ಮಿಲಿಟರಿ ಬಲದ ಸದುಪಯೋಗಕ್ಕೆ ಹಿಂಜರಿದಿದ್ದರಿಂದ ಪಿಒಕೆ ನಮ್ಮದಾಗಲಿಲ್ಲ- ಏರ್ ಚೀಫ್ ಮಾರ್ಷಲ್ ಅರೂಪ್ ರಾಹ, ಇಲ್ಲಿರೋದು ಬರೀ ವಿಷಾದವಲ್ಲ ಈಗೇನಾದರೂ ಅವಕಾಶ ಸಿಕ್ಕರೆ ಗೆದ್ದು ತೋರಿಸುವ ರಣಾವೇಶ!

ಡಿಜಿಟಲ್ ಕನ್ನಡ ಟೀಮ್:

‘ಮಿಲಿಟರಿ ಮೂಲಕ ಪರಿಹಾರ ಮಾರ್ಗ ಕಂಡುಕೊಂಡಿದ್ದರೆ, ಇಷ್ಟೊತ್ತಿಗಾಗಲೇ ಪಾಕ್ ಆಕ್ರಮಿತ ಕಾಶ್ಮೀರ ಭಾರತವನ್ನು ಸೇರಿಕೊಂಡಿರುತ್ತಿತ್ತು…’ ಹೀಗೊಂದು ಅಚ್ಚರಿಯ ಹೇಳಿಕೆ ನೀಡಿರೋದು ಭಾರತೀಯ ವಾಯು ಸೇನೆಯ ಮುಖ್ಯಸ್ಥ ಅರೂಪ್ ರಾಹ.

ಅಚ್ಚರಿ ಏಕೆಂದರೆ ಯಾರಿಗೂ ಗೊತ್ತಿರದ ವಿಷಯ ಇದಾಗಿತ್ತು ಎಂದೇನಲ್ಲ. ಆದರೆ ಸೇನಾಧಿಕಾರಿಗಳು ಹೀಗೆ ಬಹಿರಂಗವಾಗಿ ಮಾತನಾಡುವುದು ತುಂಬ ಅಪರೂಪ. ಆದರೆ ಅರೂಪ್ ಅವರ ಮಾತುಗಳಲ್ಲಿ ಈ ಹಿಂದೆ ಪಾಕಿಸ್ತಾನದ ಜತೆಗಿನ ಸಂಘರ್ಷಗಳಲ್ಲಿ ಭಾರತವೇ ಮೇಲುಗೈ ಸಾಧಿಸಿದ್ದಾಗಲೂ ಅಂದಿನ ರಾಜಕೀಯ ತೀರ್ಮಾನಗಳ ಕಾರಣದಿಂದ ಗೆಲುವಿನ ಫಲವನ್ನು ಬಿಟ್ಟುಕೊಟ್ಟಿದ್ದರ ಬಗ್ಗೆ ಅಸಮಾಧಾನ ಸ್ಪಷ್ಟವಾಗಿತ್ತು. ಅಲ್ಲದೇ ಈಗ ಅಂಥ ‘ಕೈಕಟ್ಟುವ’ ಸಂದರ್ಭವಿಲ್ಲ ಎಂಬ ಸಂದೇಶವೂ ಹೌದಿದು!

ಗುರುವಾರ ನಡೆದ ಏರೋಸ್ಪೇಸ್ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಅರೂಪ್ ಮಾತುಗಳು ಹೀಗಿದ್ದವು…

‘ಭಾರತವು ಮಿಲಿಟರಿ ಶಕ್ತಿಯನ್ನು ಪ್ರಯೋಗಿಸಲು ಹಿಂಜರಿಕೆ ಇಟ್ಟುಕೊಂಡಿದೆ. ಕಾರಣ ಪರಿಸ್ಥಿತಿ ಬಿಗಡಾಯಿಸಿಬಿಡಬಹುದೆಂಬ ಭಯ. ಸ್ವಾತಂತ್ರ್ಯ ಬಂದಾಗಿನಿಂದ 1971ರ ಯುದ್ಧದವರೆಗೂ ಭಾರತ ತನ್ನ ವಾಯು ಸೇನೆಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳೇ ಇಲ್ಲ. ಹಾಗೆ ಬಳಸಿಕೊಂಡಿದ್ದೇ ಆಗಿದ್ದರೆ, ಈ ಸಮಸ್ಯೆ ಇಷ್ಟೊತ್ತಿಗಾಗಲೇ ಬಗೆಹರಿದುಬಿಡುತ್ತಿತ್ತು.’

ಪಾಕ್ ಆಕ್ರಮಿತ ಪ್ರದೇಶವನ್ನು ‘ದೇಹಕ್ಕೆ ಹೊಕ್ಕ ಮುಳ್ಳು’ ಎಂದು ಹೋಲಿಕೆ ಮಾಡಿದ ಅರೂಪ್ ಆರಂಭಿಕ ದಿನಗಳಲ್ಲಿ ಭಾರತ ಸರ್ಕಾರ ಮಿಲಿಟರಿ ಬಲವನ್ನು ಬಳಸಿಕೊಳ್ಳಲು ವಿಫಲವಾಗಿದ್ದರ ಬಗ್ಗೆ ಹೇಳೋದು ಹೀಗೆ…

‘1947ರಲ್ಲಿ ಜಮ್ಮು ಕಾಶ್ಮೀರದ ಮೇಲೆ ಪಾಕಿಸ್ತಾನದ ಗುಂಪು ಆಕ್ರಮಣ ಮಾಡಿದಾಗ ಭಾರತೀಯ ವಾಯು ಸೇನೆಯೇ ನಮ್ಮ ಸೈನಿಕರು ಆ ಸ್ಥಳಕ್ಕೆ ಬೇಗ ಹೋಗಲು ಹಾಗೂ ಸೈನಿಕರಿಗೆ ಶಸ್ತ್ರಾಸ್ತ್ರಗಳನ್ನು ಸೂಕ್ತ ರೀತಿಯಲ್ಲಿ ಪೂರೈಸಲು ನೆರವಾಗಿದ್ದು. ಆಗ ನಮ್ಮ ಮಿಲಿಟರಿ ಬಲವನ್ನು ಪ್ರಯೋಗಿಸಿ ಪೂರ್ಣ ಪ್ರಮಾಣದ ಜಮ್ಮು ಕಾಶ್ಮೀರವನ್ನು ತಮ್ಮ ವಶಕ್ಕೆ ಪಡೆಯುವ ಅವಕಾಶವಿತ್ತು. ಆದರೆ, ನೈತಿಕ ಮಾನದಂಡ ಆಧರಿಸಿದ ಭಾರತ ಈ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ವಿಶ್ವಸಂಸ್ಥೆ ಮುಂದೆ ನಿಂತಿತು. ಅದರ ಪರಿಣಾಮ ಪಾಕ್ ಆಕ್ರಮಿತ ಕಾಶ್ಮೀರ ಇಂದಿಗೂ ಭಾರತಕ್ಕೆ ದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ.

ಇನ್ನು 1962 ರ ಯುದ್ಧದಲ್ಲಿ ಸಂಘರ್ಷ ಹೆಚ್ಚಾಗುವ ಭಯದಿಂದ  ಭಾರತೀಯ ವಾಯು ಪಡೆಯನ್ನು ಸ್ವಲ್ಪ ಪ್ರಮಾಣದಲ್ಲಿ ಬಳಸಲಾಯಿತು. ಆದರೆ 1965ರ ಕಾಳಗದಲ್ಲಿ ಪೂರ್ವ ಪಾಕಿಸ್ತಾನದಿಂದ ನಮ್ಮ ವಾಯು ನೆಲೆ ಹಾಗೂ ಮೂಲಸೌಕರ್ಯಗಳ ಮೇಲೆ ದಾಳಿ ನಡೆದಾಗಲೂ ನಾವು ವಾಯು ಪಡೆಯನ್ನು ಬಳಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದೆವು. ’

ಭಾರತ ತನ್ನ ವಾಯು ಸೇನೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಿದ್ದು 1971 ರ ಯುದ್ಧದಲ್ಲಿ ಪರಿಣಾಮ ಭೂ, ವಾಯು ಹಾಗೂ ನೌಕಾ ಸೇನೆಗಳು ಉತ್ತಮ ರೀತಿಯಲ್ಲಿ ಬೆರೆತು ಹೋರಾಡಿದಕ್ಕೆ ಬಾಂಗ್ಲಾದೇಶ ನಿರ್ಮಾಣ ಸಾಧ್ಯವಾಯ್ತು ಎಂದಿರುವ ಅರೂಪ್, ‘ಪರಿಸ್ಥಿತಿ ಬದಲಾಗಿದೆ ವಾಯು ಸೇನೆಯನ್ನು ಬಳಸಲು ಸಿದ್ಧವಿದ್ದೇವೆ. ನಮ್ಮನ್ನು ಸಮರ್ಥವಾಗಿ ರಕ್ಷಿಸಿಕೊಂಡು ಸಮಸ್ಯೆ ಬಗೆಹರಿಸಲು ಸಿದ್ಧ’ ಎಂದಿದ್ದಾರೆ.

Leave a Reply