ಒಲಂಪಿಕ್ಸ್ ಗೆದ್ದೋರ ಕುರಿತು  ಸಿನಿಮಾ ಮಾಡೋಕಿಂತ, ಸಿನಿಮಾ ಒಲಂಪಿಕ್ಸ್ ಗೆಲ್ಲಲು ಪ್ರೇರಣೆ ನೀಡುವಂತಿದ್ದರೆ!

author-ssreedhra-murthyದೇಶದೆಲ್ಲಡೆ ಈಗ ಸಿಂಧು ಹೆಸರಿನ ಜಪ ನಡೆಯುತ್ತಿದೆ.! ಹೀಗಿರುವಾಗ ಇಂತಹ ಜನಪ್ರಿಯ ವಸ್ತುವನ್ನು ಬಳಸಿಕೊಳ್ಳುವಲ್ಲಿ ಚಿತ್ರರಂಗದವರು ಹಿಂದೆ ಬೀಳುವರೇ? ಲಂಡನ್ ಒಲಂಪಿಕ್ಸ್‍ನ ನಂತರ ಸಾಧಕಿ ಮೇರಿಕೊಮ್‍ ಕುರಿತಾದ ಚಿತ್ರ ರೂಪುಗೊಂಡಿತ್ತು. ಈಗ ದೇಶದ ಕಣ್ಮಣಿ ಎನ್ನಿಸಿಕೊಂಡಿರುವ ಸಿಂಧು ಕುರಿತು ಚಿತ್ರ ರೂಪುಗೊಳ್ಳುವುದು ಖಚಿತವಾಗಿದೆ. ಒಂದಲ್ಲ ಎರಡಲ್ಲ ಎಂಟು ಭಾಷೆಗಳಲ್ಲಿ ಈಗಾಗಲೇ ಸಿಂಧು ಹೆಸರಿನ ಟೈಟಲ್ ರಿಜಿಸ್ಟರ್ ಆಗಿದೆ. ಇದರ ಜೊತೆಗೆ ಸಿಂಧುವಿನ ಕೋಚ್ ಪಿ.ಗೋಪಿಚಂದ್ ಕುರಿತೂ ಚಿತ್ರ ರೂಪುಗೊಳ್ಳಲಿದೆ. ಈ ಚಿತ್ರದ ಸಿದ್ದತೆ ಒಲಂಪಿಕ್ಸ್‍ನ ಐತಿಹಾಸಿಕ ಸಾಧನೆಗೆ ಮೊದಲೇ ಆರಂಭವಾಗಿತ್ತು. ಅಭಿಷೇಕ್ ನಾಮಾ ತೆಲುಗು ಮತ್ತು ಹಿಂದಿಯಲ್ಲಿ ನಿರ್ಮಿಸಲಿರುವ ಈ ಚಿತ್ರದಲ್ಲಿ ಮಹೇಶ್ ಬಾಬು ಅವರ ಸಂಬಂಧಿ ಸುಧೀರ್ ಬಾಬು ಗೋಪಿಚಂದ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಪ್ರವೀಣ್ ಸತ್ರೂನೆ ಇದರ ನಿರ್ದೇಶಕರು. ಇದರ ಜೊತೆಗೆ ಅಮೂಲೆ ಗುಪ್ತ ನಿರ್ದೇಶನದ ಸೈನಾ ನೆಹ್ವಾಲ್ ಕುರಿತ ಚಿತ್ರ ಈಗಾಗಲೇ ನಿರ್ಮಾಣದ ಹಂತದಲ್ಲಿದೆ.

ಇಂತಹ  ಚಿತ್ರಗಳು ರೂಪುಗೊಳ್ಳುತ್ತಿವೆ ಎನ್ನುವುದಕ್ಕಿಂತ ಅವುಗಳ ಸ್ವರೂಪ ಹೇಗಿರ ಬಹುದು ಎನ್ನುವುದು ನನಗಿರುವ ಕುತೂಹಲ. ಸಿಂಧು ಕುರಿತ ರೂಪುಗೊಳ್ಳಲಿರುವ ಬಾಲಿವುಡ್ ಚಿತ್ರಕ್ಕೆ ಸಂಬಂಧಿಸಿದ ಸುದ್ದಿ ಹೀಗಿದೆ. ಈ ಚಿತ್ರದಲ್ಲಿ ಸಿಂಧು ಫೈನಲ್‍ನಲ್ಲಿ  ಪಾಕಿಸ್ತಾನದ ಆಟಗಾರ್ತಿಯನ್ನು ಸೋಲಿಸಿ ಚಿನ್ನದ ಪದಕವನ್ನು ಗೆದ್ದು ಕೊಳ್ಳುತ್ತಾಳೆ. ಹೀಗೆ ಆಗಿರಲಿಲ್ಲವಲ್ಲ ಎಂದೇನು ಅಚ್ಚರಿ ಪಡಬೇಡಿ, ಸಿನಿಮಾದವರು ಯೋಚಿಸುವುದೇ ಹೀಗೆ. ಅವರಿಗೆ ಬೇಕಿರುವುದು ವಾಸ್ತವಕ್ಕಿಂತ ಭಾವನಾತ್ಮಕ ಅಂಶಗಳು. ಈ ಹಿಂದೆ ಕ್ರೀಡೆಯ ಕುರಿತು ರೂಪುಗೊಂಡ ಚಿತ್ರಗಳೂ ಇದನ್ನೇ ಮಾಡಲು ಪ್ರಯತ್ನಿಸಿದ್ದವು. ಸಿನಿಮಾ ವಾಸ್ತವದ ಪ್ರತಿಬಿಂಬವಾಗ ಬೇಕಿಲ್ಲ ನಿಜ,  ಹಾಗಾದರೆ ಸಾಕ್ಷಚಿತ್ರವಾಗಿ ಬಿಡುತ್ತದೆ ಎನ್ನುವ ವಾದವನ್ನು ಒಪ್ಪಿಕೊಳ್ಳೋಣ. ಆದರೆ ವಾಸ್ತವದಿಂದ ತೀರಾ ದೂರ ಹೋಗ ಬಾರದಲ್ಲವೆ.? 1941ರಲ್ಲಿ ಆರ್.ನಾಗೇಂದ್ರ ರಾಯರು ‘ವಸಂತ ಸೇನಾ’ಚಿತ್ರವನ್ನು ನಿರ್ಮಿಸಿದ್ದರು. ಅದರಲ್ಲಿ ಆರ್ಯಕನ ಪಾತ್ರದ ಮೂಲಕ ಸ್ವಾತಂತ್ರ್ಯ ಹೋರಾಟದ ಆಶಯಗಳನ್ನು ಬಿಂಬಿಸಿದ್ದರು. ಇದು ಮೂಲ ನಾಟಕ’ ಮೃಚ್ಛಕಟಿಕ’ದ  ಆಶಯಕ್ಕಿಂತಲೂ ಭಿನ್ನವಾಗಿತ್ತು. ಆದರೆ ಆಗ ಚಿತ್ರಗಳು ಬ್ರಿಟಿಷ್ ಸೆನ್ಸಾರ್‍ಶಿಪ್‍ನ ಕಣ್ಗಾವಲಲ್ಲಿ ಬಿಡುಗಡೆಯಾಗುತ್ತಿದ್ದವು. ಸ್ವಾತಂತ್ರ್ಯ ಹೋರಾಟದ ಆಶಯವನ್ನು ಹೇಳಲು ಇಂತಹ ಮಾರ್ಗವನ್ನು ತುಳಿಯುವುದು ಅನಿವಾರ್ಯವಾಗಿತ್ತು.  ಚಿತ್ರ ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ ಕಾವನ್ನು ಹಬ್ಬಿಸುವಲ್ಲಿ ಯಶಸ್ವಿಯಾಗಿ ತನ್ನ ಉದ್ದೇಶವನ್ನು ಸಾರ್ಥಕಗೊಳಿಸಿಕೊಂಡಿತು. 1919ರಲ್ಲಿ ಬಾಬೂರಾವ್ ಪೇಂಟರ್‍ ‘ಕೀಚಕ ವಧಾ’ ಎನ್ನುವ ಮರಾಠಿ ಚಿತ್ರದ ಮೂಲಕ ಇಂತಹ ಪ್ರಯತ್ನವನ್ನೇ ಮಾಡಿದ್ದರು. ಈ ಚಿತ್ರವನ್ನು ಬ್ರಿಟೀಷರು ನಿಷೇದಿಸಿದಾಗ ‘ಸೈರಂದ್ರಿ’ಎಂದು ಹೆಸರು ಬದಲಾಯಿಸಿ ಸ್ವಲ್ಪ ಬದಲಾಯಿಸಿ ಮರು ಬಿಡುಗಡೆ ಮಾಡಿದ್ದರು. ಈ ಸಿನಿಮಾ ಭಾರತದ ಸ್ವಾಂತಂತ್ರ್ಯ ಚಳುವಳಿಗೆ ಗಣನೀಯ ಕೊಡುಗೆ ನೀಡಿತು. ಲೋಕಮಾನ್ಯ ತಿಲಕರು ಈ ಪ್ರಯತ್ನವನ್ನು ಚಾರಿತ್ರಿಕ ಎಂದು ಬಣ್ಣಿಸಿ ಬಾಬು ರಾವ್ ಪೇಂಟರ್‍ ಅವರಿಗೆ ‘ಸಿನಿಮಾ ಕೇಸರಿ’ ಅನ್ನೋ ಬಿರುದನ್ನು ನೀಡಿದ್ದರು. ಸ್ವಾಂತಂತ್ರ್ಯಾನಂತರ ಕನ್ನಡ ಚಿತ್ರಗಳು ಬ್ರಿಟೀಷರು ಬಿಟ್ಟು ಹೋದರೂ ಉಳಿಸಿ ಹೋಗಿದ್ದ ವಸಾಹತುಶಾಹಿ ಮನೋಭಾವವನ್ನು ಖಚಿತವಾಗಿ ಗುರುತಿಸಿಕೊಂಡು ಅದನ್ನು ಎದುರಿಸಲು ಒಟ್ಟು ಕುಟುಂಬ, ಸಂಬಂಧಗಳಲ್ಲಿನ ಗಹನತೆ, ನಾಡ ಪ್ರೇಮ ಮೊದಲಾದ ಭಾರತೀಯ ಪರಂಪರಯ ಗುಣಾತ್ಮಕ ಅಂಶಗಳನ್ನು ತಮ್ಮ ಶಕ್ತಿಯನ್ನಾಗಿಸಿಕೊಂಡವು. ಈ ಚಿತ್ರಗಳು ಮೌಲ್ಯಗಳನ್ನು ಎತ್ತಿ ಹಿಡಿಯಲು ಮಾಡಿದ ನಿರಂತರ ಪ್ರಯತ್ನವನ್ನು ಅವುಗಳ ತಾಂತ್ರಿಕ ಸಮಸ್ಯೆಗಳನ್ನು ಬದಿಗಿರಿಸಿ ಗುರುತಿಸ ಬೇಕು. ಕನ್ನಡದಲ್ಲಿ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲೂ ಒಂದು ಕಾಲಘಟ್ಟದ ಸಿನಿಮಾಗಳು ನೀಡಿದ ಸಾಂಸ್ಕೃತಿಕ ಕೊಡುಗೆಗಳು ಬಹಳ ದೊಡ್ಡದು.

ನಂತರ ನಡೆದಿದ್ದೇ ಬೇರೆ,  ಹೊಸ ಅಲೆ ಚಿತ್ರಗಳು ಯರೋಪಿಯನ್ ಪ್ರಣೀತ ನವವಾಸ್ತವ ವಾದವನ್ನು ಹೇಳಲು ಆರಂಭಿಸಿದವು. ಎರಡು ಮಹಾಯುದ್ಧಗಳನ್ನು ಎದುರಿಸಿದ್ದ ಕಾರಣದಿಂದ ಯುರೂಪಿನಲ್ಲಿ ರೂಪುಗೊಂಡಿದ್ದ ಈ ಚಿಂತನೆಯ ಮೂಲಕ ಮೂಡಿದ ನಮ್ಮ ಕಥೆಗಳೂ ನಮ್ಮದಲ್ಲದ ರೀತಿಯಲ್ಲಿ ಅನ್ನಿಸಲು ಆರಂಭಿಸಿದ್ದವು. ಇದೇ ವೇಳೆಗೆ ಪ್ರಧಾನವಾಹಿನಿ ಚಿತ್ರಗಳು ಹಾಲಿವುಡ್ ಮಾದರಿಯನ್ನು ಅನುಸರಿಸಲು ಆರಂಭಿಸಿದವು. ಅಲ್ಲಿ ಕಥೆಗಿಂತಲೂ ಅದು ಉಂಟು ಮಾಡುವ ಭ್ರಮೆಯೇ ಮುಖ್ಯ. ನಾಯಕ-ನಾಯಕಿಯರನ್ನು ನೋಡುವ ಪ್ರೇಕ್ಷಕ ತನ್ನ ವೈಯಕ್ತಿಕ ಜೀವನವನ್ನು ಮರೆತು ಭ್ರಮೆಗಳನ್ನು ತನ್ನದಾಗಿಸಿಕೊಳ್ಳುವುದು ಇವುಗಳ ಉದ್ದೇಶ. ಈಗ ಸಿಂಧುವಿನ ಕುರಿತು ಸಿನಿಮಾ ಮಾಡಲು ಹೊರಟವರಿಗೂ ಮುಖ್ಯವಾಗಿರುವುದು ಪಿ.ವಿ.ಸಿಂಧು ಅಲ್ಲ ಆ ಮೂಲಕ ಹುಟ್ಟಿ ಹಾಕ ಬಲ್ಲ ಭ್ರಮೆ. ಆರಾಧನಾ ಭಾವಕ್ಕಿಂತ ಇವು ಹೆಚ್ಚಿನದೇನನ್ನೂ ಸಾಧಿಸುವುದಿಲ್ಲ. ಚರಿತ್ರೆಕಾರ ಎರ್ವಿನ್ ಪೆನೋಫೆಸ್ಕಿ ಹೇಳುವ ಮಾತು ಇಲ್ಲಿ ಮುಖ್ಯ ‘ಸಿನಿಮಾ ಉದ್ದೇಶ ಜನರನ್ನು ತಲುಪುವುದೇ ಇರ ಬಹುದು, ಆದರೆ ಅದಕ್ಕಾಗಿ ತಪ್ಪು ಮಾದರಿಗಳನ್ನು ಸೃಷ್ಟಿಸ ಬಾರದು’.

ರಿಯೋ ಒಲಂಪಿಕ್ಸ್‍ನಲ್ಲಿ ಸಿಂಧು, ಸಾಕ್ಷಿಯವರ ಗೆಲುವು ಮಾತ್ರವಲ್ಲ ದೀಪಾ ಕರ್ಮಕಾರ್ ಉತ್ಸಾಹ, ಜಿತುವಿನ ಛಲ, ಅಭಿನವ್ ಬಿಂದ್ರಾನ ನಿಟ್ಟುಸಿರು, ಸಾನಿಯಾ ಮಿರ್ಜಾಳ ಕಣ್ಣೀರು ಎಲ್ಲವೂ ಚಲನಚಿತ್ರವಾಗಲು ಅರ್ಹವಾದ ವಸ್ತುಗಳೇ. ಆದರೆ ಅವು ಪ್ರೇಕ್ಷಕರೊಳಗಿನ ಸಾಧಕರನ್ನು ಬಡಿದೆಬ್ಬಿಸಿದರೆ ಮಾತ್ರ ಸಾರ್ಥಕವಾಗುತ್ತವೆ. ಸಾಧಕರಿಗೆ ಕೋಟಿ ಕೋಟಿ ರೂಪಾಯಿಗಳನ್ನು ನೀಡುತ್ತಿರುವ ಸರ್ಕಾರಗಳು ಅದರ ಒಂದು ಭಾಗವನ್ನು ಬಳಸಿ ಸಿನಿಮಾದಂತಹ ಪ್ರಭಾವಶಾಲಿ ಮಾಧ್ಯಮವನ್ನು ಬಳಸಿ ಅವರ ಸಾಧನೆಯ ಮಹತ್ವವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಬೇಕು. ಗೋಪಿಚಂದ್ ಅವರ ತಾಯಿ ಸುಬ್ಬಾವರಮ್ಮ ತಮ್ಮ ಮಗನ ಕುರಿತು ರೂಪುಗೊಳುತ್ತಿರುವ ಸಿನಿಮಾ ಕುರಿತು ಹೇಳಿದ್ದು ‘ಈ ಚಿತ್ರ ಗೋಪಿಯನ್ನು ಹಾಡಿ ಹೊಗಳಲು ರೂಪುಗೊಳ್ಳುತ್ತಿದ್ದರೆ  ನನಗೆ ಒಪ್ಪಿತವಲ್ಲ, ಬದಲಾಗಿ ಇನ್ನಷ್ಟು ಗೋಪಿಚಂದರನ್ನು ಹುಟ್ಟು ಹಾಕಿದರೆ ಮಾತ್ರ ನನಗೆ ಒಪ್ಪಿಗೆ’ ಈ ,ಮಾತು ನಮ್ಮ ಚಿತ್ರ ನಿರ್ಮಾಪಕರಿಗೆ ಅರ್ಥವಾಗ ಬೇಕು. ಒಲಂಪಿಕ್ಸ್‍ನಲ್ಲಿ ಪದಕ ಗೆದ್ದವರ ಕುರಿತು ಸಿನಿಮಾ ಮಾಡುವುದಕ್ಕಿಂತ ಸಿನಿಮಾ ನೋಡಿ ಒಲಂಪಿಕ್ಸ್ ಪದಕ ಗೆಲ್ಲಬಲ್ಲಂತವರನ್ನು ರೂಪಿಸುವುದು ಇಂದಿನ ಅಗತ್ಯ.

Leave a Reply