ಇದು ಜಿಎಸ್ಟಿ ಅನುಷ್ಠಾನದ ಓಟ, ಸರ್ಕಾರಿ ವ್ಯವಸ್ಥೆ ಮೈಕೊಡವಿದ್ದರೂ ಮೋದಿ ಸರ್ಕಾರದ ವೇಗಕ್ಕೆ ಕಾರ್ಪೊರೇಟ್ ವಲಯದ ಏದುಸಿರು!

ಡಿಜಿಟಲ್ ಕನ್ನಡ ವಿಶೇಷ:

ಏಕರೂಪ ತೆರಿಗೆ ಸಂಗ್ರಹಿಸಲು ಮೋದಿ ಸರಕಾರ ಜಾರಿಗೆ ತಂದ  ಜಿ ಎಸ್ ಟಿ ಕಾಯ್ದೆಯನ್ನು ಪೂರ್ಣ ರೂಪದಲ್ಲಿ ಕಾರ್ಯರೂಪಕ್ಕೆ ತರಲು ಕನಿಷ್ಟ 16 ರಾಜ್ಯಗಳ ಅನುಮೋದನೆ ಬೇಕಾಗಿತ್ತು. ನಿನ್ನೆ  ಅಂದರೆ ಸೆಪ್ಟೆಂಬರ್ ಒಂದರಂದು ಒಡಿಶಾ ರಾಜ್ಯ  ಜಿ ಎಸ್ ಟಿ ಕಾಯ್ದೆಯನ್ನ ಅನುಮೋದಿಸಿದ 16 ನೇ ರಾಜ್ಯವಾಗಿ ಹೊರ ಹೊಮ್ಮಿದೆ. ಇದರೊಂದಿಗೆ ರಾಷ್ಟ್ರಪತಿಯಿಂದ  ಸಂವಿಧಾನ ತಿದ್ದುಪಡಿಗೆ ಬೇಕಾಗಿದ್ದ ಕನಿಷ್ಟ ರಾಜ್ಯಗಳ ಬೆಂಬಲ ದೊರತಿದೆ.  ಈ ಕಾಯ್ದೆ  ಇದೀಗ ರಾಷ್ಟ್ರಪತಿಗಳ ಅನುಮೋದನೆ ಪಡೆಯಲು ಹೋಗಲಿದೆ. ಇದು ನಮ್ಮ ಸಂವಿಧಾನದ 122ನೇ ತಿದ್ದುಪಡಿಯಾಗಲಿದೆ.
ಅಸ್ಸಾಂ ಇದನ್ನ ಅನುಮೋದಿಸಿದ ಮೊದಲ ರಾಜ್ಯ ( 12 ನೇ ಆಗಸ್ಟ್) ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದೆ. ಇದಾದ ಐದೇ ದಿನದಲ್ಲಿ ಅಂದರೆ 17 ನೇ ಆಗಸ್ಟ್ ಆರ್ ಜೆ ಡಿ, ಜೆ ಡಿ ಯು ಮಿಶ್ರ ಸರಕಾರ ಹೊಂದಿರುವ ಬಿಹಾರ ಎರಡನೇ ರಾಜ್ಯ ಮತ್ತು ಬಿ ಜೆ ಪಿ ಆಡಳಿತವಿರುವ  ಜಾರ್ಖಂಡ್ ಮೂರನೇ ಸ್ಥಾನದಲ್ಲಿವೆ.  ಹೀಗೆ ಅನುಮೋದಿಸಿದ 16 ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಆಡಳಿತವಿರುವ ರಾಜ್ಯಗಳ ಸಂಖ್ಯೆ 8.  ಅಂದರೆ ಉಳಿದ 8 ರಾಜ್ಯಗಳಲ್ಲಿ ಬಿ ಜೆ ಪಿ ಸರಕಾರವಿರದೆ ಇದ್ದರೂ ಅಲ್ಲಿನ ರಾಜ್ಯಗಳು ಶೀಘ್ರ ಅನುಮೋದನೆ ಮಾಡಿರುವುದು ನಿಜಕ್ಕೂ ಈ ಮಸೂದೆಗೆ ಸಿಕ್ಕ ಜಯ ಎಂದೇ ಭಾವಿಸಬಹುದು.
ಇದೆಲ್ಲಾ ಸರಿ, ಈ ಮಸೂದೆಯನ್ನ ಜಾರಿಗೆ ತರಲು ಸಂವಿಧಾನದ ತಿದ್ದುಪಡಿ ಏಕೆ ಬೇಕು?
ಗಮನಿಸಿ, ನಮ್ಮದು ಒಕ್ಕೂಟ ವ್ಯವಸ್ಥೆ ಅಂದರೆ ಭಾರತದಲ್ಲಿ 29 ರಾಜ್ಯಗಳು ಹಾಗು ಎರಡು ಕೇಂದ್ರಾಡಳಿತ ಪ್ರದೇಶಗಳು ಇವೆ. ಇವೆಲ್ಲಾ ಭಾರತ ದೇಶದಲ್ಲಿ ಸೇರಿದಾಗ ಎಲ್ಲರನ್ನೂ ಒಗ್ಗೂಡಿಸಿ ನಡೆಯಲು ಕೆಲವೊಂದು ರೀತಿ ನೀತಿ ನಿಯಮಗಳು ಅವಶ್ಯಕತೆ ಇತ್ತು. ಆ ರೀತಿಯ ರೂಲ್ ಪುಸ್ತಕವೇ ಸಂವಿಧಾನ. ಇದು ಮಾಡಬಹುದು, ಇದು ಮಾಡಬಾರದು ಎನ್ನುವ ನಿಯಮ ತಿಳಿಸುವ ಪುಸ್ತಕ. ಈ ರೂಲ್ ಬುಕ್ ಪ್ರಕಾರ ಕೇಂದ್ರ ಸರಕಾರ ಸರ್ವಿಸ್ ನ ಮೇಲೆ ಟ್ಯಾಕ್ಸ್ ವಿಧಿಸುವ ಶಕ್ತಿ ಹೊಂದಿದೆ ಅದಕ್ಕೆ ಮಾರಾಟದ ಮೇಲೆ ತೆರಿಗೆ ವಿಧಿಸುವ ಶಕ್ತಿ ಇಲ್ಲ. ಇದನ್ನೇ ಇನ್ನೊಂದು ರೀತಿ ಹೇಳಬಹುದು- ಪ್ರತಿ ರಾಜ್ಯವೂ ತನ್ನಲ್ಲಿ ಆಗುವ ಮಾರಾಟದ ಮೇಲೆ ತೆರಿಗೆ ವಿಧಿಸುವ ಹಕ್ಕು ಹೊಂದಿದೆ ಆದರೆ ಸೇವಾ ಪೂರೈಕೆ ಮೇಲೆ ಯಾವುದೇ ರಾಜ್ಯಕ್ಕೂ ತೆರಿಗೆ ವಿಧಿಸುವ ಅಧಿಕಾರ ಇಲ್ಲ. ಅಲ್ಲದೆ ಆಮದು ಮೇಲಿನ ಸುಂಕ ಕೂಡ ರಾಜ್ಯ ಸರಕಾರದ ವ್ಯಾಪ್ತಿಯಲ್ಲಿ ಬರುವುದಿಲ್ಲ.

ವಸ್ತು ಸ್ಥಿತಿ ಹೀಗಿರುವಾಗ ರಾಜ್ಯಗಳ ಅಧಿಕಾರ ಮೊಟಕುಗೊಳಿಸಿ ಕೇಂದ್ರ ಸರಕಾರವೇ ಎಲ್ಲಾ  ತೆರಿಗೆಯನ್ನ ಸಂಗ್ರಹಿಸಲು ನಮ್ಮ ಸಂವಿಧಾನದಲ್ಲಿ ಅನುಮತಿಯಿಲ್ಲ, ಈ ಕಾರಣಕ್ಕೆ ಸಂವಿಧಾನ ತಿದ್ದುಪಡಿ  ಬೇಕಾಯಿತು. ಹೀಗಾಗಲು  ಕನಿಷ್ಠ 16 ರಾಜ್ಯಗಳ ಅನುಮತಿ ಬೇಕಿತ್ತು ಅದು ನಿನ್ನೆ, ಸೆಪ್ಟೆಂಬರ್ ಒಂದು ಒಡಿಶಾ  ಸರಕಾರದ ಮೂಲಕ ಸಾಕಾರವಾಗಿದೆ.

ನಿನ್ನೆ ಒಡಿಶಾ ಸರಕಾರ ಅನುಮೋದಿಸಿದ ಕೆಲವೇ ಗಂಟೆಗಳಲ್ಲಿ ಕೇಂದ್ರ ಸರಕಾರದ  ರೆವೆನ್ಯೂ ಸೆಕ್ರೆಟರಿ   ಹಸ್ಮುಖ್  ಅಧಿಯಾ (Hasmukh Adhia) ಟ್ವೀಟ್ ಮಾಡಿ ಹೇಳುತ್ತಾರೆ
‘ಇದನ್ನು ತಿಳಿಸಲು ಹರ್ಷವಾಗುತ್ತಿದೆ. ಇದನ್ನ ಸಾಧಿಸಲು ನಮಗೆ 30 ದಿನಗಳ ಕಾಲಾವಧಿ ನೀಡಲಾಗಿತ್ತು. ನಾವು 23 ದಿನಗಳಲ್ಲಿ ಇದನ್ನ ಸಾಧಿಸಿದ್ದೇವೆ’ .
ಹೀಗೆಲ್ಲ ಶೀಘ್ರಗತಿಯ ಸಾಕಾರಕ್ಕೆ ಸರಕಾರದಲ್ಲಿ ಕೆಲಸ ಮಾಡುವ ಜನ, ಅಧಿಕಾರಿಗಳು ಹೀಗೆ ದಕ್ಷರೀತಿಯಲ್ಲಿ ಕೆಲಸ ಮಾಡುತ್ತಿರುವುದು ಸ್ಪಷ್ಟ. ಸರ್ಕಾರಿ ವ್ಯವಸ್ಥೆ ತುಂಬ ನಿಧಾನ, ಖಾಸಗಿ ರಂಗ ಓಟದಲ್ಲಿದೆ ಎಂಬುದು ಸಾಮಾನ್ಯ ಗ್ರಹಿಕೆ. ಆದರೆ ಜಿಎಸ್ಟಿ ವಿಷಯದಲ್ಲಿ ಈಗ ಉದ್ಯಮಿಗಳ ಗುಂಪೇ ಟೈಮ್ ಪ್ಲೀಸ್ ಅನ್ನುತ್ತಿದೆ!

‘ಈ ಕಾಯ್ದೆಯನ್ನ ಪ್ರಾಕ್ಟಿಕಲ್ ಆಗಿ ಅಳವಡಿಸಿಕೊಳ್ಳಲು ನಮಗೆ ಸಮಯ ಬೇಕು ಏಪ್ರಿಲ್ 1 ರಿಂದ ಅಳವಡಿಸಿಕೊಳ್ಳಿ ಅಂದರೆ ಅದು ತುಂಬಾ ಕಷ್ಟ, ಇನ್ನೊಂದು ಆರು ತಿಂಗಳು ಮುಂದೂಡಿ ನಮಗೆ ಸೆಪ್ಟೆಂಬರ್ 2017 ರ ವರೆಗೆ ಸಮಯ ನೀಡಿ’ ಎನ್ನುವ ಅಹವಾಲು ತಂದಿರುವವರು ಇಂಡಿಯಾ ಐ ಎನ್ ಸಿ. ಅರ್ಥಾತ್ ದಿಗ್ಗಜ ಕಾರ್ಪೊರೇಟ್ ಸಂಸ್ಥೆಗಳು.  ಕಳೆದ ಎರಡಕ್ಕೂ ಹೆಚ್ಚು ವರ್ಷದಿಂದ ಮೋದಿಯ ಕಾರ್ಯ ವೈಖರಿಗೆ ಹೊಂದಿಕೊಂಡಿರುವ ಸರಕಾರದ ಅಧಿಕಾರಿ ವರ್ಗ ಆತನ ವೇಗಕ್ಕೆ ತಕ್ಕಂತೆ ಕೆಲಸ ಮಾಡುತ್ತಿದೆ. ತಮಗೆ ಬೇಕಾದ ಅನುಮತಿಗಳು ಕೇಳಿದ ತಕ್ಷಣ ಕೊಡಿಸುತ್ತಿದ್ದ ಮೋದಿಯ ಗುಣಗಾನ ಮಾಡುತ್ತಿದ್ದ ದೈತ್ಯ ಕಾರ್ಪೊರೇಟ್ ಸಂಸ್ಥೆಗಳು ಇದೀಗ ಮೋದಿಯ ಇನ್ನೊಂದು ಮುಖದ ದರ್ಶನ ಮಾಡುತ್ತಿವೆ.
ಏಪ್ರಿಲ್ ಒಂದು ಇದನ್ನ ಜಾರಿಗೆ ತರಲು ಇರುವ ಟಾರ್ಗೆಟ್. ಅದು ಯಾವ ಕಾರಣಕ್ಕೂ ಮುಂದೂಡಲು ಬಾರದು. ಬೇಕಾದಲ್ಲಿ ಸಂಸತ್ತಿನ ಅಧಿವೇಶನದ ಅವಧಿ ವಿಸ್ತರಿಸಿಯಾದರೂ ಸರಿ ಈ ಮಸೂದೆಯನ್ನ ಜಾರಿಗೆ ತರಲಾಗುತ್ತದೆ ಎನ್ನುವುದು ಮೋದಿ ಸರಕಾರದ ಅಚಲ ನಿಲುವು.
ಮೋದಿ ಸರಕಾರದ ನಿಲುವು ಅಚಲ ಎನ್ನುವ ವಾಸನೆ ಸಿಕ್ಕ ಮರುಕ್ಷಣ ಒಂದೊಂದೇ ಸಂಸ್ಥೆಗಳು ಎಚ್ಚೆತ್ತುಕೊಂಡಿವೆ . ನಿನ್ನೆಯ ಅವರ ಹೊಸ ರಾಗ ‘ ಹೋಪ್ ಫುಲ್ಲಿ ನಮ್ಮ ಅಧಿಕಾರಿ ವರ್ಗ ಏಪ್ರಿಲ್ ಒಂದಕ್ಕೆ ರೆಡಿ ಆಗಿರುತ್ತಾರೆ’ ಎನ್ನುವುದು.  ವಿತ್ತ ಸಚಿವಾಲಯದಿಂದ ಹೋಗಿರುವ ನೋಟೀಸ್ ಪ್ರಕಾರ ಹೋಪ್ ಫುಲ್ಲಿ ಎನ್ನುವ ರಾಗಕ್ಕೆ ಜಾಗವಿಲ್ಲ, ಅವಶ್ಯ ಬಿದ್ದಲ್ಲಿ ಹಗಲು ರಾತ್ರಿ ದುಡಿಯಿರಿ. ಈ ಕಾಯಿದೆ ಏಪ್ರಿಲ್ ಒಂದರಿಂದ ಜಾರಿಗೆ ಬರುವುದು ನಿಶ್ಚಿತ .
ಸರಿ, ಈ ಬಿಲ್ ಕಾಯಿದೆ ಆಗಿ ಪಾಸ್ ಆಗಲು ಬೇಕಿದ್ದ ಕನಿಷ್ಠ ರಾಜ್ಯಗಳ ಬೆಂಬಲ ಸಿಕ್ಕಾಯ್ತು ಮುಂದಿನ ದಾರಿ ಏನು?

# ಈ ಬಿಲ್ ರಾಷ್ಟ್ರಪತಿಯವರ ಅನುಮೋದನೆ ಪಡೆದು ಕಾಯಿದೆ ರೂಪ ಪಡೆದ ತಕ್ಷಣ ಜಿ ಎಸ್ ಟಿ ಸಮಿತಿಯನ್ನ ರಚಿಸಲಾಗುವುದು . ಪ್ರತಿಯೊಂದಕ್ಕೂ ವೇಳೆ ನಿಗದಿ ಮಾಡಲಾಗಿದೆ . ಈ ಸಮಿತಿಯ ರಚನೆಗೆ ಒಂದು ವಾರದ ಕಾಲಾವಕಾಶ ನೀಡಲಾಗಿದೆ.

#ಸಮಿತಿ ರಚನೆಯಾದ ನಂತರ ಜಿ ಎಸ್ ಟಿ ಹಾಗು ಐ ಜಿ ಎಸ್ ಟಿ ಕಾನೂನು ರಚಿಸಬೇಕು. ಇದು ಕೇಂದ್ರ ಸರಕಾರದ ಕೆಲಸ ಇದಕ್ಕೂ ಡೆಡ್ಲೈನ್ ಉಂಟು. ಈ ಕಾರ್ಯ ಎರಡು ತಿಂಗಳಲ್ಲಿ  ಮುಗಿಸಬೇಕು.

#ರಾಜ್ಯ ಸರಕಾರಗಳು ಕ್ರಮವಾಗಿ ತಮ್ಮ ಜಿ ಎಸ್ ಟಿ ಕಾನೂನು ಸಿದ್ದ ಪಡಿಸಿಕೊಳ್ಳಬೇಕು. ಡಿಸೆಂಬರ್ ಅಂತ್ಯದೊಳಗೆ ಎಲ್ಲಾ ರಾಜ್ಯಗಳೂ ತಮ್ಮ ರೂಲ್ ಬುಕ್ ನೊಂದಿಗೆ ಸಿದ್ಧವಿರಬೇಕು.

#ಟ್ಯಾಕ್ಸ್ ಡಿಪಾರ್ಟ್ಮೆಂಟ್ ಫೆಬ್ರವರಿ 2017 ರ ಹೊತ್ತಿಗೆ ಎಲ್ಲಾ ರೀತಿಯಲ್ಲೂ ಸನ್ನದ್ಧವಾಗಿರಲು ಸೂಚಿಸಲಾಗಿದೆ.

# ಎಲ್ಲಾ ಬಿಸಿನೆಸ್ ಹೌಸ್ಗಳು ಮಾರ್ಚ್ ತಿಂಗಳಿಗೆ ರೆಡಿ ಆಗಿರಬೇಕು.

# ಏಪ್ರಿಲ್ 1, 2017. ಭಾರತೀಯ ವಿತ್ತ ಪ್ರಪಂಚದಲ್ಲಿ ಹೊಸ ಶಕೆ ಆರಂಭವಾಗಲಿದೆ.

ಮನೆಯಲ್ಲಿ ಇರುವ ನಾಲ್ಕು ಸದಸ್ಯರ ಅನುಮತಿ ಪಡೆಯಲು ತಿಣುಕಾಡುವ ಸ್ಥಿತಿ ಇರುವಾಗ ಒಂದು ಭಾರತದಂತಹ ದೇಶದಲ್ಲಿ ಅಂದುಕೊಂಡ ವೇಳೆಗೆ ಒಂದು ಕಾರ್ಯ ಜಾರಿಗೆ ತರುವುದು ಸುಲಭದ ಮಾತಲ್ಲ. ಮೋದಿ ಸರಕಾರಕ್ಕೆ ಅಭಿನಂದನೆ ತಿಳಿಸೋಣ. ಹಾಗೆಯೆ ಹಗಲು ರಾತ್ರಿಗಳ ಅರಿವಿಲ್ಲದೆ ದುಡಿದ ಅಧಿಕಾರ ವರ್ಗವನ್ನೂ ನೆನೆಯೋಣ.

1 COMMENT

Leave a Reply