ಅಗ್ಗದ ಡಾಟಾ, ಪುಕ್ಕಟೆ ಕರೆಗಳ ರಿಲಾಯನ್ಸ್ ಡಿಜಿಟಲ್ ಕ್ರಾಂತಿ ಮುನ್ನುಡಿ, ಭವಿಷ್ಯದಲ್ಲಿ ಬಹು ಭಾರತದ ಅಭಿವ್ಯಕ್ತಿ- ಯೋಚನೆಗಳೆಲ್ಲ ಮುಕೇಶ್ ಅಂಬಾನಿ ನಿಯಂತ್ರಣದ ಅಡಿ!

ಡಿಜಿಟಲ್ ಕನ್ನಡ ವಿಶೇಷ:

‘ಡಾಟಾ ಎಂಬುದೇ ಹೊಸ ತೈಲ, ವಿಶ್ಲೇಷಣಾತ್ಮಕ ಡಾಟಾವೇ ಹೊಸ ಪೆಟ್ರೋಲ್’- ಬಹುಶಃ ಮುಕೇಶ್ ಅಂಬಾನಿಯ ಈ ಮಾತು ಚರಿತ್ರೆಯ ಕೋಟ್ ಮಾಡಬಹುದಾದ ಹೇಳಿಕೆಗಳಲ್ಲೊಂದಾಗಲಿದೆ.

ಗುರುವಾರದ ವಾರ್ಷಿಕ ಸಭೆಯಲ್ಲಿ ರಿಲಾಯನ್ಸ್ ಜಿಯೋ ಯೋಜನೆಯ ಪ್ರಾರಂಭವನ್ನು ಘೋಷಿಸುತ್ತ ಮುಕೇಶ್ ಅಂಬಾನಿ ಬಿಚ್ಚಿಟ್ಟ ಅಂಕಿಅಂಶಗಳೇ ಹಾಗಿವೆ. ಮುಖ್ಯವಾಗಿ ಇದು ಇಂಟರ್ನೆಟ್ ಡಾಟಾ ದರವನ್ನು ಗಣನೀಯವಾಗಿ ಇಳಿಸುತ್ತಿದೆ. ಗ್ರಾಹಕರನ್ನು ಸೆಳೆಯುವುದಕ್ಕೆ ಪುಕ್ಕಟೆ ಕೊಡುಗೆಗಳನ್ನು ಘೋಷಿಸಿದೆ. ಬಹಳ ಮುಖ್ಯವಾಗಿ, ಮುಕೇಶ್ ಅಂಬಾನಿ ಹೇಳಿಕೊಂಡಂತೆ ಇತಿಹಾಸದಲ್ಲೇ ರಿಲಾಯನ್ಸ್ ನ ಅತಿದೊಡ್ಡ ಹೂಡಿಕೆ ಇದಾಗಿದೆ.

ರಿಲಯನ್ಸ್ ನ ಜಿಯೋ ಸೇವೆಯ ಪ್ರಮುಖ ಹೈಲೈಟ್ಸ್ ಗಳು ಹೀಗಿವೆ…

  1. ಸೆಪ್ಟೆಂಬರ್ 5 ರಂದು ಜಿಯೋ ಔಪಚಾರಿಕವಾಗಿ ಉದ್ಘಾಟನೆಯಾಗಲಿದೆ. ಉಳಿದಂತೆ ವಿವಿಧ ಪ್ರದೇಶಗಳಲ್ಲಿ ವಾಣಿಜ್ಯಾತ್ಮಕ ಉದ್ಘಾಟನೆಗಳು ಡಿಸೆಂಬರ್ 31ರ ವರೆಗೂ ನಡೆಯಲಿದೆ.
  2. ಜಿಯೋ ಸೇವೆಯಲ್ಲಿ ಪ್ರತಿ ಜಿಬಿ ಡಾಟಾಗೆ ₹ 25-50 ವೆಚ್ಚವಾಗಲಿದ್ದು, ಇದು ಸದ್ಯದ ವೆಚ್ಚಕ್ಕಿಂದ 5-10 ಪಟ್ಟು ಕಡಿಮೆಯಾಗಿದೆ. ಇದರೊಂದಿಗೆ ಪ್ರತಿ ಎಂಬಿ ಡಾಟಾಗೆ ಕೇವಲ 5 ಪೈಸೆ ವೆಚ್ಚವಾಗಲಿದ್ದು, ಪ್ರಪಂಚದಲ್ಲೇ ಅತ್ಯಂತ ಕಡಿಮೆ ದರದ ಡಾಟಾ ಸೇವೆ ದೊರೆಯಿದೆ. ಪ್ರತಿ ಜಿಬಿ ಡಾಟಾಗೆ ₹ 50 ನಿಗದಿ ಮಾಡಲಾಗಿದ್ದು, ಅದು ಮುಕ್ತಾಯವಾಗಿ ಹೆಚ್ಚು ಡಾಟಾ ಬಳಿಸಿದರೆ ₹ 25 ರಷ್ಟು ವೆಚ್ಚ ಬೀಳಲಿದೆ. ಇದರೊಂದಿಗೆ ಹೆಚ್ಚು ಬಳಸಿ ಕಡಿಮೆ ಪಾವತಿಸಿ ಎಂಬ ಮಾದರಿಯಲ್ಲಿ ಸೇವೆ ಒದಗಿಸಲಾಗುತ್ತಿದೆ.
  3. 4ಜಿಯ ಎಲ್ ಟಿ ಇ ಸರಣಿಯ ಸ್ಮಾರ್ಟ್ ಫೋನ್ ಗಳನ್ನು ಕನಿಷ್ಠ ₹ 2999 ರ ಬೆಲೆಯಿಂದ ಮಾರಾಟ ಮಾಡಲಿದ್ದು, ಜಿಯೋ-ಎಫ್ಐ ಅನ್ನು ₹ 1999ಕ್ಕೆ ಮಾರಾಟ ಮಾಡಲಾಗುವುದು.
  4. ಇನ್ನು ಜಿಯೋ ಸೇವೆಯಲ್ಲಿ ರಿಯಾಯಿತಿ ದರಗಳು ₹ 149ರಿಂದ ಆರಂಭವಾಗಲಿದ್ದು, ಗರಿಷ್ಠ ದರ ₹ 4999 ರವರೆಗೂ ಇದೆ. ಇನ್ನು ಅಪರೂಪಕ್ಕೆ ಡಾಟಾ ಸೇವೆ ಪಡೆಯುವವರಿಗಾಗಿ ಪ್ರತಿ ದಿನಕ್ಕೆ ₹ 19 ದರ ನಿಗದಿ ಪಡಿಸಿದೆ.
  5. ಜಿಯೋ ರಿಯಾಯಿತಿ ದರ ಸೇವೆಯಲ್ಲಿ ಗ್ರಾಹಕರು ಒಂದು ಧ್ವನಿ ಕರೆಗಳಿಗೆ ಪಾವತಿ ಮಾಡಬೇಕು ಅಥವಾ ಡಾಟಾ ಬಳಕೆಗೆ ಮಾತ್ರ ಪಾವತಿ ಮಾಡಬೇಕು. ಒಂದು ವೇಳೆ ಡಾಟಾ ಸೇವೆಗೆ ಪಾವತಿ ಮಾಡಿದರೆ ಉಚಿತವಾಗಿ ಧ್ವನಿ ಕರೆಗಳನ್ನು ಮಾಡಬಹುದಾಗಿದ್ದು ಯಾವುದೇ ರೀತಿಯಲ್ಲೂ ಹಣ ಪಾವತಿ ಮಾಡುವಂತಿಲ್ಲ. ಇದರೊಂದಿಗೆ ಇನ್ನು ಮುಂದೆ ಕರೆಗಳಿಗೆ ಹಣ ನೀಡುವಂತಿಲ್ಲ. ರೋಮಿಂಗ್ ಗಾಗಿಯೂ ಹಣ ನೀಡುವಂತಿಲ್ಲ. ಇದರಿಂದ ದೇಶದ ಯಾವುದೇ ಭಾಗದಿಂದ ಉಚಿತ ಕರೆಗಳನ್ನು ಮಾಡಬಹುದಾಗಿದೆ.
  6. ಜಿಯೋ ದೇಶದಾತ್ಯಂತ ವೈಫೈ ಸ್ಪಾಟ್ ಗಳನ್ನು ನಿರ್ಮಿಸುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಗ್ರಾಹಕರು ಉಚಿತವಾಗಿ ಡಾಟಾ ಸೇವೆ ಪಡೆಯಬಹುದು.
  7. ಅನಿರ್ದಿಷ್ಟ ಕರೆಗಳ ಜತೆಗೆ ಅನಿರ್ದಿಷ್ಟ ಎಸ್ಎಂಎಸ್ ಗಳು ಲಭ್ಯವಿದೆ. ಇನ್ನು ಅಂತಾರಾಷ್ಟ್ರೀಯ ಕರೆಗಳಿಗೂ ಕಡಿಮೆ ದರವನ್ನು ನಿಗದಿಪಡಿಸಲಾಗಿದೆ.
  8. ವಿದ್ಯಾರ್ಥಿಗಳಿಗೆ ವಿಶೇಷ ಯೋಜನೆ ನೀಡಿದ್ದು, ವಿದ್ಯಾರ್ಥಿಗಳು ತಮ್ಮ ಗುರುತಿನ ಚೀಟಿ ತೋರಿದರೆ ರಿಯಾಯಿತಿ ದರದಲ್ಲಿ ಶೇ.25 ರಷ್ಟು ವಿನಾಯಿತಿ ಸಿಗಲಿದೆ. ಇದರೊಂದಿಗೆ ಶಾಲಾ ಕಾಲೇಜುಗಳು ಮಕ್ಕಳಿಗೆ ತರಗತಿಯಲ್ಲಿ ಟ್ಯಾಬ್ ಸೌಲಭ್ಯ ಕಲ್ಪಿಸಲು ನೆರವಾಗಲಿದೆ ಎಂಬುದು ಜಿಯೋ ಗುರಿ.
  9. ಅಂತಾರಾಷ್ಟ್ರೀಯ ಗ್ರಾಹಕರಿಗೆ ಗರಿಷ್ಠ ಮಟ್ಟದ ರಿಯಾಯಿತಿ ಪ್ಯಾಕೇಜ್ ನಲ್ಲಿ ಅಂತಾರಾಷ್ಟ್ರೀಯ ಕರೆ ಸೇರಿದಂತೆ ಇತರೆ ಸೇವೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಅಂತಿಮ ಚಿತ್ರಣ ನೀಡಲಿದೆ.
  10. ಜಿಯೋ ಡಿಜಿಟಲ್ ಸ್ಟಾರ್ಟ್ ಅಪ್ ಕಾರ್ಯಕ್ರಮದಡಿ ₹ 5000 ಜಂಟಿ ಬಂಡವಾಳ ಹೂಡಿಕೆಗೆ ಸಿದ್ಧವಾಗಿದ್ದು, ಯುವಕರ ಹೊಸ ಪ್ರಯೋಗಗಳಿಗೆ ನೆರವಾಗಲು ನಿರ್ಧರಿಸಲಾಗಿದೆ.

ಮೇಕ್ ನೊ ಮಿಸ್ಟೇಕ್… ಇದು ಏರ್ಟೆಲ್, ಐಡಿಯಾ ಇನ್ನಿತರ ಕಂಪನಿಗಳ ಸಾಲಿನಲ್ಲಿ ನಿಲ್ಲುವ ಸಂಪರ್ಕ ಸೇವೆ ಅಲ್ಲವೇ ಅಲ್ಲ. ಭಾರತದಲ್ಲಿ ಇನ್ನೂ ಅಗಾಧ ವ್ಯಾಪ್ತಿ ಉಳಿಸಿಕೊಂಡಿರುವ ಡಾಟಾ ಅವಲಂಬಿತ ಜನಜಾಲವನ್ನು ಇಡಿ ಇಡಿಯಾಗಿ ಬಾಚಿಕೊಳ್ಳಲಿದೆ ಈ ಯೋಜನೆ. ಡಾಟಾ ಎಂದರೆ ರಿಲಾಯನ್ಸ್ ಎಂದಾಗುವಮಟ್ಟಿಗೆ ಭಾರತದ ಗ್ರಾಹಕರನ್ನು ಆಕ್ರಮಿಸಿಕೊಳ್ಳಬೇಕು ಎಂಬ ನಿಖರ ನೀಲನಕ್ಷೆ ಇಲ್ಲಿದೆ. ಹಾಗೆಂದೇ, ಇನ್ನು ಐದು ವರ್ಷಗಳ ಕಾಲ ರಿಲಾಯನ್ಸ್ ಸಮೂಹವು ಜಿಯೊ ಯೋಜನೆಯಿಂದ ಚಿಕ್ಕಾಸು ಪ್ರತಿಫಲವನ್ನೂ ನಿರೀಕ್ಷಿಸುತ್ತಿಲ್ಲ. ಅದರ ಗುರಿ ಏನಿದ್ದರೂ ಅತ್ಯಂತ ಆಕ್ರಮಕವಾಗಿ ಮಾರುಕಟ್ಟೆಯನ್ನು ತನ್ನದಾಗಿಸಿಕೊಳ್ಳುವುದು. ‘ಸದ್ಯಕ್ಕೆ ರಿಲಯನ್ಸ್ ಜಿಯೋ 18 ನಗರ ಮತ್ತು ಪಟ್ಟಣಗಳಲ್ಲಿ ಹಾಗೂ 2 ಲಕ್ಷ ಹಳ್ಳಿಗಳಲ್ಲಿ ತಲುಪಿದೆ. ಮುಂದಿನ ವರ್ಷ ಮಾರ್ಚ್ ವೇಳೆಗೆ ನಾವು ದೇಶದ ಶೇ.90 ರಷ್ಟು ಭಾಗವನ್ನು ತಲುಪಲಿದ್ದೇವೆ.’ ಎಂದಿದ್ದಾರೆ ಮುಕೇಶ್ ಅಂಬಾನಿ.

‘ಈ ಜಿಯೋ ಸೇವೆಯನ್ನು ಪ್ರಧಾನಿ ಮೋದಿ ಹಾಗೂ ಭಾರತೀಯ ಜನರಿಗೆ ಅರ್ಪಿಸುತ್ತೇನೆ. ಇದರಿಂದ ಪ್ರಧಾನಿ ಅವರ ಡಿಜಿಟಲ್ ಇಂಡಿಯಾ ಕನಸು ಸಕಾರಗೊಳ್ಳಲಿದೆ. ಈಗ ಏನಿದ್ದರೂ ಡಿಜಿಟಲ್ ಯುಗ. ಆ ಯುಗದಲ್ಲಿ ನೀವು ಡಿಜಿಟಲ್ ವ್ಯವಸ್ಥೆಗೆ ಹೊಂದುಕೊಳ್ಳದಿದ್ದರೆ, ಅಪ್ರಸ್ತುತರಾಗುವ ಮೂಲಕ ತೀರಾ ಹಿಂದುಳಿಯುತ್ತೀರಿ.’ ಅಂತಲೂ ಆಕರ್ಷಕವಾಗಿ ಪ್ರಚೋದಿಸಿದ್ದಾರವರು.

ಸರಿ, ಇವೆಲ್ಲದರಿಂದ ರಿಲಾಯನ್ಸ್ ಏನು ಸಾಧಿಸಲಿದೆ? ಎಲ್ಲ ರಿಸ್ಕುಗಳನ್ನು ಎಳೆದುಕೊಂಡು ಅದೇಕೆ ಈ ಪ್ರಮಾಣದ ಹಣವನ್ನು ಚೆಲ್ಲುತ್ತಿದೆ? ಮುಂದೆಂದಾದರೂ ಅದು ನಮ್ಮ ಮಾತು- ಡಾಟಾ ಉಪಯೋಗಗಳಿಗೆ ದರ ಏರಿಸಿ ಲಾಭ ಮಾಡಿಕೊಳ್ಳುವ ಸಾಧ್ಯತೆಗಳು ಎಷ್ಟು?- ಹೀಗೆ ಕೌತುಕ ಹುಟ್ಟಿದರೆ ಅಷ್ಟರಮಟ್ಟಿಗೆ ಅದು ನಮ್ಮ ದಡ್ಡತನ. ರಿಲಾಯನ್ಸ್ ಭವಿಷ್ಯದಲ್ಲಿ ಲಾಭ ಮಾಡಿಕೊಳ್ಳುವುದು ನಮ್ಮ ಮಾತಿಗೋ ಇಂಟರ್ನೆಟ್ ಪ್ಯಾಕಿಗೋ ವಿಧಿಸುವ ದರದಲ್ಲಲ್ಲ… ಬದಲಿಗೆ ಮಾಹಿತಿ ಗಣಿಗಾರಿಕೆಯಿಂದ!

ಯಾವಾಗ ಬಹುಪಾಲು ಭಾರತೀಯರು ಒಂದೇ ಸೇವೆಗೆ ಆಕರ್ಷಿತರಾಗಿ ಡಿಜಿಟಲ್ ಸೇವೆಗಳನ್ನೆಲ್ಲ ರಿಲಾಯನ್ಸ್ ನಿಂದಲೇ ಪಡೆಯುತ್ತಾರೆಯೋ ಆಗ, ದೀರ್ಘಕಾಲದಲ್ಲಿ ಕಂಪನಿಗೆ ಸಾಮಾನ್ಯರ ಮಾಹಿತಿ ಬ್ಯಾಂಕ್ ಒಂದು ಲಭ್ಯವಾಗುತ್ತದೆ. ಡಾಟಾ ಪ್ಯಾಕ್ ಬಳಸಿಕೊಂಡು ನಾವು ಏನನ್ನು ಹುಡುಕಿದೆವು, ಏನು ಖರೀದಿಸಿದೆವು, ತಿಂದಿದ್ದೇನು, ಅಜೀರ್ಣವಾಗಿ ಕಕ್ಕಿದ್ದು ಯಾವ ಕ್ಲಿನಿಕ್ ನಲ್ಲಿ… ಇವೆಲ್ಲವೂ ಡಿಜಿಟಲ್ ಯುಗದಲ್ಲಿ ಹೆಜ್ಜೆ ಗುರುತು ಉಳಿಸಿಯೇ ಹೋಗುತ್ತವೆ. ಭಾರತವೆಂಬ ಅತಿದೊಡ್ಡ ಮಾರುಕಟ್ಟೆಯ ಮಾನವ ವರ್ತನೆಯನ್ನು ಇಂಚಿಂಚಾಗಿ ಅರಿಯುವುದಕ್ಕೆ ರಿಲಾಯನ್ಸ್ ನ ಈ ಹೂಡಿಕೆ. ಎಲ್ಲವೂ ಅಂದುಕೊಂಡ ದಾರಿಯಲ್ಲೇ ಸಾಗಿದರೆ, ಭವಿಷ್ಯದಲ್ಲಿ ಸ್ಟಾರ್ಟ್ ಅಪ್ ತೆಗೆಯುವವ ಸಹ ಗ್ರಾಹಕರ ವರ್ತನೆ ಹೇಗಿದೆ ಹಾಗೂ ಅದನ್ನು ಹೇಗೆ ಲಾಭದಾಯಕವಾಗಿಸಿಕೊಳ್ಳಲು ಸಾಧ್ಯ ಎಂಬ ವಿಶ್ಲೇಷಣಾತ್ಮಕ ಅಂಕಿಅಂಶಕ್ಕೆ ರಿಲಾಯನ್ಸ್ ಇಲ್ಲವೇ ಹೀಗೆ ಡಾಟಾ ಒದಗಿಸುವ ಕಂಪನಿಗಳನ್ನು ಆಶ್ರಯಿಸಬೇಕಾಗುತ್ತದೆ. ವಿಶ್ಲೇಷಣಾತ್ಮಕ ಡಾಟಾ ಎಂಬುದು ಹೊಸ ಪೆಟ್ರೋಲ್ ಎಂದಿರುವುದು ಈ ಅರ್ಥದಲ್ಲಿ.

ಖುದ್ದು ರಿಲಾಯನ್ಸ್ ಗೆ ಭವಿಷ್ಯದಲ್ಲಿ ಜವಳಿ, ಆಹಾರ, ಗ್ಯಾಜೆಟ್… ಹೀಗೆ ಎಲ್ಲೇ ಹಣಹೂಡುವುದಿದ್ದರೂ ನಮ್ಮೆಲ್ಲರ ಮಾಹಿತಿ ಅನುಕೂಲಕ್ಕೆ ಬರುತ್ತದೆ. ಪ್ರೈವಸಿ ಪಾಲಿಸಿ ಇನ್ನೊಂದು-ಮತ್ತೊಂದು ಅಂತ ಏನೇ ನೈತಿಕ ಮಾತು ಕಾನೂನುಗಳ ಸಾಲು ಇದ್ದರೂ ಡಿಜಿಟಲ್ ಯುಗದಲ್ಲಿ ಖಾಸಗಿತನ ಎಂಬುದೇ ಒಂದು ಜೋಕು ಎಂಬ ವಾಸ್ತವವನ್ನು ನಾವು ಒಪ್ಪಿಕೊಳ್ಳಲೇಬೇಕು.

ಇನ್ನೊಂದು ಕುತೂಹಲಕಾರಿ ಅಂಶ ಎಂದರೆ, ಸಾಮಾನ್ಯರ ಯೋಚನೆ- ಭಾವನೆಗಳನ್ನು ಪ್ರಭಾವಿಸುವ ಮಾಧ್ಯಮ ಕ್ಷೇತ್ರದಲ್ಲಿ ರಿಲಾಯನ್ಸ್ ಅದಾಗಲೇ ಹಲವು ಡಿಜಿಟಲ್- ಟಿವಿ ಮಾಧ್ಯಮಗಳಲ್ಲಿ ಹೂಡಿಕೆಯ ನಿಯಂತ್ರಣ ತೆಗೆದುಕೊಂಡಿದೆ.

ಹೀಗಿರುವಾಗ ರಿಲಯನ್ಸ್ ಜಿಯೊ ಭವಿಷ್ಯದಲ್ಲಿ ನಮ್ಮೆಲ್ಲರ ಆಲೋಚನೆ- ಅಭಿವ್ಯಕ್ತಿಗಳನ್ನು ಪ್ರಚೋದಿಸಲಿರುವ ಹಾಗೂ ಪ್ರಭಾವಿಸಲಿರುವ ಮುಕೇಶ್ ಅಂಬಾನಿ ಬಳಗದ ಅತಿದೊಡ್ಡ ಹೂಡಿಕೆ.

Leave a Reply