ಭಾರತ-ಅಮೆರಿಕ ದೋಸ್ತಿ ಪರ್ವ: ಪಠಾಣ್ ಕೋಟ್ ದಾಳಿಯಲ್ಲಿ ಪಾಕಿಸ್ತಾನದ ಪಾತ್ರಕ್ಕೆ ಅಮೆರಿಕದಿಂದಲೇ ಸಾಕ್ಷ್ಯ, ಪರಿಕರ್ ಭೇಟಿಯಲ್ಲಿ ಭಾರತಕ್ಕೆ ಸಿಗಲಿದೆಯೇ ಬೇಟೆಗಾರ ಡ್ರೋನ್?

ಡಿಜಿಟಲ್ ಕನ್ನಡ ಟೀಮ್:

ಭಾರತದ ರಕ್ಷಣಾ ಮಂತ್ರಿ ಮನೋಹರ್ ಪರಿಕರ್ ಎರಡು ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾರೆ. ಇನ್ನೊಂದೆಡೆ, ಪಠಾನ್ ಕೋಟ್ ಉಗ್ರದಾಳಿಯಲ್ಲಿ ಪಾಕಿಸ್ತಾನದ ಭಾಗಿದಾರಿಕೆ ಬಗ್ಗೆ ಖುದ್ದು ಅಮೆರಿಕವು ಭಾರತಕ್ಕೆ ಕೆಲವು ಸಾಕ್ಷ್ಯಗಳನ್ನು ಒದಗಿಸಿದೆ.

ದಕ್ಷಿಣ ಏಷ್ಯವನ್ನು ಶಾಂತಿಯಿಂದಿಡಬೇಕಾದರೆ ಕಾರ್ಯತಂತ್ರ ದೃಷ್ಟಿಯಿಂದ ಭಾರತ- ಅಮೆರಿಕಗಳ ಮೈತ್ರಿ ಗಟ್ಟಿಯಾಗಲೇಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಸಂಸತ್ತನ್ನು ಉದ್ದೇಶಿಸಿ ಮಾತನಾಡಿ ಬಂದ ಮೇಲೆ ಹಲವು ಬೆಳವಣಿಗೆಗಳು ಆಗಿವೆ. ಮುಖ್ಯವಾಗಿ ಪಾಕಿಸ್ತಾನಕ್ಕೆ ಅಮೆರಿಕದಿಂದ ಸಲ್ಲುತ್ತಿದ್ದ ಧನಸಹಾಯ ಮತ್ತು ಮಿಲಿಟರಿ ಸಹಾಯಗಳೆಲ್ಲ ದೊಡ್ಡಮಟ್ಟದಲ್ಲಿ ನಿಂತಿವೆ. ಇಂಥ ಸಕಾರಾತ್ಮಕ ಬೆಳವಣಿಗೆ ಸಾಲಿಗೆ ಇದೊಂದು ಹೊಸ ಸೇರ್ಪಡೆ.

‘ಟೈಮ್ಸ್ ಆಫ್ ಇಂಡಿಯಾ’ ವರದಿ ಪ್ರಕಾರ, ಪಠಾಣ್ ಕೋಟ್ ದಾಳಿ ಪಾಕಿಸ್ತಾನದ ನೆಲದಿಂದಲೇ ಹುಟ್ಟಿದ್ದು ಮತ್ತು ಇದರಲ್ಲಿ ಭಾರತ ಪ್ರತಿಪಾದಿಸುತ್ತಿರುವಂತೆಯೇ ಜೈಷೆ ಮೊಹ್ಮದ್ ಮುಖ್ಯಪಾತ್ರ ಹೊಂದಿದೆ ಎಂಬುದಕ್ಕೆ ಅಮೆರಿಕ ಒದಗಿಸಿರುವ ಸಾಕ್ಷ್ಯಗಳು ಹೀಗಿವೆ-

ಜೈಷೆಗೆ ಹಣ ಒದಗಿಸುವ ಅಲ್ ರೆಹ್ಮಾನ್ ಟ್ರಸ್ಟ್ ಐಪಿ ವಿಳಾಸ ಪಾಕಿಸ್ತಾನದಲ್ಲಿ ನೆಲೆಯಾಗಿದೆ. ಜೈಷೆಯ ಕಾಸಿಫ್ ಜಾನ್ ಎಂಬಾತನ ಫೇಸ್ಬುಕ್ ಪುಟವು ಪಠಾಣ್ ಕೋಟ್ ನಲ್ಲಿ ಹತ್ಯೆಯಾದ ನಾಲ್ವರು ಉಗ್ರರ ಫೋಟೊ ಹೊಂದಿತ್ತು. ಈ ಕಾಸಿಫನ ಫೇಸ್ಬುಕ್ ಯಾವ ಮೊಬೈಲ್ ನಂಬರಿನೊಂದಿಗೆ ಬೆಸೆದುಕೊಂಡಿದೆಯೋ ಅದೇ ನಂಬರಿಗೆ ಪಠಾಣ್ ಕೋಟ್ ದಾಳಿ ಸಂದರ್ಭದಲ್ಲಿ ಸ್ಥಳೀಯ ಎಸ್ಪಿಯಿಂದ ಮೊಬೈಲ್ ಫೋನ್ ಕಸಿದುಕೊಂಡ ಉಗ್ರರು ಫೋನ್ ಮಾಡಿದ್ದಾರೆ. ಹಾಗೂ ಕಾಸಿಫನ ಈ ನಂಬರ್ರೇ ಜೈಷೆಯ ವೆಬ್ಸೈಟುಗಳ ನೋಂದಣಿಯಲ್ಲೂ ಉಪಯೋಗವಾಗಿದೆ.

ಪಠಾಣ್ ಕೋಟ್ ದಾಳಿ ಪಾಕಿಸ್ತಾನದ ನೆಲದಿಂದಲೇ ಆದ ಕೃತ್ಯ ಎಂಬುದು ಮೇಲ್ನೋಟಕ್ಕೇ ಸಾಬೀತಾದ ಅಂಶವಾಗಿದ್ದರೂ ಅಮೆರಿಕ ಒದಗಿಸಿರುವ ಅಂಶಗಳು ಭಾರತದ ಪ್ರತಿಪಾದನೆಗೆ ಇನ್ನಷ್ಟು ಬಲ ತುಂಬುತ್ತವೆ.

ಇನ್ನು ರಕ್ಷಣಾ ಸಚಿವರ ಅಮೆರಿಕ ಭೇಟಿಯ ಪ್ರಾಮುಖ್ಯ ನೋಡುವುದಾದರೆ…

ಅಫಘಾನಿಸ್ತಾನ ಮತ್ತು ಪಾಕಿಸ್ತಾನಗಳಿಗೆ ನೀಡಿದ್ದ ಹುಡುಕಿಹೊಡೆಯುವ ಬೇಟೆಗಾರ ಡ್ರೋನ್ ಗಳನ್ನು ಅಮೆರಿಕ ಈವರೆಗೆ ಭಾರತಕ್ಕೆ ನೀಡಿಲ್ಲ. ಇದೀಗ ಭಾರತವು ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಗುಂಪಿನ ಸದಸ್ಯನೂ ಆಗಿರುವುದರಿಂದ, ಇದನ್ನು ಭಾರತಕ್ಕೂ ನೀಡುವಂತೆ ಮನವೊಲಿಕೆ ಸಾಧ್ಯತೆಗಳಿವೆ.

ಪ್ರತಿಯಾಗಿ ಅಮೆರಿಕಕ್ಕೇನು ಲಾಭ?

ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ತನ್ನ ರಕ್ಷಣಾ ಸಾಮಗ್ರಿ ಉತ್ಪಾದನಾ ಕಂಪನಿಗಳಿಗೆ ಭಾರತದಲ್ಲಿ ಜಾಗ ಮತ್ತು ಪ್ರಾಮುಖ್ಯ ಬೇಕೆಂದು ಅಮೆರಿಕ ಸಹಜವಾಗಿಯೇ ಚೌಕಾಶಿ ಮಾಡುತ್ತದೆ.

ಉಳಿದಂತೆ, ಪಾಕಿಸ್ತಾನವು ಉಗ್ರವಾದ ಹತ್ತಿಕ್ಕುವಲ್ಲಿ ವಿಫಲವಾಗುತ್ತಿರುವುದನ್ನು ಭಾರತ ಮತ್ತೆ ಪ್ರಸ್ತಾಪಿಸಲಿದೆ. ಬೋಯಿಂಗ್ ಉತ್ಪಾದನಾ ಘಟಕಕ್ಕೆ ಪರಿಕರ್ ಭೇಟಿ ನಿಗದಿಯಾಗಿದೆ. 9/11ರ ದಾಳಿಯ ಸ್ಮಾರಕಕ್ಕೂ ರಕ್ಷಣಾ ಸಚಿವರು ಭೇಟಿ ನೀಡಲಿದ್ದಾರೆ.

Leave a Reply