ಬಾಂಗ್ಲಾದೇಶ ಮ್ಯಾನ್ಮಾರ್ ಜತೆ ಭಾರತದ ಅನಿಲ ಬೆಸುಗೆ, ಬಿಟ್ಟಿ ಭಾಗ್ಯಗಳಲ್ಲ; ಬೇಕಿರೋದು ಇಂಥ ಅಭಿವೃದ್ಧಿಗಾಥೆ

 

praveen kumar shetty (2)ಪ್ರವೀಣ ಶೆಟ್ಟಿ, ಕುವೈತ್

ಭಾರತವು ಇವತ್ತಿನ ಮಟ್ಟಿಗೆ ದಿನವೊಂದಕ್ಕೆ 9 ಲಕ್ಷ ಬ್ಯಾರೆಲಿನಷ್ಟು ತೈಲವನ್ನು ದೇಶಿಯವಾಗಿ ಹೊರೆತೆಗೆಯುತ್ತಿದೆ. ಅದರಲ್ಲಿ ಸುಮಾರು 1  ಲಕ್ಷದಷ್ಟು ತೈಲವನ್ನು ಈಶಾನ್ಯ ರಾಜ್ಯಗಳಾದ ಅಸ್ಸಾಮ್ ಮತ್ತು ಅರುಣಾಚಲಪ್ರದೇಶದಿಂದಲೇ ಉತ್ಪಾದಿಸಲಾಗುತ್ತಿದೆ. ಭೂಗರ್ಭದಿಂದ ತೈಲವನ್ನು ಹೊರತೆಗೆಯುವಾಗ ತೈಲದೊಂದಿಗೆ ನೀರು, ಮರಳು ಮತ್ತು ಹಲವು ಪ್ರಕಾರದ ಅನಿಲಗಳು ಹೊರಬರುತ್ತದೆ.  ತೈಲದಿಂದ ಮರಳು, ನೀರು ಮತ್ತು ಅನಿಲವನ್ನು ಪ್ರತ್ಯೇಕಿಸಿದ ನಂತರವೇ ಕಚ್ಚಾತೈಲವು ಸಂಸ್ಕರಣೆಗಾಗಿ ಕಳುಹಿಸಲ್ಪಡುತ್ತದೆ. ಸುಮಾರು ವರ್ಷಗಳ ಹಿಂದೆ ತೈಲದೊಂದಿಗೆ ಹೊರಬಂದ ಹಾನಿಕಾರಕವಾದ ಮತ್ತು ಎಲ್ಲಾ ರೀತಿಯ ಇತರೇ ಅನಿಲವನ್ನು ಉದ್ದನೆಯ ಕೊಳವೆಯಲ್ಲಿ 100 ಅಡಿಯಷ್ಟು ಮೇಲಕ್ಕೆ ಕಳುಹಿಸಿ ಅಲ್ಲಿಯೇ ದಹಿಸುವ ಸುಲಭದ ವ್ಯವಸ್ಥೆಯಿತ್ತು. ಇತ್ತೀಚಿನ ದಿನಗಳಲ್ಲಿ ಹೊಸ ತಂತ್ರಜ್ಞಾನದಿಂದ ಹಾನಿಕಾರಿಕ ಅನಿಲವನ್ನು ಬೇರ್ಪಡಿಸಿ, ಮಿಕ್ಕುಳಿದ ಅನಿಲವನ್ನು ಇಂಧನ ಮತ್ತು ರಸಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತಿದೆ. ತ್ರಿಪುರಾದಲ್ಲಿ ಇತ್ತೀಚಿಗಷ್ಟೆ ಕೊರೆದ ಅನಿಲ ಬಾವಿಗಳಲ್ಲಿ ಅಗಾಧ ಪ್ರಮಾಣದ ಅನಿಲವಿದ್ದು ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ. ಸದ್ಯದ ಅನಿಲ ಸಂಸ್ಕರಣ ಕೇಂದ್ರವನ್ನು ಉನ್ನತಿಕರಿಸಿಕೊಂಡರೆ ಅಧಿಕ ಪ್ರಮಾಣದ ಸಂಸ್ಕರಿತ ಅನಿಲವನ್ನು ಈಶಾನ್ಯ ರಾಜ್ಯಗಳಿಗೆ ಮತ್ತು ನೆರೆಯ ಮಿತ್ರರಾಷ್ಟ್ರಗಳಿಗೆ ರಫ್ತು ಮಾಡುವ ವಿಪುಲ ಅವಕಾಶವಿದೆ.

ಕ್ರಿ.ಶ 1859 ರಲ್ಲೇ ಅಸ್ಸಾಮಿನ ಡಿಗ್ಬೋಯ್ ಪ್ರದೇಶದಲ್ಲಿ ಏಷ್ಯಾಖಂಡದ ಮೊತ್ತಮೊದಲನೆಯ ತೈಲಬಾವಿಯನ್ನು ಕೊರೆಯಲಾಯಿತು. ಅಲ್ಲಿಂದ ಮುಂದುವರಿದು ಕ್ರಿ.ಶ 1901 ರಲ್ಲಿ ಡಿಗ್ಬೋಯಿಯಲ್ಲೆ ತೈಲಸಂಸ್ಕರಣ ಘಟಕವನ್ನು ಸ್ಥಾಪಿಸಿಲಾಯಿತು. ಆದರೆ ದುರಾದೃಷ್ಟವಶಾತ್ ಅಲ್ಲಿಂದ ಇಲ್ಲಿಯವರೆಗೂ ಹಳೆಯ ತೈಲ ಬಾವಿಗಳಿಂದ ಹೊರಬರುತ್ತಿರುವ ಹಾನಿಕಾರಕವಲ್ಲದ ಅನಿಲವನ್ನು ಬೇರ್ಪಡಿಸದೆ ಸುಮ್ಮನೆ ಸುಟ್ಟು ಹಾಕಲಾಗುತ್ತಿದೆ. ಸ್ವಾತಂತ್ರ ಸಿಕ್ಕಿ 70 ವರ್ಷಗಳ ನಂತರವೂ ನಮ್ಮ ದೇಶದ ಚುಕ್ಕಾಣಿ ಹಿಡಿದವರಿಗೆ ಈಶಾನ್ಯ ರಾಜ್ಯಗಳಲ್ಲಿ ವ್ಯರ್ಥವಾಗಿ ಸುಟ್ಟುಹೋಗುತ್ತಿರುವ ಅನಿಲ ಸಂಪತ್ತನ್ನು ಸದ್ಭಳಕೆ ಮಾಡಬೇಕೆನ್ನುವ ಮನಸ್ಸಾಗಲಿಲ್ಲ. ಕಾಲಬುಡದಲ್ಲೆ ಬಿದ್ದುಕೊಳೆಯುತ್ತಿದ್ದ ಅನಿಲ ಸಂಪತ್ತನ್ನು ಬಿಟ್ಟು, ವಿದೇಶದಿಂದ ಆಮದು ಮಾಡಿಕೊಂಡು ಈಶಾನ್ಯ ರಾಜ್ಯಗಳಿಗೆ ಪೂರೈಸುವ ವೆಚ್ಚದಾಯಿಕ ಮಾರ್ಗವನ್ನು ಅನುಸರಿಸಲಾಗುತ್ತಿತ್ತು.

ಆದರೆ ಈಗ ನಮ್ಮ ರಾಷ್ಟ್ರೀಯ ಸಂಪತ್ತನ್ನು ಸದುಪಯೋಗಿಸಿಕೊಳ್ಳಬಲ್ಲ ಯೋಜನೆಯೊಂದನ್ನು ನರೇಂದ್ರ ಮೋದಿ ಸರಕಾರ ರೂಪಿಸಿದೆ. ಈ ಯೋಜನೆಯನ್ವಯ ಭಾರತವು ಈಶಾನ್ಯರಾಜ್ಯಗಳಿಂದ 13 ವಿವಿಧ ಮಾರ್ಗಗಳ ಮೂಲಕ ಒಟ್ಟು 6,900 ಕಿಲೋಮೀಟರಿನಷ್ಟು ಕೊಳವೆ ಮಾರ್ಗವನ್ನು ನಿರ್ಮಿಸಿ, ಮಾಯನ್ಮಾರ್ ಮತ್ತು ಬಾಂಗ್ಲಾದೇಶದೊಂದಿಗೆ ಸಂಪರ್ಕ ಹೊಂದಲಿದೆ. ದೇಶದ ಪೂರ್ವರಾಷ್ಟ್ರಗಳೊಂದಿಗೆ ಒಪ್ಫಂದ ಮಾಡಿಕೊಂಡ ಭಾರತಕ್ಕೆ ಬಾಂಗ್ಲಾದೇಶದ ಚಿತ್ತಗಾಂಗ್ ಬಂದರಿನ ಮೂಲಕ ಈಶಾನ್ಯ ರಾಜ್ಯಗಳಿಗೆ ಬೇಕಾದ ತೈಲವನ್ನು ಆಮದು ಮಾಡಿಕೊಳ್ಳುವ ಸುವರ್ಣಾವಕಾಶ ಒದಗಿ ಬರಲಿದೆ. ನಮ್ಮಲ್ಲಿರುವ ಅನಿಲವನ್ನು ನೆರೆರಾಷ್ಟ್ರಗಳಿಗೆ ರಫ್ತು ಮಾಡಿ, ವಿದೇಶಿ ವಿನಿಮಯ ಗಳಿಸಿಕೊಳ್ಳಲಿದೆ. ನೆರೆರಾಷ್ಟ್ರದೊಂದಿಗಿನ ಈ ಕೊಡುಕೊಳ್ಳುವ ವ್ಯವಹಾರದಿಂದಾಗಿ ಮಣಿಪುರ, ತ್ರಿಪುರಾ, ನಾಗಾಲ್ಯಾಂಡ್, ಅಸ್ಸಾಮ್ ಮತ್ತು ಅರುಣಾಚಲಪ್ರದೇಶದಂತಹ ರಾಜ್ಯಗಳಿಗೆ 1800 ಕಿ.ಮೀ ದೂರದ ಪಶ್ಚಿಮಬಂಗಾಳದ ಹಲ್ದಿಯಾ ಬಂದರಿಗೆ ಪರ್ಯಾಯವಾಗಿ, ಬಾಂಗ್ಲಾದೇಶದ ಚಿತ್ತಗಾಂಗ್ ಬಂದರು ಬರೇ 500 ಕೀಲೊಮೀಟರಿನ ಪರಿಧಿಯೊಳಗಡೆ ಸಂಪರ್ಕಕ್ಕೆ ಸಿಕ್ಕಿಬಿಡುತ್ತದೆ. ಈಶಾನ್ಯ ರಾಜ್ಯಗಳನ್ನು ಅನಿಲ ಸ್ವಾವಲಂಬನೆಯತ್ತ ಕೊಂಡೊಯ್ದು ರಾಷ್ಟ್ರಕಟ್ಟುವುದಕ್ಕೆ ಬಳಸಿಕೊಳ್ಳಲಾಗುತ್ತಿದೆ.

oil map

ಹತ್ತುಸಾವಿರ ಕೋಟಿ ರುಪಾಯಿಯಷ್ಟು ದುಡ್ಡಿನಲ್ಲಿ ತಿಂಗಳಿಗೆ ನೂರು ಕೇಜಿ ಅಕ್ಕಿ, ಹತ್ತು ಕೇಜಿ ನಾಟಿಕೋಳಿ ಉಚಿತವಾಗಿ ಹಂಚಬಹುದಿತ್ತೆಂದು ಯೋಚಿಸುವ ಬುದ್ಧಿಜೀವಿ ಆಡಳಿತಗಾರರಿರುವ ನಮ್ಮ ದೇಶದಲ್ಲಿ ನರೇಂದ್ರಮೋದಿಯಂತಹವರು ಭವಿಷ್ಯತ್ತಿನ ಭಾರತಕ್ಕಾಗಿ ಅನಿಲ ಕೊಳವೆಮಾರ್ಗ, ಅನಿಲ ವಿದ್ಯುತ್ ಸ್ಥಾವರ, ಅಡುಗೆ ಅನಿಲ ಸಂಸ್ಕರಣ ಕೇಂದ್ರ, ರಸಗೊಬ್ಬರ ಕಾರ್ಖಾನೆ ಮತ್ತು ವಿದೇಶಿ ವಿನಿಮಯಕ್ಕಾಗಿ ಯೋಜನೆಗಳನ್ನು ಮಾಡುತ್ತಿದ್ದಾರೆ!

ಹಳೆಯ ತೈಲಬಾವಿಯ ಕೊಳವೆಯಲ್ಲಿ ಸುಟ್ಟು ವ್ಯರ್ಥವಾಗುತ್ತಿರುವ ಅನಿಲ ಮತ್ತು ಹೊಸನಿಕ್ಷೇಪದಿಂದ ಉತ್ಪಾದನೆಗೊಳ್ಳುತ್ತಿರುವ ಒಟ್ಟು ಅನಿಲದ ಪರಿಮಾಣವು ದಿನವೊಂದಕ್ಕೆ 62 ಲಕ್ಷ ಘನ ಮೀಟರಿನಷ್ಟು. ಇಷ್ಟೊಂದು ಬೃಹತ್ ಪ್ರಮಾಣದ ಅನಿಲವನ್ನು ವಿವೇಚನೆಯಿಂದ ಬಳಸಿಕೊಳ್ಳಬೇಕಿರುವುದರಿಂದ ಅನಿಲ ಕೊರತೆಯಿರುವ ಬಾಂಗ್ಲಾ ಮತ್ತು ಮಯನ್ಮಾರ್ ದೇಶಗಳೊಂದಿಗೆ ಕೊಡುಕೊಳ್ಳುವ ಒಪ್ಪಂದ ಮಾಡಿಕೊಳ್ಳಲಾಗಿದೆ. ರಸಗೊಬ್ಬರ ಕಾರ್ಖಾನೆಗೆ ಅಗತ್ಯವಿರುವ ಮೂಲ ಕಚ್ಛಾವಸ್ತುವು ಹೇರಳವಾಗಿ ಉಪಲಬ್ಧವಾಗಲಿದೆ. ತೈಲಸಂಬಂಧಿ ಉದ್ದಿಮೆ, ಅನಿಲ ವಿದ್ಯುತ್ ಸ್ಥಾವರಗಳು ಮತ್ತು ಉದ್ಯೋಗಗಳು ಈಶಾನ್ಯ ರಾಜ್ಯಗಳಲ್ಲಿ ಆರಂಭವಾಗಲಿವೆ. ಅಡುಗೆ ಅನಿಲ ಮತ್ತು ವಿದ್ಯುತ್ತಿಗಾಗಿ ಪರದಾಡುತ್ತಿರುವ ಈಶಾನ್ಯ ರಾಜ್ಯಗಳಿಗೆ ಈ ಯೋಜನೆಯಿಂದ ನಿಜವಾದ “ಭಾಗ್ಯ” ಲಭ್ಯವಾಗಲಿದೆ.

ಪುಕ್ಕಟೆ ಭಾಗ್ಯದಂತಹ ಯೋಜನೆಗಳಿಂದ ಚುನಾವಣೆಗಳಲ್ಲಿ ಒಮ್ಮೂಮ್ಮೆ ಗೆದ್ದೂಬಿಡಬಹುದು. ಐದು ವರ್ಷದ ಅಧಿಕಾರ ಮುಗಿದಾಗ ಸರಕಾರವೆಂಬ ಇಂದ್ರಜಾಲದಿಂದ ಲಾಗ್ ಔಟ್ ಆಗಲೇಬೇಕು. ಸರಕಾರಗಳು ಐದು ವರ್ಷಗಳಿಗೊಮ್ಮೆ ಬಂದು ಹೋಗುತ್ತಿರಬಹುದು, ಆದರೆ ಪ್ರಜೆಗಳಾದ ನಾವು ಇದೇ ರಾಷ್ಟ್ರದಲ್ಲಿರಬೇಕಾಗುತ್ತದೆ. ಬಿಟ್ಟಿ ಕೊಟ್ಟವನೊಬ್ಬ ಕುರ್ಚಿಬಿಟ್ಟಿಳಿದಾಗ ನಾವೇನು ಅವರ ಮನೆಯಂಗಳದಲ್ಲಿ ಬಿಡಾರ ಕಟ್ಟಲು ಆಗುತ್ತದೆಯೇ? ಇಲ್ಲವಲ್ಲ.

ಹೀಗಾಗಿ ಭಾರತದ ಉದ್ಧಾರವಿರುವುದು ನಮ್ಮಲ್ಲಿನ ಮಾನವ ಸಂಪನ್ಮೂಲ ಹಾಗೂ ನೈಸರ್ಗಿಕ ಸಂಪತ್ತುಗಳ ಸೂಕ್ತ ಬಳಕೆಯಿಂದಲೇ ಹೊರತು ಅಗ್ಗದ ಜನಪ್ರಿಯತೆಗಾಗಿ ಹಾತೊರೆಯುವ ಬಿಟ್ಟಿ ಭಾಗ್ಯಗಳಿಂದಲ್ಲ.

ದೇಶಕಾಯುವ ನಮ್ಮದೇ ಸೈನಿಕರಿಗೆ ಕಲ್ಲುತೂರುವರನ್ನು ಸಮರ್ಥಿಸಿಕೊಳ್ಳುವ  ಪತ್ರಕರ್ತರಿಗೆ ಇಂತಹ ಯೋಜನೆಗಳ ಬಗ್ಗೆ ಬರೆದು ರಾಷ್ಟ್ರದ ಜನತೆಯನ್ನು ಧನಾತ್ಮಕ ಚಿಂತನೆ ಮತ್ತು ರಾಷ್ಟ್ರದ ಸ್ವಾವಲಂಬನೆಯತ್ತ ದಾಪುಗಾಲು ಹಾಕುತ್ತಿರುವ ಬಗ್ಗೆ ಹೆಮ್ಮೆ ಮೂಡಿಸಲು ಸಮಯವಿಲ್ಲದಿರಬಹುದು. ಆದರೆ ಜವಾಬ್ಧಾರಿಯುತ ಮತ್ತು ರಾಷ್ಟ್ರಪ್ರೇಮಿ ಓದುಗರಿಂದ ಕಣ್ಣಿನಿಂದ ಸುದ್ದಿಯನ್ನು ಮುಚ್ಚಿಸಿ ಹಾಕುವುದಕ್ಕಾಗುತ್ತದೆಯೇ?

(ಲೇಖಕರು ತೈಲ ಕ್ಷೇತ್ರದಲ್ಲೇ ಕಾರ್ಯನಿರ್ವಹಿಸುತ್ತಿದ್ದು ಈ ವಿಭಾಗದ ಆಳ ಅಗಲವನ್ನು ಬಲ್ಲವರು. ಅವರ ಹಿಂದಿನ ಲೇಖನ ಇಲ್ಲಿ ಓದಬಹುದು)

2 COMMENTS

Leave a Reply