ದೆಹಲಿ- ಹೈದರಾಬಾದುಗಳಲ್ಲಿ ಸಮರ ಘೋಷಿಸಿದ ವರುಣ, ಇದಕ್ಕಿಂತ ಕೆಟ್ಟ ಪ್ರವಾಹದಲ್ಲಿರುವ ಇತರ ರಾಜ್ಯಗಳಿಗೂ ಇರಲಿ ಕರುಣ

 

ಡಿಜಿಟಲ್ ಕನ್ನಡ ಟೀಮ್:

ಅತಿಯಾದ ಮಳೆಯಿಂದಾಗಿ ರಸ್ತೆಗಳೆಲ್ಲಾ ನದಿಯಾದವು, ಮನೆಗೆ ನುಗಿದ್ದ ನೀರು, ದೊಡ್ಡದಾದ ಟ್ರಾಫಿಕ್ ಸಮಸ್ಯೆ… ಇವಿಷ್ಟೂ ಬುಧವಾರ ಸುರಿದ ಮಳೆಯಿಂದಾಗಿ ಬದಲಾದ ದೆಹಲಿಯ ಜನಜೀವನದ ಚಿತ್ರಣ. ಇತ್ತ ಹೈದರಾಬಾದ್ ನಲ್ಲೂ ಪರಿಸ್ಥಿತಿ ಹೀಗೆ ಇದ್ದು, ಗೋಡೆ ಕುಸಿತದಿಂದ 7 ಮಂದಿ ಸಾವನ್ನಪ್ಪಿದ್ದಾರೆ.

ಮೊನ್ನೆ ಸೋಮವಾರವಷ್ಟೇ ಇದೇ ಪರಿಸ್ಥಿತಿ ಕಂಡಿದ್ದ ದೆಹಲಿ ಮತ್ತೆ ಮಳೆಯಿಂದಾಗಿ ಸಮಸ್ಯೆಗೆ ಸಿಲುಕಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾದ ಮಳೆ 9 ಗಂಟೆ ಆಗುವಷ್ಟರಲ್ಲಿ ಅಂದರೆ ಕೇವಲ 2 ತಾಸಿನಲ್ಲಿ ಸಂಪೂರ್ಣ ಚಿತ್ರಣವನ್ನೇ ಬದಲಿಸಿಬಿಟ್ಟಿದೆ. ರಸ್ತೆಯಲ್ಲಿ ನೀರು ನಿಂತಿರುವುದರಿಂದ ಟ್ರಾಫಿಕ್ ಸಮಸ್ಯೆ ದೊಡ್ಡದಾಗಿದೆ. ವಿಮಾನ ಸಂಚಾರ ನಿಧಾನಗೊಂಡಿವೆ. ಜನರು ಸಾಧ್ಯವಾದಷ್ಟು ರಸ್ತೆಯಿಂದ ದೂರವಿರುವಂತೆ ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ದೆಹಲಿ ಮತ್ತು ಹೈದರಾಬಾದ್ ನಲ್ಲಿನ ಪರಿಸ್ಥಿತಿ ಬಗ್ಗೆ ಬೆಳಗ್ಗೆಯಿಂದ ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿ ಬರುತ್ತಲೇ ಇವೆ. ಹೈದರಾಬಾದ್ ನಗರ ಮಧ್ಯದ ಹುಸೇನ್ ಸಾಗರ ಕೆರೆ ತುಂಬಿ ರಸ್ತೆಗಳೆಲ್ಲ ಪ್ರವಾಹ ಎದುರಿಸುತ್ತಿವೆ.

ಭಾರತ ಭೇಟಿಯಲ್ಲಿರುವ ಅಮೆರಿಕ ರಕ್ಷಣಾ ಸಚಿವ ಜಾನ್ ಕೆರಿ, ಮುಂಜಾನೆ ಐಐಟಿ ವಿದ್ಯಾರ್ಥಿಗಳ ಜತೆಗಿನ ಸಭೆಗೆ ಹೊರಟವರು ಮಳೆಯಿಂದಾದ ಸಂಚಾರ ಸಮಸ್ಯೆಗೆ ಸಿಲುಕಿ ತಾಸು ವಿಳಂಬ ಮಾಡಿಕೊಂಡರು. ಅಲ್ಲಿ ಮಾತನಾಡುವಾಗ, ‘ಇಂಥ ಪರಿಸ್ಥಿತಿಯಲ್ಲೂ ನನ್ನ ಭಾಷಣ ಕೇಳಲಿಕ್ಕೆ ಬಂದಿರುವುದಕ್ಕೆ ಧನ್ಯವಾದ. ನೀವೆಲ್ಲ ಬೋಟ್ ಮೇಲೆ ಬಂದಿರಾ’ ಅಂತ ಆಶ್ಚರ್ಯಚಕಿತರಾಗಿ ಕೇಳಿದರು.

ರಾಷ್ಟ್ರೀಯ ವಾಹಿನಿಗಳೇನೋ ಸ್ಥಳೀಯಾಡಳಿತವನ್ನು ಪ್ರಶ್ನಿಸುತ್ತಿವೆ. ಆದರೆ ಈ ಪರಿ ಮಳೆ ಬಂದಾಗ ನಗರಗಳಲ್ಲಿ ಯಾರು ಎಷ್ಟರಮಟ್ಟಿಗೆ ಸಿದ್ಧವಾಗಿರಲು ಸಾಧ್ಯ ಎಂಬ ಪ್ರಶ್ನೆಯಲ್ಲೂ ತರ್ಕವಿದೆ.

ಇವೆಲ್ಲದರ ನಡುವೆ ನಾವು ಗಮನಿಸಬೇಕಿರುವುದು…

ಬೆಂಗಳೂರೂ ಸೇರಿದಂತೆ ಮಹಾನಗರಗಳಲ್ಲಿ ಮಳೆಯಾಗಿ ಜನಜೀವನ ಸಂಕಷ್ಟಕ್ಕೆ ಸಿಲುಕಿದಾಗ ಅದು ರಾಷ್ಟ್ರೀಯ ಚರ್ಚೆಯಾಗುತ್ತದೆ. ಆಗಬೇಕಾದದ್ದೇ. ಆದರೆ ದೆಹಲಿ- ಹೈದರಾಬಾದುಗಳಿಗೆ ಮಿಡಿಯುತ್ತಲೇ ತಿಂಗಳುಗಳಿಂದ ಪ್ರವಾಹದ ನಡುವಲ್ಲೇ ಒದ್ದಾಡುತ್ತಿರುವ ಬಿಹಾರ, ಮಧ್ಯಪ್ರದೇಶ, ಒರಿಸ್ಸಾ ಹಾಗೂ ಮಹಾರಾಷ್ಟ್ರಗಳ ಹಲವು ಪ್ರದೇಶಗಳ ಕುರಿತೂ ಒಂದು ಸಂವೇದನಾತ್ಮಕ ನೋಟ ಹರಿಸಬೇಕಿದೆ.

ಈ ಬಾರಿ ಅತಿಯಾದ ಮಳೆಯಿಂದ ಗಂಗಾ ನದಿ ಉಕ್ಕಿ ಹರಿದಿದೆ. ಪರಿಣಾಮ ಬಿಹಾರ ರಾಜಧಾನಿ ಪಾಟ್ನಾ ಬಹುತೇಕ ಜಲಾವೃತಗೊಂಡಿದೆ. ಇದರೊಂದಿಗೆ 1994ರ ನಂತರ ಅಂದರೆ ಕಳೆದ ಎರಡು ದಶಕಗಳಲ್ಲೇ ಬಿಹಾರದಲ್ಲಿ ಎದುರಾದ ಕೆಟ್ಟ ಪ್ರವಾಹ ಪರಿಸ್ಥಿತಿಯಾಗಿದೆ. ಬಿಹಾರದಲ್ಲಿ ಈವರೆಗೂ ಪ್ರವಾಹಕ್ಕೆ 159 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಬರೋಬ್ಬರಿ 37.53 ಲಕ್ಷ ಜನರ ಬದುಕನ್ನು ಪ್ರವಾಹ ಅಲ್ಲಾಡಿಸಿದೆ. ಬಿಹಾರದ ಈ ಪ್ರವಾಹದ ಪರಿಣಾಮ ನೆರೆಯ ಉತ್ತರ ಪ್ರದೇಶಕ್ಕೂ ತಾಗಿದೆ. ಮಧ್ಯಪ್ರದೇಶಕ್ಕೆ ಪ್ರವಾಹದಿಂದಾಗಿರುವ ನಷ್ಟ ಸುಮಾರು ₹1067 ಕೋಟಿ. ತಮಸ್ ನದಿ ಉಕ್ಕಿದ ಪರಿಣಾಮ ಸುತ್ತಮುತ್ತಲಿನ ಪ್ರದೇಶ ಪ್ರವಾಹಕ್ಕೆ ತತ್ತರಿಸಿದೆ. ಸುಮಾರು 50 ಮಂದಿ ಸತ್ತಿದ್ದಾರೆ. ನೂರಾರು ಹಳ್ಳಿಗಳು ನೀರಿನಲ್ಲಿ ಮುಳುಗಿವೆ. ರೈತರ ಬೆಳೆಗಳು ನಾಶವಾಗಿವೆ. ಸೇತುವೆಗಳು ಮುರಿದು ಕೆಲವು ಹಳ್ಳಿಗಳು ಸಂಪರ್ಕವನ್ನು ಕಳೆದುಕೊಂಡಿವೆ.

ಬಿಹಾರ ಪ್ರವಾಹದಿಂದ ಇಷ್ಟು ದೊಡ್ಡ ಮಟ್ಟದ ಸಮಸ್ಯೆಗೆ ಸಿಲುಕಿದ್ದರೆ, ಈ ಬಗ್ಗೆ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಈಗ ಆಡಳಿತಾರೂಢ ನೀತೀಶರ ಮೈತ್ರಿಯಲ್ಲಿರುವ ಲಾಲು ಪ್ರಸಾದ್ ಯಾದವ್ ಪ್ರತಿಕ್ರಿಯಿಸಿದ್ದಾದರೂ ಹೇಗೆ? ‘ಪವಿತ್ರ ಗಂಗೆಯೇ ನಿಮ್ಮ ಮನೆಯ ಬಾಗಿಲಿಗೆ ಬಂದಿದ್ದಾಳೆ. ಗಂಗೆಯೇ ನಿಮ್ಮ ಮನೆಗೆ ಬರುವುದು ಎಂದರೆ ಸಾಮಾನ್ಯವಾದುದಲ್ಲ. ನೀವು ಅದೃಷ್ಟ ಮಾಡಿರಬೇಕು. ಅದಕ್ಕಾಗಿ ಖುಷಿಪಡಿ’. ಲಾಲು ಒಬ್ಬ ಜೋಕರ್ ಅಂತ ಗೊತ್ತು. ಆದರೆ ಪ್ರವಾಹದ ಯಾತನೆಯಲ್ಲಿರುವವರಿಗೆ ಇಷ್ಟು ಅಮಾನವೀಯ ಮಾತಿನ ಬರೆಯೇ? ಎಲ್ಲಿ ಹೋಯಿತು ಈ ಕುರಿತ ‘ಸೆಕ್ಯುಲರ್ ಆಕ್ರೋಶ’?

ದೆಹಲಿ ಮಹಾಮಳೆಯಲ್ಲಿ ಮುಳುಗಿರುವ ದೃಶ್ಯವನ್ನು ವಾಹಿನಿಗಳಲ್ಲಿ ದಿನವಿಡೀ ಕಾಣುತ್ತೇವೆ. ಆದರೆ ಇದೇ ಸಮಯದಲ್ಲಿ, ಇದಕ್ಕಿಂತ ಕೆಟ್ಟ ಸ್ಥಿತಿಯಲ್ಲಿ ನರಳುತ್ತಿರುವ ರಾಜ್ಯಗಳ ಕುರಿತು ಸಂತಾಪವಿರಲಿ. ಮರುಕಕ್ಕಿಂತ ಹೆಚ್ಚಿನದನ್ನು ನಾವು ಇನ್ನೇನು ತಾನೇ ಮಾಡಲಾದೀತು?

ಬಿಹಾರ ಪ್ರವಾಹದ ಪರಿಸ್ಥಿತಿಯನ್ನು ಈ ಚಿತ್ರದಲ್ಲಿ ನೋಡಬಹುದು

bihar flood 1

ಮಧ್ಯಪ್ರದೇಶದ ಪ್ರವಾಹದ ಚಿತ್ರಣ ಇಲ್ಲಿ ನೋಡಿ…

mp flood

Leave a Reply