ಬೇಡ ಮಕ್ಕಳ ಚೆಲ್ಲು ವರ್ತನೆಯ ವೈಭವೀಕರಣ, ಬೇಕಿರೋದು ದಿನನಿತ್ಯದ ಸಂವಹನ

author-geetha‘ನೀವು ಕೌನ್ಸಲಿಂಗ್ ಮಾಡ್ತೀರಾ?’

‘ಅಂದ್ರೆ?’

‘ಅಂದರೆ ಕಷ್ಟದಲ್ಲಿ ಇರುವವರಿಗೆ ಧೈರ್ಯ ತುಂಬುವುದು, ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದು…’

‘ಓ.. ಇಲ್ಲ.. ಹಾಗೇನು ಮಾಡೋಲ್ಲ. ನಂಗೆ ಏನು ಮಹಾ ಗೊತ್ತು ಅಂತ ಪರಿಹಾರ ಹೇಳಲು ಹೋಗಲಿ? ಜೊತೆಗೆ ನನ್ನ ಯಾಕೆ ಕೇಳುತ್ತಾರೆ?’

‘ಅಲ್ಲಾ.. ಈಗ ನಾನೇ ಕೇಳಿದೆ ಅಂತ ಇಟ್ಕೊಳಿ…’

‘ನಿನಗೇನು ಸಮಸ್ಯೆ?’

ಎದುರು ಮನೆ ಹುಡುಗ, ಈಗಿನ್ನೂ ಏಳನೇ ಕ್ಲಾಸೋ ಎಂಟನೇ ಕ್ಲಾಸೋ… ಅಂಗೈಲಿ ಇಟ್ಟುಕೊಂಡು ಮುಂಗೈಲಿ ಮುಚ್ಚಿಕೊಂಡು ಮುಚ್ಚಟೆಯಿಂದ ಬೆಳೆಸುತ್ತಿರುವ ಅಪ್ಪ, ಅಮ್ಮ. ಮನೆಯಲ್ಲಿ ಇರುವ ಅಜ್ಜಿ. ನಾನು ನೋಡಿದ ಹಾಗೆ ಸುಸಂಸ್ಕೃತ ಕುಟುಂಬ. ನನ್ನ ಬಳಿ ಇರುವ ಪುಸ್ತಕ ಅಥವಾ ನಿಯತಕಾಲಿಕೆಗಳನ್ನು ಅಜ್ಜಿಗೆ ಓದಲು ತೆಗೆದುಕೊಂಡು ಹೋಗುವುದು, ಓದಿಯಾದ ಮೇಲೆ ಹಿಂತಿರುಗಿಸುವುದು ಅವನ ಕೆಲಸ. ಆಗ ನನ್ನೊಂದಿಗೆ ಕೊಂಚ ಹರಟೆ. ಚಾಕೊಲೇಟ್ ಕೊಟ್ಟರೆ ಒಂದು ಥ್ಯಾಂಕ್ಸೂ…

ಆದರೆ ಇಂದು ಕೌನ್ಸಲಿಂಗ್ ಬಗ್ಗೆ ವಿಚಾರಿಸಿದ್ದು ಅಚ್ಚರಿ ಎನ್ನಿಸಿತು. ಡೈರೆಕ್ಟಾಗಿ ‘ನಿನಗೇನು ಸಮಸ್ಯೆ?’ ಎಂದು ಪ್ರಶ್ನಿಸಿದಕ್ಕೆ ಅವನು ಹುಷಾರಾದ. ‘ಏನಿಲ್ಲ… ಮ್ಯಾಗಜೀನ್ ಇಟ್ಟಿದ್ದೇನೆ’ ಎಂದು ಹೇಳಿ ಹೊರಡಲು ಅನುವಾದ.

‘ಇರು.. ಚಾಕೊಲೇಟ್ ಇರಬೇಕು ಕೊಡ್ತೀನಿ..’ ಒಳಗೆ ಹೋಗಿ, ಹುಡುಕಿ ಚಾಕೊಲೇಟ್ ಹಿಡಿದು ಬಂದೆ.

‘ನೀವು ಟಿ.ವಿ ನೋಡಲ್ವಾ?’ ಅವನ ಪ್ರಶ್ನೆ.

‘ಇಲ್ಲ… ರಾತ್ರಿ ಒಮ್ಮೆ ನ್ಯೂಸ್ ನೋಡ್ತೀನಿ ಅಷ್ಟೇ ಯಾಕೆ?’

‘ಕಳೆದ ವಾರ ಓಡಿಹೋಗಿ, ಮೊನ್ನೆ ಹುಬ್ಬಳಿಯಲ್ಲಿ ಸಿಕ್ಕಿದಳಲ್ಲ… ಪೂಜಿತಾ.. ಅವಳ ಸಂದರ್ಶನ ಬರ್ತಾ ಇತ್ತು ಟಿ.ವಿಯಲ್ಲಿ. ಅಜ್ಜಿ ನೋಡ್ತಾ ಇದ್ರು. ಎಲ್ರೂ ಅವಳ್ನ ಜಾಣೆ, ಲೆಕ್ಕಾಚಾರ ಬಲ್ಲವಳು ಅಂತೆಲ್ಲಾ ಹೊಗಳ್ತಾ ಇದ್ರು… ಟಿವಿಯ ನಿರೂಪಕ ಎಷ್ಟೊಂದು ಪ್ರೀತಿಯಿಂದ ಮಾತಾಡಿಸ್ತಾ ಇದ್ದ. ಅವಳ ಚಿಕ್ಕಪ್ಪ ಅಂತೆ. ಅವಳ್ನ ತಬ್ಬಿ ಮುದ್ದು ಮಾಡಿದ್ರು…’

‘ಮತ್ತೇನು ಹೇಳಿದ್ಲು?’

‘ಅವಳಿಗೆ ಬೇಸರವಾಗಿತ್ತಂತೆ… ಬ್ರೇಕ್ ಬೇಕಿತ್ತಂತೆ ಅದಕ್ಕೆ ಹೋದಳಂತೆ… ಈಗ ವಾಪಸ್ ಬಂದಳಂತೆ. ಅವಳ ಪೇರೆಂಟ್ಸ್ ಗೆ ಬುದ್ಧಿ ಬಂದಿದೆಯಂತೆ. ಮ್ಯಾಥ್ಸ್ ಓದು ಅಂತ ಬಲವಂತ ಮಾಡುವುದಿಲ್ಲವಂತೆ… ಅವಳಿಗೆ ಬೇಕಾದ ಹಾಗೆ ಇರಬಹುದಂತೆ… ಅವಳಿಗೆ ಸಿಕ್ಕ ಜನರೆಲ್ಲಾ ತುಂಬಾ ಒಳ್ಳೆಯವರಂತೆ… ಟ್ರೈನಿನಲ್ಲಿ ಸಂಪಾದನೆ ಬೇರೆ ಮಾಡಿದಳಂತೆ… ನನಗೂ ಮನೆ ಬಿಟ್ಟು ಹೋಗಬೇಕು ಅನ್ನಿಸ್ತಾ ಇದೆ.. ಆದರೆ ಹೆದರಿಕೆ… ನನ್ನ ಬಳಿ ಸಾವಿರದ ಮುನ್ನೂರು ರುಪಾಯಿ ಇದೆ.’

ಅವನು ಹೇಳುತ್ತಾ ಹೋದ… ನಾನು ಕೇಳುತ್ತಾ ನಿಂತೆ.

ಯಾರ ತಪ್ಪು? ಯಾರು ಯಾರಿಗೆ ಪಾಠ ಕಲಿಸುತ್ತಿದ್ದಾರೆ? ಮಕ್ಕಳು ಓಡಿ ಹೋಗಿ, ಬುದ್ಧಿ ಹೇಳುವ ಅಪ್ಪ ಅಮ್ಮನಿಗೆ ಪಾಠ ಕಲಿಸುತ್ತಾರೆಯೇ? ಅದನ್ನು ಸುದ್ದಿ ವಾಹಿನಿಯೊಂದು ‘ಜಾಣ ಹುಡುಗಿ’ ಎಂದು ಎಂಟು ನಿಮಿಷದ ಸಂದರ್ಶನ ಪ್ರಸಾರ ಮಾಡಿದರೆ? ನೋಡುಗರ ಮೇಲೆ ಎಂತಹ ಪರಿಣಾಮ ಬೀರಬಹುದು?

ಮನೆಯಿಂದ ಓಡಿಹೋಗುವುದು, ಸ್ಪೀಡಾಗಿ ಬೈಕ್ ಓಡಿಸುವುದು, ಕೆಟ್ಟ ಕೊಳಕು ಭಾಷೆ ಉಪಯೋಗಿಸುವುದು, ಸಿಗರೇಟ್ ಸೇದುವುದು, ಹುಕ್ಕಾ ಸೇದುವುದು, ಕುಡಿಯುವುದು, ಪಬ್ಲಿಕ್ ನಲ್ಲಿ ದಾಂಧಲೆ ಎಬ್ಬಿಸುವುದು. ಎಲ್ಲಾ ‘ಕೂಲ್ ಥಿಂಗ್ಸ್ ಟು ಡು’ ಎಂಬಂತೆ ವಾಹಿನಿಯಲ್ಲಿ ಬಿಂಬಿಸಿದರೆ, ಅವನ್ನು ಜವಾಬ್ದಾರಿಯುತ ಮಿಡಿಯಾ ಎಂದು ಕರೆಯಲು ಸಾಧ್ಯವೇ?

ಜವಾಬ್ದಾರಿ ಅರಿತು ನಡೆಯುವುದು, ಹಿರಿಯರ ಮಾತು ಕೇಳುವುದು, ಓದಿನಲ್ಲಿ ಆಸಕ್ತಿ ಇರುವುದು, ಗಂಭೀರವಾಗಿ ಇರುವುದು… ಎಲ್ಲಾ ‘Not so cool’ things!

ಇಂದಿನ ಸಮಸ್ಯೆ ಏನು ಎಂದು ಯಾರೂ ಚರ್ಚಿಸಲು, ಮಂಥಿಸಲು ಸಿದ್ಧರಿಲ್ಲ. ಅವರವರ ಮೂಗಿನ ನೇರಕ್ಕೆ ಯೋಚಿಸಿ ಸಮಸ್ಯೆಗೆ ಕಾರಣ ‘ಇದೇ’ ಎಂದು ಡಂಗೂರ ಸಾರಲು ಎಲ್ಲರೂ ಸಿದ್ಧ.

‘ಒಟ್ಟು ಕುಟುಂಬ ನಶಿಸುತ್ತಿರುವುದೇ ಮಕ್ಕಳು ಓಡಿಹೋಗಲು ಕಾರಣ… ಈ ಸಣ್ಣ ಕುಟುಂಬಗಳಲ್ಲಿ ಮಕ್ಕಳು ಅನಾಥ ಭಾವದಿಂದ ನರಳುತ್ತಿದ್ದಾರೆ.’

ಮನೆ ತುಂಬಾ ಮಕ್ಕಳಿದ್ದಾಗ ಈ ತಾಪತ್ರಯ ಇರಲಿಲ್ಲ. ಈಗ ಒಂದೋ ಎರಡೋ ಮಕ್ಕಳು. ಹಾಗಾಗಿ ಒತ್ತಡ ಹೆಚ್ಚು.

‘ಹೆಣ್ಣು ತಾಯಿಯಾಗಿ ಮನೆಯಲ್ಲಿ ಇರಬೇಕು. ಅದು ಬಿಟ್ಟು ಅವಳೂ ಹೊರಗೆ ದುಡಿಯಲು ಹೋಗಿ ಮಕ್ಕಳಿಗೆ ಕೊಡಬೇಕಾದ ಗಮನ ಕೊಡುತ್ತಿಲ್ಲ… ಅದಕ್ಕೆ ಮಕ್ಕಳು ಓಡಿಹೋಗುತ್ತಾರೆ.’

‘ಓದಬೇಕು… ಸಾಧಿಸಬೇಕು ಎಂಬ ಪ್ರೆಶರ್ ಹೆಚ್ಚು ಈಗ. ಮಕ್ಕಳಿಗೆ ಕಷ್ಟವಾಗಿ ಓಡಿಹೋಗುತ್ತಾರೆ.’

‘ಸ್ಕೂಲಲ್ಲಿ ಫೀಸು ಮನಬಂದಂತೆ ತೊಗೊತ್ತಾರೆ… ಆದರೆ, ಮಕ್ಕಳಿಗೆ ಏನು ಬೇಕು, ಅವರ interests ಏನು? ಅವರು ಯಾವುದರಲ್ಲಿ ನಿಪುಣರು ಎಂದು ಗುರುತಿಸುವುದೇ ಇಲ್ಲ.’

‘ಸಿನಿಮಾ, ಟಿ.ವಿ, ಕಾರ್ಯಕ್ರಮಗಳು ಫೇಸ್ ಬುಕ್, ವಾಟ್ಸ್ ಅಪ್… ಮಕ್ಕಳಿಗೆ distractions ಜಾಸ್ತಿ…’

‘ಕೇಳಿದ್ದು, ಕೇಳದ್ದು ಎಲ್ಲಾ ಕೊಡಿಸುತ್ತಾರೆ ಈಗಿನ ಅಪ್ಪಅಮ್ಮಂದಿರು. ‘ನೋ’ ಅನ್ನೋ ಪದವೇ ಕೇಳಿಲ್ಲ ಮಕ್ಕಳು… ಹಾಗಾಗಿ ಯಾವುದಕ್ಕಾದರೂ ‘ನೋ’ ಎಂದರೆ ಅದನ್ನು ತೆಗೆದುಕೊಳ್ಳುವ, ಒಪ್ಪಿಕೊಳ್ಳುವ ಮನಃಸ್ಥಿತಿಯೇ ಇಲ್ಲ.’

‘ನಮ್ಮ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸಿಕೊಡುವುದರಲ್ಲಿ ಸೋತಿದ್ದೇವೆ. ಹೀಗಾಗಿ ಈ ಪರಿಸ್ಥಿತಿ…’

ಓದುತ್ತಾ, ಕೇಳುತ್ತಾ ಹೋದರೆ ಸುಸ್ತು. ಮಕ್ಕಳು ಏಕೆ ಓಡಿಹೋಗುತ್ತಾರೆ.. ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಎಂಬುದಕ್ಕೆ ‘ಇದು’ ಕಾರಣ ಎಂದು pinpoint ಮಾಡುವ ಹಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ತಂದೆ ತಾಯಂದಿರೆಲ್ಲಾ ಎಚ್ಚರವಹಿಸಬಹುದಿತ್ತು.

‘ಓದು’ ’ಸಾಧಿಸು’ ಎಂದೆಲ್ಲಾ ಹುರಿದುಂಬಿಸಿದರೆ pressure (ಒತ್ತಡ) ಹೆಚ್ಚಾಯಿತು ಎಂದು ಓಡಿಹೋಗುತ್ತಾರೆ. ‘ನಿಂಗೆ ಬೇಕಾದ್ದು ಮಾಡು’ ಎಂದು ಬಿಟ್ಟರೆ care ಇಲ್ಲ… ಪ್ರೀತಿ ಇಲ್ಲ… ನಿರ್ಲಕ್ಷ್ಯ.. ಎಂದು ಓಡಿ ಹೋಗುತ್ತಾರೆ. ಮಾಡುವುದೇನು ?

‘Bringing up children is one thing for which there are no rule book or guide book for success’

ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದಕ್ಕೆ ಒಂದು guide book ಇಲ್ಲ.. ನಿಯಮಾವಳಿಗಳು ಇಲ್ಲ. ಪ್ರತೀ ಮಗುವಿನ ವ್ಯಕ್ತಿತ್ವ ಬೇರೆ. ಒಂದೇ ಮನೆಯಲ್ಲಿ ಬೆಳೆಯುವ ಮಕ್ಕಳು, heredity & environment ಒಂದೇ ಇದ್ದರೂ ಅವರ ವ್ಯಕ್ತಿತ್ವ ಬೇರೆ ಇರುತ್ತದೆ. ಅವರು ಸ್ಪಂಧಿಸುವ ರೀತಿ, ವ್ಯವಹರಿಸುವ ರೀತಿ ಬೇರೆ ಇರುತ್ತದೆ.

ಇಷ್ಟೆಲ್ಲಾ ಹೇಳಿ, ಒಂದು ಜೆನರಲ್ ರೂಲ್ ಹೇಳಬಹುದೆಂದರೆ ಮಕ್ಕಳೊಂದಿಗೆ ಸಂವಹನ ಸದಾ ಜಾರಿಯಲ್ಲಿ ಇರಬೇಕು. Communications & Observation  ಬಹಳ ಮುಖ್ಯ. ನಾವು ನಮ್ಮ ತೀರದ ಬಯಕೆಗಳನ್ನು ಮಕ್ಕಳ ಮೂಲಕ ಈಡೇರಿಸಿಕೊಳ್ಳಬೇಕು ಎಂಬುದನ್ನು ಬಿಟ್ಟು ಅವರಿಗೆ ಏನು ಬೇಕು… ಅವರಿಗೆ ಬೇಕಾದ್ದು ಮಾಡಲು ಸಾಧ್ಯವಿದೆಯೇ… ಇಲ್ಲದಿದ್ದರೆ ಅದು ಹೇಗೆ ಸಾಧ್ಯವಿಲ್ಲ ಎಂದು ವಿವರಿಸಿ… ಹೇಳಲು ನಮಗೆ ಸಾಧ್ಯವೇ ಎಂದು ನೋಡಬೇಕು.

Practical ಅಲ್ಲದ, ಅಸಾಧ್ಯವಾದ ಗುರಿಗಳನ್ನು ಮಕ್ಕಳು ಇಟ್ಟುಕೊಂಡಿದ್ದರೆ, ವಾಸ್ತವತೆಯ ಅರಿವು ಮೂಡಿಸುವುದು ಕೂಡ ತಂದೆ ತಾಯಿಯ ಕರ್ತವ್ಯವಾಗುತ್ತದೆ.

ಪಬ್ಲಿಕ್ ಗೆ ಇರುವ ಮಾಧ್ಯಮಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು. ನಮ್ಮ ಆಸೆ, ಕೋಪ, ನಿರಾಸೆ, ಹತಾಶೆ ಮಕ್ಕಳಿಗೆ ಅರಿವಾಗದಂತೆ ಮುಚ್ಚಿಕೊಂಡು ಅವರುಗಳು ತಮ್ಮ ಆಸೆ, ಅಭಿಲಾಷೆ, ತೊಳಲಾಟ ನಮ್ಮಲ್ಲಿ ಹೇಳಿಕೊಳ್ಳುವಂತ ಪರಿಸ್ಥಿತಿ ಮನೆಯಲ್ಲಿ ಇಟ್ಟುಕೊಳ್ಳಬೇಕು. Values ಮುಖ್ಯ ಎಂಬ ಅರಿವು ಮಕ್ಕಳಲ್ಲಿ ಇರಬೇಕು ಎಂದರೆ ನಮ್ಮಲ್ಲಿ ಅದು ಇರಬೇಕು.

ಇಷ್ಟೆಲ್ಲಾ ಹೇಳಿದರೂ, ಬರೆದರೂ ಕೊನೆಯ line ಅದೇ… ‘ಸಂವಹನ (communications) ಮುಖ್ಯ… ಮತ್ತು there are not fast and sure guidelines in bringing up a child…!’

Leave a Reply