ ಕಂಡುಕೊಳ್ಳಲಾಗುವುದಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಪ್ರತಿಕ್ರಿಯಿಸಿದೆ. ‘ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದರಲ್ಲಿ ಎರಡು ಮಾತಿಲ್ಲ. ಈ ಚೌಕಟ್ಟಿನಲ್ಲೇ ಕೇಂದ್ರವು ಕಾಶ್ಮೀರದ ಸ್ಥಿತಿಗೆ ಪರಿಹಾರ ಕಂಡುಕೊಳ್ಳುವುದಾದರೆ ಕಾಂಗ್ರೆಸ್ ಅಂಥ ಯತ್ನಗಳನ್ನು ಬೆಂಬಲಿಸುತ್ತದೆ’ ಎಂದು ಕಾಂಗ್ರೆಸ್ ವಕ್ತಾರ ರಣ್ದೀಪ್ ಸುರ್ಜೆವಾಲ ಹೇಳಿದ್ದಾರೆ.

Leave a Reply