ಅಂಬಾನಿಯ ರಿಲಾಯನ್ಸ್ ಗ್ಯಾಸ್ ಕದ್ದಿರುವುದು ಖರೆ ಎಂದಿದೆ ತನಿಖಾ ಸಮಿತಿ ವರದಿ

ಡಿಜಿಟಲ್ ಕನ್ನಡ ಟೀಮ್:

ಕೃಷ್ಣ- ಗೋದಾವರಿ ಪಾತ್ರದಲ್ಲಿ ಭಾರತ ಸರ್ಕಾರ ಸ್ವಾಮ್ಯದ ಒಎನ್ ಜಿಸಿ ಹಾಗೂ ರಿಲಾಯನ್ಸ್ ಎರಡೂ ನೈಸರ್ಗಿಕ ಅನಿಲ ಉತ್ಖನನದಲ್ಲಿ ತೊಡಗಿಕೊಂಡಿವೆ. ಪಕ್ಕದ ಒಎನ್ ಜಿಸಿಯಿಂದ ರಿಲಾಯನ್ಸ್ ಅಕ್ರಮವಾಗಿ ಗ್ಯಾಸ್ ಎಳೆದುಕೊಂಡಿರುವುದು ಹೌದು ಎಂದು ಬುಧವಾರ ಈ ಕುರಿತ ತನಿಖೆಗೆಂದು ನೇಮಕವಾಗಿದ್ದ ನ್ಯಾ. ಎ. ಪಿ. ಶಾ ಸಮಿತಿ ವರದಿ ಸಲ್ಲಿಸಿದೆ.

2009ರ ಏಪ್ರಿಲ್ 1ರಿಂದ 2015ರ ಮಾರ್ಚ್ 31ರವರೆಗೆ ಸುಮಾರು 11 ಬಿಲಿಯನ್ ಕ್ಯೂಬಿಕ್ ಮೀಟರ್ ಅನಿಲವು ಹತ್ತಿರದ ನಿಕ್ಷೇಪಗಳಿಂದ ಹೊರಹೋಗಿದ್ದು, ಈ ಪೈಕಿ 8.9 ಬಿಸಿಎಂ ರಿಲಾಯನ್ಸ್ ನಿಂದ ಸೆಳೆಯಲ್ಪಟ್ಟಿರುವುದು ಪಕ್ಕಾ ಆಗಿದೆ ಎಂದು ಸಮಿತಿಯು ಪರಿಣತರ ಅಧ್ಯಯನ ವರದಿಗಳನ್ನು ಉಲ್ಲೇಖಿಸಿ ಹೇಳಿದೆ.

ಇವೆಲ್ಲದರ ನಷ್ಟವನ್ನು ರಿಲಾಯನ್ಸ್ ಈಗ ನೇರ ಸರ್ಕಾರಕ್ಕೆ ತುಂಬುವಂತಾಗಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಏಕೆಂದರೆ ತನಿಖೆಯಲ್ಲಿ ಬಹಿರಂಗವಾಗಿರುವ ಪ್ರಕಾರ, ಒಎನ್ ಜಿಸಿ ಸಹ ತನ್ನ ನಿಕ್ಷೇಪವು ರಿಲಾಯನ್ಸ್ ನಿಕ್ಷೇಪದೊಂದಿಗೆ ಬೆಸೆದುಕೊಂಡಿರುವುದನ್ನು ತಿಳಿದಿದ್ದೂ ಅದನ್ನು ನಿಯಂತ್ರಕರ ಗಮನಕ್ಕೆ ತರಲಿಲ್ಲ. ಅಲ್ಲದೇ 1997ರಲ್ಲಿ ತನ್ನ ಸುಪರ್ದಿಗೆ ಬಂದ ಅನಿಲ ನಿಕ್ಷೇಪಗಳ ಮೇಲೆ ಸುದೀರ್ಘ ಏಳು ವರ್ಷಗಳ ಕಾಲ ಯಾವ ಕಾರ್ಯವನ್ನೂ ಕೈಗೊಳ್ಳದ ಸಂಸ್ಥೆಯ ಉನ್ನತ ಅಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸುವಂತೆ ಶಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ.

ವರದಿ ಪರಿಶೀಲಿಸಿ ಸೆಪ್ಟೆಂಬರ್ ಅಂತ್ಯದ ವೇಳೆಗೆ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

2012ರಲ್ಲಿ ಅಂದಿನ ಯುಪಿಎ ಸರ್ಕಾರವು ಜೈಪಾಲ್ ರೆಡ್ಡಿಯವರನ್ನು ಬದಲಾಯಿಸಿ ಆ ಸ್ಥಾನಕ್ಕೆ ವೀರಪ್ಪ ಮೊಯ್ಲಿ ಅವರನ್ನು ತಂದಾಗಲೇ, ರಿಲಾಯನ್ಸ್ ಲಾಬಿಗಳಿಗೆ ಮಣಿಯದೇ ಇದ್ದಿದ್ದರಿಂದ ರೆಡ್ಡಿ ಬೆಲೆ ತೆರಬೇಕಾಯಿತು ಅಂತ ಪ್ರತಿಪಕ್ಷ ಪಾಳೆಯದಿಂದ ಆರೋಪ ಕೇಳಿಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

ಮೋದಿ ಸರ್ಕಾರ ಬರುತ್ತಲೇ ಹೀಗೆ ಹಿತಾಸಕ್ತಿಗಳಿಗೆ ಎಡೆಮಾಡಿಕೊಡುತ್ತಿದ್ದ ತೈಲ ನೀತಿಯನ್ನೇ ಸಂಪೂರ್ಣ ಬದಲಿಸಿದ್ದರ ಬಗ್ಗೆ ಈ ಹಿಂದೆ ಪ್ರಕಟಿಸಿದ್ದ ಲೇಖನ ಇಲ್ಲಿದೆ.

Leave a Reply