ತಮಿಳುನಾಡು ಪ್ರತಿಭಟನೆಗೆ ಮಣಿಯಲ್ಲ ಎಂದ ಸರ್ಕಾರ, ರೈತರ ಶೂನ್ಯದರ ಬಡ್ಡಿ ಸಾಲ ಕರಗಿತು, ಕೃಷ್ಣಾದಲ್ಲಿ ದೊರೆಸ್ವಾಮಿಯವರಿಗೆದುರಾದ ಆಕ್ರೋಶ, ಪರಿಸರ ಪ್ರಿಯ ಗಣೇಶ, ಭಾರತದಲ್ಲಿ ಜಾನ್ ಕೆರ್ರಿ, ಶುಕ್ರವಾರ ಕಾರ್ಮಿಕ ಸಂಘಟನೆಗಳ ಮುಷ್ಕರ

School Children make clay Ganesha Idols at Government High School, Police Colony, Magadi Road organized by "Art of Giving" in Bengaluru on Tuesday

‘ಆರ್ಟ್ ಆಫ್ ಗಿವಿಂಗ್ ‘ ಎಂಬ ಸಂಸ್ಥೆ ಮಾಗಡಿಯ ಸರ್ಕಾರಿ ಶಾಲಾಮಕ್ಕಳೊಂದಿಗೆ ಸೇರಿಕೊಂಡು ಈ ಬಾರಿಯ ಗಣೇಶೋತ್ಸವವನ್ನು ‘ಹೊಸ ಜೀವನಕ್ಕೆ ಜನ್ಮ’ ಪರಿಕಲ್ಪನೆಯಲ್ಲಿ ಆಚರಿಸುವುದಕ್ಕೆ ಪ್ರಚಾರ ಕೈಗೊಂಡಿದೆ. ರಾಸಾಯನಿಕ ಹಾಗೂ ಬಣ್ಣಗಳಿಂದ ಮುಕ್ತವಾದ ಮಣ್ಣಿನ ಗಣಪತಿಯು ರಾಗಿ ಇಲ್ಲವೇ ಹೂವಿನ ಬೀಜ ಒಳಗೊಂಡಿರುತ್ತದೆ. ಮುಂದೆ ಅದು ವಿಸರ್ಜನೆಗೊಂಡಾಗ ಸಸಿಯೊಂದರ ಸೃಷ್ಟಿಗೆ ಕಾರಣವಾಗಲಿ ಎಂಬ ಪರಿಸರ ಸ್ನೇಹಿ ಆಶಯ ಇಲ್ಲಿದೆ. ಕೆಐಐಟಿ ಮತ್ತು ಕೆಐಎಸ್ಎಸ್ ಸಂಸ್ಥಾಪಕ ಅಚ್ಯುತ ಸಮಂತ ಅವರಿಂದ ಸ್ಫೂರ್ತಿ ಪಡೆದಿರುವುದಾಗಿ ಸಂಘಟನೆ ಹೇಳಿಕೊಂಡಿದೆ.

ಡಿಜಿಟಲ್ ಕನ್ನಡ ಟೀಮ್:

ತಮಿಳುನಾಡು ಪ್ರತಿಭಟನೆಗೆ ಮಣಿಯಲ್ಲ ಅಂದ್ರು ಟಿಬಿ ಜಯಚಂದ್ರ

ಕಾವೇರಿ ನೀರು ಬಿಡುಗಡೆಗೆ ತಮಿಳುನಾಡು ನಡೆಸುತ್ತಿರುವ ಬಂದ್ ತಂತ್ರ ಫಲಿಸದು ಎಂದು ಹೇಳಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಕರ್ನಾಟಕದ ಮಾದರಿಯಲ್ಲೇ ತಮಿಳುನಾಡು ಕೂಡ ಹೊಗೇನಕಲ್ ನಲ್ಲಿ ಅಣೆಕಟ್ಟು ನಿರ್ಮಿಸಿ ನೀರು ಸಂಗ್ರಹಿಸಲಿ ಎಂದು ಹೇಳಿದ್ದಾರೆ.

ತಮಿಳುನಾಡಿನಲ್ಲಿ  ಈಗ ಮಳೆ ಆರಂಭವಾಗಿದ್ದು ಅವರಿಗೆ ನೀರಿನ ತೊಂದರೆ ಇಲ್ಲ. ನಮಗೆ ಇನ್ನು ಮಳೆ ಬರುವ ಸಾಧ್ಯತೆಯಿಲ್ಲ.  ಈಗ ಅವರಲ್ಲಿ ಶೇಖರಿಸುವ ನೀರು ಪ್ರಸ್ತುತ ಬೆಳೆ ಮತ್ತು ಕುಡಿಯುವ ನೀರಿಗೆ ಆಗುತ್ತದೆ. ಅವರು ಹೆಚ್ಚುವರಿಯಾಗಿ ಕೇಳುತ್ತಿರುವುದು ಮುಂದಿನ ಸಾಂಬಾ ಹಾಗೂ ಕುರುವೈ ಬೆಳೆಗೆ.  ನಮಗೆ ಕುಡಿಯಲು ನೀರಿಲ್ಲದಿರುವಾಗ ಬೆಳೆಗೆ ನೀರು ಕೊಡಿ ಎಂದರೆ ಹೇಗೆ ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ಗುತ್ತಿಗೆ ಅವ್ಯವಹಾರಗಳ ಬಗ್ಗೆ ಮಾತನಾಡಿದ ಸಚಿವರು, ಸಣ್ಣ ನೀರಾವರಿ ಇಲಾಖೆಯ ತುಂಡು ಗುತ್ತಿಗೆ ಅವ್ಯವಹಾರದಲ್ಲಿ ಪಾಲುದಾರರಾಗಿರುವ 26 ಜನ ಎಂಜಿನಿಯರುಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಆದೇಶಿಸಲಾಗಿದೆ ಎಂದಿದ್ದಾರೆ. ಇಲಾಖೆಯಲ್ಲಿ ಇನ್ನು ಮುಂದೆ ತುಂಡು ಗುತ್ತಿಗೆ ಹಾಗು ಐದು ಲಕ್ಷ ರೂ. ವರೆಗಿನ ಕಾಮಗಾರಿಯನ್ನು ನೇರವಾಗಿ ಕೈಗೆತ್ತಿಕೊಳ್ಳಲು ಅವಕಾಶ ನಿಷೇಧಿಸಲಾಗಿದೆ ಎಂದಿದ್ದಾರೆ.

ರೈತರಿಗೆ ಶೂನ್ಯದರ ಬಡ್ಡಿ: ಹೆಚ್ಚು ಕೊಡೋಕೆ ಹಣವಿಲ್ಲ

ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಒದಗಿಸುತ್ತಿರುವ ಕೃಷಿ ಸಾಲವನ್ನು ಗರಿಷ್ಠ 25 ಸಾವಿರ ರೂ.ಗಳಿಗಷ್ಟೇ ಸೀಮಿತಗೊಳಿಸುವಂತೆ ಸಹಕಾರ ಸಂಘಗಳಿಗೆ ಸರ್ಕಾರ ಮೌಖಿಕ ಸೂಚನೆ ನೀಡಿದೆ. ಪ್ರಸಕ್ತ ವರ್ಷ 25 ಲಕ್ಷ ರೈತರಿಗೆ 11 ಸಾವಿರ ಕೋಟಿ ರೂಗಳಷ್ಟು ಕೃಷಿ ಸಾಲ ಒದಗಿಸಲು ಸರ್ಕಾರ ತೀರ್ಮಾನಿಸಿತ್ತು.

ಇತ್ತೀಚಿನವರೆಗೆ ರಾಜ್ಯ ಸರ್ಕಾರ ನೀಡುವ ಕೃಷಿ ಸಾಲದ ಶೇಕಡಾ ಐವತ್ತರಷ್ಟು ಹಣವನ್ನು ನಬಾರ್ಡ್ ಶೇಕಡಾ 5.5 ರಷ್ಟು ಬಡ್ಡಿ ದರದಲ್ಲಿ ಒದಗಿಸುತ್ತಿತ್ತು. ಅದು ಈ ಬಾರಿ ನಿಗದಿ ಮಾಡಿರುವುದು 3120 ಕೋಟಿ ರೂ ಮಾತ್ರ. ಹೀಗಾಗಿ ರಾಜ್ಯ ಸರ್ಕಾರದ ಗುರಿಯ ಶೇಕಡಾ 30 ರಷ್ಟು ಹಣವನ್ನು ಮಾತ್ರ ಅದು ಸಾಲವಾಗಿ ನೀಡಲಿದೆ.

ಈ ಮಧ್ಯೆ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಹಣವನ್ನು ಅಪೆಕ್ಸ್ ಬ್ಯಾಂಕಿನಲ್ಲಿ ಠೇವಣಿಯಾಗಿಟ್ಟು ಆ ಹಣವನ್ನು ಕೃಷಿ ಸಾಲ ಒದಗಿಸಲು ಬಳಸಿಕೊಳ್ಳುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಇದಕ್ಕಾಗಿ ಕಳೆದ ವಿಧಾನಮಂಡಲ ಅಧಿವೇಶನದಲ್ಲೂ ಅದು ಕಾಯ್ದೆಗೆ ತಿದ್ದುಪಡಿ ಮಾಡಿ ವಿವಿಧ ಇಲಾಖೆಗಳಲ್ಲಿರುವ ಹಣವನ್ನು ಅಪೆಕ್ಸ್ ಬ್ಯಾಂಕಿನಲ್ಲಿ ಠೇವಣಿಯಾಗಿಡುವ ಮಾರ್ಗವನ್ನು ಸುಗಮಗೊಳಿಸಿತ್ತು. ಆದರೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ಠೇವಣಿ ಅಪೆಕ್ಸ್ ಬ್ಯಾಂಕ್‍ಗೆ ವರ್ಗಾವಣೆಯಾಗಿಲ್ಲ. ಒಂದು ವೇಳೆ ಈ ಹಣ ವರ್ಗಾವಣೆಯಾದರೂ ರೈತರಿಗೆ ಮೊದಲಿನಂತೆ ಶೂನ್ಯ ಬಡ್ಡಿ ದರದಲ್ಲಿ ಹೆಚ್ಚು ಸಾಲ ನೀಡಲು ಸಂಪನ್ಮೂಲವಿಲ್ಲ. ಹೀಗಾಗಿ ಮೊದಲ ಹಂತದಲ್ಲಿ 25 ಸಾವಿರಕ್ಕೆ ಮಾತ್ರ ಸೀಮಿತಗೊಳಿಸಿದೆ ರಾಜ್ಯದ ಹಣಕಾಸು ಸ್ಥಿತಿ ಸುಧಾರಿಸಿದ ನಂತರ ನಿಯಮ ಸಡಿಲಿಕೆ ಮಾಡಲು ಸರ್ಕಾರ ನಿರ್ಧರಿಸಿದೆ.

ನಿಮ್ಮಿಂದಾಗಿ ಬಡವರ ಮನೆ ಹೋಯಿತು..

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಾಣ ಮಾಡುವ ಕುರಿತಂತೆ ಮುಖ್ಯಮಂತ್ರಿಗಳ ಜತೆ ಚರ್ಚಿಸಲು ಹೆಚ್.ಎಸ್.ದೊರೆಸ್ವಾಮಿ, ಹಿರೇಮಠ್ ಸೇರಿದಂತೆ ಹಲ ಪ್ರಮುಖರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರಿಗೆದುರಾದ ಕೆಪಿಸಿಸಿ ರೈತ ಘಟಕದ ಅಧ್ಯಕ್ಷ ಸಚಿನ್ ಮಿಗಾ, ‘ನೀವು ಕೋರ್ಟಿಗೆ ಹಾಕಿರುವ ಪಿಐಎಲ್‍ನಿಂದ ಬಡವರ ಮನೆಗಳು ತೆರವಾಗುತ್ತಿವೆ. ಬಡ ರೈತರು ಒಕ್ಕಲೇಳುವ ಸ್ಥಿತಿ ಬಂದಿದೆ’ ಎಂದು ಆರೋಪಿಸಿದರು. ‘ನಿಮಗೆ ಶಕ್ತಿ ಇದ್ದರೆ ಶ್ರೀಮಂತರ ವಿರುದ್ಧ ಹೋರಾಡಿ. ಅವರು ಒತ್ತುವರಿ ಮಾಡಿಕೊಂಡ ಜಾಗವನ್ನು ತೆರವುಗೊಳಿಸಲು ಯತ್ನಿಸಿ. ನೀವೇ ಮುಂದೆ ನಿಂತು ಆ ಕೆಲಸ ಮಾಡಿ. ಎಲ್ಲರೂ ಬೆಂಬಲ ನೀಡುತ್ತಾರೆ’ ಎಂದು ಸಚಿನ್ ಮಿಗಾ ಆಕ್ರೋಶ ವ್ಯಕ್ತಪಡಿಸಿದಾಗ ಗೃಹ ಕಚೇರಿ ಕೃಷ್ಣಾದಲ್ಲಿ ಕೆಲಕಾಲ ಬಿಗು ವಾತಾವರಣ ರೂಪುಗೊಂಡಿತು.

ಅಮೆರಿಕ ಜತೆ ದೊಡ್ಡ ಒಪ್ಪಂದ

ಅಮೆರಿಕದ ಕಾರ್ಯದರ್ಶಿ ಜಾನ್ ಕೆರ್ರಿ ಸೋಮವಾರ ರಾತ್ರಿ ಭಾರತಕ್ಕೆ ಆಗಮಿಸಿದ್ದಾರೆ. ಕೆರ್ರಿ ಅವರ ಎರಡು ದಿನಗಳ ಪ್ರವಾಸದಲ್ಲಿ ಭಾರತ, ಅಮೆರಿಕ ಜತೆಗಿನ ದೊಡ್ಡ ಮಟ್ಟದ ಒಪ್ಪಂದ ಮಾಡಿಕೊಳ್ಳಲಿದೆ. ಪ್ರವಾಸದ ಮೊದಲ ದಿನವಾದ ಮಂಗಳವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಜತೆ ಮಾತುಕತೆ ನಡೆಸಿರೋ ಕೆರ್ರಿ, ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಈ ಪ್ರವಾಸದ ವೇಳೆ ಉಭಯ ದೇಶಗಳ ನಡುವೆ ಸುಮಾರು 500 ಬಿಲಿಯನ್ ಡಾಲರ್ ನಷ್ಟು ವ್ಯಾಪಾರ ಒಪ್ಪಂದವಾಗುವ ನಿರೀಕ್ಷೆ ಇದೆ. ಕಾಶ್ಮೀರ ಮತ್ತು ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತೂ ಚರ್ಚೆ ನಡೆಸುವ ಸಾಧ್ಯತೆಗಳಿವೆ.

ಮಂಗಳವಾರ ಬೆಳಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಕೆರ್ರಿ, ಸೈಬರ್ ಕ್ರೈಮ್ ಸೇರಿದಂತೆ ಹಲವು ವಿಚಾರದ ಬಗ್ಗೆ ಚರ್ಚೆ ನಡೆಸಿದ್ರು. ಅಲ್ಲದೆ ಭಾರತ ಮತ್ತು ಅಮೆರಿಕ ನಡುವಣ ರಕ್ಷಣಾ ಒಪ್ಪಂದವನ್ನು ಅವರು ಶ್ಲಾಘಿಸಿದರು. ಇನ್ನು ಕೆರ್ರಿ ಅವರೊಂದಿಗೆ ಮಾತುಕತೆ ನಡೆಸಿದ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಅಮೆರಿಕದ ಕಂಪನಿಗಳು ಮೇಕ್ ಇನ್ ಇಂಡಿಯಾದಲ್ಲಿ ಕೈಜೋಡಿಸಲು ಬೆಂಬಲಿಸುವಂತೆ ಕರೆ ನೀಡಿದರು.

ಕಳೆದ ವರ್ಷ ಅಕ್ಟೋಬರ್ ನಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಪ್ರಧಾನಿ ನರೇಂದ್ರ ಮೋದಿ ಉಭಯ ದೇಶಗಳ ನಡುವೆ ಆರಂಭಿಸಿದ ತಾಂತ್ರಿಕ ಮತ್ತು ವಾಣಿಜ್ಯ ಸಂಬಂಧದದ ಮುಂದುವರಿದ ಭಾಗವಾಗಿ ಕೆರ್ರಿ ಅವರ ಭೇಟಿಯಲ್ಲಿ ಮತ್ತಷ್ಟು ಒಪ್ಪಂದಗಳು ನಡೆಯಲಿವೆ.

ಭಾರತ ಮತ್ತು ಅಮೆರಿಕ ನಡುವೆ ವಾಶಿಂಗ್ಟನ್ ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳು ತಮ್ಮ ಮಿಲಿಟರಿ ನೆಲೆಗಳನ್ನು ಬಳಸಿಕೊಂಡು ತಮ್ಮ ಶಸ್ತ್ರಾಸ್ತ್ರ ರಿಪೇರಿ ಹಾಗೂ ಪೂರೈಕೆಗೆ ಒಪ್ಪಂದ ಸಹಿ ಹಾಕಿದ ಮರು ದಿನವೇ ಕೆರ್ರಿ ಅವರ ಭಾರತ ಪ್ರವಾಸ ಆರಂಭಿಸಿರೋದು ಉಭಯ ದೇಶಗಳ ನಡುವಣ ಸಂಬಂಧ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಇನ್ನು ಬುಧವಾರ ಪ್ರಧಾನಿ ಭೇಟಿಯ ಜತೆಗೆ ದೆಹಲಿಯ ಐಐಟಿ ಕಾಲೇಜಿನ ವಿದ್ಯಾರ್ಥಿಗಳೊಂದಿಗಿನ ಚರ್ಚೆಯಲ್ಲೂ ಭಾಗವಹಿಸಲಿದ್ದಾರೆ ಕೆರ್ರಿ.

ಕನಿಷ್ಠ ವೇತನ ಹೆಚ್ಚಿಸಿದರೂ ಮುಷ್ಕರಕ್ಕೆ ಮುಂದಾದ ಕಾರ್ಮಿಕ ಸಂಘಟನೆಗಳು

ದಿನಗೂಲಿ ನೌಕರರ ಕನಿಷ್ಠ ವೇತನ ಹೆಚ್ಚಳ ಸೇರಿದಂತೆ ಕೆಲವು ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಲು ಒಪ್ಪಿಗೆ ನೀಡಿದ್ರೂ ಸಹ ಸೆ.2 ರಂದು ದೇಶದಾದ್ಯಂತ ಮುಷ್ಕರ ನಡೆಸಲು ಕಾರ್ಮಿಕ ಸಂಘಟನೆಗಳು ಮುಂದಾಗಿವೆ.

ಕಳೆದ ಸೆಪ್ಟೆಂಬರ್ ನಿಂದಲೂ ಕನಿಷ್ಠ ವೇತನ ಹೆಚ್ಚಳ ಸೇರಿದಂತೆ 12 ವಿವಿಧ ಬೇಡಿಕೆಗಳನ್ನು ಈಡೇರಿಕೆ ಹಾಗೂ ರಕ್ಷಣೆ, ವಿಮೆ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿ ಸಡಿಲ ನಿರ್ಧಾರ ಕೈಬಿಡುವಂತೆ ಕಾರ್ಮಿಕ ಸಂಘಟನೆಗಳು ಆಗ್ರಹಿಸುತ್ತಲೇ ಬಂದಿದ್ದವು. ಈ ಬಗ್ಗೆ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಕಾರ್ಮಿಕ ಸಂಘಟನೆಗಳು ಸೆ.2ರಂದು ದೇಶದಾದ್ಯಂತ ಬಂದ್ ಗೆ ಕರೆ ನೀಡಿದ್ದವು.

ಶುಕ್ರವಾರ ಕರೆ ನೀಡಲಾಗಿರುವ ಬಂದ್ ಅನ್ನು ತಪ್ಪಿಸಲು ಸಂಘಟನೆಗಳ ಮನವೊಲಿಸಲು ಯಾವೆಲ್ಲಾ ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಚರ್ಚಿಸಲು ಸೋಮವಾರ ಪ್ರಧಾನಿ ನರೇಂದ್ರ ಮೋದಿ, ಅರುಣ್ ಜೇಟ್ಲಿ, ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಹಾಗೂ ಇಂಧನ ಸಚಿವ ಪಿಯೂಶ್ ಗೋಯಲ್ ಅವರ ಜತೆ ತುರ್ತು ಸಭೆ ನಡೆಸಿದ್ರು. ಈ ವೇಳೆ ಕನಿಷ್ಠ ವೇತನ ಪ್ರಮಾಣ ಹೆಚ್ಚಳ ಸೇರಿದಂತೆ ಕೆಲವು ಬೇಡಿಕೆಗೆ ಒಪ್ಪಿಗೆ ನೀಡಲಾಗಿತ್ತು. ಆದರೆ ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಮಾಣದಲ್ಲಿ ಯಾವುದೇ ಬದಲಾವಣೆಗೆ ಮುಂದಾಗಲಿಲ್ಲ.

ಈ ಬಗ್ಗೆ ಮಂಗಳವಾರ ಮಧ್ಯಾಹ್ನ ಮಾಹಿತಿ ನೀಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ‘ಕೃಷಿಯೇತರ ಹಾಗೂ ಅರೆ ಕೌಶಲ್ಯ ಕಾರ್ಮಿಕರ ಕನಿಷ್ಠ ವೇತನವನ್ನು ₹246 ರಿಂದ 350ಕ್ಕೆ ಹೆಚ್ಚಿಸಲಾಗಿದೆ. ರಾಜ್ಯ ಸರ್ಕಾರಗಳು ಇದರ ಪ್ರಮಾಣವನ್ನು ಇನ್ನಷ್ಟು ಏರಿಕೆ ಮಾಡಬಹುದೇ ವಿನಃ ಕಡಿಮೆ ಮಾಡಲು ಸಾಧ್ಯವಿಲ್ಲ’ ಎಂದಿದ್ದರು.

ಆದರೆ, ‘ಕರ್ನಾಟಕ, ದೇಹಲಿ ರಾಜ್ಯಗಳಲ್ಲಿ ಕಾರ್ಮಿಕರ ವೇತನ ಇದಕ್ಕಿಂತ ಹೆಚ್ಚಿದೆ. ಸರ್ಕಾರದ ಈಗಿನ ನಿರ್ಧಾರ ಪರಿಸ್ಥಿತಿಯನ್ನು ಯಥಾಸ್ಥಿತಿಯಲ್ಲಿಡಲಿದ್ದು, ಸರ್ಕಾರ ಇತರೆ ಪ್ರಮುಖ ಬೇಡಿಕೆಗಳನ್ನು ಕಡೆಗಣಿಸಿದೆ. ಹೀಗಾಗಿ ಶುಕ್ರವಾರ ಕರೆ ನೀಡಲಾಗಿರುವ ಬಂದ್ ಅನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ’ ಎಂಬುದು ಭಾರತೀಯ ವ್ಯಾಪಾರ ಸಂಘಟನೆಯ ಕೇಂದ್ರ (ಸಿಐಟಿಯು) ತಪನ್ ಸೇನ್ ವಾದ.

ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು…

  • ಪ್ರಸಕ್ತ ಸಾಲಿನಲ್ಲಿ ತೆರಿಗೆ ಪಾವತಿ ಮಾಡದ ₹ 3,360 ಕೋಟಿ ಹಣವನ್ನು ತೆರಿಗೆ ಇಲಾಖೆ ವಶಪಡಿಸಿಕೊಂಡಿದೆ. ಸ್ವತಃ ತೆರಿಗೆ ಇಲಾಖೆಯ ಅಧಿಕೃತ ವರದಿಯಲ್ಲಿ ಈ ಅಂಶವನ್ನು ತಿಳಿಸಲಾಗಿದ್ದು, ಈ ಹಿಂದಿನ ದಾಖಲೆಯನ್ನು ಅಳಿಸಿಹಾಕಲಾಗಿದೆ. ಕಳೆದ ವರ್ಷ ತೆರಿಗೆ ಇಲಾಖೆ ವಶಪಡಿಸಿಕೊಂಡ ಮೊತ್ತ ₹ 102.50 ಕೋಟಿಯಷ್ಟಿತ್ತು. ಕಳೆದ ವರ್ಷ ಜನವರಿಯಿಂದ ಜುಲೈವರೆಗೆ 55 ರೈಡ್ ಗಳನ್ನು ಮಾಡಿದ್ದ ತೆರಿಗೆ ಇಲಾಖೆ, ಈ ವರ್ಷ ಈ ಅವಧಿಯಲ್ಲಿ 148 ರೈಡ್ ಗಳನ್ನು ಮಾಡಿದೆ. ಆ ಮೂಲಕ ಈ ವರ್ಷ ತೆರಿಗೆ ಪಾವತಿಸದವರಿಗೆ ತೆರಿಗೆ ಇಲಾಖೆ ಬಿಸಿ ಮುಟ್ಟಿಸಿರೋದು ಖಚಿತವಾಗಿದೆ.
  • ಕೇಂದ್ರಸರ್ಕಾರದ ಮಹತ್ವಾಕಾಂಶಿ ಜಿ ಎಸ್ ಟಿ ಮಸೂದೆಯನ್ನು ಅಂಗೀಕರಿಸಲು ಗೋವಾ ಸಜ್ಜಾಗಿದೆ. ಬುಧವಾರ ವಿಶೇಷ ಅಧಿವೇಶನದಲ್ಲಿ ಈ ಮಸೂದೆಯನ್ನು ಅಂಗೀಕರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ವರದಿಗಳು ಬಂದಿವೆ.
  • ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ… ಕಳೆದ ಎರಡು ವರ್ಷದಿಂದ ಬಾಕಿ ಇದ್ದ ವಾರ್ಷಿಕ ಬೋನಸ್ ಅನ್ನು ಬಿಡುಗಡೆ ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ. 7ನೇ ವೇತನ ಆಯೋಗದ ಅಡಿಯಲ್ಲಿ ಈ ಎರಡು ವರ್ಷದ ಬೋನಸ್ ನೀಡಲು ಸರ್ಕಾರ ನಿರ್ಧರಿಸಿದ್ದು, ಇದರೊಂದಿಗೆ ಕೇಂದ್ರ ಸರ್ಕಾರದ 33 ಲಕ್ಷ ನೌಕರರಿಗೆ ದಿಪಾವಳಿ ಹಬ್ಬಕ್ಕೂ ಮುಂಚಿತವಾಗಿಯೇ ಸಂಭ್ರಮ ತರಿಸಿದೆ. ಸರ್ಕಾರದ ಈ ನಿರ್ಧಾರದಿಂದ ಪ್ರತಿ ವರ್ಷ ₹ 1920 ಕೋಟಿ ಹೊರೆಯಾಗಲಿದೆ.

Leave a Reply