
ಬಿಬಿಎಂಪಿ ಒತ್ತುವರಿ ತೆರವು ಕಾರ್ಯಕ್ಕೆ ಜತೆಗೂಡಲು ಹೊಸ ಯಂತ್ರ ಅಕ್ಟೋಪಸ್. ತೆರವೇನೋ ಸರಿ, ಆದರೆ ಈವರೆಗೆ ಯಾವ ಪ್ರಭಾವಿಗಳ ಮನೆ ಎದುರೂ ಜೆಸಿಬಿ ನಿಂತಿಲ್ಲವಲ್ಲ, ಹಾಗಾದರೆ ಸಾಮಾನ್ಯರ ಮನೆಗಳು ಮಾತ್ರವೇ ಅಕ್ರಮವಾಗಿದ್ದವೇ ಎಂಬುದೀಗ ಜನರು ಕೇಳುತ್ತಿರುವ ಪ್ರಶ್ನೆ.
ಡಿಜಿಟಲ್ ಕನ್ನಡ ಟೀಮ್:
ಕಾವೇರಿ ವಿಚಾರ ತಜ್ಞರೊಂದಿಗೆ ಚರ್ಚೆ
ಕಾವೇರಿ ನೀರು ಬಿಡುವಂತೆ ಆಗ್ರಹಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಿರುವ ಅಗತ್ಯ ಕ್ರಮಗಳ ಕುರಿತಂತೆ ಸರ್ಕಾರ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿದೆ.
ಈ ವರ್ಷ ತಮ್ಮ ಪಾಲಿಗೆ ಬರಬೇಕಾದ 50 ಟಿಎಂಸಿ ನೀರನ್ನು ತಕ್ಷಣವೇ ಕರ್ನಾಟಕ ಬಿಡುಗಡೆಗೊಳಿಸಬೇಕು. ಜತೆಗೆ ಕಳೆದ ಎರಡು ವರ್ಷಗಳ ಹಿಂದೆ ಕರ್ನಾಟಕ ಸರ್ಕಾರ ತಮ್ಮ ಪಾಲಿನ ನೀರನ್ನು ಬಿಡದ ಕಾರಣ ₹ 2250 ಕೋಟಿ ಮೊತ್ತದ ಕುರುವೈ ಬೆಳೆ ನಾಶವಾಗಿದ್ದು, ಅದರ ಪರಿಹಾರವನ್ನು ಕರ್ನಾಟಕ ಸರ್ಕಾರದಿಂದ ಕೊಡಿಸಬೇಕೆಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಈ ಸಂಬಂಧ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ಹೀಗಾಗಿ ದೆಹಲಿ ಪ್ರವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಪರ ವಾದ ಮಾಡುವ ಪಾಲಿ ನಾರಿಮನ್ ಅವರನ್ನು ಸಂಪರ್ಕಿಸಿ, ಸಮಾಲೋಚನೆ ನಡೆಸಿದರು. ಈ ವೇಳೆ ನಾರಿಮನ್ ಅವರು ಕಾವೇರಿ ಜಲಾನಯನ ಪ್ರದೇಶದ ಸ್ಥಿತಿಗತಿ, ಆಣೆಕಟ್ಟುಗಳಲ್ಲಿರುವ ನೀರಿನ ಪ್ರಮಾಣದ ಬಗ್ಗೆ ಮಾಹಿತಿ ಕೇಳಿದ್ದು, ನಾಳೆ ಬೃಹತ್ ನೀರಾವರಿ ಸಚಿವ ಎಂ.ಬಿ. ಪಾಟೀಲ್ ಕಾನೂನು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ವಕೀಲರ ತಂಡಕ್ಕೆ ಈ ಎಲ್ಲದರ ಮಾಹಿತಿ ನೀಡಲಿದ್ದಾರೆ.
ತೀರ್ಪಿನ ಅನ್ವಯ ರಾಜ್ಯ ಸರ್ಕಾರ ಈಗಾಗಲೇ ಸಂಕಷ್ಟ ಸೂತ್ರವನ್ನಾಧರಿಸಿ, ತಮಿಳುನಾಡಿಗೆ ಕಾವೇರಿ ನೀರು ಹರಿಸಿದೆ. ಹೀಗಾಗಿ ಕಳೆದ ಮೂರು ತಿಂಗಳಿನಿಂದ ತಮಿಳುನಾಡಿಗೆ ಹರಿದಿರುವ ನೀರು ಹರಿವಿನ ಪ್ರಮಾಣದ ಮಾಹಿತಿ, ರಾಜ್ಯದ ಕಾವೇರಿ ಜಲಾಶಯಗಳಲ್ಲಿನ ನೀರಿನ ಸಂಗ್ರಹ, ನೀರಿನ ಕೊರತೆಯಿಂದ ಕುಡಿಯಲು ಜಲಾಶಯ ನೀರನ್ನು ಮೀಸಲಿಟ್ಟು, ಈ ಭಾಗದಲ್ಲಿ ಕೃಷಿ ಚಟುವಟಿಕೆ ನಡೆಸದಂತೆ ಸಂಪುಟ ತೆಗೆದುಕೊಂಡಿರುವ ತೀರ್ಮಾನ ಮತ್ತು ಆದೇಶಗಳನ್ನು ರಾಜ್ಯ ಸರ್ಕಾರ ನಾರಿಮನ್ ಅವರಿಗೆ ಒದಗಿಸಲಿದೆ.
ಡಿ.ಕೆ ಸುರೇಶ್ ವಿರುದ್ಧ ಪಿಎಸ್ಐ ಆರೋಪ
ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್ ಅವರು ಸಾರ್ವಜನಿಕವಾಗಿ ತಮ್ಮನ್ನು ನಿಂದಿಸಿದ್ದಾರೆ ಎಂದು ಆರೋಪಿಸಿರುವ ಅತ್ತಿಬೆಲೆ ಠಾಣೆಯ ಪಿಎಸ್ಐ ಟಿ.ಆರ್. ಶ್ರೀನಿವಾಸ್, ಸುರೇಶ್ ವಿರುದ್ಧ ಪ್ರಕರಣ ದಾಖಲಿಸುವಂತೆ ಎಸ್ಪಿ ಅವರ ಬಳಿ ಮನವಿ ಮಾಡಿದ್ದಾರೆ. ಸದಾಶಿವ ನಗರ ನಿವಾಸದಲ್ಲಿ ಗುರುವಾರ ಸಭೆಗೆಂದು ಕೆರೆದು, ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು ಮತ್ತು ಸಾರ್ವಜನಿಕರ ಮುಂದೆ ಸುರೇಶ್ ಅವರು ತಮ್ಮನ್ನು ನಿಂದಿಸಿದ್ದಾರೆ ಎಂಬುದು ಶ್ರೀನಿವಾಸ್ ಅವರ ಆರೋಪ.
‘ಎಯ್ ಎನು ವಸೂಲಿಬಾಜಿಗಿಳಿದಿದ್ದೀಯಾ ನಿನ್ನದ್ ಎಲ್ಲಾ ಕಂಡಿದ್ದೀನಿ… ಎಂದು ಎಲ್ಲರೆದುರು ನಿಂದಿಸಿದ್ದಾರೆ. ಈ ಸಂಬಂಧ ಸುರೇಶ್ ಅವರ ವಿರುದ್ಧ ನಡವಳಿ ನೀಡಬೇಕೆಂದು ಎಸ್ಪಿಗೆ ಬರೆದ ಪತ್ರದಲ್ಲಿ ಕೇಳಿಕೊಂಡಿದ್ದಾರೆ.
‘ಸಾರ್ವಜನಿಕರಿಂದ ದರೋಡೆ, ದೌರ್ಜನ್ಯಗಳ ಕುರಿತು ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ನಾನು ಜನಪ್ರತಿನಿಧಿಯಾಗಿ ಸಭೆ ಕರೆದಿದ್ದೆ. ಯಾವುದೇ ನಿಂದನೆ ಮಾಡಿಲ್ಲ. ಈ ಬಗ್ಗೆ ತನಿಖೆಯಾಗಲಿ ಏನು ನಡೆದಿದೆ ಎನ್ನುವುದು ಹೊರ ಬರಲಿ’ ಎಂಬುದು ಸಂಸದ ಸುರೇಶ್ ನೀಡಿರುವ ಸ್ಪಷ್ಟನೆ.
6 ತಿಂಗಳಲ್ಲಿ ಡಿಜಿಟಲ್ ಲೈಬ್ರರಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರಮುಖ ಪುಸ್ತಕ ಮತ್ತು ದಾಖಲಾತಿಗಳನ್ನು ಒಳಗೊಂಡ ಡಿಜಿಟಲ್ ಲೈಬ್ರರಿಯನ್ನು ಮುಂದಿನ 6 ತಿಂಗಳ ಒಳಗಾಗಿ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ.
ಐತಿಹಾಸಿಕ ದಾಖಲೆಗಳ ಛಾಯಾಚಿತ್ರ ಪ್ರದರ್ಶನ ಮತ್ತು ಬ್ರಿಟಿಷ್ ಆಡಳಿತದ ದಾಖಲೆಗಳ ಪುಸ್ತಕಗಳನ್ನು ಸಂಶೋಧನೆಗಾಗಿ ಅನಾವರಣ ಮಾಡಿದ ಉಮಾಶ್ರೀ ಅವರು ಹೇಳಿದಿಷ್ಟು: ‘ಸುಮಾರು 250 ವರ್ಷಗಳ ಹಿಂದಿನ ದಾಖಲೆಗಳು, ಪತ್ರಗಳು ಮತ್ತು ಆಡಳಿತದ ಮಾಹಿತಿಗಳು ಲಂಡನ್ ನ ಲೈಬ್ರರಿಯಲ್ಲಿ ಇದ್ದವು. ನಮ್ಮ ಇಲಾಖೆ ಸತತವಾಗಿ ಸಂಪರ್ಕ ಮಾಡಿ ಅವುಗಳನ್ನು ಕರ್ನಾಟಕಕ್ಕೆ ತಂದಿದೆ. ಈ ಅಮೂಲ್ಯ ದಾಖಲಾತಿಗಳನ್ನು ಪ್ರತಿ ವರ್ಷ 15 ಕಾಲೇಜುಗಳಲ್ಲಿ ಪ್ರದರ್ಶನ ಮಾಡುವ ಪ್ರವೃತ್ತಿಯನ್ನು ಕಳೆದ ಮೂರು ವರ್ಷಗಳಿಂದಲೂ ನಡೆಸಿಕೊಂಡು ಬಂದಿದ್ದೇವೆ. ಅಮೂಲ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣಗೊಳಿಸುವ ಪ್ರಯತ್ನ ಪ್ರಗತಿಯಲ್ಲಿದೆ. ಅಪ್ರಕಟಿತ ಅಮೂಲ್ಯ ಪುಸ್ತಕಗಳನ್ನು ಡಿಜಿಟಲೀಕರಣಗೊಳಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ 50 ಪುಸ್ತಕಗಳನ್ನು ಗಣಕ ತಂತ್ರಾಂಶಕ್ಕೆ ಅಳವಡಿಸಿಕೊಳ್ಳಲಾಗಿದೆ. ಈ ಸುವ್ಯವಸ್ಥಿತ ಡಿಜಿಟಲ್ ಲೈಬ್ರರಿಯನ್ನು 6 ತಿಂಗಳಲ್ಲಿ ಆರಂಭಿಸಲಾಗುವುದು.’
http://www.kanaja.in ತಾಣ ಸರಿಯಾಗಿ update ಆಗ್ತನೇ ಇಲ್ಲ ಮತ್ತೊಂದು ಬರುತ್ತಿದೆಯೆ?