ಭಾರತ ಬಂದ್, ಎತ್ತಿನಹೊಳೆ 3 ಕಾಮಗಾರಿ ಪ್ಯಾಕೇಜ್ ಪೂರ್ಣ, ಕಾಮಕಾಂಡದಿಂದ ಅಮಾನತಾದ ಆಪ್ ಸಚಿವನ ದಲಿತ ಕಾರ್ಡ್, ಭಾರತದ ಸುದ್ದಿ ವಾಹಿನಿಗಳಿಗೆ ಪಾಕ್ ನಿರ್ಬಂಧ

Students from various schools and colleges participate to in awareness campaign to promote eco friendly clay Ganesha idols, at Govt.High school, Malleshwaram in Bengaluru on Thursday.

ಮಲ್ಲೇಶ್ವರಂನ ಹೈಸ್ಕೂಲು ವಿದ್ಯಾರ್ಥಿಗಳು ಈ ಬಾರಿಯ ಗಣೇಶೋತ್ಸವಕ್ಕೆ ಪರಿಸರ ಸ್ನೇಹಿ ಮಣ್ಣಿನ ಗಣಪನ ಬಳಕೆಗೆ ಜಾಗೃತಿ ಮೂಡಿಸಿದ ಕ್ಷಣ..

ಡಿಜಿಟಲ್ ಕನ್ನಡ ಟೀಮ್

ನಾಳೆ ಭಾರತ ಬಂದ್: ಏನು ಸಿಗತ್ತೆ, ಏನು ಸಿಗಲ್ಲ

ವಿವಿಧ ಬೆಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ದೇಶದಾದ್ಯಂತ ಕಾರ್ಮಿಕ ಸಂಘಟನೆಗಳು ಶುಕ್ರವಾರ ಬಂದ್ ಗೆ ಕರೆ ನೀಡಿವೆ. ಅದರೊಂದಿಗೆ ಶುಕ್ರವಾರ ದೇಶದಾದ್ಯಂತ ಸ್ತಬ್ಧವಾಗುವ ನಿರೀಕ್ಷೆ ಇದೆ.

2015ರ ರಸ್ತೆ ಸುರಕ್ಷತಾ ಕಾಯ್ದೆಯನ್ನು ವಾಪಸ್ ತೆಗೆದುಕೊಳ್ಳಬೇಕು, ಅಸಂಘಟಿತ ವಲಯದ ಕಾರ್ಮಿಕರಿಗೆ ಮಾಸಿಕ 18,000 ರೂ. ಕನಿಷ್ಟ ವೇತನ ರಾಷ್ಟ್ರವ್ಯಾಪಿ ನಿಗದಿಯಾಗಬೇಕು, ವಿಮಾ ರಂಗದಲ್ಲಿ ಶೇಕಡಾ 49 ರಷ್ಟು ವಿದೇಶಿ ನೇರ ಬಂಡವಾಳ ನೀಡುವುದಕ್ಕೆ ಆಕ್ಷೇಪ, 3000 ರೂ. ಕನಿಷ್ಠ ಪಿಂಚಣಿ ನಿಗದಿ ಮಾಡಬೇಕು. ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಕಾರ್ಮಿಕ ನ್ಯಾಯಾಲಯಗಳನ್ನು ತೆರೆಯಬೇಕು ಎಂಬೆಲ್ಲಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಸಂಘಗಳು ಮುಷ್ಕರಕ್ಕೆ ಮುಂದಾಗಿವೆ.

ಕೇಂದ್ರದ ವಿರುದ್ಧ ನಡೆಯುತ್ತಿರುವ ಈ ಮುಷ್ಕರಕ್ಕೆ ರಾಜ್ಯ ಸರ್ಕಾರವೂ ಪರೋಕ್ಷವಾಗಿ ಸಾಥ್ ನೀಡಿದೆ. ಪರಿಣಾಮ ರಾಜ್ಯದಲ್ಲೂ ಮುಷ್ಕರದ ಕಾವು ಹೆಚ್ಚಲಿದ್ದು, ಕೆಎಸ್ಆರ್ ಟಿಸಿ, ಬಿಎಂಟಿಸಿ ಬಸ್ ಗಳು ಸಂಚರಿಸುವುದಿಲ್ಲ. ಈ ಎರಡು ಸಂಘಟನೆ ಜತೆಗೆ ಲಾರಿ ಮಾಲೀಕರ ಸಂಘ, ಟ್ಯಾಕ್ಸಿ ಚಾಲಕರ ಸಂಘ, ಆಟೋ ಚಾಲಕರ ಸಂಘ, ಬ್ಯಾಂಕ್ ನೌಕರರ ಸಂಘ ಸೇರಿದಂತೆ ಹಲವಾರು ಸಂಘಗಳು ಬಂದ್ ಗೆ ಬೆಂಬಲ ನೀಡಿವೆ. ಇದರೊಂದಿಗೆ ನಾಳೆ ಬಸ್, ಆಟೋ, ಟ್ಯಾಕ್ಸಿ ಸಂಚಾರ ಇರುವುದಿಲ್ಲ. ಹಾಗೆಯೇ ಬ್ಯಾಂಕ್ ಸೇವೆಯೂ ಲಭ್ಯವಾಗೋದಿಲ್ಲ.

ಉಳಿದಂತೆ ದಿನನಿತ್ಯದ ಅವಶ್ಯಕತೆಗಳಾದ ಹಾಲು, ತರಕಾರಿ, ಔಷಧಿ, ಆಸ್ಪತ್ರೆ ಸೇವೆಗಳು ಎಂದಿನಂತೆ ಲಭ್ಯವಿರಲಿವೆ. ಇನ್ನು ಶಾಲಾ-ಕಾಲೇಜುಗಳಿಗೆ ರಜೆ ನೀಡುವ ನಿರ್ಧಾರವನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ. ಹೀಗಾಗಿ ಪರಿಸ್ಥಿತಿಗೆ ಅನುಗುಣವಾಗಿ ಶಾಲಾ ಕಾಲೇಜುಗಳಿಗೆ ರಜೆ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.

ಎತ್ತಿನಹೊಳೆ ಯೋಜನೆಗೆ 3 ಪ್ಯಾಕೇಜ್ ಕಾಮಗಾರಿಗಳು ಪೂರ್ಣ

ಬಯಲುಸೀಮೆ ಜಿಲ್ಲೆಗಳಿಗೆ ನೀರು ಪೂರೈಸುವ ಉದ್ದೇಶದಿಂದ ಆರಂಭಿಸಲಾಗಿರುವ ಎತ್ತಿನ ಹೊಳೆ ಯೋಜನೆಗೆ ರಾಜ್ಯ ಸರ್ಕಾರ ₹ 13 ಸಾವಿರ ಕೋಟಿ ವೆಚ್ಚದಲ್ಲಿ ಒಟ್ಟು 5 ಪ್ಯಾಕೇಜ್ ಗಳ ಕಾಮಗಾರಿಯನ್ನು ನಿಗದಿಪಡಿಸಿದ್ದು, ಆ ಪೈಕಿ ಮೂರು ಪ್ಯಾಕೇಜ್ ಗಳು ಪೂರ್ಣಗೊಂಡಿವೆ ಎಂದು ಮಾಹಿತಿ ನೀಡಿದ್ದಾರೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್.

ಎತ್ತಿನಹೊಳೆ ಮತ್ತು ಕೆಸಿ ವ್ಯಾಲಿ ಯೋಜನೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಹೇಳಿದಿಷ್ಟು..

‘ಈಗ ನಿರ್ಧರಿಸಲಾಗಿರುವ 5 ಪ್ಯಾಕೇಜ್ ಗಳ ಕಾಮಗಾರಿ ಪೈಕಿ 3 ಪ್ಯಾಕೇಜ್ ಗಳ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿಗಳಿಗೆ ಅಗತ್ಯವಿರುವ ಭೂ ಸ್ವಾಧೀನ, ಅರಣ್ಯ ಇಲಾಖೆ ಅನುಮತಿ, ಇನ್ನಿತರ ಕೆಲಸಗಳು ಬಾಕಿ ಇವೆ. ಅವುಗಳನ್ನೂ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಸಣ್ಣ ನೀರಾವರಿ, ಕಂದಾಯ, ಅರಣ್ಯ ಇಲಾಖೆಗಳ ಸಮನ್ವಯದೊಂದಿಗೆ ಸೂಕ್ತ ಕ್ರಮಗಳನ್ನು ಕೈಗೊಂಡು ಕೋಲಾರ ಮತ್ತು ಚಿಕ್ಕಬಳ್ಳಾಪುರ ಕೆರೆಗಳಿಗೆ ನೀರು ಹರಿಸುವ ಯೋಜನೆಯಾದ ಕೆಸಿ ವ್ಯಾಲಿ ಮತ್ತು ಬಯಲುಸೀಮೆಗೆ ನೀರು ಹರಿಸುವ ಎತ್ತಿನ ಹೊಳೆ ಯೋಜನೆ ಪೂರ್ಣಗೊಳಿಸುವ ಸಲುವಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಐದು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆಯನ್ನು ನಡೆಸಿ ಈ ಯೋಜನೆಗಳ ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಲಿದ್ದಾರೆ.

ಪ್ರೆಸ್ಟಿಜ್ ಕಟ್ಟಡ ತೆರವಿಗೆ ಒಪ್ಪಿಗೆ
ಬೆಳ್ಳಂದೂರು ರಾಜಕಾಲುವೆಯನ್ನು ಒತ್ತುವರಿ ಮಾಡಿ ನಿರ್ಮಿಸಲಾಗಿರುವ ಪ್ರೆಸ್ಟೀಜ್ ಸಂಸ್ಥೆಯ ಕಟ್ಟಡ ತೆರವುಗೊಳಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ ಎಂದು ಮಾಹಿತಿ ನೀಡಿದ್ದಾರೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ ಜಯಚಂದ್ರ. ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿಸಾಲುಗಳು…

  • ದೆಹಲಿಯ ಸರ್ಕಾರದ ಕ್ಯಾಬಿನೆಟ್ ಸಚಿವ ಸಂದೀಪ್ ಕುಮಾರ್ ಅವರನ್ನು ಎಎಪಿ ಪಕ್ಷ ಸಚಿವ ಸ್ಥಾನದಿಂದ ಕಿತ್ತುಹಾಕಿದೆ. ಸೆಕ್ಸ್ ಟೇಪ್ ಬಹಿರಂಗಗೊಳ್ಳುತ್ತಿದ್ದಂತೆ ವಿರೋಧ ಪಕ್ಷಗಳಿಂದ ವ್ಯಪಕ ಟೀಕೆಗೆ ಗುರಿಯಾದ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷ ಈ ನಿರ್ಧಾರ ತೆಗೆದುಕೊಂಡಿದೆ. ಸಂದೀಪ್ ಕುಮಾರ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಮಾತನಡಾದಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ‘ಆಮ್ ಆದ್ಮಿ ಪಕ್ಷ ತಪ್ಪು ಮಾಡಿದವರಿಗೆ ತಕ್ಷಣವೆ ಕಿತ್ತು ಹಾಕಿದೆ. ಈ ಮೂಲಕ ಎಎಪಿ ಪಕ್ಷ ಭ್ರಷ್ಟರನ್ನು, ಅಪರಾಧಿಗಳನ್ನು ರಕ್ಷಿಸುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗಿಂತ ಭಿನ್ನವಾಗಿದೆ’ ಎಂದಿದ್ದಾರೆ. ಮತ್ತೊಂದೆಡೆ ತಮ್ಮ ಮೇಲಿನ ಆರೋಪವನ್ನು ಪಿತೂರಿ ಎಂದಿರುವ ಸಂದೀಪ್, ತಾನೊಬ್ಬ ದಲಿತನಾಗಿರುವ ಕಾರಣ ನನ್ನ ವಿರುದ್ಧ ಸಂಚು ಮಾಡಲಾಗಿದೆ ಎಂದಿದ್ದಾರೆ.
  • ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಗಡಿಯಲ್ಲಿ ಹಕ್ಕಾನಿ ಸಂಪರ್ಕ ಜಾಲ ಹಾಗೂ ಇತರೆ ಭಯೋತ್ಪಾದಕ ಸಂಘಟನೆಗಳು ಕಾರ್ಯಾಚರಣೆ ನಡೆಸುತ್ತಿರುವುದು ಭದ್ರತೆಗೆ ಮಾರಕವಾಗಿ ಮುಂದುವರಿದಿರುವುದಾಗಿ ತಿಳಿಸಿದೆ ಅಮೆರಿಕ. ಈ ಸಂಘಟನೆಗಳು ಪಾಕಿಸ್ತಾನ ನೆಲದಿಂದಲೇ ಕಾರ್ಯಾಚರಣೆ ನಡೆಸುತ್ತಿರುವುದಾಗಿಯೂ ಅಮೆರಿಕ ತಿಳಿಸಿದೆ.
  • ಪಾಕಿಸ್ತಾನದಲ್ಲಿ ಭಾರತೀಯ ಸುದ್ದಿವಾಹಿನಿಗಳ ಪ್ರಸಾರಕ್ಕೆ ನಿರ್ಬಂಧ ಹೇರಲಾಗಿದೆ. ಭಾರತ ಸೇರಿದಂತೆ ವಿದೇಶಿ ಸುದ್ದಿ ವಾಹಿನಗಳನ್ನು ನಿಷೇಧಿಸುವಂತೆ ಪಾಕಿಸ್ತಾನ ವಿದ್ಯೂನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ (ಪಿಇಎಆರ್ ಎ) ಡಿಟಿಎಚ್ ಡೀಲರ್ ಗಳಿಗೆ ಸೂಚಿಸಿದ್ದು, ಅದರಲ್ಲೂ ಭಾರತದ ಸುದ್ದಿ ವಾಹಿನಿಗಳಿಗೆ ಶೀಘ್ರವೇ ಬ್ರೇಕ್ ಹಾಕುವಂತೆ ತಿಳಿಸಿದೆ.
  • ಪಕ್ಷವನ್ನು ಬೇರು ಮಟ್ಟದಲ್ಲಿ ಬಲಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಪಕ್ಷದ ರಾಜ್ಯ ಸಭಾ ನಾಯಕರಿಗೆ ಕರೆ ನೀಡಿದ್ದಾರೆ. ಗುರುವಾರ ರಾಜ್ಯಸಭೆ ಸಂಸದರೊಂದಿಗೆ ಸಭೆ ನಡೆಸಿದ ಮೋದಿ, ಕೇವಲ ತಮ್ಮ ಕ್ಷೇತ್ರವಷ್ಟೇ ಅಲ್ಲ, ಇತರೆ ಕಡೆಗಳಲ್ಲೂ ಪಕ್ಷದ ಬಲ ಹೆಚ್ಚಿಸಲು ಕೆಲಸ ಮಾಡುವಂತೆ ಸೂಚಿಸಿದ್ದಾರೆ. ಇದಕ್ಕೂ ಮೊದಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಳೆದ ಚುನಾವಣೆಯಲ್ಲಿ ಸೋತ ಕ್ಷೇತ್ರಗಳಲ್ಲಿ ಪಕ್ಷದ ಬಲವರ್ಧನೆ ಬಗ್ಗೆ ಗಮನಹರಿಸುವಂತೆ ರಾಜ್ಯಸಭಾ ಸಂಸದರಿಗೆ ಸಲಹೆ ನೀಡಿದ್ದರು. ಅರ್ಥಾತ್, ಬಿಜೆಪಿ ಮೈತ್ರಿಕೂಟ ಗೆದ್ದ ಕಡೆಗಳಲ್ಲಿ ಸಂಸದರು ಜವಾಬ್ದಾರಿ ತೆಗೆದುಕೊಂಡರೆ, ಸೋತಕಡೆಗಳಲ್ಲಿ ಬಿಜೆಪಿಯ ರಾಜ್ಯಸಭೆ ಸದಸ್ಯರು ತಮಗೆ ಲಭ್ಯವಿರುವ ಸಂಪನ್ಮೂಲ ವ್ಯಯಿಸಿದರೆ, ಮುಂಬರುವ ಚುನಾವಣೆಗಳಲ್ಲಿ ಅವನ್ನೂ ಗೆಲ್ಲಬಹುದು ಎಂಬುದು ಶಾ ಸೂಚನೆ.

Leave a Reply