2020ರ ಟೋಕಿಯೋ ಒಲಿಂಪಿಕ್ಸ್ ಉದ್ಘಾಟನೆಗೆ ಕೃತಕ ಉಲ್ಕಾವೃಷ್ಟಿ, ಆಕಾಶವೇ ಕ್ಯಾನ್‍ವಾಸ್–ಇತಿಹಾಸ ಸೃಷ್ಟಿಸಲು ಹೊರಟಿದೆ ಜಪಾನ್

author-ananthramuಕಳೆದವಾರ ನಡೆದ ರಿಯೋ ಒಲಿಂಪಿಕ್ಸ್ ಕ್ರೀಡೆಯ ಸಮಾರೋಪ ಸಮಾರಂಭದಲ್ಲಿ ಅನಿರೀಕ್ಷಿತವಾದ ಒಂದು ಐಟಂ ಸೇರಿತ್ತು. ಜಪಾನಿನ ಪ್ರಧಾನಿ ಶಿನ್ಸೋ ಅಬೆ, ಸ್ಟೇಡಿಯಂನಲ್ಲಿ ಹಾಕಿದ್ದ ಹಸುರು ಪೈಪಿನಿಂದ ದಿಢೀರೆಂದು ಎದ್ದು ಬಂದಿದ್ದರು. ನೋಡಿದವರು ಕಕ್ಕಾಬಿಕ್ಕಿ. ಅವರು ತೊಟ್ಟಿದ್ದ ಉಡುಗೆ ಕಂಪ್ಯೂಟರ್ ವಿಡಿಯೋ ಗೇಮ್‍ನಲ್ಲಿ ಹೆಸರಾದ ‘ಸೂಪರ್ ಮೇರಿಯ’ ಬಳಸುತ್ತಿದ್ದ ಉಡುಗೆ. ತಲೆಯಲ್ಲಿ ಕ್ಯಾಪು, ಕೈಯಲ್ಲಿ ದೊಡ್ಡ ಚೆಂಡು, ಕ್ರೀಡಾಪಟುಗಳು ಖುಷಿಯಾಗಿ ಇಡೀ ಸ್ಟೇಡಿಯಂ ಅನುರಣಿಸುವಂತೆ ಚಪ್ಪಾಳೆ ತಟ್ಟಿದ್ದರು. ಇದು ಮುಂದಿನ ಒಲಿಂಪಿಕ್ಸ್ ಜಪಾನಿನ ಟೋಕಿಯೋದಲ್ಲಿ ಎಂಬುದರ ಸೂಚನೆ. ಟ್ಟಿಟರ್‍ನಲ್ಲಂತೂ ಈ ಸಂಗತಿ ಮಹಾಪೂರವಾಗಿ ಹರಿದಾಡಿತು. ತಮಾಷೆ ಎಂದರೆ ಈ ವಿಡಿಯೋ ಗೇಮ್ ರೂಪಿಸಿದ್ದ ನಿಂಟೆಂಡೋ ಕಂಪನಿಗೆ ಮತ್ತೊಮ್ಮೆ ನಿರಾಯಾಸವಾಗಿ ಪ್ರಚಾರ ದೊರೆಯಿತು-ಅದೂ ಈಗ `ಪೋಕೆಮನ್’ ಗೇಮ್ ಇಡೀ ಜಗತ್ತಿನಲ್ಲಿ ಸುನಾಮಿ ಏಳಿಸಿರುವ ಘಳಿಗೆಯಲ್ಲಿ.

2020ರ ಜುಲೈ 24ರಂದು ಪ್ರಾರಂಭವಾಗುವ ಟೋಕಿಯೋ ಒಲಿಂಪಿಕ್ಸ್ ಕ್ರೀಡೆಗಳಿಗೆ ಜಪಾನ್ ಆತಿಥೇಯ ದೇಶವಾಗಲಿದೆ. ಟೋಕಿಯೋದಲ್ಲಿ ಉದ್ಘಾಟನಾ ಸಮಾರಂಭಕ್ಕೆ ಬೇರೆಯದೇ ಮೆರಗು ಕೊಡುವ ಇರಾದೆ ಜಪಾನಿಗಿದೆ. ಒಲಿಂಪಿಕ್ಸ್ ನಡೆಯುವ ಯಾವುದೇ ದೇಶವಿರಲಿ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಗಳು ವಿಶಿಷ್ಟವಾಗಿರುತ್ತವೆ. ಆ ದೇಶದ ಅಭಿರುಚಿ, ಇಂದಿನ ತಂತ್ರಜ್ಞಾನ ಎಲ್ಲವೂ ಮೇಳೈಸುವ ಸಂದರ್ಭವದು. ಇಡೀ ಜಗತ್ತು ಅದನ್ನು ನೋಡಿ ಸಂಭ್ರಮಿಸುತ್ತದೆ. ವಾಸ್ತವವಾಗಿ ಜಪಾನ್ ಅನೇಕ ಆರ್ಥಿಕ ಮುಗ್ಗಟ್ಟುಗಳಿಗೆ ಒಡ್ಡಿಕೊಂಡಿದೆ. ಅಂತಾರಾಷ್ಟ್ರೀಯ ಸಾಲ ಅದರ ಬೆನ್ನ ಮೇಲೆ ಹೊರೆಯಾಗಿ ಸವಾರಿ ಮಾಡುತ್ತಿದೆ. ಆರಂಭದಲ್ಲಿ 2020ರ ಒಲಿಂಪಿಕ್ಸ್ ಕ್ರೀಡೆಗೆ ಜಪಾನ್ ಸುಮಾರು ಮೂರು ಬಿಲಿಯನ್ ಡಾಲರ್ ಖರ್ಚು ಬರುವುದೆಂದು ಅಂದಾಜು ಮಾಡಿತ್ತು.  ಹದಿನೆಂಟರಿಂದ ಇಪ್ಪತ್ತು ಬಿಲಿಯನ್ ಡಾಲರ್‍ಗಳಷ್ಟು ಎಂದು ಈಗಿನ ಲೆಕ್ಕ.

ಜಪಾನ್, ಜಗತ್ತಿನ ಯಾವ ದೇಶದಲ್ಲಿ ನಡೆದ ಒಲಿಂಪಿಕ್ ಕ್ರೀಡೆಯಲ್ಲೂ ಮಾಡಿರದ ಸಾಹಸಕ್ಕೆ ಕೈಹಾಕಿದೆ. ಉದ್ಘಾಟನೆಯ ದಿನದಂದೇ ಬಾನಿನಿಂದ ಕೃತಕ ಉಲ್ಕಾಪಾತ ಸೃಷ್ಟಿ ಮಾಡುವ ತಯಾರಿಯಲ್ಲಿದೆ. ಇದಕ್ಕೆ ಪ್ರೇರಣೆ ಕೊಟ್ಟಿದ್ದು ರೀನಾ ವಕಜಿಮ ಎಂಬ ಮೂವತ್ತೆರಡು ವರ್ಷದ ಮಹಿಳೆ. ಆಕೆ ಖಗೋಳ ವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಈಗ್ಗೆ ಹದಿನೈದು ವರ್ಷಗಳ ಹಿಂದೆ ಆಕೆಯ ತವರುಮನೆಗೆ ಹೋದಾಗ, ಆಕಾಶದಲ್ಲಿ ಸಿಂಹ ರಾಶಿಯ ದಿಕ್ಕಿನಲ್ಲಿ ಉಲ್ಕಾಪಾತ ಕಂಡು ಸಂಭ್ರಮಿಸಿದಳು, ಒಡನೆಯೇ ಆಕೆಯ ತಲೆಯಲ್ಲಿ ಇದನ್ನು ಕೃತಕವಾಗಿ ಸೃಷ್ಟಿಸಬಾರದೇಕೆ ಎಂಬ ಯೋಚನೆ ಬಂತು.

TOK

ಉಲ್ಕಾಪಾತ ಕುರಿತಂತೆ ಒಂದೆರಡು ವಿಚಾರಗಳನ್ನು ಇಲ್ಲಿ ಹೇಳಲೇಬೇಕು. ಧೂಮಕೇತುಗಳು ತಮ್ಮ ಕಕ್ಷೆಯಲ್ಲಿ ಸಾಗುವಾಗ ದೂಳಿನ ಕಣಗಳನ್ನು ಚೆಲ್ಲಿ ಹೋಗುತ್ತವೆ. ಭೂಮಿ ತನ್ನ ಕಕ್ಷೆಯಲ್ಲಿ ಪರಿಭ್ರಮಿಸುವಾಗ ನಿರ್ದಿಷ್ಟವಾದ ಭಾಗದಲ್ಲಿ ಇಂಥ ಕಣಗಳನ್ನು ಹಾದುಹೋಗುವಾಗ ಆ ಕಣಗಳು ಭೂಮಿಯ ಕಡೆಗೆ ಸೆಳೆದು ಬಹುತೇಕ ವಾತಾವರಣದಲ್ಲಿ ಉರಿದುಹೋಗುತ್ತವೆ. ನೋಡುವವರಿಗೆ ಥಟ್ಟನೆ ಬೆಂಕಿಯ ಗೀರು ಬಂದು ಕಣ್ಮರೆಯಾದಂತೆ ಕಾಣುತ್ತದೆ. ಈ ಬಗೆಯ ಉಲ್ಕಾಪಾತ ವರ್ಷದಲ್ಲಿ ಮೂರು ನಾಲ್ಕು ಬಾರಿಯಾದರೂ ಘಟಿಸುತ್ತದೆ. ಸಾಮಾನ್ಯವಾಗಿ ಇಂಗ್ಲಿಷಿನಲ್ಲಿ `ಷೂಟಿಂಗ್ ಸ್ಟಾರ್ಸ್’ ಎನ್ನುವುದುಂಟು, ಇದು ಅಲಂಕಾರಿಕ ಮಾತು ಅಷ್ಟೇ. ರೀನಾ ವಕಜಿಮ ಕೃತಕ ಉಲ್ಕಾಪಾತ ಸೃಷ್ಟಿಸಲು ಸಂಶೋಧಕರ ಒಂದು ತಂಡವನ್ನೇ ಕಟ್ಟಿದಳು, ಟೋಕಿಯೋದ ಮೆಟ್ರೋ ಯೂನಿವರ್ಸಿಟಿಯು ಇದನ್ನು ಬೆಂಬಲಿಸಿತು. ಎ.ಎಲ್.ಇ. ಎಂಬ ಕಂಪನಿಯನ್ನು ಹುಟ್ಟುಹಾಕಿದಳು. ಇದೀಗ ಈ ಕಂಪನಿ ಪ್ರಯೋಗಾಲಯದಲ್ಲಿ ಇದು ಸಾಧ್ಯವೆಂದು ತೋರಿಸಿಕೊಟ್ಟಿದೆ, ಈ ವರ್ಷದ ಕೊನೆಯ ವೇಳೆಗೆ ಆಕಾಶದಲ್ಲೇ ಪ್ರಯೋಗಾರ್ಥ ಕೃತಕ ಉಲ್ಕಾಪಾತವನ್ನು ಸೃಷ್ಟಿಸಲಿದೆ.

ಇದು ಸುಲಭಕ್ಕೆ ಆಗುವ ಕೆಲಸವಲ್ಲ. ಸುಮಾರು 400 ಕಿಲೋ ಮೀಟರ್ ಎತ್ತರಕ್ಕೆ ಉಪಗ್ರಹ ಹಾರಿಸಬೇಕು. ಭೂಸ್ಥಿರ ಕಕ್ಷೆಯಲ್ಲಿ ಅದು ನೆಲೆಗೊಳ್ಳಬೇಕು. ಅದರಲ್ಲಿ ಕಣಗಳನ್ನು ಉದುರಿಸಲು 500ರಿಂದ 1000 ವಿಶೇಷ ಗೋಲಿಗಳಲ್ಲಿ ತುಂಬಬೇಕು. ಈ ಪ್ರತಿ ಉಂಡೆಯಲ್ಲೂ ಬಣ್ಣ ಬಣ್ಣ ಕೊಡುವ ಧಾತುಗಳನ್ನು ತುಂಬಬೇಕು. ನೈಸರ್ಗಿಕವಾಗಿ ಉಲ್ಕಾಪಾತವಾದಾಗ ನಮಗೆ ಕಾಣುವುದು ಬೆಂಕಿಯ ಗೀರು, ಅಂದರೆ ಒಂದೇ ಬಣ್ಣ. ಆದರೆ ಕೃತಕ ಉಲ್ಕೆಗಳಾಗಿ ಲೀಥಿಯಮ್, ಕ್ಯಾಲ್ಸಿಯಮ್, ಸ್ಟ್ರಾನ್ಷಿಯಮ್, ರುಬಿಡಿಯಮ್, ಸೋಡಿಯಮ್, ಮೆಗ್ನೀಸಿಯಮ್, ನೈಟ್ರೋಜನ್- ಇವೇ ಮುಂತಾದ ಧಾತುಗಳನ್ನು ಬಳಸುವ ಯೋಚನೆ ಎ.ಎಲ್.ಇ. ಕಂಪನಿಗೆ ಇದೆ. ಮೆಗ್ನೀಸಿಯಮ್ ಬಳಸಿದರೆ ನಮಗೆ ನೀಲಿ ಬಣ್ಣದ ಕೃತಕ ಉಲ್ಕೆ ಕಾಣುತ್ತದೆ. ಸೋಡಿಯಂ ಬಳಸಿದರೆ ಪಾಟಲ ವರ್ಣ, ಕ್ಯಾಲ್ಸಿಯಮ್ ಇದ್ದರೆ ನೇರಿಳೆ ಬಣ್ಣ – ಹೀಗೆ (ದೀಪಾವಳಿಯ ಬಾಣ, ಬಿರುಸು, ಹೂಕುಂಡ, ರಾಕೆಟ್‍ನಿಂದ ಹೊರಹೊಮ್ಮುವ ಬಣ್ಣ ಬಣ್ಣದ ಕಿಡಿಗಳನ್ನು ನೆನಪಿಸಿಕೊಳ್ಳಿ- ಅಲ್ಲೂ ಇಂಥವೇ ರಾಸಾಯನಿಕಗಳನ್ನು ಬಳಸಿರುತ್ತಾರೆ).

ನೈಸರ್ಗಿಕವಾಗಿ ಆಗುವ ಉಲ್ಕಾಪಾತದಲ್ಲಿ ಕ್ಷಣಮಾತ್ರದಲ್ಲಿ ಬೆಂಕಿಯ ಗೀರು ಮಾಯವಾಗುತ್ತದೆ. ಅಂದರೆ ವಾತಾವರಣಕ್ಕೆ ಮರುಪ್ರವೇಶ ಮಾಡಿದೊಡನೆ ಉರಿದುಹೋಗುತ್ತವೆ. ಆದರೆ ಟೋಕಿಯೋ ಒಲಿಂಪಿಕ್ಸ್ ಉದ್ಘಾಟನೆಗೆ ಯೋಜಿಸಿರುವ ಈ ಕೃತಕ ಉಲ್ಕೆಗಳು ನಿಧಾನವಾಗಿ ಉರಿಯುವಂತೆ ಯೋಜಿಸಿದೆ. ವಿಶೇಷವೆಂದರೆ ಟೋಕಿಯೋ ಸುತ್ತಮುತ್ತ 100 ಕಿಲೋಮೀಟರ್ ಪಾಸಲೆಯವರೆಗೆ ಈ ದೃಶ್ಯವನ್ನು ನೋಡಬಹುದಂತೆ-ಟೋಕಿಯೋದ ಮೇಲಿನ ಗಾಳಿ ಕಲುಷಿತವಾಗಿದ್ದರೂ. ಆಕಾಶವೇ ನಮ್ಮ ಕ್ಯಾನ್‍ವಾಸ್ ಎನ್ನುತ್ತಿದೆ ಆ ಕಂಪನಿ. ವಾಸ್ತವವಾಗಿ ಇದೊಂದು ದುಬಾರಿ ಪ್ರಯೋಗ. ಯಾವುದೇ ರಾಷ್ಟ್ರೀಯ ಹಬ್ಬಗಳಿಗೆ ಅಥವಾ ವೈಯಕ್ತಿಕವಾಗಿ ಮಾಡುವ ಹುಟ್ಟುಹಬ್ಬಗಳಿಗೆ ಇಷ್ಟು ಖರ್ಚು ಭರಿಸಲಾಗದು. ಏಕೆಂದರೆ ಪ್ರತಿ ಕೃತಕ ಉಲ್ಕೆಗಳ ಉಂಡೆಗೆ 8,000 ಡಾಲರ್ ಖರ್ಚಾಗುತ್ತದೆ. ಉಪಗ್ರಹ ಉಡಾವಣೆ ಇನ್ನೂ ದುಬಾರಿ.

TOKY 4

ಟೋಕಿಯೋ ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯದ ಏರೋಸ್ಪೇಸ್ ವಿಭಾಗದ ಎಂಜಿನಿಯರುಗಳು ಇನ್ನೊಂದು ಐಡಿಯಾ ಕೊಟ್ಟಿದ್ದಾರೆ. ಈ ಪ್ರಯೋಗ ವಿಜ್ಞಾನಿಗಳಿಗೂ ಅನುಕೂಲವಾಗಬಹುದು. ಕೃತಕ ಉಲ್ಕೆಗಳಿಂದ ಹೊರಡುವ ಬೆಳಕನ್ನು ವಿಶ್ಲೇಷಿಸಿ ವಾಯುಗೋಳದ ಸಾಂದ್ರತೆ, ಉಷ್ಣತೆಯ ಮತ್ತು ಚಲನೆಯ ಬಗ್ಗೆ ಮಾಹಿತಿ ಪಡೆಯಲು ಸಾಧ್ಯ ಎಂದು ಹೇಳುತ್ತಿದ್ದಾರೆ. ಈಗಾಗಲೇ ಅಂತರಿಕ್ಷದಲ್ಲಿ ಸಂಗ್ರಹವಾಗಿರುವ ಕಸಕ್ಕೆ ಇದೂ ಕಾಣಿಕೆ ಕೊಡಬಹುದೆ? ಎಂಬ ಅಳುಕನ್ನೂ ತೋಡಿಕೊಂಡಿದ್ದಾರೆ ಕೆಲವರು. ಅಂಟಾರ್ಕ್ಟಿಕ ಖಂಡದ ನೆತ್ತಿಯ ಮೇಲೆ ಇರುವ ಓಜೋನ್ ಪದರವನ್ನು ಇದು ನಾಶಮಾಡುವುದಿಲ್ಲವೆಂದು ಖಾತ್ರಿ ಕೊಡುವವರು ಯಾರು ಎಂಬ ಪ್ರಶ್ನೆಯೂ ಎದ್ದಿದೆ. ಒಲಿಂಪಿಕ್ಸ್ ಉದ್ಘಾಟನೆಯ ಸಮಯದಲ್ಲಿ ಆಕಾಶದ ತುಂಬ ಮೋಡಗಳಿದ್ದರೆ ಉಲ್ಕಾಸೃಷ್ಟಿಯ ಸಂಭ್ರಮ ಅರ್ಥ ಕಳೆದುಕೊಳ್ಳುತ್ತದೆ.

ಅದೇನೇ ಇರಲಿ, ಜಪಾನ್ ಒಲಿಂಪಿಕ್ಸ್ ಇತಿಹಾಸಕ್ಕೆ ರೋಚಕ ಪುಟಗಳನ್ನು ಸೇರಿಸಲು ಹೊರಟಿದೆ. ಜಪಾನ್ ನಾವಿನ್ಯಕ್ಕೆ ಹೆಸರುವಾಸಿ. 1964ರಲ್ಲಿ ಟೋಕಿಯೋದಲ್ಲಿ ಒಲಿಂಪಿಕ್ಸ್ ಕ್ರೀಡೆಯ ಉದ್ಘಾಟನೆಯ ಹತ್ತು ದಿನ ಮೊದಲು ಶಿಂಕಾನ್‍ಸೆನ್ ಎಂಬ ಬುಲೆಟ್ ಟ್ರೈನನ್ನು ವಕಾಸ ಮತ್ತು ಟೋಕಿಯೋ ನಡುವೆ ಬಿಟ್ಟು ಹೊಸ ದಾಖಲೆ ಸ್ಥಾಪಿಸಿತ್ತು. ಅದು ಜಗತ್ತಿನ ಅತಿ ವೇಗದ ರೈಲೆಂದು ಹೆಸರಾಯಿತು. ಒಂದು ಅಂದಾಜಿನಂತೆ ಈವರೆಗೆ ಹತ್ತು ಶತಕೋಟಿ ಪ್ರಯಾಣಿಕರು ಈ ರೈಲಿನಲ್ಲಿ ಪ್ರಯಾಣಿಸಿದ್ದಾರೆ. 2020ರ ಒಲಿಂಪಿಕ್ಸ್ ಕ್ರೀಡೆಯಲ್ಲಿ ಹೈಡ್ರೋಜನ್ ಚಾಲಿತ ವಾಹನಗಳನ್ನು ಬಳಸುವುದಾಗಿ ಹೆಮ್ಮೆಯಿಂದ ಹೇಳಿಕೊಂಡಿದೆ-ಅದನ್ನು ಮಾಡಿ ತೋರಿಸುತ್ತದೆ ಕೂಡ.

Leave a Reply