ಯೋಗೇಶ್ವರ್ ಬೆಳ್ಳಿ ಪದಕ ಬೇಡ ಎಂದಿದ್ದೇಕೆ? ಮಾನವೀಯ ಮಿಡಿತದ ಮೂಲಕ ಹೃದಯ ಗೆದ್ದ ಭಾರತದ ಕುಸ್ತಿ ಕುವರ!

ಡಿಜಿಟಲ್ ಕನ್ನಡ ಟೀಮ್:

ಲಂಡನ್ ಒಲಿಂಪಿಕ್ಸ್ ನಲ್ಲಿ ಭಾರತದ ಕುಸ್ತಿಪಟು ಯೋಗೇಶ್ವರ್ ದತ್ ಗೆದ್ದ ಕಂಚಿನ ಪದಕ ಈಗ ಬೆಳ್ಳಿ ಪದಕವಾಗ್ತಿದೆ ಎಂಬ ಖುಷಿಯಲ್ಲಿ ದೇಶದ ಕ್ರೀಡಾಭಿಮಾನಿಗಳು ತೇಲುತ್ತಿರುವಾಗಲೇ, ಯೋಗೇಶ್ವರ್ ದತ್ ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದಾರೆ. ಅದೇನಂದ್ರೆ, ‘ಈಗ ತನಗೆ ಬರಲಿರುವ ಬೆಳ್ಳಿ ಪದಕವನ್ನು ನಾನು ಪಡೆಯುವುದಿಲ್ಲ, ಅದು ರಷ್ಯಾ ಆಟಗಾರ ಬೆಸಿಕ್ ಕೊಡುಖೊವ್ ಕುಟುಂಬದ ಬಳಿಯೇ ಇರಲಿ’ ಎಂದು.
ಅರೆ, ಯೋಗೇಶ್ವರ್ ದತ್ ಬೆಳ್ಳಿ ಪದಕ ಬೇಡ ಅಂದ್ರಾ? ಯಾಕೆ? ಎಂಬ ಪ್ರಶ್ನೆಗಳು ನಿಮ್ಮನ್ನು ಸಹಜವಾಗಿಯೇ ಕಾಡುತ್ತದೆ. ಅದಕ್ಕೆ ಸಿಂಪಲ್ಲಾದ ಉತ್ತರ ಹೌದು ಎಂದಾದರೂ ಯೋಗೇಶ್ವರ್ ದತ್ ಅವರ ಈ ನಿರ್ಧಾರದ ಹಿಂದಿನ ಕಾರಣ ನಿಜಕ್ಕೂ ಗಮನಾರ್ಹ.

2012 ರ ಲಂಡನ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ರಷ್ಯಾದ ಬೆಸಿಕ್ ಕೊಡುಖೊವ್ ಈಗ ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದ ಹಿನ್ನೆಲೆಯಲ್ಲಿ ಯೋಗೇಶ್ವರ್ ದತ್ ಅವರಿಗೆ ಬೆಳ್ಳಿ ಪ್ರಾಪ್ತಿಯಾಗುತ್ತಿತ್ತು.

ತಾನು ಗೆದ್ದ ಕಂಚಿನ ಪದಕ ಬೆಳ್ಳಿಯಾಗುತ್ತಿರುವ ಸುದ್ದಿ ಬಂದ ನಂತರ ಯೋಗೇಶ್ವರ್ ದತ್, ‘ಅದೃಷ್ಟ ಏನು ಬರೆದಿರುತ್ತೊ ಅದೇ ನಡೆಯುತ್ತದೆ. ಭಾರತಕ್ಕಿದು ಮತ್ತೊಂದು ಜಯ’ ಎಂದು ಸಂತಸ ವ್ಯಕ್ತಪಡಿಸಿದ್ರು. ಈ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ನಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಒಪ್ಪಿಕೊಂಡಿದ್ದ ಯೋಗಿ, ‘ಈ ಪದಕ ಭಾರತೀಯ ಜನರಿಗೆ ಸಲ್ಲಬೇಕು’ ಎಂದು ಟ್ವಿಟರ್ ಮೂಲಕ ಹೇಳಿದ್ದರು.

ಆದರೆ ಬುಧವಾರ ಯೋಗೇಶ್ವರ್ ದತ್ ಅವರ ನಿರ್ಧಾರ ಬದಲಾಗಿದೆ. ಕಾರಣ, ರಷ್ಯ ಕ್ರೀಡಾಪಟುವಿನ ಹಿನ್ನೆಲೆ ತಿಳಿಯುತ್ತಲೇ ಇವರ ಮನ ಕರಗಿದೆ.

ಡೋಪಿಂಗ್ ಮರು ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದಿರುವ ರಷ್ಯಾ ಕುಸ್ತಿಪಟು ಬೆಸಿಕ್ ಈಗ ಜೀವಂತವಾಗಿಲ್ಲ. ಲಂಡನ್ ಒಲಿಂಪಿಕ್ಸ್ ನಡೆದ ಮರು ವರ್ಷವೇ ಅಂದರೆ, 2013 ರಲ್ಲೇ ಬೆಸಿಕ್ ಕಾರು ಅಪಘಾತದಲ್ಲಿ ಮರಣ ಹೊಂದಿದ್ದಾರೆ. ಈಗಾಗಲೇ ಬೆಸಿಕ್ ನನ್ನು ಕಳೆದುಕೊಂಡು ಮನನೊಂದಿರುವ ಆತನ ಕುಟುಂಬಕ್ಕೆ ಈ ಪ್ರಕರಣ ಮತ್ತಷ್ಟು ನೋವು ನೀಡಲಿದೆ. ಇದು ಆಗಬಾರದೆಂಬ ಕಾರಣಕ್ಕೆ ಯೋಗೇಶ್ವರ್ ದತ್ ತಮಗೆ ಬರಬೇಕಿದ್ದ ಬೆಳ್ಳಿ ಪದಕವನ್ನು ಬೆಸಿಕ್ ಕುಟುಂಬದವರೆ ಇಟ್ಟುಕೊಳ್ಳಲಿ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.

ತಮ್ಮ ಈ ನಿರ್ಧಾರದ ಬಗ್ಗೆ ಯೋಗೇಶ್ವರ್ ದತ್ ಬುಧವಾರ ಟ್ವಿಟರ್ ನಲ್ಲಿ ಹೇಳಿರೋದಿಷ್ಟು…

‘ಬೆಸಿಕ್ ಒಬ್ಬ ಅತ್ಯುತ್ತಮ ಕುಸ್ತಿಪಟು. ಆತನ ಮರಣದ ನಂತರ ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರೋದು ಬೇಸರದ ಸಂಗತಿ. ಒಬ್ಬ ಕುಸ್ತಿಪಟುವಾಗಿ ಆತನನ್ನು ಗೌರವಿಸುತ್ತೇನೆ. ಒಂದು ವೇಳೆ ಅವಕಾಶವಿದ್ದರೆ, ಪದಕ ಆತನ ಬಳಿಯೇ ಇರಬೇಕು. ಅದು ಆತನ ಕುಟುಂಬಕ್ಕೆ ನೀಡುವ ಗೌರವ. ನನ್ನ ಪ್ರಕಾರ ಮಾನವೀಯತೆ ಎಲ್ಲಕ್ಕಿಂತ ದೊಡ್ಡದು.’

twitter

ಹೌದು, ಯೋಗೇಶ್ವರ್ ದತ್ ಅವರ ಈ ನಿರ್ಧಾರದ ಹಿಂದೆ ಇರೋದು ಇದೇ ಮಾನವೀಯತೆ. ನಾಲ್ಕು ಬಾರಿ ವಿಶ್ವ ಚಾಂಪಿಯನ್, 2 ಬಾರಿ ಒಲಿಂಪಿಕ್ಸ್ ಪದಕ ವಿಜೇತನಾಗಿರುವ ಬೆಸಿಕ್ ಈಗ ಡೋಪಿಂಗ್ ಪರೀಕ್ಷೆಯಲ್ಲಿ ತಪ್ಪು ಮಾಡಿರುವುದಾಗಿ ತಿಳಿದು ಬಂದಿದೆ. ಆದರೆ, ಅದಕ್ಕೆ ಸ್ಪಷ್ಟನೆ ನೀಡಬೇಕಿರೊ ಬೆಸಿಕ್ ಜೀವಂತವಾಗಿಲ್ಲ. ಹೀಗಾಗಿ ಆತನ ಕುಟುಂಬದ ಬಳಿಯೇ ಆ ಪದಕವಿರಲಿ ಎಂಬುದು ಯೋಗೇಶ್ವರ್ ಆಶಯ. ಅಂತಾರಾಷ್ಟ್ರೀಯ ನಿಯಮ ಪ್ರಕಾರ ಯೋಗೇಶ್ವರ್ ಮಾತು ಒಪ್ಪುವಂಥದ್ದೋ, ಅಲ್ಲವೋ ಬೇರೆ ವಿಚಾರ. ಆದರೆ ಈ ಮೂಲಕ ತಮ್ಮ ಬಂಗಾರದ ಮನಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ ಯೋಗೇಶ್ವರ್.

ಯೋಗೇಶ್ವರ್ ಅವರ ಈ ನಿರ್ಧಾರ ಎಲ್ಲರ ಹುಬ್ಬೇರಿಸುವುದರ ಜತೆಗೆ ಆತನ ವ್ಯಕ್ತಿತ್ವವನ್ನು ಸಾಬೀತುಪಡಿಸಿದೆ. ಒಬ್ಬ ಕ್ರೀಡಾಪಟು ಎಷ್ಟು ಪಂದ್ಯ ಗೆಲ್ಲುತ್ತಾನೆ ಎಂಬುದು ಎಷ್ಟು ಮುಖ್ಯವೋ, ಅದೇ ರೀತಿ ಆತ ಕ್ರೀಡಾ ಮನೋಭಾವ ಹೇಗೆ ಮೆರೆಯುತ್ತಾನೆ ಎಂಬುದು ಮುಖ್ಯವಾಗುತ್ತದೆ. ಇದೇ ಕಾರಣಕ್ಕಾಗಿಯೇ ಯೋಗೇಶ್ವರ್ ಒಬ್ಬ ಚಾಂಪಿಯನ್ ಆಟಗಾರನಾಗಿ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿ ನಿಂತಿರೋದು.

Leave a Reply