ಉದ್ವಿಗ್ನ ಕಾಶ್ಮೀರ ಕುರಿತ ಬಿಸಿಚರ್ಚೆಗಳ ನಡುವೆ ಕೇಳಿಸಿಕೊಳ್ಳಬೇಕಾದ ಮಾಜಿ ಪ್ರತ್ಯೇಕತಾವಾದಿ ಸಜಾದ್ ಮಾತುಗಳು

ಡಿಜಿಟಲ್ ಕನ್ನಡ ಟೀಮ್:

ಈ ವಾರದ ಸುದ್ದಿಚಕ್ರ ಸಂವಾದಗಳಲ್ಲಿ ಏನಾದರೂ ಮಿಸ್ ಮಾಡಿಕೊಂಡಿದ್ದೀವಾ ಅಂತ ನೀವು ವಾರಾಂತ್ಯದಲ್ಲಿ ಕುಳಿತು ಕೇಳಿಕೊಳ್ಳುವುದಿದ್ದರೆ, ಗಮನಸೆಳೆಯಬೇಕಾದ ಅಂಶ ಎಂದರೆ ಜಮ್ಮು-ಕಾಶ್ಮೀರದ ಸಚಿವ ಸಜಾದ್ ಲೋನ್ ಜತೆ ಎನ್ಡಿಟಿವಿಯ ಬರ್ಖಾದತ್ ನಡೆಸಿದ ಸಂದರ್ಶನ.

ಪ್ರತ್ಯೇಕತಾವಾದಿ ಪಾಳೆಯದಲ್ಲಿದ್ದ ಸಜಾದ್ ಲೋನ್ ಈಗ ಬಿಜೆಪಿ ಬೆಂಬಲದೊಂದಿಗೆ ಮಂತ್ರಿಯಾಗಿರುವುದಕ್ಕೆ ಕುಹಕವಾಡುವವರು ಹಲವರಿದ್ದಾರೆ. ಪ್ರತಿಜ್ಞಾವಿಧಿ ಸಮಾರಂಭದಲ್ಲೇ ಈ ಬಗ್ಗೆ ಒಂದು ಸಾಲಿನಲ್ಲಿ ಸಜಾದ್ ಪ್ರತಿಕ್ರಿಯಿಸಿದ್ದು ನೆನಪಿಸಿಕೊಳ್ಳುವುದಕ್ಕೆ ಅರ್ಹ. ‘ನಾನೀಗ ಪ್ರಜಾಪ್ರಭುತ್ವದ ಪ್ರಯೋಗಕ್ಕೆ ಒಡ್ಡಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದೇನೆ.’

ಪ್ರಸ್ತುತ ಜಮ್ಮು-ಕಾಶ್ಮೀರದಲ್ಲಿ ಬಿಗಡಾಯಿಸಿರುವ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಜಾದ್ ಅವರನ್ನು ಎನ್ಡಿಟಿವಿ ಸಂದರ್ಶಿಸಿತು. ಅದರ ಸಂಗ್ರಹ ಭಾಗ.

  • ಗಲಭೆಗೆ ಪಿಡಿಪಿ-ಬೆಜೆಪಿ ಸರ್ಕಾರವೇ ಹೊಣೆಯಲ್ಲವೇ ಎಂಬ ಪ್ರಶ್ನೆಗೆ..

ಜಮ್ಮು-ಕಾಶ್ಮೀರದ ಪರಿಸ್ಥಿತಿ ಕಳೆದೆರಡು ವರ್ಷಗಳಲ್ಲಿ ಬಿಗಡಾಯಿಸಿರುವುದಲ್ಲ. ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ಮೇಲೂ ಏಕಾಏಕಿ ಹದಗೆಟ್ಟ ಪರಿಸ್ಥಿತಿಯೂ ಅಲ್ಲ. ಈ ಹಿಂದಿನ ಅವಧಿಯಲ್ಲಿ ರಾಜ್ಯದಲ್ಲಿ ಮತ್ತು ದೆಹಲಿಯಲ್ಲಿ ಆಡಳಿತದಲ್ಲಿದ್ದವರ ಸಂಪೂರ್ಣ ನಿರ್ಲಕ್ಷ್ಯದಿಂದ ಹುಟ್ಟಿಕೊಂಡ ಸ್ಥಿತಿ ಇದು. ಅದರಲ್ಲೂ ಗೃಹ ಸಚಿವರಾಗಿದ್ದ ಪಿ. ಚಿದಂಬರಂ ಜಮ್ಮು-ಕಾಶಅಮೀರದ ವಿಷಯದಲ್ಲಿ ಅತ್ಯಂತ ಅಹಂಕಾರದಿಂದ ನಡೆದುಕೊಂಡರು. ಮನಮೋಹನ ಸಿಂಗ್ ಅವಧಿಯಲ್ಲಿ ಜಮ್ಮು-ಕಾಶ್ಮೀರದ ಮಾತುಕತೆಗಳಾಗಲಿಲ್ಲ, ಪಾಕಿಸ್ತಾನದೊಂದಿಗೂ ಮಾತುಕತೆ ಆಗಲಿಲ್ಲ.. ಆಗಿದ್ದೇನು? ಪ್ರಧಾನಿ ನರೇಂದ್ರ ಮೋದಿ ಆಡಳಿತದ ಪ್ರಾರಂಭದಲ್ಲೇ ಪಾಕಿಸ್ತಾನದೊಂದಿಗೆ ಮಾತುಕತೆಗೆ ಪ್ರಯತ್ನ ಮಾಡಿ ನೋಡಿದರು. ಇವತ್ತು ಒಮರ್ ಅಬ್ದುಲ್ಲಾ ನಮಗೆ ಉಪನ್ಯಾಸ ಕೊಡುತ್ತಿದ್ದಾರಲ್ಲ? ಕಾಂಗ್ರೆಸ್ ಜತೆ ಕೈಜೋಡಿಸಿ ಜಮ್ಮು-ಕಾಶ್ಮೀರದ ಜನರ ಹೆಣಗಳ ಮೇಲೆ ನಡೆದು ಮುಖ್ಯಮಂತ್ರಿ ಗದ್ದುಗೆ ಏರಿದ ಉಮರ್ ಅಬ್ದುಲ್ಲಾರಿಗೆ ಈ ಪರಿ ಧಾರ್ಷ್ಟ್ಯ ಹೇಗೆ ಬಂತು? ನೈತಿಕ ಮೇಲ್ಸ್ತರದಲ್ಲಿ ನಿಲ್ಲುವುದಕ್ಕೆ ಕಾಂಗ್ರೆಸ್ ಏನು ದೇವತೆಯೇ? 1989ರ ಹಿಂಸಾಚಾರ, ನಂತರ ನಿರಂತರವಾಗಿ ಆಗುತ್ತ ಬಂದ ಗಲಭೆಗಳು- ಜೀವಹಾನಿ ಇವೆಲ್ಲ ಆದಾಗ ಜಮ್ಮು-ಕಾಶ್ಮೀರ ರಾಜಕಾರಣದಲ್ಲಿ ಬಿಜೆಪಿ ಇರಲೇ ಇಲ್ಲವಲ್ಲ. ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಪಕ್ಷಗಳ ಮೂವತ್ತು ವರ್ಷಗಳ ಪ್ರಮಾದಗಳ ಬಳುವಳಿ ಇದು ಎಂಬುದನ್ನು ಮರೆಯಬಾರದು.

  • ಬುರ್ಹಾನ್ ವಾನಿ ಹತ್ಯೆಯಿಂದಲೇ ಈ ಪರಿಸ್ಥಿತಿ ಉದ್ಭವಿಸಿರುವ ಕುರಿತು..

ಈ ಬುರ್ಹಾನ್ ವಾನಿ ಉಗ್ರನಾದದ್ದು ಯಾವಾಗ? ಅದಕ್ಕೆ ಬಿಜೆಪಿ-ಪಿಡಿಪಿಗಳು ಕಾರಣರೇ? 15ನೇ ವರ್ಷದಲ್ಲಿ ಈತ ಬಂದೂಕು ಎತ್ತಿಕೊಳ್ಳುವುದಕ್ಕೆ ಕಾರಣ ಆತನ ಸಹೋದರ ಭದ್ರತಾ ಪಡೆ ಗುಂಡಿಗೆ ಬಲಿಯಾಗಿದ್ದು. ಇವತ್ತಿನ ಪರಿಸ್ಥಿತಿಗೆ ನಮ್ಮ ಸರ್ಕಾರವನ್ನು ದೂಷಿಸುವುದಾದರೆ, ಅವತ್ತಿನ ಆ ಘಟನೆ ನಡೆದಾಗ ಅಧಿಕಾರದಲ್ಲಿದ್ದ ಎನ್ ಸಿ- ಕಾಂಗ್ರೆಸ್ ಅನ್ನು ನೀವೇಕೆ ಪ್ರಶ್ನಿಸುವುದಿಲ್ಲ?

  • ಪ್ರತ್ಯೇಕತಾವಾದಿಗಳ ಪಾತ್ರದ ಕುರಿತು…

ನಾನೂ ಪ್ರತ್ಯೇಕತಾವಾದಿ ಬಣದಲ್ಲಿದ್ದವನೇ ಆಗಿದ್ದೆ. ಆದರೆ ನನ್ನ ಕೈಗೆ ಯಾವತ್ತೂ ರಕ್ತ ಅಂಟಿಕೊಂಡಿಲ್ಲ. ನನ್ನಲ್ಲೂ ರೋಷವಿತ್ತು. ಆದರೆ ಯಾವುದನ್ನು ನಾನು ನನ್ನ ಮಕ್ಕಳಿಗೆ ಹಿತವಲ್ಲ ಎಂದು ನಿರ್ಧರಿಸುತ್ತೇನೋ ಅದನ್ನು ನಾನೂ ಮಾಡಲಾರೆ ಇನ್ನೊಬ್ಬರಿಗೆ ಪ್ರಚೋದಿಸಲಾರೆ. ಇವತ್ತಿನ ಕಟುವಾಸ್ತವ ಹೇಳಿದರೆ ಪ್ರತ್ಯೇಕತಾವಾದಿ ಧುರೀಣರಿಗೆ ಬೇಸರವಾಗುತ್ತದೆ. ಆದರೆ ಹೇಳಲೇಬೇಕು. ಬೀದಿಯಲ್ಲಿ ಕಲ್ಲು ತೂರುತ್ತಿರುವವರ ಪೈಕಿ, ಅದನ್ನು ನಿಯಂತ್ರಿಸುವಾಗ ಭದ್ರತಾ ಪಡೆಯಿಂದ ಪೆಟ್ಟು ತಿನ್ನುತ್ತಿರುವವರಲ್ಲಿ ಪ್ರತ್ಯೇಕತಾವಾದಿ ನೇತಾರರ ಯಾರ ಮಕ್ಕಳೂ ಇಲ್ಲ. ನಿಮ್ಮ ಮಕ್ಕಳಿಗೆ ಹಿತವಲ್ಲದ ವಿಷಯವನ್ನು ಬೇರೆಯವರ ಮಕ್ಕಳ ತಲೆಯಲ್ಲಿ ತುಂಬಿ ಅದೇಕೆ ಬಲಿಗೊಡುತ್ತಿದ್ದೀರಿ?

  • ಪೆಲ್ಲೆಟ್ ಗನ್ ಬಳಕೆ ಕುರಿತು..

ನಮಗೂ ಯಾತನೆಯಾಗುತ್ತದೆ. ಆದರೆ ಇವು ಬಳಕೆಯಾಗುತ್ತಿರುವ ಸಂದರ್ಭ ಗಮನಿಸಬೇಕು. ಪೆಲ್ಲೆಟ್ ಗನ್ ಗಳನ್ನು ಅತಿ ಘಾತಕಾರಿ ಅಲ್ಲದ ವರ್ಗದಲ್ಲಿರಿಸಿ ಸಶಸ್ತ್ರ ಪಡೆಯ ಆಯುಧಾಗಾರದಲ್ಲಿರಿಸಿದ್ದು 2010ರ ಎನ್ ಸಿ- ಕಾಂಗ್ರೆಸ್ ಸರ್ಕಾರ. ಬುರ್ಹಾನ್ ಹತ್ಯೆ ಬೆನ್ನಲ್ಲಿ ಇಂಥ ಪರಿಸ್ಥಿತಿ ಉದ್ಭವವಾಗುವುದನ್ನು ನಾವ್ಯಾರೂ ನಿರೀಕ್ಷಿಸಿರಲಿಲ್ಲ. ಈಗ ಹೇಳಿ.. ಉದ್ವಿಗ್ನ ಯುವಕರು ಕಲ್ಲು ತೂರಾಡುತ್ತ ಭದ್ರತಾ ಪಡೆ ಮೇಲೆ ಬಿದ್ದಾಗ ಜನರ ನಿಯಂತ್ರಣಕ್ಕೆ ಏನು ಮಾಡಬೇಕು? ಇದಕ್ಕೆಂದೇ ಒದಗಿಸಲಾಗಿದ್ದ ಪೆಲ್ಲೆಟ್ ಗನ್ ಪ್ರಯೋಗಿಸಿದರು. ಪ್ರಯೋಗಿಸಿದ ಮೇಲೆಯೇ ಇದರ ಮಾರಕತೆ ಅರಿವಾಗಿದ್ದು. ಈಗ ಪರ್ಯಾಯಕ್ಕೆ ಪ್ರಯತ್ನಗಳು ತ್ವರಿತವಾಗಿ ಆಗುತ್ತಿವೆ. ಪರ್ಯಾಯ ಕೈಗೆ ಬರುವ ಮೊದಲೇ ಪೆಲ್ಲೆಟ್ ಗನ್ ಕಿತ್ತುಕೊಂಡರೆ ಅನಿವಾರ್ಯ ಪರಿಸ್ಥಿತಿಯಲ್ಲಿ ಬಂದೂಕು ಚಲಾಯಿಸಬೇಕಾಗಿ ಬರುತ್ತದೆ. ಅದು ಇನ್ನೂ ಘೋರ.

  • ಗಲಭೆಗೆ ಹೊಣೆಗಾರಿಕೆ ನಿರ್ಧರಿಸುವ ಬಗ್ಗೆ..

ನೀವೇ ಹೇಳಿ, ಪರಿಸ್ಥಿತಿ ಇಷ್ಟು ಪ್ರಕ್ಷುಬ್ಧವಾಗಿ ಮನೆಯಲ್ಲೇ ಇರಬೇಕಾದ ಸ್ಥಿತಿ ಇರುವಾಗ ಅಲ್ಲಿ ಮೊದಲ ಏಟು ಯಾರು ಹೊಡೆದರು, ಮತ್ಯಾರು ಹೆಚ್ಚಿನ ಬಲ ಉಪಯೋಗಿಸಿದರು ಎಂದು ತೀರ್ಪು ಕೊಡಲಾಗುತ್ತದೆಯೇ? ಇವೆಲ್ಲದ ಅವಲೋಕನಕ್ಕೆ, ತನಿಖೆಗೆ ಪರಿಸ್ಥಿತಿ ತುಸುವಾದರೂ ತಿಳಿಯಾಗಬೇಕು. ಸಂಘರ್ಷದಲ್ಲಿದ್ದಾಗ ಏನೂ ಆಗುವುದಿಲ್ಲ. ಈ ಹಿಂದೆ ಹಂದ್ವಾರದಲ್ಲಿ ಸೇನೆ ಮೇಲೆ ಆರೋಪ ಬಂದು ಜನ ರೊಚ್ಚಿಗೆದ್ದಾಗ ನಿಭಾಯಿಸಲಾಯಿತು. ಆಗಲೂ ಸ್ಥಿತಿಯನ್ನು ಇನ್ನಷ್ಟು ವಿಷಮಗೊಳಿಸಬೇಡಿ ಎಂಬ ನಮ್ಮ ವಿನಂತಿಗೆ ಕಿವಿಗೊಡದೇ ಎನ್ಡಿಟಿವಿ ಇನ್ನಷ್ಟು ಬೆಂಕಿ ಉದ್ದೀಪಿಸುವ ಪ್ರಸಾರದಲ್ಲಿ ತೊಡಗಿಸಿಕೊಂಡಿತ್ತು. ಅದೇನೇ ಇದ್ದರೂ ಒಟ್ಟಾರೆ ವಿದ್ಯಮಾನದಲ್ಲಿ ತಪ್ಪೆಸಗಿದವರಿಗೆ ಖಂಡಿತ ಶಿಕ್ಷೆಯಾಗುತ್ತದೆ.

  • ಪಾಕಿಸ್ತಾನದ ಪ್ರಚೋದನೆ ಕುರಿತು…

ಕಾಶ್ಮೀರದಲ್ಲಿ ಯಾವುದೂ ಸ್ವಯಂಪ್ರೇರಿತವಲ್ಲ.. ಪಾಕಿಸ್ತಾನವು ಜಮ್ಮು-ಕಾಶ್ಮೀರ ವಿಷಯದಲ್ಲಿ ತಾನು ಪಕ್ಷವಹಿಸುತ್ತೇನೆ ಎಂದು ಬಹಿರಂಗವಾಗಿಯೇ ಹೇಳುತ್ತ ಬಂದಿದೆ.

ಈ ಕೊಂಡಿಯಲ್ಲಿ ಪೂರ್ತಿ ಸಂದರ್ಶನ ಲಭ್ಯ

Leave a Reply