ತ.ನಾಡಿಗೆ ನೀರು ಬಿಡಲು ಸಿದ್ಧವಾಗಿರಿ ಎಂಬಂತಿದೆ ಸುಪ್ರೀಂ ಸಲಹೆ, ತಲಾಖ್ ನಿರ್ಮೂಲನೆಗೆ ತಕರಾರು, ಪಂಜಾಬಿನಲ್ಲಿ ಸಿಧು ಹೊಸಪಕ್ಷ, ಗೋವಾ ಬಿಜೆಪಿ ವಿರುದ್ಧ ಸಿಡಿದ ಆರೆಸ್ಸೆಸ್ ಪ್ರಮುಖ

ಭಾರತ ಬಂದ್ ಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ. ಬೆಂಗಳೂರಿನಲ್ಲಿ ಮೆರವಣಿಗೆಯ ದೃಶ್ಯ. ನಗರದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಕಂಡು ಬಂದಿತಾದರೂ ಖಾಸಗಿ ವಲಯದ ಬಹುತೇಕ ಅಂಗಡಿ, ಕಚೇರಿಗಳೆಲ್ಲ ತೆರೆದಿದ್ದವು.

ಡಿಜಿಟಲ್ ಕನ್ನಡ ಟೀಮ್:

ಬದುಕಿ ಬದುಕಲು ಬಿಡಿ ಅಂತು ಸುಪ್ರೀಂ ಕೋರ್ಟ್

ಬದುಕಿ… ಬದುಕಲು ಬಿಡಿ ಎಂಬ ತತ್ವದ ಆಧಾರದ ಮೇಲೆ ತಮಿಳುನಾಡಿಗೆ ಕಾವೇರಿ ನೀರು ಬಿಡುವ ಬಗ್ಗೆ ಕರ್ನಾಟಕ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು… ಹೀಗಂತಾ ಸಲಹೆ ನೀಡಿರೋದು ಸುಪ್ರೀಂ ಕೋರ್ಟ್.

ಕಾವೇರು ನೀರು ಬಿಡುಗಡೆಗೆ ಸಂಬಂಧಿಸಿದಂತೆ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಿಚಾರಣೆ ನಡೆಸಿತು. ಈ ವೇಳೆ ‘ಕರ್ನಾಟಕ ಸರ್ಕಾರ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ನಿಗದಿತ ಪ್ರಮಾಣದಲ್ಲಿ ನೀರು ಬಿಟ್ಟಿಲ್ಲ.’ ಎಂದು ತಮಿಳುನಾಡು ಪರ ವಕೀಲರು ವಾದಿಸಿದ್ರು. ಇದಕ್ಕೆ ಕರ್ನಾಟಕದ ಪರ ವಕೀಲರಾದ ಫಾಲಿ ನಾರಿಮನ್ ಅವರ ಪ್ರತಿವಾದ ಹೀಗಿತ್ತು… ‘ಪ್ರಸಕ್ತ ಸಾಲಿನಲ್ಲಿ ಮಳೆಯ ಅಭಾವದಿಂದ ರಾಜ್ಯದಲ್ಲಿನ ಜಲಾಶಯಗಳು ವಾಡಿಕೆಯಷ್ಟು ತುಂಬಿಲ್ಲ. ಹೀಗಾಗಿ ತಮಿಳುನಾಡಿಗೆ ನೀರು ಬಿಡೋದು ಕಷ್ಟವಾಗಿದೆ.’

ಈ ಇಬ್ಬರ ವಾದ ಕೇಳಿದ ನಂತರ ಸುಪ್ರೀಂ ಕೋರ್ಟ್ ಈ ಸಲಹೆ ನೀಡಿದ್ದು, ಈ ಬಗ್ಗೆ ಕರ್ನಾಟಕ ಸರ್ಕಾರದ ಮನವೊಲಿಸುವಂತೆ ವಕೀಲರಿಗೆ ಸೂಚಿಸಿ, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಿತು.

ಮಹಿಳಾ ಉದ್ಯಮಿಗಳ ಸಮಾವೇಶ

ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ವಿ.ಕನೆಕ್ಟ್ ಇಂಟರ್ ನ್ಯಾಷನಲ್ ಸಂಸ್ಥೆಯ ಸಹಯೋಗದೊಂದಿಗೆ ಮಹಿಳಾ ಉದ್ಯಮಿಗಳ ಸಮಾವೇಶ ‘ಥಿಂಕ್ ಬಿಗ್-2016’ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ ಬೃಹತ್ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ. ಈ ಬಗ್ಗೆ ಅವರು ಹೇಳಿದಿಷ್ಟು…

‘ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನವೆಂಬರ್ 14 ಮತ್ತು 15 ರಂದು ಈ ಸಮಾವೇಶ ನಡೆಯಲಿದ್ದು, ಇದು ದೇಶದಲ್ಲಿಯೇ ಮಹಿಳಾ ಉದ್ಯಮಿಗಳ ಮೊದಲ ಸಮಾವೇಶವಾಗಲಿದೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ಅದಕ್ಕಾಗಿ ರಾಜ್ಯ ಸರ್ಕಾರ ಎಲ್ಲಾ ರೀತಿಯ ಉತ್ತೇಜನ ನೀಡುತ್ತಿದೆ. ಈ ಸಮಾವೇಶದಲ್ಲಿ ವಿವಿಧ ವಲಯಗಳ ನಾಲ್ಕು ಸಾವಿರಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ. ಮಹಿಳೆಯರ ಮಾಲೀಕತ್ವದ ಉದ್ಯಮಗಳ ಉತ್ಪನ್ನಗಳನ್ನು ಬಿಂಬಿಸಲು ಈ ಬೃಹತ್ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ಸಮಾವೇಶದಲ್ಲಿ ಉತ್ಪನ್ನಗಳನ್ನು ಮಾರುವ ಮತ್ತು ಖರೀದಿ ಮಾಡುವವರಿಗೆ ವೇದಿಕೆ ದೊರೆಯಲಿದೆ. ಸಮಾವೇಶವು ಮಹಿಳಾ ಉದ್ಯಮಿದಾರರಿಗೆ ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡಲಿದೆ.’

ಇದೇ ಸಂದರ್ಭದಲ್ಲಿ ಮಹದಾಯಿ ನದಿ ನೀರು ಹಂಚಿಕೆ ಬಗ್ಗೆ ಮಾತನಾಡಿದ ಸಚಿವರು ಹೇಳಿದಿಷ್ಟು…

‘ಮಹದಾಯಿ ನ್ಯಾಯಾಧೀಕರಣದ ನಿರ್ದೇಶನವನ್ನು ಸ್ವಾಗತಿಸಲಾಗುವುದು. ಮೂರು ರಾಜ್ಯಗಳ (ಗೋವಾ, ಮಹಾರಾಷ್ಟ್ರ, ಕರ್ನಾಟಕ) ಮುಖ್ಯಮಂತ್ರಿಗಳು ಸಭೆ ಸೇರಿ ಸಮಾಲೋಚಿಸಬೇಕೆಂದು ನ್ಯಾಯಾಧೀಕರಣ ಹೇಳಿರುವುದು ಸೂಕ್ತವಾಗಿದೆ. ಹೀಗಾಗಿ ಮಹದಾಯಿ ನದಿನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮೂರು ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆಯಬೇಕು. ನಾವು ಮೊದಲಿನಿಂದಲೂ ಪ್ರಧಾನಿ ಅವರ ಮಧ್ಯಸ್ಥಿಕೆಯಲ್ಲಿ ಮೂರು ರಾಜ್ಯದ ಮುಖ್ಯಮಂತ್ರಿಗಳ ಸಭೆ ನಡೆಸಬೇಕೆಂದು ಆಗ್ರಹಿಸುತ್ತಾ ಬಂದಿದ್ದೇವೆ. ಅದಕ್ಕೆ ಪೂರಕವಾಗಿ ನ್ಯಾಯಾಧೀಕರಣವೂ ನಿರ್ದೇಶನ ನೀಡಿರುವುದು ಸಮಂಜಸವಾಗಿದೆ. ಮಾತುಕತೆ ಮೂಲಕ ಬಿಕ್ಕಟ್ಟು ಪರಿಹರಿಸಬೇಕೆಂಬುದು ನಮ್ಮ ಅಪೇಕ್ಷೆ.’

ಸಾಮಾಜಿಕ ಸುಧಾರಣೆ ಹೆಸರಲ್ಲಿ ವೈಯಕ್ತಿಕ ಕಾನೂನು ಬದಲಿಸುವಂತಿಲ್ಲ: ಎಐಎಂಪಿಎಲ್ ಬಿ

ಸಂವಿಧಾನದಲ್ಲಿನ ಮೂಲಭೂತ ಹಕ್ಕು ಉಲ್ಲಂಘನೆಯ ಕಾರಣದಿಂದ ವೈಯಕ್ತಿಕ ಕಾನೂನನ್ನು ಬದಲಿಸಲು ಸಾಧ್ಯವಿಲ್ಲ… ಹೀಗೆಂದು ಸುಪ್ರೀಂ ಕೋರ್ಟ್ ನಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ ಬಿ).

ಮೂರು ಬಾರಿ ತಲಾಕ್ ಹೇಳುವುದರಿಂದ ಮುಸ್ಲಿಂ ಮಹಿಳೆಯರ ಮೇಲೆ ಶೋಷಣೆ ನಡೆಯುತ್ತಿದೆ ಎಂಬ ಹಲವು ದೂರಿನ ಆಧಾರದ ಮೇರೆಗೆ ಸುಪ್ರೀಂ ಕೋರ್ಟ್ ಕಳೆದ ವರ್ಷ ಸ್ವಯಂಪ್ರೇರಿತವಾಗಿ ಈ ಪದ್ಧತಿಯ ಪರಿಣಾಮದ ಬಗ್ಗೆ ವಿಚಾರಣೆ ಆರಂಭಿಸಿತ್ತು. ಶುಕ್ರವಾರ ನಡೆದ ಈ ವಿಚಾರಣೆಯ ಸಂದರ್ಭದಲ್ಲಿ ಎಐಎಂಪಿಎಲ್ ಬಿ ತನ್ನ ಈ ವಾದವನ್ನು ಮಂಡಿಸಿದ್ದು, ಅದು ಹೇಳಿರುವುದಿಷ್ಟು…

‘ದೇಶದ ವಿವಿಧ ಧಾರ್ಮಿಕ ಸಮುದಾಯಗಳ ಗ್ರಂಥ ಹಾಗೂ ಆಚರಣೆಯ ಆಧಾರದ ಮೇಲೆ ವೈಯಕ್ತಿಕ ಕಾನೂನು ಮಾಡಲಾಗಿರುತ್ತದೆ. ಸಾಮಾಜಿಕ ಸುಧಾರಣೆಯ ಹೆಸರಿನಲ್ಲಿ ಅದನ್ನು ತಿದ್ದುವುದು ಸರಿಯಲ್ಲ. ನ್ಯಾಯಾಲಯ ಧರ್ಮದ ವ್ಯಾಖ್ಯಾನವನ್ನು ಕಿತ್ತುಹಾಕಲು ಸಾಧ್ಯವಿಲ್ಲ.’

ರಾಜಕೀಯದಲ್ಲಿ ಎರಡನೇ ಇನಿಂಗ್ಸ್ ಗೆ ಹೊಸ ತಂಡ ಕಟ್ಟಿದ ಸಿಧು, ಗೋವಾದಲ್ಲಿ ಬಿಜೆಪಿ ವಿರುದ್ಧ ಆರೆಸ್ಸೆಸ್ಸಿಗರ ಹೊಸಪಕ್ಷ

ಬಿಜೆಪಿಯಿಂದ ಬೇರ್ಪಟ್ಟ ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ರಾಜಕಾರಣಿ ನವ್ಜೋತ್ ಸಿಂಗ್ ಸಿಧು, ಅರವಿಂದ ಕೇಜ್ರಿವಾಲರ ಆಮ್ ಆದ್ಮಿ ಪಕ್ಷ ಸೇರ್ತಾರೆ ಅಂತಲೇ ಎಲ್ಲರು ಭಾವಿಸಿದ್ರು. ಆದ್ರೆ ಶುಕ್ರವಾರ ಸಿಧು ಅವರ ನಡೆ ಎಲ್ಲರ ಅಚ್ಚರಿಗೆ ಕಾರಣವಾಯ್ತು. ಕಾರಣ ಅವರು ಮಾಜಿ ಕ್ರಿಕೆಟಿಗ ಕಂ ರಾಜಕಾರಣಿ ಪ್ರಗತ್ ಸಿಂಗ್ ಜತೆಗೂಡಿ ‘ಅವಾಜ್ ಇ ಪಂಜಾಬ್’ ಎಂಬ ಹೊಸ ಪಕ್ಷ ರಚಿಸಿ ಮುಂದಿನ ವರ್ಷ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಇವರಿಬ್ಬರಿಗೆ ಬೈನ್ಸ್ ಬ್ರದರ್ ಎಂದೇ ಖ್ಯಾತಿ ಪಡೆದಿರುವ ಬಲ್ವಿಂದರ್ ಮತ್ತು ಸಿಮರ್ಜಿತ್ ಸಹ ಸಾಥ್ ನೀಡಿದ್ದಾರೆ. ಇತ್ತ ಸಿಧು ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಪಂಜಾಬ್ ವಿಧಾನಸಭಾ ಚುನಾವಣೇಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಸಡ್ಡು ಹೊಡೆಯುವ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಲೆಕ್ಕಾಚಾರ ತಲೆಕೆಳಗಾಗಿದೆ.

ಬಿಜೆಪಿಗೆ ತಲೆನೋವಾಗಿರುವ ಇನ್ನೊಂದು ಬೆಳವಣಿಗೆಯಲ್ಲಿ, ನಿನ್ನೆಯಷ್ಟೇ ಗೋವಾದ ಆರೆಸ್ಸೆಸ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದ ಸುಭಾಷ್ ವೆಲಿಂಗ್ಕರ್, ತಮ್ಮ ಈ ಪರಿಸ್ಥಿತಿಗೆ ಕೇಂದ್ರ ಸಚಿವರಾದ ಮನೋಹರ್ ಪರಿಕ್ಕರ್ ಮತ್ತು ನಿತಿನ್ ಗಡ್ಕರಿ ಅವರೇ ಕಾರಣ ಎಂದು ದೂಷಿಸಿದ್ದಾರೆ. ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಈಗ ಪರ್ಯಾಯ ಪಡೆ ಕಟ್ಟಲು ನಿರ್ಧರಿಸಿರುವುದಾಗಿಯೂ ತಿಳಿಸಿದ್ದಾರೆ. ಶಿಕ್ಷಣ ಮಾಧ್ಯಮದಲ್ಲಿ ಕೊಂಕಣಿ ಮತ್ತು ಮರಾಠಿಯನ್ನು ಪ್ರೋತ್ಸಾಹಿಸುವುದಕ್ಕೆ ಬದಲಾಗಿ ಆಂಗ್ಲ ಮಾಧ್ಯಮಕ್ಕೆ ಮಣೆ ಹಾಕುತ್ತಿರುವ ಬಿಜೆಪಿ ಧೋರಣೆ ವಿರುದ್ಧ ಸುಭಾಷ್ ಈ ನಡೆಗೆ ಮುಂದಾಗಿದ್ದಾರೆ.

Leave a Reply