ಆರೆಸ್ಸೆಸ್ ಮಂದಿಯೇ ಮಹಾತ್ಮರನ್ನು ಕೊಂದವರೆಂಬ ಹೇಳಿಕೆಗೆ ರಾಹುಲ್ ಬದ್ಧ, ಕಪಿಲ್ ಸಿಬಲ್ ಪ್ರಕಾರ ಇದು ನಿಜವಾದ ಹಿಂದು ಯಾರೆಂಬ ಯುದ್ಧ

ಡಿಜಿಟಲ್ ಕನ್ನಡ ಟೀಮ್:

ಹೌದು… ಇಲ್ಲ… ಹೌದು…ಇಲ್ಲ.. ಹೌದು..

ಹೌದು. ಆರೆಸ್ಸೆಸ್ ಜನರೇ ಮಹಾತ್ಮ ಗಾಂಧಿಯನ್ನು ಕೊಂದಿದ್ದು ಎಂಬ ಹೇಳಿಕೆಗೆ ಬದ್ಧವಾಗಿ ನ್ಯಾಯಾಲಯದ ವಿಚಾರಣೆ ಎದುರಿಸುವುದಕ್ಕೆ ಸಿದ್ಧ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸುಪ್ರೀಂಕೋರ್ಟ್ ಗೆ ಹೇಳಿದ್ದಾರೆ.

ಇದಕ್ಕೂ ಹಿಂದಿನ ವಿಚಾರಣೆಯಲ್ಲಿ ರಾಹುಲ್ ಅವರು ತಾವು ಆರೆಸ್ಸೆಸ್ ಒಂದು ಸಂಸ್ಥೆಯಾಗಿ ಗಾಂಧಿಹತ್ಯೆಯಲ್ಲಿ ಪಾಲ್ಗೊಂಡಿರುವುದಾಗಿ ಪ್ರತಿಪಾದಿಸಿಲ್ಲ ಎಂದಿದ್ದರು.

ಗುರುವಾರದ ವಿಚಾರಣೆಯಲ್ಲಿ ಇದರೊಂದಿಗೆ ಪ್ರಕರಣ ಮುಕ್ತಾಯವಾಗುವ ನಿರೀಕ್ಷೆ ಇತ್ತು. ಆದರೆ ಆರೆಸ್ಸೆಸ್ ಪರ ವಕೀಲರು, ‘ಗಾಂಧಿಹತ್ಯೆಯಲ್ಲಿ ಆರೆಸ್ಸೆಸ್ ಪಾಲ್ಗೊಂಡಿಲ್ಲ’ ಎಂಬ ಲಿಖಿತ ಹೇಳಿಕೆಗೆ ರಾಹುಲ್ ಸಹಿ ಹಾಕಲಿ ಎಂದು ವಾದ ಮಂಡಿಸಿದರು ಎನ್ನಲಾಗಿದೆ. ಇದಕ್ಕೆ ಒಪ್ಪದ ರಾಹುಲ್ ಪರ ಕಕ್ಷಿದಾರರು, ರಾಹುಲ್ ತಮ್ಮ ಮಾತಿಗೆ ಬದ್ಧ, ಇದು ಮಾನಹಾನಿಕಾರಕವೋ ಅಲ್ಲವೋ ಎಂಬುದರ ಬಗ್ಗೆ ವಿಚಾರಣೆ ಮುಂದುವರಿಯಲಿ ಎಂದರು.

ಯೂಟರ್ನ್, ಗೊಂದಲ ಎಂದೆಲ್ಲ ಈ ವಿದ್ಯಮಾನವನ್ನು ವಿಶ್ಲೇಷಿಸಲಾಗುತ್ತಿದೆಯಾದರೂ ಈ ನಿರ್ಧಾರದ ಹಿಂದಿನ ಅಂಶಗಳು ಸ್ಪಷ್ಟವೇ ಆಗಿವೆ.

– ಒಂದು ನಿರ್ದಿಷ್ಟ ಹೇಳಿಕೆಗೆ ಲಿಖಿತವಾಗಿ ಬದ್ಧವಾಗಿಸುವುದರ ಮೂಲಕ ಕಾಂಗ್ರೆಸ್ಸಿನ ಆಕ್ರಮಣಾಸ್ತ್ರವನ್ನೇ ಕಸಿಯುವುದಕ್ಕೆ ಆರೆಸ್ಸೆಸ್ ದಾವೆದಾರರ ಪರ ವಕೀಲರು ಮುಂದಾದರು.

– ಯಾವಾಗ ಇದು ಒಂದು ಮುಜುಗರದ ಪ್ರಕರಣವಾಗಿ ಮಾತ್ರ ಉಳಿಯದೇ, ಕಾಂಗ್ರೆಸ್ಸಿನ ನಿಲುವಾಗಿ ರೂಪಿತಗೊಂಡು ರಾಜಕೀಯ ಅಸ್ತ್ರವೇ ಇಲ್ಲದಂತಾಗುತ್ತದೆ ಎಂಬ ಅರಿವಾಯಿತೋ ಆಗ ರಾಹುಲ್ ಗಾಂಧಿ ಈ ನಿರ್ಧಾರಕ್ಕೆ ಬರುವಂತೆ ಕಾಂಗ್ರೆಸ್ ಸಹಜವಾಗಿಯೇ ಪ್ರೇರೇಪಿಸಿದೆ. ಅಭಿವೃದ್ಧಿ ಪ್ಯಾಕೇಜನ್ನು ಕಟ್ಟಿಕೊಡುವಲ್ಲಿ ಮೋದಿ ಬಳಿ ಸ್ಪರ್ಧಿಸಲಾಗುವುದಿಲ್ಲ ಎಂಬುದು ಕಾಂಗ್ರೆಸ್ಸಿಗೆ ಗೊತ್ತಿದೆ. ಹಳತು ಎನಿಸಿದರೂ ಸಹ ಅಲ್ಪಸಂಖ್ಯಾತರಿಗೆ- ತುಳಿತಕ್ಕೊಳಗಾದವರಿಗೆ ಅನ್ಯಾಯವಾಗುತ್ತಿದೆ ಎಂಬ ರಾಗದಲ್ಲೇ ಅದು ಚುನಾವಣೆಗಳನ್ನು ಎದುರಿಸಬೇಕು. ಇಲ್ಲೆಲ್ಲ ಮುಖ್ಯವಾಗಿ ಬೇಕಿರುವುದೇ ಆರೆಸ್ಸೆಸ್ ದೂಷಣೆ. ಅದನ್ನು ಬಿಟ್ಟುಕೊಡುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ.

ಇವೇನೇ ಇದ್ದರೂ ರಾಹುಲ್ ಗಾಂಧಿಯವರನ್ನು ಪ್ರತಿನಿಧಿಸಿರುವ ಕಪಿಲ್ ಸಿಬಲ್ ಅವರ ಪ್ರಕಾರ ಇದು ‘ನಿಜವಾದ ಹಿಂದು ಯಾರು’ ಎಂದು ನಿರ್ಧರಿಸುವ ಯುದ್ಧ. ಕಾನೂನು ಹೋರಾಟ ಅದರ ಪಾಡಿಗಿರುತ್ತದಾದರೂ ಇದು ರಾಜಕೀಯ ಸಮರ. ಅವರ ಈ ಹಿಂದಿನ ‘ಶೂನ್ಯನಷ್ಟ ಸಿದ್ಧಾಂತ’ದಂತೆಯೇ ಇದನ್ನು ಅರ್ಥಮಾಡಿಕೊಳ್ಳುವುದಕ್ಕೆ ಕಷ್ಟವಿದೆ. ಆದರೆ ಅವರು ಹೇಳಿದ್ದಿಷ್ಟು- ‘ನಿಜವಾದ ಹಿಂದು ಮಹಾತ್ಮ ಗಾಂಧಿಯವರನ್ನು ಕೊಲ್ಲಲು ಸಾಧ್ಯವಿಲ್ಲ. ನಾಥುರಾಂ ಗೋಡ್ಸೆ ಹಿಂದು ಆಗಿರಲಿಲ್ಲ ಎಂದು ಆರೆಸ್ಸೆಸ್ ಹೇಳಬೇಕಾಗಿ ಬರುತ್ತದೆ. ನಾನು ಸಹ ಹಿಂದು ಆದರೆ ಆರೆಸ್ಸೆಸ್ಸಿಗ ಅಲ್ಲ. ಜೀವನ ವಿಧಾನದಂತೆ ಹಿಂದು ಆಗಿರುವುದು ಬೇರೆ, ಆರೆಸ್ಸೆಸ್ ಪ್ರತಿಪಾದಿಸುವ ಹಿಂದು ಬೇರೆ.’

ಜತೆಯಲ್ಲೇ ತುಷಾರ್ ಗಾಂಧಿ ಸೇರಿದಂತೆ ಹಲವರು ತಮ್ಮ ಕೃತಿಗಳಲ್ಲಿ ಗಾಂಧಿಹತ್ಯೆಗೆ ಆರೆಸ್ಸೆಸ್ ಕಾರಣ ಎಂದು ಬರೆದಿರುವುದನ್ನು ಉಲ್ಲೇಖಿಸಿದ ಸಿಬಲ್, ಇವರ್ಯಾರ ವಿರುದ್ಧವೂ ಆರೆಸ್ಸೆಸ್ ನ್ಯಾಯಾಲಯಕ್ಕೆ ಹೋಗಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.

‘ರಾಹುಲ್ ಗಾಂಧಿಯವರಿಗೆ ಇಡೀ ವಿಷಯದ ಕುರಿತಂತೆಯೇ ಗೊಂದಲ ಇದೆ. ಹೀಗಾಗಿಯೇ ಪದೇ ಪದೆ ಯೂಟರ್ನ್ ತೆಗೆದುಕೊಳ್ಳುತ್ತಿದ್ದಾರೆ. 1962ರ ಗಣರಾಜ್ಯೋತ್ಸವ ಪರೇಡಿನಲ್ಲಿ ಪಂಡಿತ್ ನೆಹರು ಅವರೇ ಆರೆಸ್ಸೆಸ್ ಅನ್ನು ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಬಿಟ್ಟುಕೊಂಡಿದ್ದರು. ರಾಹುಲ್ ಗಾಂಧಿಗೆ ಆ ಬಗ್ಗೆ ತಕರಾರಿದೆಯೇ?’ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.

Leave a Reply