ಹಾಜಿ ಅಲಿ ದರ್ಗಾದಲ್ಲಿ ಮಹಿಳೆಯರ ಪ್ರವೇಶಕ್ಕೆ ಅಸ್ತು.. ಬಾಂಬೆ ಹೈ ಕೋರ್ಟ್ ನಿಂದ ಐತಿಹಾಸಿಕ ತೀರ್ಪು

ಡಿಜಿಟಲ್ ಕನ್ನಡ ಟೀಮ್:

ಮುಸಲ್ಮಾನರ ಪವಿತ್ರ ಹಾಜಿ ಅಲಿ ದರ್ಗಾದಲ್ಲಿ ಮಹಿಳೆಯರ ಪ್ರವೇಶಕ್ಕೆ ಹೇರಲಾಗಿದ್ದ ನಿಷೇಧವನ್ನು ಬಾಂಬೆ ಹೈಕೋರ್ಟ್ ತೆರವುಗೊಳಿಸಿದೆ. ‘ರಾಜ್ಯ ಸರ್ಕಾರ ಹಾಗೂ ಹಾಜಿ ಅಲಿ ದರ್ಗಾದ ಟ್ರಸ್ಟಿಗಳು ಸೇರಿ ಮಹಿಳೆಯರ ರಕ್ಷಣೆ ಮಾಡಬೇಕು…’ ಎಂಬ ಸೂಚನೆ ನೀಡುವುದರೊಂದಿಗೆ ಕೋರ್ಟ್ ಈ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ದರ್ಗಾದಲ್ಲಿ ಮಹಿಳೆಯರ ಪ್ರವೇಶಕ್ಕೆ ನಿಷೇಧ ಹೇರಿರೋದು ಅಸಂವಿಧಾನಿಕ ಎಂದಿರುವ ನ್ಯಾಯಾಲಯ, ದರ್ಗಾದ ಗರ್ಭಗುಡಿಗೆ ಪ್ರವೇಶಿಸಲು ಅನುಮತಿ ಮಾಡಿಕೊಟ್ಟಿದೆ. ಆದರೆ ಪ್ರತಿವಾದಿಗಳು ಸುಪ್ರೀಂಕೋರ್ಟಿಗೆ ಮೇಲ್ಮನವಿ ಹೋಗುತ್ತಿರುವುದರಿಂದ ಇದರ ಅನುಷ್ಠಾನಕ್ಕೆ ಆರು ತಿಂಗಳ ತಡೆ ಇದೆ.

ಸಂವಿಧಾನದ 14, 15 ಮತ್ತು 21ನೇ ವಿಧಿಯು ಯಾವುದೇ ಪುರುಷ ಅಥವಾ ಮಹಿಳೆ ತಮಗೆ ಇಚ್ಛಿಸಿದ ಧರ್ಮವನ್ನು ಪಾಲಿಸುವುದು ಮೂಲಭೂತ ಹಕ್ಕು. ಕಾನೂನಿನ ಮುಂದೆ ಈ ಇಬ್ಬರು ಸಮಾನರು. ಹೀಗಾಗಿ ಎಲ್ಲರಿಗೂ ಸಮಾನ ಸ್ವಾತಂತ್ರ್ಯ ಸಿಗಬೇಕು ಎಂದು ವಿವರಿಸಿದೆ. ಹೀಗಾಗಿ ಮಹಿಳೆಯರನ್ನು ದರ್ಗಾಕ್ಕೆ ಪ್ರವೇಶಿಸದಂತೆ ನಿಷೇಧ ಹೇರುವುದು ಸಂವಿಧಾನದ ಉಲ್ಲಂಘನೆಯಾಗಲಿದೆ ಎಂಬುದು ನ್ಯಾಯಾಲಯದ ಅಭಿಮತ.

ಈ ಬಗ್ಗೆ ಹಾಜಿ ಅಲಿ ದರ್ಗಾ ಟ್ರಸ್ಟ್ ವತಿಯಿಂದ ಆಕ್ಷೇಪವಿದ್ದು, ಈ ತೀರ್ಪನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ಅರ್ಜಿ ಸಲ್ಲಿಸಿರುವುದರಿಂದ ಹೈಕೋರ್ಟ್ 6 ವಾರಗಳ ಕಾಲ ಈ ತೀರ್ಪನ್ನು ಕಾಯ್ದಿರಿಸಿದೆ.

ಕೋರ್ಟ್ ನ ಈ ತೀರ್ಪಿನೊಂದಿಗೆ ಮುಸ್ಲಿಂ ಮಹಿಳಾ ಹಿತಾಸಕ್ತಿಗಾಗಿ ಹೋರಾಟ ನಡೆಸುತ್ತಿರುವ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ ಕಾರ್ಯಕರ್ತೆಯರಾದ ನೂರ್ಜೆಹಾನ್ ನಿಯಾಜ್ ಮತ್ತು ಜಾಕಿಯಾ ಸೊಮನ್ ಅವರಿಗೆ ಜಯ ಸಿಕ್ಕಿದಂತಾಗಿದೆ. ಇವರು ಹಾಜಿ ಅಲಿ ದರ್ಗಾದ ಗರ್ಭಗುಡಿಗೆ ಮಹಿಳೆಯರ ಪ್ರವೇಶಕ್ಕೆ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಜುಲೈ 28ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.

ಕೋರ್ಟ್ ನ ಈ ತೀರ್ಪಿಗೆ ವಿವಿಧ ಮಹಿಳಾ ಹಕ್ಕು ಹೋರಾಟ ಕಾರ್ಯಕರ್ತೆಯರು ಸಂತೋಷ ವ್ಯಕ್ತಪಡಿಸಿರೋದು ಹೀಗೆ…

  • ‘ಮುಸಲ್ಮಾನ ಮಹಿಳೆಯರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಕೋರ್ಟ್ ನ ಈ ತೀರ್ಪಿನಿಂದ ಬಹಳ ಖುಷಿಯಾಗಿದೆ’ ಎಂದಿದ್ದಾರೆ ಪ್ರಕರಣದ ಅರ್ಜಿದಾರರಾದ ಜಾಕಿಯಾ ಸೊಮನ್.
  • ‘ಇದೊಂದು ಐತಿಹಾಸಿಕ ತೀರ್ಪು. ಹೈ ಕೋರ್ಟ್ ನ ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಇದು ಮಹಿಳೆಯರಿಗೆ ಸಿಕ್ಕ ದೊಡ್ಡ ಜಯ’ ಎಂದು ಸಂಭ್ರಮಿಸಿದರು ಭೂಮಾತಾ ಬ್ರಿಗೆಡ್ ಮುಖ್ಯಸ್ಥೆ ತೃಪ್ತಿ ದೇಸಾಯಿ.

ಇನ್ನು ಈ ತೀರ್ಪಿನ ಬಗ್ಗೆ ಕೆಲವು ಇಸ್ಲಾಂ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದು, ಅವರ ವಾದಗಳು ಹೀಗಿವೆ…

  • ‘ಈ ವಿಷಯದಲ್ಲಿ ಹೈ ಕೋರ್ಟ್ ಮಧ್ಯಪ್ರವೇಶ ಮಾಡಬಾರದಿತ್ತು. ಆದರೆ ಈಗ ನಮ್ಮ ವಿರುದ್ಧ ತೀರ್ಪು ನೀಡಿದೆ. ಈ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡುತ್ತೇವೆ’ ಎಂದಿದ್ದಾರೆ ಎಂಐಎಂನ ಹಾಜಿ ರಾಫತ್.
  • ‘ಇದೊಂದು ತಪ್ಪು ನಿರ್ಧಾರ. ನ್ಯಾಯಾಲಯ ಶರಿಯಾ ಕಾನೂನು ಅರಿಯದೇ ಈ ತೀರ್ಪು ನೀಡಿದೆ ಎನಿಸುತ್ತಿದೆ’ ಎಂಬುದು ಮೌಲಾನ ಸಾಜಿದ್ ರಶೀದ್ ಅವರ ಅಭಿಪ್ರಾಯ.

Leave a Reply