ಪಾಕಿಸ್ತಾನಕ್ಕೆ ಮುಸ್ಲಿಮೇತರರು ಬೇಕಾಗಿಲ್ಲವೇನೋ… ಆದರೆ ವಕೀಲರೂ ಬೇಡವಾದರೆ? ಆತ್ಮಹತ್ಯಾ ಬಾಂಬ್ ದಾಳಿ: 18 ಸಾವು 50ಕ್ಕೂ ಹೆಚ್ಚು ಗಾಯಾಳು

ಡಿಜಿಟಲ್ ಕನ್ನಡ ಟೀಮ್:

ಧರ್ಮದ ಆಧಾರದಲ್ಲಿ ರೂಪುಗೊಂಡ ಪಾಕಿಸ್ತಾನಕ್ಕೆ ಮುಸ್ಲಿಮೇತರರು ಇದ್ದರೂ ಅಷ್ಟೆ, ಬಿಟ್ಟರೂ ಅಷ್ಟೆ ಅಂತಾಗಿರುವುದು ತಿಳಿದಿರುವ ವಿಷಯವೇ. ಆದರೆ ನ್ಯಾಯವಾದಿಗಳೂ ಬೇಕಾಗಿಲ್ಲವೇ? ಶುಕ್ರವಾರ ಅಲ್ಲಿನ ಎರಡು ಸ್ಥಳಗಳಲ್ಲಾದ ಆತ್ಮಹತ್ಯಾ ಬಾಂಬ್ ದಾಳಿಗಳು ಕ್ರಮವಾಗಿ ಕ್ರೈಸ್ತರನ್ನು ಮತ್ತು ನ್ಯಾಯವಾದಿಗಳನ್ನು ಗುರಿಯಾಗಿಸಿಕೊಂಡಿದ್ದವು.

ನ್ಯಾಯಾಲಯ ಮತ್ತು ಕ್ರಿಶ್ಚಿಯನ್ ಕಾಲೋನಿಯಲ್ಲಿ ಪ್ರತ್ಯೇಕ ಆತ್ಮಹತ್ಯಾ ಬಾಂಬ್ ದಾಳಿ, 18 ಸಾವು, 52 ಮಂದಿಗೆ ಗಾಯ.

ಶುಕ್ರವಾರ ಮೊದಲು ಬಾಂಬ್ ದಾಳಿ ನಡೆದದ್ದು, ಪೇಶಾವರದ ವಾಯುವ್ಯ ಭಾಗದಲ್ಲಿರೋ ಕ್ರಿಶ್ಚಿಯನ್ನರ ಕಾಲೋನಿ ಮೇಲೆ. ನಾಲ್ವರು ಉಗ್ರರು ಕಾಲೋನಿ ಮೇಲೆ ದಾಳಿ ನಡೆಸಿದ್ದರು. ಆಗ ಇಬ್ಬರು ಉಗ್ರರು ತಮ್ಮ ಜಾಕೆಟ್ ನಲ್ಲಿದ್ದ ಬಾಂಬ್ ಅನ್ನು ಸ್ಫೋಟಿಸಿಕೊಂಡರು. ಪರಿಣಾಮ ಓರ್ವ ಭದ್ರತಾ ಸಿಬ್ಬಂದಿ ಮೃತಪಟ್ಟಿರುವುದಾಗಿ ವರದಿಗಳು ಬಂದಿವೆ. ಇನ್ನು ಉಳಿದ ಇಬ್ಬರು ಉಗ್ರರು ಬಾಂಬ್ ಸ್ಫೋಟಿಸಿಕೊಳ್ಳುವ ಮುನ್ನವೇ ಕಾರ್ಯಾಚರಣೆ ನಡೆಸಿದ ಪಾಕ್ ಸೇನೆ ಈ ಇಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿತು. ಈ ಘಟನೆಯಲ್ಲಿ ಪೊಲೀಸ್ ಅಧಿಕಾರಿ ಸೇರಿದಂತೆ ಐವರಿಗೆ ಗಾಯಗಳಾಗಿವೆ. ಇಬ್ಬರು ಉಗ್ರರು ಬಾಂಬ್ ಸ್ಫೋಟಿಸುವ ಮುನ್ನವೇ ಹತ್ಯೆಯಾದ್ದರಿಂದ ಸಾವು ಪ್ರಮಾಣ ತಗ್ಗಿರುವುದಾಗಿ ಮಾಹಿತಿಗಳು ಬಂದಿವೆ.

ಆದರೆ, ಕ್ರಿಶ್ಚಿಯನ್ ಕಾಲೋನಿ ಮೇಲಿನ ದಾಳಿಗಿಂತ ಹೆಚ್ಚು ಹಾನಿ ಸಂಭವಿಸಿದ್ದು ಪೇಶಾವರದ ಮರ್ದಾನ್ ಜಿಲ್ಲೆಯ ನ್ಯಾಯಾಲಯದ ಮೇಲಿನ ದಾಳಿಯಲ್ಲಿ. ಕ್ರಿಶ್ಚಿಯನ್ ಕಾಲೋನಿ ಮೇಲೆ ದಾಳಿ ನಡೆದ ಕೆಲವು ಗಂಟೆಗಳ ನಂತರ ನ್ಯಾಯಾಲಯದ ಮೇಲೆ ದಾಳಿ ನಡೆಯಿತು. ಇಲ್ಲಿ ದಾಳಿ ನಡೆಸಿದ್ದು ಒಬ್ಬನೇ ಆದರೂ ಪರಿಣಾಮ ಮಾತ್ರ ತೀವ್ರವಾಗಿತ್ತು. ಉಗ್ರ ಕೋರ್ಟ್ ಆವರಣದಲ್ಲೆ ಬಾಂಬ್ ಸಿಡಿಸಿಕೊಂಡ ಪರಿಣಾಮ 17 ಮಂದಿ ಬಲಿಯಾದರು. ಆ ಪೈಕಿ 12 ವಕೀಲರು, ಪೊಲೀಸರು ಹಾಗೂ ಸಾಮಾನ್ಯ ಜನರು ಇದ್ದರು. ಇನ್ನು ಈ ದಾಳಿಯಲ್ಲಿ 52ಕ್ಕೂ ಹೆಚ್ಚು ಮಂದಿಗೆ ತೀವ್ರ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕ್ರಿಶ್ಚಿಯನ್ ಸಮುದಾಯ ಹಾಗೂ ಕೋರ್ಟ್ ಮೇಲೆ ಉಗ್ರರ ದಾಳಿ ಇದೇ ಮೊದಲಲ್ಲ. ಕಳೆದ ತಿಂಗಳಷ್ಟೇ ಬಲೂಚಿಸ್ತಾನ ಪ್ರದೇಶದ ರಾಜಧಾನಿ ಕ್ವೆಟ್ಟಾದ ನ್ಯಾಯಾಲಯದಲ್ಲಿ ನಡೆದ ದಾಳಿಗೆ ನಗರದ ಹಿರಿಯ ವಕೀಲ ಮೃತರಾದರು. ಅವರಿಗೆ ಸಂತಾಪ ಸೂಚಿಸುವುದಕ್ಕೆ ವಕೀಲ ಸಮುದಾಯವೆಲ್ಲ ಆಸ್ಪತ್ರೆಯಲ್ಲಿ ನೆರೆದಿದ್ದಾಗ ಆದ ದಾಳಿಗೆ  70 ಮಂದಿ ಮೃತಪಟ್ಟಿದ್ದರು. ಅರ್ಥಾತ್, ಒಂದಿಡೀ ಸ್ಥಳೀಯ ನ್ಯಾಯ ಪೀಳಿಗೆಯೇ ಇಲ್ಲವಾಗಿಹೋಗಿತ್ತು. ಇನ್ನು ಇದೇ ವರ್ಷ ಲಾಹೋರ್ ನಲ್ಲಿ ಕ್ರಿಶ್ಚಿಯನ್ ಸಮುದಾಯದ ಮೇಲೆ ದಾಳಿ ನಡೆಸಿದ್ದ ತಾಲಿಬಾನ್ ಆತ್ಮಹತ್ಯಾ ಉಗ್ರರು 70ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದ್ದನ್ನು ಈ ಘಟನೆ ಮತ್ತೆ ನೆನಪಿಸಿದೆ.

‘ಪಾಕ್ ನೆಲದಿಂದ ಕಾರ್ಯಾಚರಣೆ ಮಾಡುತ್ತಿದ್ದ ಎಲ್ಲ ಭಯೋತ್ಪಾದಕ ಗುಂಪನ್ನು ಸೇನೆಯು ಹತ್ತಿಕ್ಕಿದೆ’ ಎಂದು ಪಾಕ್ ಸೇನೆಯ ವಕ್ತಾರ ಹೇಳಿಕೆ ನೀಡಿದ ಮರು ದಿನವೇ ಈ ದಾಳಿ ನಡೆದಿದೆ. ಈ ಘಟನೆ ಪಾಕಿಸ್ತಾನದಲ್ಲಿ ಉಗ್ರರ ಸಂತತಿ ನಾಶವಾಗಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಜಮಾತುಲ್ ಅಹ್ರರ್ ಎಂಬ ಸಂಘಟನೆ ಈ ದಾಳಿಗಳ ಹೊಣೆ ಹೊತ್ತಿದೆ. ತಾನೇ ಸಲಹಿದ್ದ ಅನಿಷ್ಟಕ್ಕೆ ಪಾಕಿಸ್ತಾನ ತನ್ನನ್ನು ಒಡ್ಡಿಕೊಳ್ಳುತ್ತಿರುವ ಘಟನೆಯಾಗಿಯೂ ಇದನ್ನು ನೋಡಬಹುದು. ಒಂದೆಡೆ ಅಮೆರಿಕದಂಥ ರಾಷ್ಟ್ರದಿಂದ ಉಗ್ರವಾದ ಹತ್ತಿಕ್ಕುವುದಕ್ಕೆ ಎಂಬ ಹೆಸರಲ್ಲಿ ಬರುತ್ತಿರುವ ಹಣ ನಿಂತಿರುವುದು ಪಾಕಿಸ್ತಾನಕ್ಕೆ ನಷ್ಟದ ಬಾಬತ್ತಾಗಿದೆ. ಇದೇ ಸಂಘಟನೆ ವಿರುದ್ಧ ಪಾಕಿಸ್ತಾನವು ಹೇಗೆಲ್ಲ ಯಶಸ್ಸು ಸಾಧಿಸುತ್ತಿದೆ ಎಂಬುದರ ವಿವರವನ್ನು ಅಲ್ಲಿನ ಆಂತರಿಕ ಭದ್ರತೆ ವಿಭಾಗವು ಮಾಧ್ಯಮದ ಮುಂದಿಟ್ಟು, ಉಗ್ರವಾದ ಹತ್ತಿಕ್ಕುವಲ್ಲಿ ನಾವು ಬಹಳ ಗಾಂಭೀರ್ಯ ಹೊಂದಿದ್ದೇವೆ ಎಂದು ಗುರುವಾರವಷ್ಟೆ ಹಿತಾನುಭವ ಚಿತ್ರಣ ನೀಡಿತ್ತು. ಶುಕ್ರವಾರ ಆ ಚಿತ್ರಣ ಚಿಂದಿಯಾಗಿದೆ.

Leave a Reply