ನಗದು ರಹಿತ ಭವಿಷ್ಯದತ್ತ ಮತ್ತೊಂದು ಹೆಜ್ಜೆ… ಆ್ಯಪ್ ಮೂಲಕ ಹಣ ವರ್ಗಾವಣೆ ಸೇವೆಗೆ ಮುಂದಾದ ಬ್ಯಾಂಕುಗಳು

ಡಿಜಿಟಲ್ ಕನ್ನಡ ಟೀಮ್:

ಡಿಜಿಟಲ್ ಇಂಡಿಯಾದ ಮಹತ್ವಾಕಾಂಕ್ಷಿ ಅಂಶಗಳ ಪೈಕಿ ನಗದು ರಹಿತ ವಹಿವಾಟು ಸಹ ಒಂದು. ಇದನ್ನು ಸಕಾರಗೊಳಿಸುವತ್ತ ಕೆಲವು ಬ್ಯಾಂಕುಗಳು ಈಗ ಪ್ರಮುಖ ಹೆಜ್ಜೆಯನ್ನಿಟ್ಟಿವೆ. ಅದೇನಂದ್ರೆ, ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಬೇಸ್ಡ್ (ಯುಪಿಐ- ಬೇಸ್ಡ್) ಮೊಬೈಲ್ ಆ್ಯಪ್ ಮೂಲಕ ಇನ್ನು ಮುಂದೆ ದಿನ ನಿತ್ಯದ ವಹಿವಾಟನ್ನು ಮಾಡಬಹುದು.

ಅಕ್ಸಿಸ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ ಗುರುವಾರ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ (ಎನ್ ಸಿ ಪಿ ಐ) ಯುಪಿಐ ಆ್ಯಪ್ ಅಳವಡಿಸಿಕೊಂಡು ಗ್ರಾಹಕರಿಗೆ ಸೇವೆ ಆರಂಭವಿಸಿದೆ. ಇದರೊಂದಿಗೆ ಇನ್ಮುಂದೆ (ಎರಡು ವಾರಗಳ ನಂತರ) ಗ್ರಾಹಕರು ಕೇವಲ ಬೆರಳಿನ ಸ್ಪರ್ಶದ ಮೂಲಕ ಹಣ ವಹಿವಾಟು ಮಾಡಬಹುದಾಗಿದೆ.

ಏಕಮಾತ್ರ ಗುರುತಿನ ವ್ಯವಸ್ಥೆಯಿಂದ ಇದು ಕಾರ್ಯನಿರ್ವಹಿಸಲಿದ್ದು, ಹಣಕಾಸು ವರ್ಗಾವಣೆ ವೇಳೆ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಕ್ರೆಡಿಟ್ ಕಾರ್ಡ್ ಸಂಖ್ಯೆಯಂತಹ ಪ್ರಮುಖ ಮಾಹಿತಿಯನ್ನು ಕೇಳುವುದಿಲ್ಲ. ಈ ಆ್ಯಪ್ ಮೂಲಕ ಸಂಬಂಧಿಕರು ಅಥವಾ ಸ್ನೇಹಿತರಿಗೆ ಹಣ ವರ್ಗಾಯಿಸುವುದು, ಬಿಲ್ ಗಳನ್ನು ಪಾವತಿಸುವುದು, ಸಿನಿಮಾ, ರೈಲ್ವೇ ಟಿಕೆಟ್ ಖರೀದಿ, ಬಾರ್ ಕೋಡ್ ಆಧಾರಿತ ಪಾವತಿ, ವಿಮೆ ಕಂತು ಕಟ್ಟುವುದು, ಶಾಲಾ ಶುಲ್ಕ- ಡೊನೇಷನ್ ನೀಡುವುದು, ಆನ್ ಲೈನ್ ಶಾಪಿಂಗ್ ನಿಂದ ದಿನಸಿ ಅಗಂಡಿಗಳಲ್ಲಿಯೂ ವ್ಯವಹಾರ ಮಾಡಬಹುದಾಗಿದೆ. ಇದರಿಂದ ಭಾನುವಾರ ಹಾಗೂ ರಜಾ ದಿನಗಳಲ್ಲೂ ದಿನದ 24 ಗಂಟೆ ವ್ಯವಹಾರ ಮಾಡಲು ಅನುಕೂಲವಾಗಲಿದೆ.

ಈ ಆ್ಯಪ್ ಸೇವೆಯನ್ನು ಸದ್ಯಕ್ಕೆ ಈ ನಾಲ್ಕು ಬ್ಯಾಂಕ್ ಗಳ ಗ್ರಾಹಕರು ಮಾತ್ರ ಪಡೆಯಬಹುದಾಗಿದ್ದು, ಸ್ಮಾರ್ಟ್ ಫೋನ್ ಅಗತ್ಯವಿದೆ. ಈಗ ಕೇವಲ ಆ್ಯಂಡ್ರಾಯ್ಡ್ ಆ್ಯಪ್ ಮಾತ್ರವೇ ಲಭ್ಯವಿದ್ದು, ಐಒಎಸ್ ಅಭಿವೃದ್ದಗೆ ಆರೆಂಟು ತಿಂಗಳು ಹಿಡಿಯಲಿದೆ. ಮುಂದಿನ ದಿನಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ ಜಿ ಎಫ್ ಸಿ, ಕೊಟಕ್ ಮಹಿಂದ್ರ ಬ್ಯಾಂಕುಗಳು ಈ ಸೇವೆ ನೀಡಲಿವೆ. ಈ ಹಣ ವರ್ಗಾವಣೆಯಲ್ಲಿ ಗರಿಷ್ಠ ಮೊತ್ತ ₹ 1 ಲಕ್ಷ ನಿಗದಿ ಮಾಡಲಾಗಿದ್ದು, ಆಕ್ಸಿಸ್ ಬ್ಯಾಂಕ್ ಮಾತ್ರ ₹50 ಸಾವಿರಕ್ಕೆ ನಿಗದಿ ಮಾಡಿದೆ. ಪ್ರತಿ ವರ್ಗಾವಣೆಗೂ ಎನ್ ಸಿ ಪಿ ಐ 25 ಪೈಸೆ ಹಾಗೂ ಈ ಸೇವೆ ನೀಡುವವರು 50 ಪೈಸೆ ಶುಲ್ಕ ಪಡೆಯಲಿದ್ದಾರೆ.

ಈ ವರ್ಗಾವಣೆ ಹೇಗೆ ನಡೆಯುತ್ತದೆ ಅಂತಾ ನೋಡೊದಾದ್ರೆ, ನಿಮ್ಮ ಐಡಿ (ಉದಾ: name@bankname.com or mobilenumber@bankname.com) ಯಿಂದ ನೀವು ವರ್ಗಾವಣೆ ಮಾಡಬೇಕಿರುವವರ ಐಡಿಗೆ ಹಣ ರವಾನಿಸಲಾಗುವುದು.

Leave a Reply