ನೀರಿನ ಅಭಾವ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಸರ್ಕಾರದ ನಿರ್ಧಾರಕ್ಕೆ ಸರ್ವಪಕ್ಷಗಳ ಬೆಂಬಲ, ತಮಿಳುನಾಡಿಗೆ ಮಾತು ಕೇಳಿಸಲು ಆದೇವೇನು ಸಫಲ?

ಸರ್ವಪಕ್ಷಗಳ ಸಭೆಯಲ್ಲಿ ಹೀಗೊಂದು ಬಿಂಬ.. ‘ನಾವವತ್ತು ಸದನದಲ್ಲಿ ಘನಘೋರವಾಗಿ ಬಯ್ಕಂಡಿದದ್ದು ಜಪ್ತಿ ಮಡಿಕ್ಕಬೇಡ್ರಪ್ಪಾ… ನಾವೇ ಮರ್ತಿದೀವಿ’ ಎಂಬಂತಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿಯ ಈಶ್ವರಪ್ಪನವರ ಈ ನಗುಭಾವ

ಡಿಜಿಟಲ್ ಕನ್ನಡ ಟೀಮ್:

ಕಾವೇರಿ ನೀರು ಬಿಡುವಂತೆ ಕೋರಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿರುವುದರಿಂದ, ರಾಜ್ಯದ ನಡೆಯನ್ನು ನಿರ್ಧರಿಸುವುದಕ್ಕೆ ಶನಿವಾರ ಸರ್ವಪಕ್ಷಗಳ ಸಭೆ ನಡೆಯಿತು.

ಮಳೆ ಸರಿಯಾಗಿ ಆಗದೇ ಇರುವುದರಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಸಂಗ್ರಹವೇ ಕಡಿಮೆ ಇರುವುದರಿಂದ, ತಮಿಳುನಾಡಿಗೆ ನೀರು ಬಿಟ್ಟರೆ ಕರ್ನಾಟಕದಲ್ಲಿ ಕುಡಿಯುವ ನೀರಿಗೇ ತೊಂದರೆ ಉಂಟಾಗಲಿದೆ ಎಂಬುದನ್ನು ಸುಪ್ರೀಂಕೋರ್ಟ್ ಗೆ ಮನದಟ್ಟು ಮಾಡಿಕೊಡುವ ಸರ್ಕಾರದ ಪ್ರಸ್ತಾವಕ್ಕೆ ಎಲ್ಲ ಪಕ್ಷಗಳೂ ಬೆಂಬಲ ಸೂಚಿಸಿವೆ.

ನೆಲ-ಜಲದ ಪ್ರಶ್ನೆ ಬಂದಾಗ ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ಸರ್ವಪಕ್ಷಗಳ ಸಭೆಯ ನಂತರದ ಪತ್ರಿಕಾಗೋಷ್ಟಿಯಲ್ಲಿ ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ತಮಿಳುನಾಡಿಗೆ ಯಾವೆಲ್ಲ ಕಾರಣಗಳಿಂದ ನೀರು ಕೊಡಲಾಗುವುದಿಲ್ಲ ಎಂಬ ವಾದದ ಪ್ರಮುಖಾಂಶಗಳನ್ನು ಹಂಚಿಕೊಂಡರು.

  • ಕಾವೇರಿ ಕಣಿವೆಯ ಕೃಷ್ಣರಾಜಸಾಗರ, ಕಬಿನಿ, ಹಾರಂಗಿ ಹೇಮಾವತಿ ಜಲಾಶಯಗಳಲ್ಲಿ ಒಟ್ಟೂ ನೀರಿನ ಸಂಗ್ರಹ ಸಾಮರ್ಥ್ಯ 114 ಟಿಎಂಸಿ, ಇದರಲ್ಲಿ ಬಳಕೆಗೆ ಸಿಗುವುದು 104 ಟಿಎಂಸಿ ಮಾತ್ರ. ಒಳಹರಿವಿನ ಪ್ರಮಾಣ ಶೇ. 55 ಮಾತ್ರ ಇರುವುದರಿಂದ ಸದ್ಯಕ್ಕೆ ನಮ್ಮ ಬಳಕೆಗೆ ಲಭ್ಯವಿರುವ ನೀರು 51 ಟಿಎಂಸಿ ಮಾತ್ರ.
  • ಈ 51 ಟಿಎಂಸಿ ನೀರಿನಲ್ಲಿ ಬೆಂಗಳೂರು, ಮೈಸೂರು, ಮಂಡ್ಯ ನಗರಗಳಿಗೆ ಕುಡಿಯುವ ನೀರು ಒದಗಿಸುವುದಕ್ಕೆ 40 ಟಿಎಂಸಿಯಷ್ಟು ಬೇಕು. ಹೀಗಿರುವಾಗ ತಮಿಳುನಾಡು ಸರ್ಕಾರ 50 ಟಿಎಂಸಿ ನೀರು ಬಿಡಬೇಕು ಎಂದು ಕೇಳಿರುವುದು ಅನುಷ್ಠಾನ ಸಾಧ್ಯವಲ್ಲ.
  • ತಮಿಳುನಾಡಿನ ಕಾವೇರಿ ಜಲಾನಯನ ಭಾಗದಲ್ಲೇ ನಮಗಿಂತ ಹೆಚ್ಚು ಅಂದರೆ 55 ಟಿಎಂಸಿ ನೀರು ಇದೆ. ಆದರೂ ಐ ತೀರ್ಪಿನ ಬೆಂಬಲ ಪಡೆದು, ಇಂತಿಷ್ಟೇ ನೀರು ಕೊಡಬೇಕು ಎಂದು ಕೇಳುತ್ತಿರುವುದು ಸಾಧುವಲ್ಲ. ಮುಂದೆ ಮಳೆಯಾದಲ್ಲಿ ಲಭ್ಯತೆ ನೋಡಿಕೊಂಡು ನೀರು ಬಿಡುವುದಕ್ಕೆ ಕರ್ನಾಟಕ ಬದ್ಧ. ಆದರೆ ಈಗ ನೀರು ಬಿಟ್ಟರೆ ಕುಡಿಯುವ ನೀರಿಗೇ ತೊಂದರೆ ಆಗುತ್ತದಲ್ಲದೇ, ಬೆಳೆದು ನಿಂತ ಪೈರಿಗೆ ನೀರಿಲ್ಲದಂತಾಗುತ್ತದೆ.

ಈ ಎಲ್ಲ ಸಂಗತಿಗಳನ್ನೂ ವಕೀಲರ ತಂಡವು ಸುಪ್ರೀಂಕೋರ್ಟಿಗೆ ಮನವರಿಕೆ ಮಾಡಿಕೊಡಲಿದೆ ಎಂದಿದ್ದಾರೆ ಮುಖ್ಯಮಂತ್ರಿ.

ಇನ್ನುಳಿದಂತೆ…

  • ಕಾವೇರಿ ನೀರಿನ ಸಂಬಂಧ ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ಅನಂತಕುಮಾರ್, ತಮಿಳುನಾಡಿನ ಬೇಡಿಕೆ ವಿರುದ್ಧ ರಾಜ್ಯದ ಸ್ಥಿತಿ ಮನವರಿಕೆ ಮಾಡಿಕೊಡುವ ಸರ್ಕಾರದ ಪ್ರಯತ್ನಕ್ಕೆ ಬಿಜೆಪಿಯ ಬೆಂಬಲವಿದೆ ಎಂದರು. ಇದೇ ಸಂದರ್ಭದಲ್ಲಿ, ಅಡಿಕೆ ಮತ್ತು ತೆಂಗು ಬೆಳೆಗಾರರ ಸಂಕಷ್ಟಗಳಿಗೆ ಸ್ಪಂದಿಸುವುದಕ್ಕೆ ಕೇಂದ್ರವು ರೂಪುರೇಷೆ ಸಿದ್ಧಪಡಿಸುತ್ತಿದ್ದು ಶೀಘ್ರದಲ್ಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
  • ಕೆರೆ ಒತ್ತುವರಿ ತೆರವಿನಲ್ಲಿ ಮನೆ ಕಳೆದುಕೊಂಡು ನಿರ್ಗತಿಕರಾಗಿರುವವರಿಗೆ ಬಿಡಿಎ ಫ್ಲಾಟ್ ಕೊಡುವ ಸಾಧ್ಯತೆ ಬಗ್ಗೆ ನಿರ್ದಿಷ್ಟ ಕಾರ್ಯಸೂಚಿ ತಯಾರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಪ್ರಭಾವಿಗಳು ಹಾಗೂ ಶ್ರೀಮಂತರಿಗೆ ವಿನಾಯತಿ ಸಿಗುತ್ತಿದೆ ಎಂಬ ಗ್ರಹಿಕೆ ಬೇಕಿಲ್ಲ, ಯಾರೇ ಪ್ರಭಾವಿಗಳಿದ್ದರೂ ತೆರವು ಕಾರ್ಯಾಚರಣೆ ನಡೆಯಲೇಬೇಕು ಎಂದು ಹೇಳಿದ್ದಾರೆ. ರಾಜಾ ಕಾಲುವೆಗಳ ಒತ್ತುವರಿ ತೆರವು ಪ್ರಕ್ರಿಯೆಯಲ್ಲಿ ಸಜೀವ ಕೆರೆಗಳ ಪುನರುಜ್ಜೀವನಕ್ಕೆ ಮೊದಲ ಪ್ರಾಶಸ್ತ್ಯ, ನಿರ್ಜೀನ ಕೆರೆಗಳ ಕಾಲುವೆಗಳ ಬಗ್ಗೆ ನಂತರದ ಗಮನವಿರಲಿ ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ.

Leave a Reply