₹8 ಸಾವಿರ ಕೋಟಿಯ ಪೂಜಾ ಸಾಮಗ್ರಿ ವ್ಯವಹಾರ, ಇಲ್ಲೂ ಸ್ಥಾಪನೆಯಾಗಲಿದೆ ರಾಮ್ದೇವರ ಪತಂಜಲಿ ಸಾಮ್ರಾಜ್ಯ

ಡಿಜಿಟಲ್ ಕನ್ನಡ ವಿಶೇಷ:

ದಶಕಗಳಿಂದ ಅನೇಕ ಟಿವಿ ಶೋ ಗಳಲ್ಲಿ ಜನರಿಗೆ ಯೋಗ ಕಲಿಸುತ್ತಾ, ಸಹಜವಾಗಿ ಉಸಿರಾಡುವುದು ಹೇಗೆ ಎಂದು ತಿಳಿಹೇಳುತ್ತಾ ಭಾರತ ಪೂರ್ತಿ ಹೆಸರುವಾಸಿಯಾದವರು ರಾಮದೇವ್. ಬರೀ ಯೋಗ ಹೇಳಿ ಕೊಂಡು, ಉಸಿರಾಡುವ ಕ್ರಿಯೆ ಕಲಿಸಿಕೊಂಡು ಇದ್ದಿದ್ದರೆ ಇಂದು ಅವರು ಈ ಮಟ್ಟಿಗೆ ಹೆಸರು ಮಾಡುತ್ತಿದ್ದರೆ? ಹೆಸರು ಎನ್ನುವುದಕ್ಕಿಂತ ಈ ಮಟ್ಟಿನ ಪ್ರಸ್ತುತತೆ ಅವರಿಗೆ ಸಿಗುತ್ತಿತ್ತೇ? ಎನ್ನುವುದು ಹೆಚ್ಚು ಸಮಂಜಸ ಪ್ರಶ್ನೆ. ಇಲ್ಲ ಎನ್ನುವುದು ಸಹಜ ಉತ್ತರವಾಗುತ್ತಿತ್ತು.
ಆದರೆ ರಾಮದೇವ್ ವಿಭಿನ್ನರಾಗಿ ನಿಲ್ಲುವುದು ಇಲ್ಲೇ, ತನ್ನ ಸಮಕಾಲೀನ ಗುರು/ ಪ್ರವಚನಕಾರರಂತೆ ಕೇವಲ ಬೋಧನೆಯಲ್ಲಿ ತೊಡಗಿಸಿಕೊಳ್ಳದೆ ಭಾರತೀಯ ಪರಂಪರೆಯನ್ನ ಅಚ್ಚುಕಟ್ಟಾಗಿ ಪ್ಯಾಕೆಟ್ ಮಾಡಿದ್ದು ಅಲ್ಲದೆ ಮಾರ್ಕೆಟ್ ಕೂಡ ಮಾಡಿದರು. ಇದೆ ವರ್ಷ ಜನವರಿ ತಿಂಗಳಲ್ಲಿ  ರಾಮದೇವ್ ಅವರ ‘ಪತಂಜಲಿ’ ಕಂಪನಿ ಟೆಲಿವಿಷನ್ ನಲ್ಲಿ ಅತ್ಯಂತ ದೊಡ್ಡ ಜಾಹೀರಾತುದಾರ ಆಗಿ ಹೊರ ಹೊಮ್ಮಿದೆ. ಗ್ಲೋಬಲ್ ಬ್ರಾಂಡ್ ಗಳ ಅಬ್ಬರ ಅಡಗಿ ಅವರು ಎರಡನೇ ಸ್ಥಾನ ಪಡೆಯುವಲ್ಲಿ ಪ್ರಾಡಕ್ಟ್ ಮಾರ್ಕೆಟ್ ಮಾಡುವ ಕಲೆ ಗೆದ್ದಿದೆ.
ಅಂತಾರಾಷ್ಟ್ರೀಯ ಖ್ಯಾತಿಯ ಬ್ರಾಂಡ್ ಗಳು ನಿತ್ಯ ಜೀವನದಲ್ಲಿ ಉಪಯೋಗಿಸುವ ಸೋಪು, ಶಾಂಪೂ, ಟೂತ್ ಪೇಸ್ಟ್ ಗಳಲ್ಲಿ ಕೆಮಿಕಲ್ ಬೆರೆಸುತ್ತಿವೆ, ಅವು ಜೀವಕ್ಕೆ ಮಾರಕ ಅವುಗಳಿಗೆ ದೇಶಿ ಉತ್ತರವಿದೆ ಎಂದು ಹೇಳಿಕೊಂಡು ಶುರುವಾದ ಪತಂಜಲಿ ಇಂದು 600 ಮಿಲಿಯನ್ ಡಾಲರ್ ಸಂಸ್ಥೆಯಾಗಿ ಬೆಳೆದಿದೆ.
ಕಳೆದ ವರ್ಷ ಫಾಸ್ಟ್ ಮೂವಿಂಗ್ ಕನ್ಸೂಮರ್ ಪ್ರಾಡಕ್ಟ್(FMCG ) ಉತ್ಪಾದಿಸುವ ಭಾರತದ ಕಂಪನಿಯಾಗಿ ಹೊರಹೊಮ್ಮಿರುವುದು ನಿಜಕ್ಕೂ ದೊಡ್ಡ ಸಾಧನೆ. ಯುನಿಲಿವರ್ ನ ಭಾರತದ ಸಬ್ಸಿಡರೀ ಕಂಪನಿ ಹಿಂದೂಸ್ಥಾನ್ ಲಿವರ್ ಸಣ್ಣ ಪುಟ್ಟ ಕಂಪೆನಿಗಳನ್ನ ತನ್ನ ತೆಕ್ಕೆಗೆ ತೆಗೆದುಕೊಳ್ಳುವತ್ತ ಹೆಚ್ಚು ಗಮನ ಹರಿಸಿದೆ. ಪರ್ಯಾಯ ಶಕ್ತಿಯಾಗಿ ಬೆಳೆದಿರುವ ‘ಪತಂಜಲಿ’ ಎದುರಿಸಲು ಹೆಚ್ಚಿನ ಶಕ್ತಿಯ ಅವಶ್ಯಕತೆ ಇದೆ ಎನ್ನುವುದು ಅದಕ್ಕೆ ಗೊತ್ತಿದೆ.
ರಾಮದೇವ್ ಗೆ ಮಾರುಕಟ್ಟೆಯಲ್ಲಿ ಸಿಕ್ಕ ಅಮೋಘ ಜಯ ಕಂಡು ಆರ್ಟ್ ಆಫ್ ಲಿವಿಂಗ್ ನ ರವಿಶಂಕರ ಗುರುಜೀ, ಪಂಜಾಬ್ ನ ‘ಮೆಸ್ಸಂಜೆರ್ ಆಫ್ ಗಾಡ್’ ಖ್ಯಾತಿಯ ಗುರ್ಮೀತ್ ಬಾಬಾ ಕೂಡ ತಮ್ಮದೇ ಆದ ಸಾವಯವ ಉತ್ಪನ್ನ, ಹರ್ಬಲ್ ಪ್ರಾಡಕ್ಟ್ ಗಳನ್ನು ಮಾರುಕಟ್ಟೆಗೆ ತಂದಿದ್ದಾರೆ.
ಐ ಐ ಎಫ್ ಎಲ್ ಎನ್ನುವ ಬ್ರೋಕರೇಜ್ ಸಂಸ್ಥೆಯ ಅಂದಾಜಿನ ಪ್ರಕಾರ 2020 ರ ವೇಳೆಗೆ ಪತಂಜಲಿ  3 ಬಿಲಿಯನ್ ಡಾಲರ್ ಕಂಪನಿ ಆಗಿರುತ್ತದೆ. ಸದ್ಯ ಪತಂಜಲಿ 600 ಮಿಲಿಯನ್ ಅಂದರೆ 0.6 ಬಿಲಿಯನ್ ಕಂಪನಿ ಆಗಿದೆ. ಅಂದರೆ ಇನ್ನು ನಾಲ್ಕು ವರ್ಷದಲ್ಲಿ ಪತಂಜಲಿ ವ್ಯಾಪಾರ ವೃದ್ಧಿ ಪ್ರಮಾಣ ಊಹಿಸಲು ಸಾಧ್ಯವಿಲ್ಲದ ವೇಗದಲ್ಲಿ ಬೆಳವಣಿಗೆಯಾಗಲಿದೆ.
ನೆಸ್ಲೆ ಕಂಪನಿಯ ‘ಮ್ಯಾಗಿ’ ವಿಷಪೂರಿತ ಎಂದು ವಿವಾದವಾದ ಕೆಲವೇ ವಾರಗಳಲ್ಲಿ ಪತಂಜಲಿ ತನ್ನ ಗೋಧಿ ಹಿಟ್ಟಿನ ನೂಡಲ್ಸ್ ಮಾರುಕಟ್ಟೆಗೆ ತಂದಿತ್ತು. ಸಮಯಪ್ರಜ್ಞೆ ಜೊತೆಗೆ ಮಾರುಕಟ್ಟೆಯಲ್ಲಿ ಆಗುವ ಬದಲಾವಣೆಗೆ ತಮ್ಮನ್ನ ತಾವೇ ಹೊಂದಿಸಿ ಕೊಳ್ಳುವ ಚತುರತೆ ‘ಪತಂಜಲಿ’ ಬ್ರಾಂಡ್ ನ ಯಶಸ್ಸಿನ ಗುಟ್ಟು. ಆದರೆ ರಾಮದೇವ್  ಹೇಳುವುದೇ ಬೇರೆ ‘ಇಲ್ಲ… ಬ್ರಾಂಡ್ ಕಟ್ಟುವುದು ನಮ್ಮ ಮುಖ್ಯ ಉದ್ದೇಶ ಅಲ್ಲವೇ ಅಲ್ಲ… ಅದೇನಿದ್ದರೂ ಬೈ ಪ್ರಾಡಕ್ಟ್ ಅಷ್ಟೇ. ನಮ್ಮ ಮುಖ್ಯ ಉದ್ದೇಶ ಭಾರತದ ಹಣ ಭಾರದಲ್ಲೇ ಉಳಿಯಬೇಕು ಎನ್ನುವುದು’ ಎನ್ನುತ್ತಾರೆ.

‘ಹೊರ ದೇಶದ ವಸ್ತುಗಳನ್ನು ಹೆಚ್ಚು ಬೆಲೆ ತೆತ್ತು ಕೊಂಡರೆ ಹೆಚ್ಚು ಗುಣಮಟ್ಟವಿರುತ್ತೆ ಎನ್ನುವ ಭಾರತೀಯರ ಮನಸ್ಥಿತಿ ಬದಲು ಮಾಡಿ, ನಮ್ಮಲೇ ತಯಾರಾದ ವಸ್ತುಗಳು ಉತ್ತಮ ಗುಣಮಟ್ಟ ಹೊಂದಿವೆ ಎನ್ನುವುದನ್ನೇ ತಿಳಿಸಿರುವುದೇ ನಮ್ಮ ಇಂದಿನ ಯಶಸ್ಸಿಗೆ ಕಾರಣ’ ಎನ್ನುತ್ತಾರೆ ಪತಂಜಲಿಯ ಮ್ಯಾನೇಜಿಂಗ್ ಡೈರೆಕ್ಟರ್ ಬಾಲಕೃಷ್ಣ ಆಚಾರ್ಯ.
ಹೀಗೆ ಬಹುರಾಷ್ಟೀಯ ಕಂಪನಿಗಳಿಗೆ ಚಳಿ ಜ್ವರ ಬರಿಸಿರುವ ಪತಂಜಲಿ ಪೂಜಾ ಸಾಮಗ್ರಿಗಳ ವ್ಯಾಪಾರಕ್ಕೂ ಶೀಘ್ರವೇ ಕೈ ಹಾಕಲಿದೆ. ಅಗರಬತ್ತಿ, ಸಾಮ್ರಾಣಿ, ದೂಪ, ಹತ್ತಿಯಿಂದ ತಯಾರಾದ ಎಣ್ಣೆ ಬತ್ತಿಗಳು ಹೀಗೆ ಇವುಗಳ ಮಾರುಕಟ್ಟೆಯೇ ಇಂದಿನ ಲೆಕ್ಕಕ್ಕೆ ಸಿಕ್ಕ ಪ್ರಕಾರ ₹8 ಸಾವಿರ ಕೋಟಿ ಮೀರಿದೆ. ಇಲ್ಲಿಯವರೆಗೆ ಅಸಂಘಟಿತ ರೂಪದಲ್ಲಿ ಇದ್ದ ಈ ಉದ್ದಿಮೆ ಶೀಘ್ರದಲ್ಲೇ ಪತಂಜಲಿಯಿಂದ ಕಾರ್ಪೊರೇಟ್ ರೂಪ ಪಡೆದುಕೊಳ್ಳಲಿದೆ. ಪತಂಜಲಿ ವಹಿವಾಟು ವೃದ್ಧಿಸುವುದರ ಜೊತೆ ಜೊತೆಗೆ ಸಹಸ್ರಾರು ಅಸಂಘಟಿತ ನೌಕರರ ಜೀವನ ಹಸನಾದರೆ, ನಿತ್ಯ ರೇಡಿಯೋದಲ್ಲಿ ‘ಬಹುರಾಷ್ಟ್ರೀಯ ಕಂಪನಿಗಳು ನಮ್ಮ ದೇಶದ ಹಣವನ್ನ ತೆಗೆದುಕೊಂಡುಹೋಗುತ್ತವೆ, ಮತ್ತು ದೊಡ್ಡ ಪ್ರಮಾಣ ಯಾವುದೇ ಚಾರಿಟಿ ಕೆಲಸ ಮಾಡುವುದಿಲ್ಲ, ಪತಂಜಲಿ ಪ್ರಾಡಕ್ಟ್ ಕೊಳ್ಳುವುದು ದೇಶಿಯತೆ, ರಾಷ್ಟ್ರೀಯತೆಗೆ ಪೂರಕ’ ಎನ್ನುವ ಪತಂಜಲಿ ಜಾಹಿರಾತು ಸಾರ್ಥಕವಾಗುತ್ತದೆ.

ಅಂದಹಾಗೆ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಕನಸನ್ನು ಬಹು ದೊಡ್ಡ ಪ್ರಮಾಣದಲ್ಲಿ ಸಾಕಾರ ಮಾಡುತ್ತಿರುವುದು ‘ಪತಂಜಲಿ’. ಬಹು ರಾಷ್ಟ್ರೀಯ ಕಂಪನಿಗಳಿಗೆ ಸದ್ಯಕ್ಕೆ ‘ಕ್ರೆಡಿಬಲ್ ತ್ರೆಟ್’ ಆಗಿರುವ ಪತಂಜಲಿ ಮುಂಬರುವ ದಿನಗಲ್ಲಿ ‘ಗೇಮ್ ಚೇಂಜರ್’ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

1 COMMENT

  1. true…Well said. Narrated to the point.late Rajiv Dikshith fought for Swadeshi, but he didn’t had much product to refer or promote…time is coming near to realize Mr. Rajiv Diskshith’s dream

Leave a Reply