ದಂಗೆಕೋರರ ವಿರುದ್ಧ ಬಿಜೆಪಿಗಿಂತಲೂ ತೀವ್ರವಾಗಿ ಮಾತಾಡುತ್ತಿರುವ ಪಿಡಿಪಿ ಕತೆಯೇನು? ಅಬ್ದುಲ್ಲ ಮತ್ತು ಇತರರ ವ್ಯಥೆಯೇನು?

author-chaitanyaಜಮ್ಮು-ಕಾಶ್ಮೀರದ ಗಲಭೆ ಹಿನ್ನೆಲೆಯಲ್ಲಿ ಇದೇ ಸೆಪ್ಟೆಂಬರ್ 3ರಂದು ಗೃಹ ಸಚಿವ ರಾಜನಾಥ ಸಿಂಗ್ ಅವರ ನೇತೃತ್ವದಲ್ಲಿ ಸರ್ವಪಕ್ಷಗಳ ನಿಯೋಗವು ರಾಜ್ಯಕ್ಕೆ ಭೇಟಿ ಕೊಡಲಿರುವ ಸಾಧ್ಯತೆ ಇದೆ. ಸರ್ವಪಕ್ಷಗಳ ನಿಯೋಗ ಹೋಗುವುದಕ್ಕೆ ಕೇಂದ್ರ ಸರ್ಕಾರ ಅದಾಗಲೇ ಒಪ್ಪಿಗೆ ಸೂಚಿಸಿದೆಯಾದರೂ ಪರಿಸ್ಥಿತಿ ತುಸು ಶಮನವಾಗುವುದಕ್ಕೆ ಕಾಯುತ್ತಿದೆಯಷ್ಟೆ.

ಸರ್ವಪಕ್ಷಗಳ ಪ್ರತಿನಿಧಿಗಳ ಥರಹೇವಾರಿ ಹೇಳಿಕೆಗಳನ್ನು ಕೇಳಿಸಿಕೊಳ್ಳುವುದಕ್ಕೆ ಸಿದ್ಧವಾಗುತ್ತ, ಹೇಗೆ ರಾಜಕೀಯ ಗದ್ದಲದ ಶ್ರೇಯಸ್ಸಿಗಾಗಿ ಹಪಾಹಪಿಸುವ ಎಲ್ಲ ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ವ್ಯರ್ಥ ಕಸರತ್ತನ್ನು ಮಾಡುತ್ತಿವೆ ಎಂಬುದನ್ನು ಗಮನಿಸಲಿಕ್ಕೆ ಇದುವೇ ಸುಸಂದರ್ಭ. ಅದೂ ಅಲ್ಲದೇ ಒಂದೊಮ್ಮೆ ಸ್ವಯಮಾಡಳಿತ, ಪ್ರತ್ಯೇಕತೆ ಕುರಿತೇ ದೊಡ್ಡ ಧ್ವನಿಯಾಗಿದ್ದ ಪಿಡಿಪಿ, ಇದೀಗ ಬಿಜೆಪಿಗಿಂತ ಗಟ್ಟಿ ಧ್ವನಿಯಲ್ಲಿ ಪ್ರತ್ಯೇಕತಾವಾದಿ ಹಿಂಸಾಕೋರರನ್ನು ಪ್ರಶ್ನಿಸುತ್ತಿದೆಯೇಕೆ ಎಂಬುದನ್ನೂ ಅರ್ಥ ಮಾಡಿಕೊಳ್ಳಬೇಕು.

ಜಮ್ಮು-ಕಾಶ್ಮೀರಕ್ಕೆ ಸರ್ವಪಕ್ಷಗಳ ನಿಯೋಗ ಹೋಗುವಿಕೆ ಎಂಬುದು ತಮ್ಮ ಕಾಳಜಿ ದೊಡ್ಡದು ಎಂದು ತೋರಿಸಿಕೊಳ್ಳುವುದಕ್ಕಿರುವ ಒಂದು ಪ್ರಹಸನ ಮಾತ್ರ. ಏಕೆಂದರೆ ಜಮ್ಮು-ಕಾಶ್ಮೀರದ ವಿಷಯದಲ್ಲಿ ಬಿಜೆಪಿ- ಕಾಂಗ್ರೆಸ್ ನಿಲುವು ಏನಾದರೂ ಭಿನ್ನವಿದೆಯೇ? ಉತ್ತರ ಇಲ್ಲವೇ ಇಲ್ಲ ಎಂಬುದೇ. ಕಾಂಗ್ರೆಸ್ ಸಹ ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದೇ ಹೇಳುತ್ತದೆ ಹಾಗೂ ಇದಕ್ಕೆ ಪರಿಹಾರವೇನಿದ್ದರೂ ಸಂವಿಧಾನಿಕ ಚೌಕಟ್ಟಿನಲ್ಲೇ ಎಂಬುದನ್ನೇ ದೃಢವಾಗಿ ಪ್ರತಿಪಾದಿಸುತ್ತದೆ. ಸದ್ಯಕ್ಕೆ ಅದು ಪಿಡಿಪಿ- ಬೆಜೆಪಿ ಸರ್ಕಾರವನ್ನು ಯಾವ ನೆಲೆಯಲ್ಲಿ ದೂರುತ್ತಿದೆ ಎಂದು ಗಮನಿಸಿದರೆ- ವಾಜಪೇಯಿ ಅನುಸರಿಸಿದ್ದ ರೀತಿಯಲ್ಲಿ ಪ್ರತ್ಯೇಕತಾವಾದಿಗಳನ್ನೊಳಗೊಂಡಂತೆ ಎಲ್ಲರ ಜತೆ ಬಿಜೆಪಿ ಮಾತನಾಡಬೇಕು ಎಂಬ ಸಂಗತಿಯನ್ನು ಮುಖ್ಯವಾಗಿರಿಸಿಕೊಂಡಿದೆ ಅಷ್ಟೆ. ಆದರೆ ಇದೇ ಪ್ರತ್ಯೇಕತಾವಾದಿಗಳಿಗೆ ರಾಜನಾಥ ಸಿಂಗ್ ರತ್ನಗಂಬಳಿ ಹಾಸಿಲ್ಲವಾದರೂ ಶ್ರೀನಗರದಲ್ಲಿದ್ದಾಗ ಯಾರು ಬೇಕಾದರೂ ಬಂದು ಭೇಟಿ ಮಾಡಬಹುದು ಎಂದಿದ್ದರು. ಭಾರತದ ಸಂವಿಧಾನ ಚೌಕಟ್ಟಿನಲ್ಲಿ ಮಾತುಕತೆ ಸಾಧ್ಯವೇ ಇಲ್ಲ ಎಂದ ಪ್ರತ್ಯೇಕತಾವಾದಿಗಳು ತಮ್ಮ ಕಲ್ಲು ತೂರುವ ಕಾಯಕವನ್ನು ಮುಂದುವರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಶ್ಮೀರಿ ಕಲ್ಲುತೂರಾಟಗಾರರ ಹೃದಯ ಬೆಸೆಯುವ ಕಾರ್ಯಕ್ಕೆ ಮಣಿಶಂಕರ್ ಅಯ್ಯರ್ ಮುಂದಾಳತ್ವದಲ್ಲಿ ತಥಾಕಥಿತ ಸೆಕ್ಯುಲರ್ ಪುಡಾರಿಗಳು ಹೋಗಿದ್ದಾಗಲೂ ಅಲ್ಲಿನವರು ಸಂದರ್ಶನ ನಿರಾಕರಿಸಿ ಬಯ್ಗುಳವನ್ನಷ್ಟೇ ದಯಪಾಲಿಸಿದ್ದಾರೆ.

ಈಗ ಪ್ರಶ್ನೆಯಿಷ್ಟೆ. ಬಿಜೆಪಿ ಜಾಗದಲ್ಲಿ ಕಾಂಗ್ರೆಸ್ ಇದ್ದರೆ ಇನ್ನೇನು ಆಫರ್ ಮಾಡುತ್ತಿತ್ತು? ಸಂವಿಧಾನ ಮೀರುತ್ತಿತ್ತೇ? ವಾಜಪೇಯಿ ಸರ್ಕಾರದ ಉಲ್ಲೇಖಗಳನ್ನು ಕೊಡುವಾಗ ಅರ್ಧಂಬರ್ಧ ಕೊಟ್ಟರಾಯಿತೇ? ಯಾವ ಹಿಜ್ಬುಲ್ ಉಗ್ರರನ್ನು ಮಾತುಕತೆಗೆ ಕರೆಯಲಾಗಿತ್ತೋ ಅವರೆಲ್ಲರನ್ನು ಅದೇ ಸರ್ಕಾರದ ಅವಧಿಯಲ್ಲಿ ಹುಡುಕಿ ಹೊಸಕಲಾಯಿತು ಎಂಬುದನ್ನೂ ಮರೆಯಬಾರದು. ಕೇವಲ ಮಾತುಕತೆ ಎಂಬ ರೊಮಾಂಟಿಕ್ ಕಲ್ಪನೆಯನ್ನು ವಾಜಪೇಯಿ ಸರ್ಕಾರ ಸಹ ತನ್ನದಾಗಿರಿಸಿಕೊಂಡಿರಲಿಲ್ಲ ಎಂಬುದು ಸ್ಪಷ್ಟ.

‘ಕೇವಲ ಅಭಿವೃದ್ಧಿ ಎಂದರಾಗಲಿಲ್ಲ. ರಾಜಕೀಯ ಪರಿಹಾರವನ್ನು ನೀಡಬೇಕಾಗುತ್ತದೆ’ ಎಂಬ ನ್ಯಾಷನಲ್ ಕಾನ್ಫರೆನ್ಸಿನ ಒಮರ್ ಅಬ್ದುಲ್ಲಾ ಮಾತಿಗೆ ಮೆದುವಾಗಿ ಕಾಂಗ್ರೆಸ್ ಸಹ ಧ್ವನಿಗೂಡಿಸುತ್ತದೆ. ಈ ‘ರಾಜಕೀಯ ಪರಿಹಾರ’ ಏನು ಎಂಬ ಬಗ್ಗೆ ಯಾರೂ ಸ್ಪಷ್ಟವಾಗಿ ಹೇಳುತ್ತಿಲ್ಲ. ಅದು ಅಷ್ಟು ಸರಳವೆಂದಿದ್ದರೆ ಉಮರ್ ಅಬ್ದುಲ್ಲ ಮುಖ್ಯಮಂತ್ರಿ ಆಗಿದ್ದಾಗ ಎನ್ಸಿ-ಕಾಂಗ್ರೆಸ್ ಸರ್ಕಾರಗಳೇ ಕೊಟ್ಟುಬಿಡಬಹುದಿತ್ತಲ್ಲ? ಜಮ್ಮು-ಕಾಶ್ಮೀರದಲ್ಲಿ ಸೇನೆಯ ಉಪಸ್ಥಿತಿಯನ್ನು ಪ್ರಶ್ನಿಸುವ ಅಬ್ದುಲ್ಲ ತನ್ನ ಅಧಿಕಾರವಧಿಯಲ್ಲೇಕೆ ಬಾಯಿಗೆ ಕಡುಬು ತುಂಬಿಕೊಂಡಿರುತ್ತಾರೆ? ಮಾತೆತ್ತಿದರೆ ಕಾಶ್ಮೀರಿಗಳ ಹೃದಯ ಗೆಲ್ಲುವ ಉಪದೇಶ ಕೊಡುವ ಕಾಂಗ್ರೆಸ್ಸಿನ ಗುಲಾಂ ನಬಿ ಆಜಾದ್, ತಾವು ಮುಖ್ಯಮಂತ್ರಿ ಆಗಿದ್ದಾಗ ಸೇನೆಯನ್ನು ವಾಪಸು ಕಳಿಸಿ ಜಮ್ಮು-ಕಾಶ್ಮೀರ ಮತ್ತು ಪಾಕಿಸ್ತಾನಗಳ ಹೃದಯವನ್ನು ಒಟ್ಟೊಟ್ಟಿಗೆ ಗೆದ್ದು ಬಿಡಬಹುದಿತ್ತಲ್ಲ? ಅಧಿಕಾರದಲ್ಲಿದ್ದಾಗ ಇವರಿಗೆ ಅಂಥ ಯಾವ ಪ್ರಸ್ತಾವಗಳೂ ನೆನಪಿಗೆ ಬರುವುದಿಲ್ಲ. ವಾಸ್ತವ ಏನೆಂದರೆ ಸೇನೆಯ ವಿಶೇಷಾಧಿಕಾರವಿಲ್ಲದಿದ್ದರೆ ಅಲ್ಲಿ ರಾಜಕಾರಣ ನಡೆಸುವುದು ತಮಗೂ ಸಾಧ್ಯವಿಲ್ಲ ಅಂತ ಎನ್ ಸಿ, ಪಿಡಿಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳಿಗೂ ಗೊತ್ತು.

ಇದು ಸರಿ. ಪಿಡಿಪಿ ಏಕೆ ಇಷ್ಟೊಂದು ವ್ಯಗ್ರವಾಗಿದೆ? ಬಿಜೆಪಿ ಬಾಯಲ್ಲಿ ಕೇಳುವ ನಿರೀಕ್ಷೆ ಇದ್ದ ಖಡಕ್ ಮಾತುಗಳೆಲ್ಲ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಬಾಯಲ್ಲೇಕೆ ಬರುತ್ತಿವೆ?

ವಾಸ್ತವ ಇಷ್ಟೆ. ಈ ಬಾರಿ ಕಣಿವೆಯಲ್ಲಾಗಿರುವ ಇಸ್ಲಾಮೀಕರಣಕ್ಕೆ ಅಲ್ಲಿನ ಮುಸ್ಲಿಂ ರಾಜಕಾರಣಿಗಳೂ ಹೆದರಿದ್ದಾರೆ! ಅಧಿಕಾರದಲ್ಲಿರುವ ಪಿಡಿಪಿ ಪಾಳೆಯದಲ್ಲಿ ಅದು ಬಹಿರಂಗವಾಗಿ ವ್ಯಕ್ತವಾಗುತ್ತಿದೆ. ಉಮರ್ ಅಬ್ದುಲ್ಲಾಗೂ ಅದರ ಅರಿವಿದೆಯಾದರೂ ತನಗಿಲ್ಲದ ಅಧಿಕಾರ ಮತ್ಯಾರಿಗೂ ಬೇಡ ಎಂಬ ವಿಕ್ಷಿಪ್ತ ಮನಸ್ಥಿತಿ ಬೇರೆ ರಾಗವನ್ನು ಹಾಡಿಸುತ್ತಿದೆ ಅಷ್ಟೆ. ಏಕೆಂದರೆ ಅಜ್ಜ ಶೇಕ್ ಅಬ್ದುಲ್ಲಾ ಕಾಲದಿಂದ ಹಿಡಿತಕ್ಕೆ ಸಿಕ್ಕಿದ ವಂಶವಾಹಿ ರಾಜಕಾರಣದ ಕೃಪೆಯಿಂದ ಒಮರ್ ಅಬ್ದುಲ್ಲಾಗೆ ಅಸ್ತಿತ್ವವೇ ಹೊರತು, ಜಮ್ಮು-ಕಾಶ್ಮೀರದ ಜನರ ನಡುವಿಂದ ನಾಯಕನಾಗಿ ಅರಳಿದ ಶ್ರೇಯಸ್ಸಿನಿಂದಲ್ಲ. ಒಮರ್ ಹುಟ್ಟಿದ್ದೇ ಇಂಗ್ಲೆಂಡಿನಲ್ಲಿ. ಆತನ ವಿದ್ಯಾಭ್ಯಾಸಗಳೆಲ್ಲ ಆಗಿರುವುದೂ ವಿದೇಶಗಳಲ್ಲೇ. ಉಮರ್ ಅಂತಲ್ಲ, ಈಗ ಸರ್ಕಾರದಲ್ಲಿರುವ ಮಾಜಿ ಪ್ರತ್ಯೇಕತಾವಾದಿ ಸಜಾದ್ ಲೋನ್ ಸೇರಿದಂತೆ ಆ ರಾಜ್ಯದ ರಾಜಕಾರಣದ ಹಲವರು ವಿದೇಶಗಳ ಐಷಾರಾಮದಲ್ಲಿ ರೂಪುಗೊಂಡವರೇ. ಜಮ್ಮು-ಕಾಶ್ಮೀರವನ್ನು ಪ್ರತ್ಯೇಕ ಐಡೆಂಟಿಟಿಯಲ್ಲಿಡಬೇಕು ಎಂದು ಮಾತನಾಡುವ ಅಲ್ಲಿನ ರಾಜಕಾರಣಿಗಳು ತಾವು ಮಾತ್ರ ದೆಹಲಿ-ಮುಂಬೈಗಳಲ್ಲಿ ಆಸ್ತಿ ಮಾಡಿಕೊಂಡಿರುವುದು ತೀರ ರಹಸ್ಯವೇನಲ್ಲ. ನಮ್ಮೆಲ್ಲರ ತೆರಿಗೆ ಹಣವನ್ನು ಸದ್ದಿಲ್ಲದೇ ಬೋಳಿಸಿಕೊಂಡಿರುವ ರಾಜ್ಯ ಜಮ್ಮು-ಕಾಶ್ಮೀರ. ತಿಂದು ದುಂಡಾಗಿರುವ ರಾಜಕಾರಣಿಗಳಲ್ಲಿ ಅದು ಪ್ರತಿಫಲಿಸುತ್ತದೆ. ಅಲ್ಲಿನ ರಾಜಕಾರಣಿಗಳ ಮಾತು ಹಾಗಿರಲಿ, ಬಡ ಹೆಡ್ಮಾಸ್ಟರು ಎಂದು ಮಾಧ್ಯಮಗಳು ಮರುಕ ಸೃಷ್ಟಿಸಿದ ಬುರ್ಹಾನ್ ತಂದೆ ಮುಜಾಫರ್ ವಾನಿ ಮೂರಂತಸ್ತಿನ ಮನೆ, ಉದ್ಯಾನವನ, ಕಾರು ಇಟ್ಟುಕೊಂಡು ಐಷಾರಾಮದಿಂದಲೇ ಇದ್ದಾನೆ. ಹಾಗೆಂದೇ ಸಕ್ಕರೆ ಕಾಯಿಲೆಯ ಚಿಕಿತ್ಸೆಗೆ ವಿಮಾನ ಹತ್ತಿ ಭರ್ರೆಂದು ಬೆಂಗಳೂರಿಗೆ ಬಂದು ವಾಪಸಾಗುತ್ತಾನೆ.

ಇಂತಿಪ್ಪ ಕಣಿವೆ ರಾಜಕಾರಣದಲ್ಲಿ ಪಾಕಿಸ್ತಾನದ ಪ್ರಚೋದನೆ ಎಂಬುದು ಲಾಗಾಯ್ತಿನಿಂದ ಇತ್ತು. ಐದು ಲಕ್ಷ ಕಾಶ್ಮೀರಿ ಪಂಡಿತರನ್ನು ಒಕ್ಕಲೆಬ್ಬಿಸಿದ್ದು ಪಾಕಿಸ್ತಾನ ಕೊಟ್ಟ ಆಯುಧಗಳನ್ನು ಬಳಸಿಕೊಂಡೇ.

ಆದರೆ…

ಈಗ ಅಲ್ಲಿನ ಯುವಕರು ಪಾಕಿಸ್ತಾನಕ್ಕೆ ಮೀರಿದ ಇಸ್ಲಾಮಿಕ್ ರಾಷ್ಟ್ರದ ತಿಕ್ಕಲು ಹತ್ತಿಸಿಕೊಂಡಿದ್ದಾರೆ. ಅವರ ಕೈಯಲ್ಲೀಗ ಪಾಕಿಸ್ತಾನಿ ಧ್ವಜದೊಂದಿಗೆ ಐಎಸ್ ಐಎಸ್ ಬಾವುಟ ಹಾರಾಡುತ್ತಿದೆ. ಇದರರ್ಥ ಸಿರಿಯಾ ಕೇಂದ್ರಿತ ಐಎಸ್ ಐಎಸ್ ಉಗ್ರ ಸಂಘಟನೆ ಇವರಿಗೆ ಆಯುಧ ಕೊಡುತ್ತಿದೆ ಎಂದಲ್ಲ. ಬದಲಿಗೆ, ಮಾಹಿತಿ ಸ್ಫೋಟದ ಈ ಯುಗದಲ್ಲಿ ಕುಳಿತಲ್ಲಿಗೇ ಐಎಸ್ ಐಎಸ್ ನ ಖಲೀಫತ್ ಮುಸ್ಲಿಂ ಸಾಮ್ರಾಜ್ಯ ಸ್ಥಾಪನೆಯ ಸಿದ್ಧಾಂತ ತಲೆಗಿಳಿಯುತ್ತಿದೆ. ಪಿಡಿಪಿ-ಬಿಜೆಪಿಗಳು ಪ್ರತಿಪಾದಿಸುತ್ತಿರುವಂತೆ ಹಿಂಸಾಚಾರಿಗಳು ಶೇ.5-10ರ ವ್ಯಾಪ್ತಿಯಲ್ಲೇ ಇದ್ದಿರಬಹುದು ಹಾಗೂ ಕಾಶ್ಮೀರದ ನಾಲ್ಕೈದು ಜಿಲ್ಲೆಗಳಲ್ಲಷ್ಟೇ ಇಂಥವರ ಕೈ ಮೇಲಾಗಿರಬಹುದು. ಆದರೆ ಸಾಮ್ರಾಜ್ಯವಾದಗಳು ಯಾವತ್ತೂ ದಂಡೆತ್ತಿ ಬಂದು ಆಕ್ರಮಿಸುವುದಿಲ್ಲ. ಇರುವ ಐನೂರು-ಸಾವಿರ ಮಂದಿಯೇ ಸಾಕಾಗುತ್ತದೆ.

ಪಾಕ್ ಪ್ರಚೋದಿತ ಕುತಂತ್ರಗಳಲ್ಲಿ ಕಣಿವೆಯ ರಾಜಕಾರಣಿಗಳಿಗೂ ಪಾಲಿತ್ತು. ಆದರೆ ಐಎಸ್ ಐಎಸ್ ನಶೆಗೇರಿಸಿಕೊಂಡಿರುವ ಯುವಕರು ಮುಫ್ತಿ, ಅಬ್ದುಲ್ಲ ಇವರಲ್ಲಿ ನಾಯಕತ್ವ ಬಯಸೋದು ಹಾಗಿರಲಿ, ಪ್ರತ್ಯೇಕತಾವಾದಿಗಳಾದ ಗಿಲಾನಿ, ಯಾಸಿನ್ ಮಲಿಕ್ ಅಂಥವರನ್ನೂ ತಮ್ಮ ನಾಯಕರಾಗಿ ನೋಡುತ್ತಿಲ್ಲ. ಇವರ ಉನ್ಮಾದದ ವ್ಯಾಪ್ತಿ ದೊಡ್ಡದು ಹಾಗೂ ಈಗಿನ ಕಣಿವೆ ನಾಯಕರ್ಯಾರಿಗೂ ಅಲ್ಲಿ ಸ್ಥಾನವಿಲ್ಲ! ಹಾಗೆಂದೇ ಕಣಿವೆಯ ಮುಸ್ಲಿಂ ರಾಜಕಾರಣವೂ ಒಳಗೊಳಗೇ ಬೆಚ್ಚಿದೆ. ಈ ಕಲ್ಲು ಹಿಡಿದಿರುವ ಹುಡುಗರ ಬಲ ಮೇಲಾಗಿದ್ದೇ ಆದರೆ ಕೇಂದ್ರ ಸರ್ಕಾರವೋ, ಹಿಂದುಗಳೋ ಕಷ್ಟಕ್ಕೆ ಸಿಲುಕುವುದು ಹಾಗಿರಲಿ… ತಮಗೂ ಜಾಗವಿರುವುದಿಲ್ಲ ಎಂಬುದು ಅರಿವಾಗುತ್ತಿದೆ.

ಕೆಲದಿನಗಳ ಹಿಂದೆ ಪಿಡಿಪಿಯ ಸಂಸದ ಮುಜಫರ್ ಹುಸೇನ್ ಬೇಗ್ ಇದನ್ನು ತುಂಬ ಚೆನ್ನಾಗಿ ವಿವರಿಸಿದ್ದರು.

‘ಕಾಶ್ಮೀರದ ಸಮಸ್ಯೆ ಈಗ ಇಸ್ಲಾಮಿಕ್ ಸ್ಟೇಟ್ ನ ಸಮರದೊಂದಿಗೆ ಬೆರೆತುಬಿಡುವ ಅಪಾಯಕಾರಿ ಹಂತದಲ್ಲಿದೆ. ಈಗ ಇದು ರಾಜಕೀಯ ವಿಷಯವಾಗಿ ಉಳಿಯದೇ ಧಾರ್ಮಿಕತೆ ರೂಪ ಪಡೆದುಕೊಳ್ಳುತ್ತಿದೆ’ ಎಂಬ ಎಚ್ಚರಿಕೆ ಅವರಿಂದ ಮೊಳಗಿತ್ತು.

ಅದು ಪಿಡಿಪಿ ಇರಬಹುದು, ನ್ಯಾಷನಲ್ ಕಾನ್ಫರೆನ್ಸ್ ಇರಬಹುದು ಇವರೆಲ್ಲರೂ ಮೊದಲಿನಿಂದಲೂ ನಿರ್ದಿಷ್ಟ ಕಿತಾಪತಿ ಮಾಡಿಕೊಂಡುಬಂದಿದ್ದಾರೆ. ಅಧಿಕಾರದಲ್ಲಿದ್ದಾಗ ಅದರ ರುಚಿಗಳನ್ನೆಲ್ಲ ಸವಿಯುವುದು, ಪ್ರತಿಪಕ್ಷದಲ್ಲಿ ಕೂರುತ್ತಲೇ ಪ್ರತ್ಯೇಕತೆಯ ಪರವಾದ ಮಾತುಗಳನ್ನಾಡುವುದು. ಜಮ್ಮು-ಕಾಶ್ಮೀರವು ಗಡಿಗಂಟಿಕೊಂಡಿರುವ ಕಾರ್ಯತಂತ್ರ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಇದನ್ನು ‘ಸ್ವತಂತ್ರ’ವಾಗಿರಿಸಿಕೊಂಡರೆ ಜಾಗತಿಕ ರಾಜಕೀಯದ ಮುಖ್ಯ ಆಟಗಾರರಾಗಬಹುದೆಂಬ ಪ್ರಲೋಭನೆ ಕಣಿವೆ ರಾಜಕಾರಣಕ್ಕೆ ಮೊದಲಿನಿಂದಲೂ ಇದೆ. ಇದು ಸಾಧ್ಯವಾಗಬೇಕಾದರೆ ಪಾಕಿಸ್ತಾನದೊಂದಿಗೆ ವಿಲೀನವಾದರೆ ಆಗುವುದಿಲ್ಲ. ಹಾಗೆಂದೇ ಭಾರತ-ಪಾಕಿಸ್ತಾನಗಳೆರಡನ್ನೂ ಆಗಾಗ ಹೆದರಿಸುತ್ತ, ಕೆಲವೊಮ್ಮೆ ಖುಷಿಗೊಳಿಸುತ್ತ ತಮ್ಮ ಅಸ್ತಿತ್ವವನ್ನು ವಿಶಿಷ್ಟವಾಗಿ ಮತ್ತು ಲಾಭದಾಯಕವಾಗಿ ಇರಿಸಿಕೊಳ್ಳುವ ಪ್ರಯತ್ನವನ್ನು ಇವರು ಬಿಟ್ಟಿಲ್ಲ. ಇದೇ ಒಮರ್ ಅಬ್ದುಲ್ಲಾ ತಾತ ಶೇಖ್ ಅಬ್ದುಲ್ಲಾ 1950ರಲ್ಲಿ  ಅಮೆರಿಕದ ರಾಯಭಾರಿ ಹೆಂಡರ್ಸನ್ ಜತೆ ಶ್ರೀನಗರದಲ್ಲಿ ಮಾತುಕತೆಗೆ ಕುಳಿತುಕೊಂಡು, ಅಮೆರಿಕದ ಸಹಾಯದೊಂದಿಗೆ ಜಮ್ಮು-ಕಾಶ್ಮೀರವನ್ನು ‘ಲಾಭದಾಯಕ ಸ್ವತಂತ್ರ ಜಹಗೀರು’ ಆಗಿಸಿಕೊಳ್ಳುವುದಕ್ಕೆ ಯತ್ನಿಸಿದ್ದ. ಏಷ್ಯದಲ್ಲಿ ಆಗಿನ ಕಾಲಕ್ಕೆ ಸೋವಿಯತ್ ಒಕ್ಕೂಟದ ಪ್ರಭಾವ ತಗ್ಗಿಸುವುದಕ್ಕೆ ಹತ್ತಿರದ ನೆಲೆ ಬೇಕಿದ್ದ ಅಮೆರಿಕ ಅಂಥ ಪ್ರಯತ್ನಗಳಿಗೆ ನೀರೂ ಎರೆದಿತ್ತು. ನಂತರ ಭಾರತ ಸರ್ಕಾರ ಶೇಕ್ ಅಬ್ದುಲ್ಲಾರನ್ನು ಬಂಧಿಸಿತ್ತು.

ಇದೀಗ ಕಾಶ್ಮೀರ ಕಣಿವೆಯಲ್ಲಿ ಅಲ್ಲಿನ ರಾಜಕಾರಣದ ಆಕಾಂಕ್ಷೆಯಾಗಿರುವ ಆಜಾದಿಗೂ, ಕಲ್ಲು ತೂರುತ್ತಿರುವವರು ಬಯಸುತ್ತಿರುವ ಆಜಾದಿಗೂ ಸ್ಪಷ್ಟ ಬಿರುಕುಗಳು ಗೋಚರವಾಗಿವೆ. ಗಿಲಾನಿಯಂಥ ಪ್ರತ್ಯೇಕತಾವಾದಿಗಳೂ ಸೇರಿದಂತೆ ಕಾಶ್ಮೀರದ ರಾಜಕಾರಣ ಬಯಸುವುದು ಕೂತಲ್ಲಿ ಹಣ ಬಂದು ಬೀಳುವ, ತಮ್ಮ ಮಕ್ಕಳನ್ನು ವಿದೇಶದ ಐಷಾರಾಮಿನಲ್ಲಿಡುವುದಕ್ಕೆ ನೆರವಾಗುವ, ಬಿಟ್ಟಿ ಭೋಜನದ ಆಜಾದಿಯನ್ನು ಮಾತ್ರ. ಆದರೆ ಈಗ ಕಲ್ಲು ತೂರುತ್ತಿರುವ ಮೂಲಭೂತವಾದಿಗಳು ಇವರ ಆಜಾದಿ ವ್ಯಾಖ್ಯೆಯನ್ನು ದಾಟಿದ್ದಾರೆ. ಅವರಿಗೆ ಬೇಕಿರುವುದು ಐಎಸ್ ಐಎಸ್ ಸೃಷ್ಟಿಸುವ ಸ್ವೇಚ್ಛಾ ಆಜಾದಿ. ಮುಸ್ಲಿಮರಲ್ಲೇ ಭಿನ್ನ ಪಂಗಡದವರೂ ಸೇರಿದಂತೆ ಕಾಫಿರರೆಂದು ನಿರ್ಧಾರವಾಗುವವರನ್ನೆಲ್ಲ ಲೈಂಗಿಕ ಜೀತಕ್ಕಿರಿಸಿಕೊಳ್ಳುವ ಆಜಾದಿ… ಈ ಆಜಾದಿ ವ್ಯಾಖ್ಯೆ ಜಾರಿಗೆ ಬಂದರೆ ರಾಜ್ಯದ ಸಾಮಾನ್ಯರ ಸ್ಥಿತಿ ಹಾಗಿರಲಿ, ಈ ಅಬ್ದುಲ್ಲಾ, ಮುಫ್ತಿ, ಗಿಲಾನಿ ಎಲ್ಲರೂ ದೆಹಲಿಗೆ ಬಂದು ಕೂರಬೇಕಾಗುತ್ತದೆ!

ಇದು ಎಲ್ಲರಿಗೂ ಅರಿವಾಗುತ್ತಿದೆಯಾದರೂ ಅಬ್ದುಲ್ಲ ಮತ್ತು ಕಾಂಗ್ರೆಸಿಗರಿಗೆ ಗಳ ಹಿರಿದುಕೊಂಡಿರುವ ಖುಷಿಯೇ ಸದ್ಯಕ್ಕೆ ದೊಡ್ಡದಿದೆ. ಆದರೆ ಅಧಿಕಾರದ ರುಚಿ ಕಂಡಿರುವ ಪಿಡಿಪಿ ಮಾತ್ರ ಬಿಜೆಪಿಯನ್ನೂ ಮೀರಿ ದಂಗೆಕೋರರ ಬಗ್ಗೆ ತನ್ನ ಆಕ್ರೋಶ ಹೊರಹಾಕುತ್ತಿದೆ.

Leave a Reply