ಉದಾರವಾದಿ ವ್ಯಾಟಿಕನ್ನಿನಲ್ಲೂ ತುಂಡುಡುಗೆ ಪ್ರವೇಶವಿಲ್ಲ, ಬೀಫ್ ತಿನ್ನುವ ಮುಸ್ಲಿಂ ರಾಷ್ಟ್ರಗಳೆಲ್ಲ ಪದಕ ಬಾಚಿಲ್ಲ…. ಮಹೇಶ್ ಶರ್ಮ- ಉದಿತ್ ರಾಜ್ ಹೇಳಿಕೆಗಳ ಚರ್ಚೆಯಲ್ಲಿ ಹೊಳೆಯಬೇಕಿರುವುದು

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ಕಡೆಯಿಂದ ಎರಡು ಹೇಳಿಕೆಗಳು ಒಂದಿಷ್ಟು ಚರ್ಚೆಗೆ ವಿವಾದಕ್ಕೆ ಕಾವು ಕೊಟ್ಟಿವೆ.

ವಿದೇಶಿ ಮಹಿಳಾ ಪ್ರವಾಸಿಗರು ಸ್ಕರ್ಟ್ ಧರಿಸುವುದು ಇಲ್ಲಿನ ಸಂಸ್ಕೃತಿಗೆ ಒಗ್ಗುವುದಿಲ್ಲ ಎಂದಿರುವ ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮ ಹೇಳಿಕೆ ಒಂದೆಡೆ. ‘ಗೋಮಾಂಸ ತಿಂದಿದ್ದರಿಂದ ಉಸೇನ್ ಬೋಲ್ಟ್ 9 ಪದಕ ಗೆಲ್ಲಲು ಸಾಧ್ಯವಾಯಿತು’ ಎಂದಿರುವ ಬಿಜೆಪಿ ಸಂಸದ ಉದಿತ್ ರಾಜ್ ಹೇಳಿಕೆ ಮತ್ತೊಂದೆಡೆ.

ಉದಿತ್ ರಾಜ್ ಹಾಗೆಂದು ಟ್ವೀಟಿಸಿದ್ದಾರೆ. ಬಡವನಾಗಿದ್ದ ಜಮೈಕಾದ ಉಸೇನ್ ಬೋಲ್ಟ್ ಗೆ ಯಾರೋ ಗೋಮಾಂಸ ತಿನ್ನುವುದಕ್ಕೆ ಸಲಹೆ ಮಾಡಿದರಂತೆ. ಅದನ್ನು ಪಾಲಿಸಿದ್ದರಿಂದಲೇ ಆತನಿಗೆ ಪದಕ ಗೆಲ್ಲುವುದಕ್ಕೆ ಸಾಧ್ಯವಾಯಿತು ಎಂಬುದು ಉದಿತ್ ಪ್ರತಿಪಾದನೆ.

ಸಹಜವಾಗಿಯೇ ಇದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ವಾದ-ಪ್ರತಿವಾದಗಳು ಎದುರಾದವು. ಈ ಪೈಕಿ ಹಲವರು ನೀಡಿರುವ ಒಂದು ಪ್ರತಿಕ್ರಿಯೆ ಕುತೂಹಲಕಾರಿ. ‘ಬೀಫ್ ತಿನ್ನುವ ಹಲವು ಇಸ್ಲಾಂ ರಾಷ್ಟ್ರಗಳು ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲಲಿಲ್ಲ, ಕೆಲವರು ಪ್ರವೇಶಕ್ಕೆ ಅರ್ಹತೆಯನ್ನೇ ಪಡೆದಿಲ್ಲವಲ್ಲ,,’

ಮಹೇಶ್ ಶರ್ಮರ ಮಾತಿಗೆ ಬರುವುದಾದರೆ, ಮಹಿಳೆಯರು ತಡರಾತ್ರಿ ಅಡ್ಡಾಡುವುದು ಕ್ಷೇಮವಲ್ಲ ಅಂತ ಹಿಂದೆಯೂ ಹೇಳಿ ವಿವಾದಕ್ಕೀಡಾಗಿದ್ದರವರು. ಈ ಬಾರಿ ಹೇಳಿರುವುದೂ ವಿದೇಶಿಗರ ಸುರಕ್ಷತೆ ದೃಷ್ಟಿಯಲ್ಲಿಟ್ಟುಕೊಂಡು ಮಾಡಿರುವ ಸಲಹೆ ಅಷ್ಟೆ. ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನೇನೂ ಕೊಟ್ಟಿಲ್ಲ ಎಂದಿದ್ದಾರೆ.

ಉದಾರವಾದ- ಸ್ತ್ರೀವಾದಗಳನ್ನೆಲ್ಲ ತುಂಬಿಕೊಂಡಿರುವ ಪ್ರತಿರೋಧದ ಚರ್ಚೆ ಈ ಬಾರಿಯೂ ಸಹಜವೆಂಬಂತೆ ಎದ್ದಿದೆ. ಈ ಹಿನ್ನೆಲೆಯಲ್ಲಿ ಸಚಿವರು ಸ್ಪಷ್ಟನೆ ನೀಡಿರುವುದು ಗಮನಾರ್ಹ. ‘ಉಡುಗೆಯ ಕುರಿತಾಗಿ ಹೇಳಿದ್ದು ಧಾರ್ಮಿಕ ಸ್ಥಳಗಳ ಭೇಟಿ ಸಂದರ್ಭವನ್ನು ಗಮನದಲ್ಲಿ ಇರಿಸಿಕೊಂಡು. ನನಗೂ ಹೆಣ್ಣುಮಕ್ಕಳಿದ್ದಾರೆ. ಮಹಿಳೆಯರು ಇಂಥದ್ದೇ ಉಡಬೇಕು ಅಂತ ನಾನು ಏಕೆ ಹೇಳಲಿ? ಸುರಕ್ಷತೆ ದೃಷ್ಟಿಯಿಂದ ಹೀಗಿದ್ದರೆ ಸೂಕ್ತ ಎಂದು ಹೇಳಿದ್ದೇನೆ’ ಎಂದಿದ್ದಾರೆ.

ಧಾರ್ಮಿಕ ಸ್ಥಳಗಳ ಭೇಟಿ ಎಂಬ ಪ್ರತಿಕ್ರಿಯೆ ನಂತರವೂ ಸಾಮಾಜಿಕ ತಾಣಗಳಲ್ಲಿ ಹಲವರು, ಪೂಜಾರಿ ಕಡಿಮೆ ವಸ್ತ್ರ ಧರಿಸಿದ್ದರೆ ಪರವಾಗಿಲ್ಲವೇ ಎಂಬಂಥ ಪ್ರಶ್ನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಂತದಲ್ಲಿ ನಮ್ಮ ಗಮನದಲ್ಲಿರಬೇಕಾದದ್ದು ಇಷ್ಟು. ಧಾರ್ಮಿಕ ಸ್ಥಳಗಳಲ್ಲೂ ಡ್ರೆಸ್ಕೋಡ್ ಇರಬಾರದೆಂದು ವಾದಿಸುವ ಉದಾರವಾದಿಗಳು, ಆಧುನಿಕತೆ ಮತ್ತು ಉದಾರವಾದದ ಪಾಶ್ಚಾತ್ಯ ನೆಲದಿಂದಲೇ ಅದನ್ನು ಆರಂಭಿಸಬೇಕಾಗುತ್ತದೆ. ವ್ಯಾಟಿಕನ್ ಗೆ ಎಲ್ಲರಿಗೆ ಪ್ರವೇಶವಿದೆ ಆದರೆ ಮೊಣಕಾಲಿನ ಕೆಳಗೆ ಆವರಿಸಿರುವ ಬಟ್ಟೆ ಹಾಕುವುದು ಕಡ್ಡಾಯ. ಚಡ್ಡಿ- ಬನೀನು ಹಾಕಿಕೊಂಡು ನಾನಿರುವುದೇ ಹೀಗೆ ಎಂದರೆ ಅಲ್ಲಿ ಪ್ರವೇಶವಿಲ್ಲ. ಇನ್ನು ಮೆಕ್ಕಾಕ್ಕಂತೂ ಮುಸ್ಲಿಂರಲ್ಲದವರಿಗೆ ಪ್ರವೇಶವೇ ಇಲ್ಲ, ಮತ್ತೆ ಉಡುಗೆಯಲ್ಲಿನ ಉದಾರವಾದದ ಮಾತೆಲ್ಲಿಯದು?

ಇಲ್ಲೆಲ್ಲೂ ಇರದ ಆಕ್ರೋಶ- ತರ್ಕಗಳು ಭಾರತದ ಧಾರ್ಮಿಕ ಸ್ಥಳಗಳ ವಿಷಯದಲ್ಲಿ ಮಾತ್ರ ಏಕೆ?

Leave a Reply