ಈ ಭಾನುವಾರಕ್ಕೆ ಬಲಪಂಥೀಯರೆಲ್ಲ ತಿನ್ನುವುದಕ್ಕೆಂದು ಸಿದ್ಧವಾಗಿದೆ ಕಾಗೆ ಪಾಯಸ, ಕ್ರೆಡಿಟ್ಟು ಶ್ರೀ ಶ್ರೀಗೊಂದಿಷ್ಟು- ಮೋದಿಗಿನ್ನೊಂದಿಷ್ಟು…

ಡಿಜಿಟಲ್ ಕನ್ನಡ ವಿಶೇಷ:

ಈಟ್ ದ ಕ್ರೌ ಅನ್ನೋದು ಒಂದು ಅಮೆರಿಕನ್ ನುಡಿಗಟ್ಟು. ಒಂದು ಪ್ರಖರ ನಿಲುವು ತೆಗೆದುಕೊಂಡು ಅದು ತಪ್ಪಾಗಿ ನಿರೂಪಿತವಾಗಿ ಮುಜುಗರಕ್ಕೀಡಾಗುವ ಸಂದರ್ಭವನ್ನು ಕಾಗೆ ತಿನ್ನುವುದಕ್ಕೆ ಹೋಲಿಸುತ್ತಾರೆ.

ಖಂಡಿತ ಕಾಗೆಗೆ ಪಕ್ಷಿಯಾಗಿ ಅದರದ್ದೇ ಸ್ಥಾನವಿದೆ. ಆದರೆ ಖಾದ್ಯದ ಪಟ್ಟಿಯಲ್ಲಿ ಕಾಗೆಯನ್ನು ಕಲ್ಪನೆ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ರುದ್ಯಾರ್ಡ್ ಕಿಪ್ಲಿಂಗ್ ಕತೆಯೊಂದರಲ್ಲಿ ಬ್ರಿಟಿಷಿಗ, ಭಾರತೀಯ ಸಹಾಯಕ ಇಬ್ಬರೂ ಕೊಳಕು ಬಾವಿಯೊಂದಕ್ಕೆ ಬೀಳುತ್ತಾರೆ. ತಕ್ಷಣಕ್ಕೆ ಪಾರಾಗುವುದೇ ಅಸಾಧ್ಯವಾದಾಗ ಅಲ್ಲಿನ ಕಾಡುಕಾಗೆಯನ್ನೇ ತಿಂದು ಹಸಿವು ನೀಗಿಸಿಕೊಳ್ಳುತ್ತಾನೆ ಸಹಾಯಕ. ಆದರೆ ಬ್ರಿಟಿಷಿಗ ತಾನು ಮಾತ್ರ ಎಂದೆಂದಿಗೂ ಕಾಗೆ ತಿನ್ನಲಾರೆ ಎಂದು ಘೋಷಿಸುತ್ತಾನೆ. ಆದರೆ ಹಸಿವು ತೀವ್ರವಾದಾಗ ಮಾತು ಮುರಿದು ಅದನ್ನೇ ತಿನ್ನಬೇಕಾಗುತ್ತದೆ. ಆ ಮೂಲಕ ತನ್ನ ಮಾತನ್ನು, ನಿಲುವನ್ನು ತಾನೇ ನುಂಗಿದ ಎಂಬ ಅರ್ಥವೂ ಸೂಸುತ್ತದೆ. ಹೀಗೆ ಕಾಗೆ ನುಂಗುವುದು ಮುಖ ಕಿವುಚಿ ಮಾಡಬೇಕಾದ ಮುಜುಗರದ ಸಂಗತಿ.

ಈ ನಿಟ್ಟಿನಲ್ಲಿ ಬಲಪಂಥೀಯರಿಗೆಲ್ಲ ಈಗ ಕಾಗೆ ತಿನ್ನುವ ಸ್ಥಿತಿ. ಯಾವುದನ್ನು ‘ತಮ್ಮ ಪಾಳೆಯ’ದಿಂದ ಆಗದ ಸಂಗತಿ ಎಂದುಕೊಂಡಿದ್ದರೋ ಅದಾಗಿರುವ ಎರಡು ವಿದ್ಯಮಾನಗಳು ಒಂದರ ಹಿಂದೊಂದರಂತೆ ಕಣ್ಣಮುಂದಿವೆ.

ಮೊದಲಿಗೆ ಬಲಪಂಥದ ದೊಡ್ಡದೊಂದು ವರ್ಗ ‘ತನ್ನವರೆಂದು’ ನಂಬಿರುವ ರವಿಶಂಕರ ಅರ್ಥಾತ್ ಬದುಕುವ ಕಲೆಯ ಶ್ರೀ ಶ್ರೀ ರವಿಶಂಕರರದ್ದು. ಉಗ್ರ ಬುರ್ಹಾನ್ ವಾನಿಯ ಅಪ್ಪನನ್ನೇಕೆ ಮಾಧ್ಯಮಗಳು ಹೀರೋ ಮಾಡುತ್ತಿವೆ ಅಂತ ಬೊಬ್ಬೆ ಹಾಕಿಕೊಂಡಿರುವಾಗಲೇ ಈತನ ಜತೆ ಗುರೂಜಿ ತಮ್ಮ ಬೆಂಗಳೂರಿನ ಆಶ್ರಮದಲ್ಲಿ ಬುರ್ಹಾನ್ ಅಪ್ಪನ ಜತೆ ಫೋಟೊ ತೆಗೆಸಿಕೊಂಡು ಟ್ವಿಟ್ಟರಿನಲ್ಲಿ ಬಿಟ್ಟಿದ್ದಾರೆ. ‘ಬುರ್ಹಾನ್ ನ ತಂದೆಯವರನ್ನು ಭೇಟಿಯಾದೆ. ನಾವು ಹಲವು ವಿಷಯಗಳ ಬಗ್ಗೆ ಮಾತನಾಡಿದೆವು’ ಎಂಬ ಘನಘೋರ ಒಕ್ಕಣೆ.

ಆದರೆ, ಅಲ್ಲೇಲ್ಲೋ ಆಫ್ರಿಕಾದಲ್ಲಿ ಶಾಂತಿ ಸ್ಥಾಪನೆ ಮಾಡಿರುವೆ ಎಂಬುದರ ಜತೆಗೆ ತಮ್ಮ ‘ನೊಬೆಲ್ ಬಯೊಡಟಾ’ದಲ್ಲಿ ಉಗ್ರನ ತಂದೆಯ ಜತೆ ಶಾಂತಿ ಮಾತುಕತೆ ಅಂಶವನ್ನೂ ಸೇರಿಸಿಕೊಳ್ಳುವ ಉತ್ಸಾಹಕ್ಕೆ ಪಾಪ ಅತಿ ತ್ವರಿತವಾಗಿ ಹಿನ್ನಡೆಯಾಗಬೇಕೇ?

ಹೇಳಿಕೇಳಿ, ‘ಇಸ್ಲಾಮಿನ ಪ್ರಕಾರ ದೇವರು ಮೊದಲು, ನಂತರ ಪ್ರವಾದಿ, ನಂತರ ಕುರಾನ್, ಆಮೇಲೆ ನನ್ನ ಮಗ’ ಎಂದು ಸಂದರ್ಶನಗಳನ್ನು ನೀಡಿರುವ ಈ ಬುರ್ಹಾನನ ತಂದೆಯ ಶಬ್ದಕೋಶದಲ್ಲಿ ದೇಶ, ಸಂವಿಧಾನ, ಕಾಯ್ದೆ ಎಂಬ ಮಾತುಗಳಿಗೆ ಜಾಗವೇ ಇಲ್ಲ. ಮಾತೆತ್ತಿದರೆ ಅಂಬೇಡ್ಕರ್ ಪ್ರಣೀತ ಸಂವಿಧಾನ ಎನ್ನುವ ಉದಾರವಾದಿಗಳು ಈ ಬಗ್ಗೆ ಯಾವ ಆಕ್ಷೇಪವನ್ನೂ ಇಟ್ಟುಕೊಳ್ಳದೇ ಬುರ್ಹಾನ್ ತಂದೆ ಬಗ್ಗೆ ಅನುಕಂಪ ಸುರಿಸುವ ಸಂದರ್ಭದಲ್ಲಿ, ಶ್ರೀ ಶ್ರೀಯ ‘ಅಲೌಕಿಕ ಸ್ಪರ್ಶ’ವೂ ಆಗಿಹೋಯಿತು.

ಆದರೆ…

ರವಿಶಂಕರರ ಜತೆ ಫೋಟೊಗೆ ಪೋಸು ಕೊಟ್ಟ ಬುರ್ಹಾನ್ ತಂದೆ ಕಾಗೆ ಪಾಯಸವನ್ನು ಸಿದ್ಧ ಮಾಡಿಯೇ ಇರಿಸಿಕೊಂಡಂತಿತ್ತು  ಬದುಕುವ ಕಲೆಗಾರರಿಗೆ ತಿನ್ನಿಸುವುದಕ್ಕೆ… ‘ಕಾಶ್ಮೀರ್ ರೀಡರ್’ ಎಂಬ ಸ್ಥಳೀಯ ಮಾಧ್ಯಮದ ಜತೆ ಮಾತಾಡಿದ ಆತ, ‘ನಾನು ಬೆಂಗಳೂರಿಗೆ ಹೋಗಿದ್ದು ಚಿಕಿತ್ಸೆಗೆಂದು. ರವಿಶಂಕರ್ ಭೇಟಿ ಮಾಡಿದ್ದೇ 3-4 ನಿಮಿಷಗಳ ಮಟ್ಟಿಗೆ. ಅಲ್ಲಿ ಯಾವ ವಿಷಯಗಳ ಚರ್ಚೆಯೂ ಆಗಲಿಲ್ಲ. ನನ್ನ ಇಬ್ಬರೂ ಮಕ್ಕಳು ಹೇಗೆ ಹತ್ಯೆಯಾದರೆಂದು ಕೇಳಿದರು, ನಾನು ವಿವರಿಸಿದೆ…’

ಹೀಗೆ ಶ್ರೀ ಶ್ರೀ ನೊಬೆಲ್ ಬಯೊಡಟ ತೂತಾಗಿದ್ದು ಒಂದು ಚೋದ್ಯವಾದರೆ, ಕಣ- ಕಣದಲ್ಲೂ ಭಾರತ ದ್ವೇಷವನ್ನು ತಮ್ಮದಾಗಿಸಿಕೊಂಡು ಸುನ್ನಿ ಇಸ್ಲಾಮಿಗೆ ಮಾತ್ರ ಕಾಶ್ಮೀರದಲ್ಲಿ ಜಾಗ ಎಂಬಂತೆ ಆಡುತ್ತಿರುವ ಗಿಲಾನಿ, ಗಂಟಲು ಕೆರೆಸಿದಾಗಲೆಲ್ಲ ದೆಹಲಿ ಆಸ್ಪತ್ರೆಗೆ ಬಂದು ಮಲಗೋದು ಇನ್ನೊಂದು ಕುಚೋದ್ಯ. ಇದೇ ಸಂತಾನವಾಗಿರುವ ಬುರ್ಹಾನನ ತಂದೆಯ ಆರೋಗ್ಯ ಸುಧಾರಣಾ ತಾಣ ಬೆಂಗಳೂರು ಎಂದಾಯಿತು. ಕರಾಚಿ- ಇಸ್ಲಾಮಾಬಾದುಗಳ ಆಸ್ಪತ್ರೆಗೆ ದಾಖಲಾದರೆ ಅಲ್ಲಿ ಮಲಗಿದ್ದಾಗಲೇ ಬಾಂಬು ಢಮ್ಮೆಂದರೆ ಎಂಬ ಭಯವಿದ್ದಿರಬಹುದು. ಈ ಬದುಕುವ ಕಲೆಯವರು ಅಲ್ಲೊಂದು ಬ್ರಾಂಚ್ ತೆಗೆದು ಶಾಂತಿ ಸ್ಥಾಪಿಸಬಾರದಾ?

ತಡೀರಿ.. ಇನ್ನೊಂದು ವೆರೈಟಿ ಕಾಗೆ ಪಾಯಸ ಹಾಗೆ ಇದೆ…

ಮದರ್ ಥೆರೆಸಾ ಸೇವೆ ಹಿಂದಿನ ಮತಾಂತರ ಕಾರ್ಯಸೂಚಿ ವಿರೋಧಿಸಿ ಬಲಪಂಥೀಯರು ಮೊದಲಿನಿಂದಲೂ ಮಾತಾಡಿಕೊಂಡುಬಂದಿದ್ದಾರೆ. ಅವೆಲ್ಲ ಆಕ್ಷೇಪಗಳ ನಡುವೆಯೂ ಥೆರೆಸಾ ಮಾನವೀಯ ಸೇವೆ ಅನನ್ಯವೆಂದೇ ನೋಡುವುದಾದರೂ… ಇದೆಂಥದಿದು ವ್ಯಾಟಿಕನ್ನಿನ ಸಂತ ಪದವಿಯ ತಮಾಷೆ? ಮದರ್ ಥೆರೆಸಾ ಪವಾಡಗಳನ್ನು ಮಾಡಿರುವುದನ್ನು ಖಾತ್ರಿ ಪಡಿಸಿಕೊಂಡು ಕೊಡುತ್ತಿರುವ ಪಟ್ಟವಿದು. ಸೇವಾ ಪವಾಡವಲ್ಲ, ಪ್ರಾರ್ಥನೆ ಆಶೀರ್ವಾದದ ಮೂಲಕ ರೋಗ ಗಣಪಡಿಸಿದ ಪವಾಡ. ಸಿದ್ದರಾಮಯ್ಯನವರ ಮೌಢ್ಯ ವಿರೋಧಿ ರಾಜ್ಯದಲ್ಲಿ ನಿಂತು ನೋಡುವಾಗಲಂತೂ ಈ ಪವಾಡಗಳ ಬಗ್ಗೆ ನಗೆ ಉಕ್ಕುಕ್ಕಿ ಬರುವುದು.

ಆದರೇನಂತೆ…

ಈ ಸಂತ ಪದವಿ ಭಾರತದ ಪಾಲಿಗೆ ಹೆಮ್ಮೆಯ ಕ್ಷಣ ಅಂತ ‘ಮನ್ ಕಿ ಬಾತ್’ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾಯ್ತು. ಪವಾಡದಡಿಪಾಯದಲ್ಲಿ ಸಾಕಾರವಾಗುತ್ತಿರುವ ಈ ಪರಮಪವಿತ್ರ ಕ್ಷಣಗಳಿಗೆ ಸಾಕ್ಷಿಯಾಗಲು ಭಾರತ ಸರ್ಕಾರದ ಪರವಾಗಿ ವಿದೇಶ ಸಚಿವೆ ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ ಪ್ರತಿನಿಧಿಗಳು ಹೋಗುವುದೂ ಖಾತ್ರಿಯಾಗಿದೆ.

ಬಲಪಂಥೀಯ ಸ್ನೇಹಿತರೇ ಕಾಗೆಖಾದ್ಯದ ರುಚಿ ಹೇಗಿದೆ?

Leave a Reply