ಅಮೆರಿಕದೆದುರು ಮಾನ ಕಳೆದ ದೆಹಲಿ ಮಳೆ ಎನ್ನದಿರಿ, ಜಾನ್ ಕೆರಿಯ ಹೊಗಳಿಕೆ-ಎಚ್ಚರಿಕೆಗಳಿಗೆ ಗೋಣಾಡಿಸುವ ಮುಂಚೆ ಅಮೆರಿಕದ ವಾಸ್ತವ ಮರೆಯದಿರಿ

ಡಿಜಿಟಲ್ ಕನ್ನಡ ಟೀಮ್:

ನಗರಗಳ ಒಳಚರಂಡಿ ವ್ಯವಸ್ಥೆ ಸರಿಯಾಗಬೇಕು, ಮೂರು ತಾಸು ಮಳೆ ಹೊಯ್ದರೆ ದೆಹಲಿ, ಹೈದರಾಬಾದ್, ಚೆನ್ನೈ, ಬೆಂಗಳೂರಿನಂಥ ಮಹಾನಗರಗಳು ಪ್ರವಾಹ ಸಂತ್ರಸ್ತವಾಗುವುದನ್ನು ತಪ್ಪಿಸುವ ಮುಂಜಾಗ್ರತಾ ಯೋಜನೆಗಳಿರಬೇಕು ಎಂಬುದನ್ನೆಲ್ಲ ಒಪ್ಪೋಣ.

ಆದರೆ ಅಮೆರಿಕ ರಕ್ಷಣಾ ಸಚಿವ ಜಾನ್ ಕೆರ್ರಿ ಮಳೆಯಲ್ಲಿ ಸಿಕ್ಕಿಹಾಕಿಕೊಂಡಿದ್ದು, ಐಐಟಿ ಭಾಷಣದಲ್ಲಿ ‘ನೀವೆಲ್ಲ ಬೋಟು ಮಾಡಿಕೊಂಡು ಇಲ್ಲಿಗೆ ಬಂದಿರಾ’ ಎಂದು ಚಟಾಕಿ ಹಾರಿಸಿದ್ದು ಇವನ್ನೇ ಮುಜುಗರದ ಮಾನದಂಡವಾಗಿಟ್ಟುಕೊಳ್ಳಬೇಕಿಲ್ಲ. ಅದು ಕೇವಲ ಚಟಾಕಿ ಅಷ್ಟೆ. ಅಮೆರಿಕದೆದುರು ಕುಬ್ಜರಾಗಿಬಿಟ್ಟೆವೆಂಬ ಉತ್ಪ್ರೇಕ್ಷಿತ ವ್ಯಾಖ್ಯಾನದ ಅಗತ್ಯವಿಲ್ಲ.

ನಮಗೆ ಗೊತ್ತಿರಬೇಕು. ಇದೇ ಅಮೆರಿಕದ ಲೂಸಿಯಾನವು ಈಗ ಎರಡು ವಾರಗಳ ಹಿಂದೆ ಅತಿವೃಷ್ಟಿಯಿಂದಾಗಿ ಪ್ರವಾಹಕ್ಕೆ ತುತ್ತಾಗಿತ್ತು. ಅಲ್ಲೂ ಬೋಟಿನ ಮೂಲಕ ಹೋಗಬೇಕಾದ ಪರಿಸ್ಥಿತಿಯೇ ಸೃಷ್ಟಿಯಾಗಿದ್ದು. 13 ಮಂದಿ ಪ್ರಾಣ ಕಳೆದುಕೊಂಡಿದ್ದಲ್ಲದೇ, ಮನೆ- ಸಂಪತ್ತುಗಳೆಲ್ಲ ನೀರಿನಲ್ಲಿ ಕೊಚ್ಚಿ ಹೋಗಿ ಸುಮಾರು 30 ಮಿಲಿಯನ್ ಡಾಲರ್ ಗಳ ನಷ್ಟವಾಗಿತ್ತು. ಮೂವತ್ತು ಸಾವಿರ ಮಂದಿಯ ರಕ್ಷಣಾ ಕಾರ್ಯ ನಡೆಯುತ್ತಿದ್ದರೆ ಅಮೆರಿಕ ಅಧ್ಯಕ್ಷ ಒಬಾಮಾ ಮಾತ್ರ ತಮ್ಮ ಪೂರ್ವ ನಿಗದಿತ ರಜಾ ವಿಹಾರದಲ್ಲಿ ಗಾಲ್ಫ್ ಆಡಿಕೊಂಡಿದ್ದರ ಬಗ್ಗೆ ಆಕ್ರೋಶವೂ ವ್ಯಕ್ತವಾಗಿತ್ತು.

lousiana flood

ಇವ್ಯಾವವೂ ನಮ್ಮ ದುರವಸ್ಥೆಗೆ ಸಮರ್ಥನೆಗಳಲ್ಲ. ಆದರೆ ಅಮೆರಿಕವೋ, ಇನ್ಯಾವುದೋ ಪಾಶ್ಚಾತ್ಯ ರಾಷ್ಟ್ರವೋ ಅಲ್ಲಿ ಎಲ್ಲ ಸರಿ ಇದೆ ಅಂತಲೂ ಅಲ್ಲ. ಕಣ್ಣುಚ್ಚಿ ಮಳೆ ಸುರಿದರೆ ಎಲ್ಲ ನಗರಗಳ ಕತೆ ಹೀಗೆಯೇ.

ಇನ್ನು ಕೆಲವು ವಿಷಯಗಳಲ್ಲಿ ಕೆರ್ರಿ ಭಾರತವನ್ನು ಹೊಗಳಿದರು. ಆ ಮೂಲಕ ಬೇರೆಯವರನ್ನು ತೆಗಳುವ ಉದ್ದೇಶವೂ ಅಲ್ಲಿತ್ತು.

– ಸೌತ್ ಚೀನಾ ಸಮುದ್ರದ ಕುರಿತು ಅಂತಾರಾಷ್ಟ್ರೀಯ ಹೇಗ್ ನ್ಯಾಯಾಧಿಕರಣದ ತೀರ್ಪನ್ನು ಚೀನಾ ಒಪ್ಪಿಕೊಳ್ಳುತ್ತಿಲ್ಲ. ಆದರೆ ಇದೇ ನ್ಯಾಯಾಧಿಕರಣ ಭಾರತ ಮತ್ತು ಬಾಂಗ್ಲಾದೇಶದ ಜಲಗಡಿ ವಿಷಯದಲ್ಲಿ ಭಾಂಗ್ಲಾ ಪರವಾಗಿ ತೀರ್ಪು ಕೊಟ್ಟಾಗಲೂ ಭಾರತ ಅದನ್ನು ಸಮಚಿತ್ತದಿಂದ ಒಪ್ಪಿಕೊಂಡಿತು. ಚೀನಾವು ಭಾರತದಿಂದ ಕಲಿಯಬೇಕು ಎಂದರು ಕೆರ್ರಿ.

– ಇಲ್ಲಿನ ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ಎಂಥ ಸ್ಪರ್ಧಾತ್ಮಕತೆ ಇದೆ ಅಂತಂದ್ರೆ, ಇಲ್ಲಿ ಪ್ರವೇಶಾರ್ಹತೆಗೆ ವಿಫಲರಾದವರು ಮಸಾಚುಸೆಟ್ಸ್ ಯುನಿವರ್ಸಿಟಿಯಲ್ಲಿ ಪ್ರವೇಶ ಗಳಿಸಿಕೊಳ್ಳುತ್ತಾರೆ ಅಂತ ಗುಣಮಟ್ಟ ಹೊಗಳಿದರು.

– ಪಾಕಿಸ್ತಾನದ ನೆಲದ ಭಯೋತ್ಪಾದನೆ ಬಗ್ಗೆ ಅಮೆರಿಕವೂ ಭಾರತದ ಕಳವಳಕ್ಕೆ ಜತೆಯಾಗಿ ನಿಂತಿದೆ. ಉಗ್ರವಾದವನ್ನು ಹತ್ತಿಕ್ಕುವುದು ಒಂದು ರಾಷ್ಟ್ರದಿಂದಾಗುವ ಕೆಲಸವಲ್ಲ ಎಂದು ಕೆರ್ರಿ ಹೇಳಿದರು. ತೀರ ಉಬ್ಬುವ ಸಂಗತಿ ಏನಲ್ಲ ಇದು. ಉಗ್ರವಾದವನ್ನು ಹತ್ತಿಕ್ಕುವುದಕ್ಕೆ ಭಾರತಕ್ಕೆ ಅಮೆರಿಕದ ಸಾಥ್ ಸಿಗುತ್ತಿರುವುದಕ್ಕೆ ಸಮಾಧಾನಪಡಬಹುದು. ಆದರೆ ಉಗ್ರವಾದವನ್ನು ಒಂದು ದೇಶ ಹತ್ತಿಕ್ಕಲಾಗದೆನ್ನುವ ಮಾತಿನಂತೆಯೇ ಭಯೋತ್ಪಾದನೆ ಹುಟ್ಟುಹಾಕಿದ್ದಕ್ಕೂ ಕೆಲವು ಮುಸ್ಲಿಂ ರಾಷ್ಟ್ರಗಳನ್ನು ಮಾತ್ರವಲ್ಲದೇ ಅಮೆರಿಕ ನೀತಿಯನ್ನೂ ಮರೆಯುವಂತಿಲ್ಲ.

– ಸ್ವಲ್ಪ ಸಮತೋಲನದ ಮಾತಾಡೋಣ ಎನ್ನುವುದಕ್ಕೋ ಏನೋ ಜಾನ್ ಕೆರ್ರಿ ಅವರು, ‘ಧ್ರುವೀಕರಣಕ್ಕೆ ಜಾಗವಿರಬಾರದು. ಭಾರತದಲ್ಲಾಗಲೀ, ಅಮೆರಿಕದಲ್ಲಾಗಲೀ ಶಾಂತಿಯುತ ಪ್ರತಿರೋಧ ತೋರುವವರನ್ನು ಮಾತಾಡಲು ಬಿಡಬೇಕು. ಅವರು ಜೈಲು ಸೇರುವ ಸ್ಥಿತಿ ಇರಬಾರದು’ ಎಂದರು. ಅಸಹಿಷ್ಣುತಾ ಚರ್ಚೆಯಿಂದ ಆಮ್ನೆಸ್ಟಿವರೆಗೆ ಯಾವುದಕ್ಕಾದರೂ ತಳುಕು ಹಾಕಬೇಕಾದ ಹೇಳಿಕೆ ಇದು. ಕೆರ್ರಿ ಅಭಿಪ್ರಾಯವನ್ನೇನೋ ಕೇಳಿಸಿಕೊಳ್ಳೋಣ. ಆದರೆ, ಅಮೆರಿಕವು ತನ್ನ ಪ್ರಜೆಗಳ ಮೇಲೆಯೇ ಗುಪ್ತಚಾರಿಕೆ ಮಾಡಿದೆ ಎಂಬ ಸತ್ಯವನ್ನು ಅಭಿವ್ಯಕ್ತಿಸಿದ್ದಕ್ಕೆ ಜಾನ್ ಸ್ನೊಡೆನ್ ದೇಶಭ್ರಷ್ಟವಾಗಬೇಕಾಯ್ತಲ್ಲ? ಅಮೆರಿಕಕ್ಕೆ ಕಾಲಿಟ್ಟೊಡನೆ ಜೈಲು ಸೇರುವ ಸ್ಥಿತಿಯೇ ಅವನೆದುರಿದೆಯಲ್ಲ?

– ಭಾರತದ ಅಧಿಕಾರಶಾಹಿ ಸುಧಾರಿಸುವ ಅಗತ್ಯ, ಕಲ್ಲಿದ್ದಿಲಿನಿಂದ ಭಾರತ ಹೊರಬರಬೇಕಿರುವುದು, ನಿಯಂತ್ರಣಗಳು ಸಡಿಲಗೊಳ್ಳಬೇಕಿರುವ ಬಗ್ಗೆ ಮಾತನಾಡಿದರು. ನಿಜ ಇವೆಲ್ಲ ಬದಲಾಗಬೇಕು. ಆದರೆ ಭಾರತದ ಹಿತಾಸಕ್ತಿ ಹಾಗೂ ಶಕ್ತಿಗನುಗುಣವಾಗಿ. ಕಲ್ಲಿದ್ದಲು ಮಾಲಿನ್ಯಕಾರಕ ಎಂಬ ವಾದ ಹೌದಾದರೂ ಏಕಾಏಕಿ ಅದನ್ನು ತೊರೆಯುವುದಕ್ಕೆ ಅಮೆರಿಕಕ್ಕಿರುವ ತೈಲಶಕ್ತಿ ನಮಗಿಲ್ಲ. ಇಷ್ಟಕ್ಕೂ ಜಗತ್ತಿನ ಬಹುಪಾಲು ಇಂಧನವನ್ನು ಅಮೆರಿಕವೇ ದಹಿಸುತ್ತಿದೆ ಎಂಬುದು ಕಡೆಗಣಿಸುವ ಸತ್ಯವೂ ಅಲ್ಲ. ನಿಯಂತ್ರಣ ತೆಗೆಯುವುದು ಎಂದರೆ ಈ ಹಿಂದಿನ ಎನ್ಜಿಒ ಹಿತಾಸಕ್ತಿ ರಾಜ್ಯಭಾರವೂ ಆಗಬೇಕಿಲ್ಲ.

ಜಾನ್ ಕೆರ್ರಿ ಹೊಗಳಿಕೆ, ಎಚ್ಚರಿಕೆ, ಜೋಕುಗಳನ್ನೆಲ್ಲ ಸಾವಧಾನವಾಗಿ ಕೇಳಿಸಿಕೊಳ್ಳುತ್ತಲೇ ನಮಗೆ ಸ್ಪಷ್ಟತೆ ಇರಬೇಕಾದ ವಿಷಯಗಳಿವು.

Leave a Reply