ಯೋಗೇಶ್ವರ್ ದತ್ ಕೊರಳಲ್ಲಿದ್ದ ಕಂಚಿನ ಪದಕ ಈಗ ಬೆಳ್ಳಿಯಾಗುತ್ತಿರೋದು ಹೇಗೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಭಾರತೀಯ ಕುಸ್ತಿಪಟು ಯೋಗೇಶ್ವರ್ ದತ್ ಗೆ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಸಿಗುತ್ತಿದೆ… ಅರೆ, ಇತ್ತೀಚೆಗೆ ನಡೆದ ರಿಯೋ ಒಲಿಂಪಿಕ್ಸ್ ನಲ್ಲಿ ಮೊದಲನೇ ಸುತ್ತಿನಲ್ಲೇ ಸೋತ ಯೋಗೇಶ್ವರ್ ದತ್ ಗೆ ಬೆಳ್ಳಿ ಹೇಗೆ ಸಿಕ್ತು ಅಂತಾ ಯೋಚಿಸ್ತಿದ್ದೀರಾ.. ಇದು ರಿಯೋ ಒಲಿಂಪಿಕ್ಸ್ ಪದಕವಲ್ಲ. 2012ರ ಲಂಡನ್ ಒಲಿಂಪಿಕ್ಸ್ ಪದಕ.

ಹೌದು, ಯೋಗೇಶ್ವರ್ ದತ್ ಲಂಡನ್ ಒಲಿಂಪಿಕ್ಸ್ ನ ಪುರುಷರ 60 ಕೆ.ಜಿ ವಿಭಾಗದಲ್ಲಿ ರೆಪಚೇಜ್ ಸುತ್ತಿನ ಮೂಲಕ ಕಂಚಿನ ಪದಕ ಗೆದ್ದಿದ್ದರು. ಈಗ ಆ ಪದಕ ಬೆಳ್ಳಿಯಾಗಿ ಮಾರ್ಪಾಡಾಗುತ್ತಿದೆ. ಹೇಗೆ ಅಂದರೆ, ಆ ಟೂರ್ನಿಯಲ್ಲಿ ಬೆಳ್ಳಿ ಪದಕ ಗೆದ್ದಿದ್ದ ರಷ್ಯಾದ ಕುಸ್ತಿಪಟು ಬೆಸಿಕ್ ಕುಡುಖೊವ್, ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದು ಅನರ್ಹರಾಗಿದ್ದಾರೆ. ಹೀಗಾಗಿ ಯೋಗೇಶ್ವರ್ ಅವರಿಗೆ ಬೆಳ್ಳಿ ಪದಕ ಸಿಗುತ್ತಿದೆ.

ಯೋಗೇಶ್ವರ್ ದತ್ ಟೂರ್ನಿಯ ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಷ್ಯಾ ಕುಸ್ತಿಪಟುವಿನ ವಿರುದ್ಧ ಸೋತಿದ್ದರು. ನಂತರ ಕುಡುಖೊವ್ ಫೈನಲ್ ಪ್ರವೇಶಿಸಿದ ಪರಿಣಾಮ ರೆಪಚೇಜ್ ಸುತ್ತಿನ ಮೂಲಕ ಕಂಚಿನ ಪದಕಕ್ಕಾಗಿ ನಡೆದ ಪಂದ್ಯಗಳಲ್ಲಿ ಸೆಣಸಿ ಪದಕ ಗೆದ್ದಿದ್ದರು. ಮತ್ತೊಂದೆಡೆ ನಡೆದ ಫೈನಲ್ ಸುತ್ತಿನಲ್ಲಿ ಬೆಸಿಕ್ ಕುಡುಖೊವ್ ಸೋಲನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತರಾಗಿದ್ದರು.

ಯಾವುದೇ ಪದಕ ವಿಜೇತ ಕ್ರೀಡಾಪಟು ಮೋಸದಾಟದಲ್ಲಿ ಭಾಗಿಯಾಗಿದ್ದು ಸಾಬೀತಾದರೇ ಆತನನ್ನು ಅನರ್ಹಗೊಳಿಸಿ ಆತನ ನಂತರದ ಸ್ಥಾನ ಪಡೆದವರಿಗೆ ಆ ಪದಕ ನೀಡಲಾಗುತ್ತದೆ. ಹೀಗಾಗಿ ಕಂಚಿನ ಪದಕ ಪಡೆದಿದ್ದ ಯೋಗೇಶ್ವರ್ ದತ್ ಈಗ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ.

ಮೋಸದಾಟದಲ್ಲಿ ಭಾಗಿಯಾದ ಅಥ್ಲೀಟ್ ನಿಂದ ಪದಕ ಹಿಂಪಡೆದು ಅದನ್ನು ಮತ್ತೊಬ್ಬ ಅರ್ಹ ಕ್ರೀಡಾಪಟುವಿಗೆ ನೀಡುವ ಪ್ರಕ್ರಿಯೆಗೆ ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಯೋಗೇಶ್ವರ್ ದತ್ ಕೈಗೆ ಬೆಳ್ಳಿ ಪದಕ ಬಂದು ಸೇರಲು ಇನ್ನಷ್ಟು ಸಮಯ ಕಾಯಬೇಕಿದೆ.

ಈಗ ಯೋಗೇಶ್ವರ್ ದತ್ ಬೆಳ್ಳಿ ಪದಕ ಪಡೆದಿರುವುದರಿಂದ 2012ರ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ 3 ಬೆಳ್ಳಿ ಪದಕ ಲಭಿಸಿದಂತಾಗಿದೆ. ಕುಸ್ತಿಪಟು ಸುಶೀಲ್ ಕುಮಾರ್, ಶೂಟರ್ ವಿಜಯ್ ಕುಮಾರ್ ಅವರ ಸಾಲಿಗೆ ಯೋಗೇಶ್ವರ್ ದತ್ ಸೇರಿದ್ದಾರೆ.

4 ವರ್ಷದ ನಂತರ ಸಿಕ್ಕಿಬಿದ್ದದ್ದು ಹೇಗೆ…?

ಸದ್ಯ ಅಂತಾರಾಷ್ಟ್ರೀಯ ಡೋಪಿಂಗ್ ಪರೀಕ್ಷೆ ಪದ್ದತಿ ಪ್ರಕಾರ ಅಥ್ಲೀಟ್ ಗಳ ಡೋಪಿಂಗ್ ಮಾದರಿಗಳನ್ನು 10 ವರ್ಷಗಳ ಕಾಲ ಸುರಕ್ಷಿತವಾಗಿರಿಸಲಾಗುತ್ತದೆ. ಅದನ್ನು ಅಗತ್ಯ ಬಿದ್ದಾಗ ಅಥವಾ ಅನುಮಾನ ವ್ಯಕ್ತವಾದಾಗ ಹೊಸ ಹೊಸ ಪರೀಕ್ಷಾ ವಿಧಾನದ ಮೂಲಕ ಮರು ಪರೀಕ್ಷೆ ಮಾಡಲಾಗುವುದು. ಹೀಗೆ ಮರು ಪರೀಕ್ಷೆ ನಡೆಸಿದಾಗ ಮೋಸದಾಟ ಬಯಲಿಗೆ ಬರುತ್ತದೆ. ಅದೇ ರೀತಿ ಈಗ ಮರು ಪರೀಕ್ಷೆ ಮಾಡಿದ ಸಂದರ್ಭದಲ್ಲಿ ರಷ್ಯಾ ಕುಸ್ತಿಪಟು ಉದ್ದೀಪನ ಮದ್ದು ಸೇವನೆ ಮಾಡಿರುವುದು ಖಚಿತಪಟ್ಟಿದೆ. 2000 ಸಿಡ್ನಿ ಒಲಿಂಪಿಕ್ಸ್ ಗೂ ಮುನ್ನ ಉದ್ದೀಪನ ಮದ್ದು ಪರೀಕ್ಷೆಯನ್ನು ಟೂರ್ನಿಯ ವೇಳೆ ಹಾಗೂ ನಂತರವೇ ಮಾಡಿ ಮುಗಿಸುತ್ತಿತ್ತು. ಆದರೆ, ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಈಗ ಮರುಪರೀಕ್ಷೆ ಮಾಡುವ ಮೂಲಕ ತಪ್ಪಿತಸ್ಥರನ್ನು ಕಂಡುಹಿಡಿಯುತ್ತಿದೆ.

Leave a Reply