ಸೋರಿಕೆಯಾಗಿರುವ ಜಲಾಂತರ್ಗಾಮಿ ಮಾಹಿತಿ 2011ರದ್ದು, ಹೀಗಾಗಿ… ಕಾಂಗ್ರೆಸ್ ರಾಜಕೀಯ ಹೇಳಿಕೆಗೆ ಬಲವಿಲ್ಲ, ಆದರೆ ಬಿಜೆಪಿ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಫಲವಿಲ್ಲ

ಡಿಜಿಟಲ್ ಕನ್ನಡ ವಿಶೇಷ:

ಸ್ಕಾರ್ಪೆನ್ ಶ್ರೇಣಿಯ ಭಾರತ ಜಲಾಂತರ್ಗಾಮಿ ನೌಕೆಗಳ ಬಗೆಗಿನ ಸೂಕ್ಷ್ಮ ಮಾಹಿತಿಗಳು ಬಯಲಾಗಿರುವ ವರದಿಗಳು ಆತಂಕದ ವಿದ್ಯಮಾನ ಎಂಬುದರಲ್ಲಿ ಎರಡು ಮಾತಿಲ್ಲ. ಆಧುನಿಕ ಸಮರಗಳು ರಣಾಂಗಣದಲ್ಲಿ ಬಿಚ್ಚಿಕೊಳ್ಳುವುದಕ್ಕೆ ಮೊದಲು ಡಿಜಿಟಲ್ ಭದ್ರತೆಯ ನೆಲೆಯಲ್ಲಿ ಬಿಚ್ಚಿಕೊಳ್ಳುತ್ತವೆ ಎಂಬುದನ್ನಂತೂ ಇದು ಸಾರುತ್ತಿದೆ. ರಕ್ಷಣಾ ವ್ಯವಹಾರಗಳಲ್ಲಿ ಖಾಸಗಿ ಕಂಪನಿಗಳ ಪಾಲ್ಗೊಳ್ಳುವಿಕೆಯೇ ಮುಖ್ಯ ಲಕ್ಷಣವಾಗಿರುವ ಇಂದಿನ ಕಾಲಘಟ್ಟದಲ್ಲಿ ಡಾಟಾಗಳನ್ನು ಸಂರಕ್ಷಿಸುವ ಬಗ್ಗೆ ಭಾರತವಿನ್ನೂ ಗಟ್ಟಿಗೊಳ್ಳಬೇಕಾದ ವ್ಯಾಪ್ತಿ ದೊಡ್ಡದಿದೆ ಎಂದಂತಾಯಿತು.

ಇಷ್ಟರ ನಡುವೆ, ಸದ್ಯಕ್ಕೆ ಸಿಗುತ್ತಿರುವ ಸಮಾಧಾನದ ಮಾಹಿತಿ ಏನೆಂದರೆ ಜಲಾಂತರ್ಗಾಮಿ ಕುರಿತು ಸೋರಿಕೆಯಾಗಿರುವ ಮಾಹಿತಿಗಳು 2011ರದ್ದು. ಹೀಗಾಗಿ 2011ರ ನಂತರ ಇದೇ ಮಾದರಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿರುವುದರಿಂದ ಈಗ ಸೋರಿಕೆಯಾಗಿರುವ ಮಾಹಿತಿಗಳು ಹಲವು ಆಯಾಮಗಳಲ್ಲಿ ಔಟ್ಡೇಟೆಡ್ ಎನ್ನಿಸಿಕೊಳ್ಳುವ ಸಾಧ್ಯತೆ ಇದೆ. ಈ ಔಟ್ಡೇಟೆಡ್ ಪ್ರಮಾಣ ಹೆಚ್ಚಿದ್ದಷ್ಟೂ ಭಾರತಕ್ಕೆ ಅಷ್ಟರಮಟ್ಟಿಗೆ ನಿರಾಳ.

ಈ ಮಾಹಿತಿ ಕಳ್ಳತನದ ವರದಿಯನ್ನು ಸ್ಫೋಟಿಸಿರುವ ‘ದಿ ಆಸ್ಟ್ರೇಲಿಯನ್’ ಪತ್ರಿಕೆ ಸಹ ಸೋರಿಕೆ ಮಾಹಿತಿ 2011ರದ್ದು ಎಂದೇ ಪ್ರತಿಪಾದಿಸಿದೆ. ‘ಈಗ ಸೋರಿಕೆ ಆಗಿರುವುದು ಭಾರತಕ್ಕೆ ನೀಡಲಾಗುವ ಸ್ಕಾರ್ಪೆನ್ ಬಗ್ಗೆ 2011ರಲ್ಲಿ ಬರೆದಿದ್ದ ಮಾಹಿತಿಗಳು ಎಂದು ‘ದ ಆಸ್ಟ್ರೇಲಿಯನ್’ಗೆ ಹೇಳಲಾಗಿದೆ. ಅದೇ ವರ್ಷದಲ್ಲಿ ಡಿಸಿಎನ್ಎಸ್ ನಲ್ಲಿ ಉಪ ಗುತ್ತಿಗೆದಾರನಾಗಿದ್ದ ಫ್ರಾನ್ಸ್ ನ ನೌಕಾಧಿಕಾರಿ ಒಬ್ಬ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ..’

ಯಾವ ‘ದ ಆಸ್ಟ್ರೇಲಿಯನ್’ ಪತ್ರಿಕೆಯ ವರದಿ ಇಟ್ಟುಕೊಂಡು ಚರ್ಚಿಸಲಾಗುತ್ತಿದೆಯೋ ಅದರ ವರದಿಯಲ್ಲೇ ಸ್ಪಷ್ಟವಾಗಿ ಈ ಮೇಲಿನ ಸಾಲುಗಳು ಉಲ್ಲೇಖಗೊಂಡಿವೆ.

ಎಲ್ಲ ಆಪತ್ತುಗಳೂ ಆಡಳಿತಾರೂಢ ಎನ್ಡಿಎಯನ್ನು ಪ್ರಶ್ನಿಸುವುದಕ್ಕೆ ಸಿಕ್ಕ ಅವಕಾಶ ಎಂಬ ಆತುರಗೇಡಿತನದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿದ ಕಾಂಗ್ರೆಸ್ ಹೇಳಿದ್ದೇನು? ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ಮುಖಂಡ ರಣ್ದೀಪ್ ಸುರ್ಜೇವಾಲ, ಈ ಸೋರಿಕೆಯನ್ನು ‘ಹಗರಣ’ ಎಂದು ಕರೆದರು. ಅಲ್ಲದೇ, ‘ಕೇಂದ್ರ ಸಚಿವ ಮನೋಹರ್ ಪರಿಕರ್ ಅವರು ಈ ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನದಲ್ಲಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ಸಮ್ಮುಖದಲ್ಲಿ ರಕ್ಷಣಾ ಇಲಾಖೆಯ ಭದ್ರತಾ ವ್ಯವಸ್ಥೆಯ ಪರಿಶೀಲನೆ ನಡೆಯಬೇಕು. ಮಾಹಿತಿ ಸೋರಿಕೆಗೆ ಬಿಜೆಪಿ ಸರ್ಕಾರವೇ ಹೊಣೆ’ ಅಂತೆಲ್ಲ ಹರಿಹಾಯ್ದರು.

ಕಾಂಗ್ರೆಸ್ ಹೀಗೆಲ್ಲ ಹರಿಹಾಯುವ ಮುಂಚೆ ಹೋಮ್ವರ್ಕ್ ಮಾಡಿಕೊಂಡು ಬರುವುದನ್ನು ಮರೆತಿತ್ತು ಎಂದೇ ಹೇಳಬೇಕಾಗುತ್ತದೆ. ಏಕೆಂದರೆ, ‘ದ ಆಸ್ಟ್ರೇಲಿಯನ್’ ಪತ್ರಿಕೆಯ ವರದಿಯನ್ನು ಆಧಾರವಾಗಿಟ್ಟುಕೊಂಡೇ ಈ ಎಲ್ಲ ಪ್ರಶ್ನೆಗಳು ಎಂದಾದಾಗ, ಅದೇ ಪತ್ರಿಕೆಯು ಸೋರಿಕೆಯಾಗಿರುವ ವರದಿ 2011ರದ್ದು ಎಂದು ಹೇಳಿರುವುದನ್ನೂ ಗಮನಿಸಬೇಕಾಗುತ್ತದೆ. 2011ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದವರು ಯಾರು, ರಕ್ಷಣಾ ಸಚಿವಾಲಯ ಯಾರ ಕೈಯಲ್ಲಿತ್ತು ಎಂದೂ ಕೇಳಬೇಕಾಗುತ್ತದೆ.

twitter

ವಾಸ್ತವದಲ್ಲಿ ಇದು ಬಿಜೆಪಿ ಮತ್ತು ಕಾಂಗ್ರೆಸ್ ಗಳು ನಾನಾ-ನೀನಾ ಅಂದುಕೊಂಡಿರುವ ವಿಚಾರವಲ್ಲ. ಚೀನಿಯರು 2010ರಲ್ಲಿ ಪ್ರಧಾನಿ ಕಚೇರಿಯ ಕಂಪ್ಯೂಟರ್ ವ್ಯವಸ್ಥೆಯನ್ನು ಹ್ಯಾಕ್ ಮಾಡಿದ್ದರು ಎಂದು ಅಂದಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂಕೆ ನಾರಾಯಣನ್, ತಾವು ಆ ಹುದ್ದೆ ತೊರೆದು ಹೋಗುವ ಸಂದರ್ಭದಲ್ಲಿ ಹೇಳಿದ್ದರು. ಅಂದರೆ, ಭಾರತದ ವಿರುದ್ಧ ಡಿಜಿಟಲ್ ಸಮರವೊಂದು ಅದಾಗಲೇ ಆರಂಭವಾಗಿದೆ. ಇದನ್ನು ಎದುರಿಸುವುದು ಹೇಗೆ ಎಂಬುದು ಸದ್ಯಕ್ಕೆ ಎಲ್ಲ ವಿಚಾರಧಾರೆ ಮತ್ತು ಪಕ್ಷಗಳ ಗಮನವಾಗಬೇಕು.

ಫ್ರಾನ್ಸ್ ನ ಇದೇ ಡಿಸಿಎನ್ಎಸ್ ನಿಂದ ಅಮೆರಿಕವು ಸಹಭಾಗಿತ್ವದಲ್ಲಿ ಜಲಾಂತರ್ಗಾಮಿ ನಿರ್ಮಿಸಲಿದೆ. ಅಂತೆಯೇ ಇದು ಆಸ್ಟ್ರೇಲಿಯದ ಪತ್ರಿಕೆಯಲ್ಲಿ ಸ್ಫೋಟಗೊಂಡಿರುವುದಕ್ಕೂ ಕಾರಣವಿದೆ. ಅದೆಂದರೆ, ಆಸ್ಟ್ರೇಲಿಯ ಸಹ ಫ್ರಾನ್ಸ್ ಕಂಪನಿಯ ರಕ್ಷಣಾ ತಂತ್ರಜ್ಞಾನವನ್ನು ಖರೀದಿಸುವ ಒಪ್ಪಂದದ ಹಂತದಲ್ಲಿದೆ. ಇವೆಲ್ಲವೂ ಭಾರತಕ್ಕಿಂತ ಮುಂದುವರಿದ ವಿನ್ಯಾಸಗಳಾಗಿರುವುದರಿಂದ ಈ ಸೋರಿಕೆ ವಿದ್ಯಮಾನದಿಂದ ತಮಗೇನೂ ಆಗುವಂಥದ್ದಿಲ್ಲ ಎಂದು ಆ ರಾಷ್ಟ್ರಗಳೆಲ್ಲ ಹೇಳುತ್ತಿವೆ. ಅದೇನೆ ಇದ್ದರೂ, ಹೀಗೆ ಬೇರೆ ರಾಷ್ಟ್ರಗಳೊಂದಿಗೆ ಒಪ್ಪಂದದ ಹಂತದಲ್ಲಿರುವಾಗ ಸೋರಿಕೆ ವರದಿ ಬರುವುದರ ಹಿಂದೆ ಯಾವ್ಯಾವುದೋ ಅಂತಾರಾಷ್ಟ್ರೀಯ ಮಟ್ಟದ ದಾಳಗಳು ಉರುಳಿವೆಯಾ? ಈ ಎಲ್ಲ ಆಟಗಳಿಗೆ ಭಾರತ ಬಲಿಪಶುವಾಯಿತಾ?

ಆಂತರಿಕ ತನಿಖೆಗಳಿಂದ ಹಲವು ವಿಷಯಗಳು ತಿಳಿದಾವು. ಅವು ಜನರ ಎದುರಿಗೇನೂ ಬರುವುದಿಲ್ಲ.ಆದರೆ ಉನ್ನತ ಸ್ತರದಲ್ಲಿರುವವರು ಅರಿತರೆ ಸಾಕು.

Leave a Reply