ಚೀನಾದ ಜಿ-20 ಸಮಾವೇಶಕ್ಕೆ ಪ್ರಧಾನಿ ಮೋದಿಯ ವಾಯಾ ವಿಯೆಟ್ನಾಂ ಮಾರ್ಗ, ನಾವು ತಿಳಿದಿರಬೇಕಾದ ಕಾರ್ಯತಂತ್ರದ ವಿವರ

ಚೈತನ್ಯ ಹೆಗಡೆ

ಒಂದೆಡೆ, ಭಾರತ ಭೇಟಿಗೆ ಬಂದಿದ್ದ ಅಮೆರಿಕ ಸಚಿವ ಜಾನ್ ಕೆರ್ರಿ, ಇಲ್ಲೇ ತಮ್ಮ ಇರುವಿಕೆ ಲಂಬಿಸಿ, ನಂತರ ಚೀನಾದಲ್ಲಿ ನಡೆಯಲಿರುವ ಜಿ-20 ಸಮಾವೇಶದಲ್ಲಿ ಅಧ್ಯಕ್ಷ ಬರಾಕ್ ಒಬಾಮರನ್ನು ಸೇರಿಕೊಳ್ಳಲಿದ್ದಾರೆ. ಇನ್ನೊಂದೆಡೆ ಜಿ 20 ಸಮಾವೇಶಕ್ಕೆಂದೇ ಶುಕ್ರವಾರ ಭಾರತದಿಂದ ಹೊರಟಿರುವ ಪ್ರಧಾನಿ ಮೋದಿ, ಚೀನಾ ತಲುಪುವುದಕ್ಕೂ ಮೊದಲು ವಿಯೆಟ್ನಾಂನಲ್ಲಿ ಎರಡು ದಿನ ಮಾತುಕತೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇವತ್ತೇ ವಿಯೆಟ್ನಾಮಿನ ರಾಷ್ಟ್ರೀಯ ದಿನ ಬೇರೆ. ಇಂಥ ಉತ್ಸಾಹದ ವಾತಾವರಣದಲ್ಲೇ ಪ್ರಧಾನಿ ಮೋದಿ ಭೇಟಿ ವಿಯೆಟ್ನಾಮಿಗೆ.

ಜಾಗತಿಕ ರಾಜಕೀಯದ ಚದುರಂಗದಲ್ಲಿ ಒಮ್ಮೊಮ್ಮೆ ಒಂದು ಬಗೆಯ ಆಟ ಕಳೆಗಟ್ಟುತ್ತದೆ. ಇದೀಗ ಚೀನಾವನ್ನು ಎದುರಿಸುವ ನಿಟ್ಟಿನಲ್ಲಿ ವಿಯೆಟ್ನಾಂಗೆ ಭಾರತ ಮತ್ತು ಅಮೆರಿಕಗಳೆರಡೂ ಸ್ನೇಹಿತರಾಗುವ ಕಾಲ. ಸೌತ್ ಚೀನಾ ಸಮುದ್ರದ ಮೇಲೆ ಚೀನಾ ಹಿಡಿತ ತಪ್ಪಿಸುವುದಕ್ಕೆ ಅಮೆರಿಕ-ಭಾರತ-ವಿಯೆಟ್ನಾಂ ಒಂದಾಗಿರುವ ಕಾಲಘಟ್ಟವಿದು. 1960-1975 ರ ನಡುವೆ ಯಾವ ವಿಯೆಟ್ನಾಂ ವಿರುದ್ಧ ಅಮೆರಿಕವು ಅತಿ ಭೀಕರ ಯುದ್ಧದಲ್ಲಿ ತೊಡಗಿಸಿಕೊಂಡು ಸಾವಿರಾರು ಮಂದಿಯ ಪ್ರಾಣಹಾನಿಗೆ ಕಾರಣವಾಗಿತ್ತೋ ಅಂಥ ದೇಶಕ್ಕೆ ಖುದ್ದು ಒಬಾಮಾ ಭೇಟಿ ನೀಡಿ, ಕಳೆದ ಮೇನಲ್ಲಿ ಅದರ ಮೇಲೆ ವಿಧಿಸಿದ್ದ ಶಸ್ತ್ರಾಸ್ತ್ರ ನಿರ್ಬಂಧ ತೆರವಿನ ಘೋಷಣೆ ಮಾಡಿದ್ದಾರೆ. ಇತ್ತ ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಗಳನ್ನು ವಿಯೆಟ್ನಾಂ ಅಪೇಕ್ಷಿಸುತ್ತಿದ್ದು, ಈಗಿನ ಸರ್ಕಾರ ಅದನ್ನು ಒದಗಿಸುವುದಕ್ಕೆ ಉತ್ಸುಕವಾಗಿದೆ. ಈ ಹಿಂದೆ ರಕ್ಷಣಾ ಮಂತ್ರಿ ಮನೋಹರ್ ಪರಿಕರ್ ಸಹ ವಿಯೆಟ್ನಾಂಗೆ ತೆರಳಿ ಮಾತುಕತೆ ನಡೆಸಿ ಬಂದಿದ್ದರು. ಇದಕ್ಕೂ ಮೊದಲು ಭಾರತದಲ್ಲಿ ಆಡಳಿತ ನಡೆಸಿದ ಸರ್ಕಾರಗಳು, ಅದೆಲ್ಲಿ ಚೀನಾಕ್ಕೆ ಸಿಟ್ಟು ಬರುತ್ತದೋ ಎಂದು ವಿಯೆಟ್ನಾಂ ಬೇಡಿಕೆಗೆ ಪುರಸ್ಕಾರ ನೀಡಿರಲಿಲ್ಲ.

SouthChinaSea

ಇದೀಗ ಪ್ರಧಾನಿ ನರೇಂದ್ರ ಮೋದಿ, ‘ವಿಯೆಟ್ನಾಂ ಜತೆಗಿನ ಬಾಂಧವ್ಯ ನನ್ನ ಸರ್ಕಾರದ ಆದ್ಯತೆಗಳಲ್ಲೊಂದು. ಇದರಿಂದ ಏಷ್ಯ ಮತ್ತು ಜಗತ್ತಿಗೆ ಅನುಕೂಲವಾಗಲಿದೆ’ ಎಂದಿದ್ದಾರೆ.

ಒಂದು ಕಡೆ ಚೀನಾವು ನೇಪಾಳ, ಶ್ರೀಲಂಕಾ, ಮಯನ್ಮಾರ್ ಹೀಗೆ ಚಿಕ್ಕಪುಟ್ಟ ರಾಷ್ಟ್ರಗಳನ್ನೆಲ್ಲ ತನ್ನ ಪ್ರಭಾವದ ತೆಕ್ಕೆಗೆ ತೆಗೆದುಕೊಂಡುಬಿಟ್ಟಿದೆ. ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿ ಮೇಲಿನ ಒತ್ತಡ ದೊಡ್ಡದು. ನಮ್ಮ ಸಹಜ ಸ್ನೇಹಿತನಾಗಬೇಕಿದ್ದ ಮಯನ್ಮಾರಿನಲ್ಲಿ ಈ ಹಿಂದೆ ಸೇನಾಡಳಿತವಿತ್ತೆಂಬ ಕಾರಣಕ್ಕೆ ಅಲ್ಲಿನ ರಾಜತಾಂತ್ರಿಕ ಸಂಬಂಧಗಳನ್ನೆಲ್ಲ ಕಡಿದುಕೊಂಡಿದ್ದ ಕಾರಣ ಅದು ಚೀನಾದತ್ತ ವಾಲಿತ್ತು. ಈ ಸಮೀಕರಣವನ್ನೂ ಸರಿ ಮಾಡಿಕೊಳ್ಳುವ ತ್ವರಿತ ಪ್ರಯತ್ನದಲ್ಲಿದೆ ಭಾರತ.

ಹೀಗೆ ಚೀನಾವನ್ನು ಎದುರುಗೊಳ್ಳುವ ಭಾರತದ ನೀತಿಯಲ್ಲಿ ವಿಯೆಟ್ನಾಮಿನ ಪಾತ್ರ ದೊಡ್ಡದಿದೆ. ವಿಯೆಟ್ನಾಂ ಸಾಗರ ತೀರದಲ್ಲಿ ತೈಲ ಉತ್ಖನನಕ್ಕೆ ಅಲ್ಲಿಂದ ಬಂದಿರುವ ಆಹ್ವಾನವನ್ನು ಸರ್ಕಾರಿ ಸ್ವಾಮ್ಯದ ಒಎನ್ಜಿಸಿ ವಿದೇಶ್ ಲಿಮಿಟೆಡ್ ಆಗಲೇ ಒಪ್ಪಿದೆ. ಈ ಬಗ್ಗೆ ತನ್ನ ತಕರಾರಿದೆ ಎಂದು ಚೀನಾ ಹೇಳಿರುವಾಗಲೂ ಭಾರತ ಆ ಬಗ್ಗೆ ಧೃತಿಗೆಟ್ಟಿಲ್ಲ. ವಿಯೆಟ್ನಾಂನ ದಕ್ಷಿಣಕ್ಕಿರುವ ಹೋಚಿ ಮನ್ ನಗರದಲ್ಲಿ ಮಾಹಿತಿ ಸಂಗ್ರಹ, ಮಾರ್ಗಪತ್ತೆ ಹಾಗೂ ದೂರ ಸಂಚಾರ ಪರಿವೀಕ್ಷಣೆಗೆ ಅನುಕೂಲವಾಗುವಂತೆ ಇಸ್ರೋದ ಪರಿವೀಕ್ಷಣಾ ಕೇಂದ್ರವೂ ಸಿದ್ಧವಾಗುತ್ತಿದೆ. 150 ಕೋಟಿ ರುಪಾಯಿಗಳ ವೆಚ್ಚದಲ್ಲಿ ಹೋಚಿ ಮನ್ ನಲ್ಲಿ ನಿರ್ಮಾಣವಾಗಿರುವ ಈ ಕೇಂದ್ರವನ್ನು ಅದಾಗಲೇ ಇಂಡೋನೇಷ್ಯದಲ್ಲಿ ಭಾರತವು ಹೊಂದಿರುವ ಇನ್ನೊಂದು ಕೇಂದ್ರದೊಂದಿಗೆ ಬೆಸೆಯಲಾಗುತ್ತದೆ. ಚೀನಾದ ಚಿಂತನ ಕೂಟಗಳು ಇದ್ದನೂ ‘ದಕ್ಷಿಣ ಚೀನಾ ಸಮುದ್ರದ ಕದಡಿದ ಸ್ಥಿತಿಯನ್ನು ಇನ್ನಷ್ಟು ಕೆಟ್ಟದಾಗಿಸುವ ಭಾರತದ ಯತ್ನ’ ಎಂದು ಜರೆದಿವೆಯಾದರೂ ಭಾರತ ತಲೆಕೆಡಿಸಿಕೊಂಡಿಲ್ಲ.

ಇಷ್ಟಕ್ಕೂ ವಿಯೆಟ್ನಾಮಿನಂಥ ಧಾಡಸಿ ದೇಶದೊಂದಿಗೆ ಸ್ನೇಹ ಹೊಂದುವುದೂ ಹೆಮ್ಮೆಯ ಸಂಗತಿಯೇ ಬಿಡಿ. ದೈತ್ಯ ಚೀನಾದ ಮಗ್ಗುಲಲ್ಲೇ ಇದ್ದರೂ ಅದಕ್ಕೆ ಗೋಣಾಡಿಸದೇ ತೋರುತ್ತಿರುವ ಪ್ರತಿರೋಧ ಒಂದೆಡೆಯಾದರೆ, ಈ ಚಿಕ್ಕ ದೇಶ ಈ ಹಿಂದೆ ಹೊಚಿ ಮನ್ ನೇತೃತ್ವದಲ್ಲಿ ಫ್ರಾನ್ಸ್, ಅಮೆರಿಕ ಹೀಗೆ ತನ್ನನ್ನು ಆಕ್ರಮಿಸಿಕೊಳ್ಳಲು ಬಂದವರನ್ನೆಲ್ಲ ಬಡಿದು ಕಳುಹಿಸಿದೆ.

ಸೆಪ್ಟೆಂಬರ್ 2 ಆತ ತೀರಿಕೊಂಡ ದಿನ. ಈ ಸಂಬಂಧ ಗೌರವ ನಮನ ಅರ್ಪಿಸುವುದೂ ಪ್ರಧಾನಿ ಭೇಟಿಯಲ್ಲಿ ಸೇರಿಕೊಂಡಿರುವ ಅಂಶ.

Leave a Reply