ಬಡವರ ಮನೆಗಳಷ್ಟೇ ನೆಲಸಮವೇ?- ದರ್ಶನ್ ಮನೆ ತೆರವಿಲ್ಲವೆಂಬ ಸುದ್ದಿ ಹುಟ್ಟಿಸಿರುವ ಚರ್ಚೆ, ಬಂಗಾಳದಲ್ಲಿ ಎಡಪಂಥೀಯ ಬಂಡವಾಳಶಾಹಿಗೆ ಸುಪ್ರೀಂ ಆಘಾತ, ವಾದ್ರಾ ಹಗರಣದ ವರದಿ ಸಲ್ಲಿಕೆ, ರಾಜ್ಯ ಸಂಪುಟದ ತೀರ್ಮಾನಗಳೇನು?

ಅಕ್ರಮವಾಗಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ ಪ್ರಕರಣಗಳ ವಿಚಾರಣೆಯನ್ನು ಶೀಘ್ರವಾಗಿ ನಡೆಸಲು ಅನುಕೂಲ ಮಾಡಿಕೊಡಲು ವಿಶೇಷ ನ್ಯಾಯಾಲಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಉದ್ಘಾಟಿಸಿದರು. ಈ ವೇಳೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ ಜಯಚಂದ್ರ ಅವರು ಉಪಸ್ಥಿತರಿದ್ದರು.

ಡಿಜಿಟಲ್ ಕನ್ನಡ ಟೀಮ್:

ದರ್ಶನ್ ಮನೆ ತೆರವು ಮಾಡಲ್ವಂತೆ

ರಾಜಕಾಲುವೆ ಒತ್ತುವರಿಯಿಂದ ತೆರವಿನ ಭೀತಿಯಲ್ಲಿದ್ದ ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ಅವರ ಮನೆ ಈಗ ಸೇಫ್ ಅಂತೆ. ‘ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ ಟೌನ್ ಶಿಪ್ ನಲ್ಲಿರುವ ಮನೆ ನಿರ್ಮಿಸಲು ಸರ್ಕಾರವೇ ಅನುಮತಿ ನೀಡಿದೆ. ಅಲ್ಲದೆ ದಾಖಲೆಗಳು ಸರಿಯಾಗಿವೆ. ಹೀಗಾಗಿ ಬೆಂಗಳೂರು ಮಹಾನಗರ ಪಾಲಿಕೆ ದರ್ಶನ್ ಅವರ ಮನೆ ತೆರವುಗೊಳಿಸಲು ಸಾಧ್ಯವಿಲ್ಲ’ ಎಂದಿದ್ದಾರೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ ಜಯಚಂದ್ರ. ಇದರೊಂದಿಗೆ ಇಷ್ಟು ದಿನಗಳ ಕಾಲ ದರ್ಶನ್ ಮನೆ ತೆರವು ಮಾಡುತ್ತೇವೆ ಎನ್ನುತ್ತಿದ್ದ ಸರ್ಕಾರ ಯೂ ಟರ್ನ್ ಹೊಡೆದಿದೆ.

ಸರ್ಕಾರದ ನಿರ್ಧಾರದ ವಿರುದ್ಧ ಈಗ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ‘ಕಾನೂನು ಕೇವಲ ಬಡವರಿಗೆ ಮಾತ್ರ ಅನ್ವಯವೇ’ ಎಂದು ಸರ್ಕಾರವನ್ನು ಪ್ರಶ್ನಿಸುತ್ತಾ ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡವರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಚಿವ ಸಂಪುಟದಲ್ಲಿ ಪ್ರಮುಖ ನಿರ್ಧಾರಗಳು

ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಆ ಪೈಕಿ ಪ್ರಮುಖ ನಿರ್ಧಾರಗಳು ಹೀಗಿವೆ…

  • ವಿಮಾನಯಾನ ಕ್ಷೇತ್ರದಲ್ಲಿ ಮತ್ತಷ್ಟು ಪ್ರಗತಿ ಸಾಧಿಸಲು 2012-13ರ ವಿಮಾನಯಾನ ನೀತಿ ತಿದ್ದುಪಡಿಗೆ ಸಮ್ಮತಿ. 2016 ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪಡೆದ ₹ 14,520 ಕೋಟಿ ಮೊತ್ತದ ವಿಮಾನಯಾನ ಉದ್ಯಮದ 33 ಪ್ರಸ್ತಾವನೆಗಳಿಗೆ ಒಪ್ಪಿಗೆ.
  • ರಾಜ್ಯದಲ್ಲಿ ಶೀಘ್ರವೇ 7 ಪ್ಯಾರಾಮೆಡಿಕಲ್ ಶಿಕ್ಷಣ ಸಂಸ್ಥೆಗಳು ತೆರೆಯಲು ಒಪ್ಪಿಗೆ. ಪ್ರತಿ ಸಂಸ್ಥೆಗಳು 320 ಸೀಟುಗಳನ್ನು ಹೊಂದಿದ್ದು, ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ನಿರ್ಧಾರ. ಅಲ್ಲದೆ ರಾಜ್ಯದ ಡ್ರಗ್ಸ್ ನೀತಿಯಲ್ಲಿ ಬದಲಾವಣೆ ಮಾಡುವ ಮೂಲಕ ಕೈಗಾರಿಕೆಗಳ ಪ್ರೋತ್ಸಾಹಕ್ಕೆ ಒಪ್ಪಿಗೆ.
  • ರಾಜ್ಯ ಪೊಲೀಸ್ ಇಲಾಖೆಗೆ 50 ಬಸ್ ಮತ್ತು 200 ಹೊಸ ಹೊಯ್ಸಳ ಮಾದರಿಯ ವಾಹನ ನೀಡಲು ನಿರ್ಧಾರ.
  • ರಾಜಧಾನಿಯಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಬೆಂಗಳೂರು ಮಾಸ್ ರಾಪಿಡ್ ಟ್ರಾನ್ಸ್ ಪೊರ್ಟ್ ಸಿಸ್ಟಮ್ (ಬಿಎಂಆರ್ ಟಿಸಿ) ಅಡಿಯಲ್ಲಿ ನೀಡಲಾದ ಪ್ರಮುಖ ಶಿಫಾರಸ್ಸುಗಳಿಗೆ ಒಪ್ಪಿಗೆ.

ಸಿಂಗೂರಿನಲ್ಲಿ ಟಾಟಾ ನ್ಯಾನೊ ಘಟಕ ಕುರಿತಂತೆ ಸುಪ್ರೀಂ ತೀರ್ಪು

ಟಾಟಾ ಕಂಪನಿಯ ನ್ಯಾನೊ ಕಾರು ಘಟಕ ನಿರ್ಮಾಣಕ್ಕೆ ಪಶ್ಚಿಮ ಬಂಗಾಳ ಸರ್ಕಾರ ರೈತರಿಂದ ಪಡೆದಿದ್ದ ಜಮೀನನ್ನು ಹಿಂತಿರುಗಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚನೆ ನೀಡಿದೆ ಸುಪ್ರೀಂ ಕೋರ್ಟ್. ಇದರೊಂದಿಗೆ ಟಾಟಾ ಕಂಪನಿಗೆ ಭಾರಿ ಹಿನ್ನಡೆ ಉಂಟಾಗಿದೆ.

ಅಲ್ಲದೇ ಎಡಪಂಥೀಯ ಸರ್ಕಾರದ ಈ ನಿಲುವನ್ನು ಆಗ ಪ್ರತಿಪಕ್ಷದಲ್ಲಿ ಪ್ರಖರವಾಗಿ ವಿರೋಧಿಸಿದ್ದ ಈಗಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ನೈತಿಕ ಜಯ ಸಂದಿದೆ.

2006 ರಲ್ಲಿ ಬುದ್ಧದೇವ್ ಭಟ್ಟಾಚಾರ್ಯ ಅವರ ನೇತೃತ್ವದ ಸಿಪಿಎಂ ಸರ್ಕಾರ ಟಾಟಾ ಕಂಪನಿ ₹1 ಲಕ್ಷದ ನ್ಯಾನೋ ಕಾರಿನ ಘಟಕ ಸ್ಥಾಪನೆಗಾಗಿ 997 ಎಕರೆ ಪ್ರದೇಶವನ್ನು ನೀಡುವುದಾಗಿ ಭರವಸೆ ನೀಡಿತ್ತು. ಅದರಂತೆ ಸಿಂಗೂರು ಬಳಿ ರೈತರ ಜಮೀನನ್ನು ವಶಪಡಿಸಿಕೊಂಡು ಟಾಟಾ ಕಂಪನಿಗೆ ನೀಡಲಾಗಿತ್ತು. ಈ ವೇಳೆ ಜಮೀನು ವಶಪಡಿಸಿಕೊಂಡಿದ್ದರ ವಿರುದ್ಧ ಕೆಲವರು ನ್ಯಾಯಾಲಯ ಮೇಟ್ಟಿಲೇರಿದರು.

ಈ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ‘ರೈತರಿಂದ ಜಮೀನು ಪಡೆಯುವಾಗ ಟಾಟಾ ಕಂಪನಿ ನಿಯಮ ಉಲ್ಲಂಘನೆ ಮಾಡಿದೆ. ಪಶ್ಚಿಮ ಬಂಗಾಳ ಸರ್ಕಾರ ಮುಂದಿನ 12 ವಾರಗಳಲ್ಲಿ ರೈತರಿಂದ ವಶಪಡಿಸಿಕೊಂಡಿರುವ ಜಮೀನನ್ನು ವಾಪಸ್ ನೀಡಬೇಕು. ಅಲ್ಲದೆ ಕಳೆದ 10 ವರ್ಷದಿಂದ ಅವರ ಅಮೂಲ್ಯ ಸಮಯವನ್ನು ಹಾಳು ಮಾಡಿದ ಪರಿಣಾಮ ಅವರಿಗೆ ಪರಿಹಾರವಾಗಿ ನೀಡಿದ್ದ ಮೊತ್ತವನ್ನು ಹಿಂಪಡೆಯುವಂತಿಲ್ಲ’ ಎಂದು ತೀರ್ಪು ಪ್ರಕಟಿಸಿದೆ.

ಡಿಎಲ್ಎಫ್ ಭೂ ಹಗರಣ: ನ್ಯಾ.ದಿಂಗ್ರಾ ಸಮಿತಿ ವರದಿ

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ಮಾಲೀಕತ್ವದ ಡಿಎಲ್ಎಫ್ ರಿಯಲ್ ಎಸ್ಟೇಟ್ ಕಂಪನಿಗೆ ಅಕ್ರಮವಾಗಿ ಜಮೀನು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ನಿವೃತ್ತ ನ್ಯಾ.ಎಸ್ಎನ್ ದಿಂಗ್ರಾ ನೇತೃತ್ವದ ಸಮಿತಿ ತನ್ನ ವರದಿ ಸಲ್ಲಿಸಿದೆ.

ಬುಧವಾರ ದಿಂಗ್ರಾ ಅವರು ಹರ್ಯಾಣ ಮುಖ್ಯಮಂತ್ರಿ ಎಂ.ಎಲ್ ಖಟ್ಟರ್ ಅವರಿಗೆ 182 ಪುಟಗಳ ವರದಿಯನ್ನು ಸಲ್ಲಿಸಿದ್ದಾರೆ. ವರದಿಯಲ್ಲಿ ಅಕ್ರಮವಾಗಿ ವಾದ್ರಾ ಅವರ ಕಂಪನಿಗೆ ಜಮೀನು ನೀಡಲಾಗಿದ್ದು, ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ಸಹಕಾರವೂ ಇದೆ ಎಂದು ತಿಳಿಸಲಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ಇನ್ನು ಈ ಪ್ರಕರಣದಲ್ಲಿ ಅಕ್ರಮ ನಡೆದಿರುವ ಬಗ್ಗೆ ದಿಂಗ್ರಾ ಅವರು ನೀಡಿರುವ ಹೇಳಿಕೆ ಹೀಗಿದೆ.. ‘ಈ ಪ್ರಕರಣದಲ್ಲಿ ನಡೆದಿರುವ ಅಕ್ರಮ ಮತ್ತು ಅದರ ಹಿಂದೆ ಇರುವ ವ್ಯಕ್ತಿಗಳನ್ನು ಬೆಳಕಿಗೆ ತಂದಿದ್ದೇನೆ. ಒಂದು ವೇಳೆ ಈ ಪ್ರಕರಣದಲ್ಲಿ ಅಕ್ರಮ ನಡೆಯದಿದ್ದರೆ, ಕೇವಲ ಒಂದು ವಾಕ್ಯದಲ್ಲಿ ವರದಿ ನೀಡುತ್ತಿದ್ದೆ. 182 ಪುಟಗಳ ವರದಿ ನೀಡುತ್ತಿರಲಿಲ್ಲ. ನನ್ನ ವರದಿಯ ಮಾಹಿತಿಯನ್ನು ನಾನು ಬಹಿರಂಗಗೊಳಿಸುವಂತಿಲ್ಲ. ಆದರೆ ಈ ವರದಿ 2 ಭಾಗದಲ್ಲಿದೆ.’

ಮೂಲಗಳ ಮಾಹಿತಿ ಪ್ರಕಾರ, ವರದಿಯಲ್ಲಿ ಹೂಡಾ ಅವರು ಕಾನೂನಿನ ವಿರುದ್ಧವಾಗಿ ಭೂಮಿಯನ್ನು ಮಂಜೂರು ಮಾಡಿದ್ದಾರೆ ಎಂದು ತಿಳಿಸಲಾಗಿದೆ. ಈ ಬಗ್ಗೆ ಹೂಡಾ ಅಸಮಾಧಾನ ವ್ಯಕ್ತಪಡಿಸಿದ್ದು, ಇದೊಂದು ರಾಜಕೀಯ ಪಿತೂರಿಯಾಗಿದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಲದೇ, ನ್ಯಾಯಮೂರ್ತಿ ದಿಂಗ್ರಾ ಅವರ ನೇತೃತ್ವದ ಟ್ರಸ್ಟಿನ ಶಾಲೆಯೊಂದಕ್ಕೆ ಖಟ್ಟರ್ ಸರ್ಕಾರವು ಅಗತ್ಯ ಭೂಮಿ ನೀಡಿರುವುದು ಹಿತಾಸಕ್ತಿಯ ಸಂಘರ್ಷ ಎಂದು ಕಾಂಗ್ರೆಸ್ ವಾದಿಸಿದೆ. ಆದರೆ, ಸಾರ್ವಜನಿಕ ಅನುಕೂಲಕ್ಕೆ ರಸ್ತೆ ಮಾಡಿಕೊಡುವುದು ಸರ್ಕಾರದ ಕರ್ತವ್ಯ ಹಾಗೂ ಇದರಲ್ಲಿ ದಿಂಗ್ರಾ ಅವರಿಗೆ ವೈಯಕ್ತಿಕ ಅನುಕೂಲ ಏನಿಲ್ಲ ಎನ್ನುತ್ತಿದೆ ಬಿಜೆಪಿ.

Leave a Reply