ಚಿತ್ರಗಳ ಸಂಖ್ಯೆ ಏರುತ್ತಿದೆ, ಚಿತ್ರಮಂದಿರಗಳ ಸಂಖ್ಯೆ ಕುಸಿಯುತ್ತಿದೆ!

author-ssreedhra-murthyಇವತ್ತು ಕನ್ನಡ ಚಿತ್ರರಂಗದ ಮಟ್ಟಿಗೆ ಇನ್ನೊಂದು ದಾಖಲೆ ನಿರ್ಮಾಣವಾಗುತ್ತಿದೆ. ಒಂದೇ ದಿನ ಎಂಟು ಚಿತ್ರಗಳು ತೆರೆ ಕಾಣುತ್ತಿವೆ. ಇವುಗಳಲ್ಲಿ ಕಳೆದ ನಾಲ್ಕು ವರ್ಷಗಳಿಂದಲೂ ಸುದ್ದಿ ಮಾಡುತ್ತಿದ್ದ ‘ನೀರ್‍ ದೋಸೆ’ ಎಡಕಲ್ಲು ಗುಡ್ಡದ ಚಂದ್ರಶೇಖರ್ ನಿರ್ದೇಶನದ ‘ಕೆಂಪಮ್ಮನ ಕೋರ್ಟ್‍ಕೇಸ್‍’ ಹಿರಿಯ ನಿರ್ದೇಶಕ ಸಿ.ವಿ.ಶಿವಶಂಕರ್ ನಿರ್ಮಿಸಿದ ‘ಬಬ್ಲೂಷ’ ಇವುಗಳಲ್ಲಿ ಸೇರಿದೆ. ಈ ವರ್ಷ ಬಿಡುಗಡೆಯಾದ ಚಿತ್ರಗಳ ಸಂಖ್ಯೆ ಇವುಗಳೊಂದಿಗೆ 126ಕ್ಕೆ ಏರಿದೆ. ನಿರೀಕ್ಷೆಯಂತೆ ಇನ್ನೂರರ ಗಡಿ ದಾಟದಿದ್ದರೂ ಅತಿ ಹೆಚ್ಚು ಚಿತ್ರಗಳು ತೆರೆ ಕಂಡ ದಾಖಲೆ ನಿರ್ಮಾಣವಾಗುವುದಂತೂ ಖಚಿತವಾಗಿದೆ. ಒಂದು ಕಡೆ ಹೀಗೆ ಚಿತ್ರಗಳ ಪ್ರವಾಹವೇ ಹರಿದು ಬರುತ್ತಿದ್ದರೆ ಇನ್ನೊಂದು ಕಡೆ ಚಿತ್ರಮಂದಿರಗಳು ಒಂದೊಂದೊಂದಾಗಿ ಇತಿಹಾಸದ ಪುಟವನ್ನು ಸೇರುತ್ತಿವೆ. ವಿಪರ್ಯಾಸಕರವಾಗಿ ಕಾಣಬಲ್ಲ  ಈ ಬೆಳವಣಿಗೆ ಕನ್ನಡ ಚಿತ್ರರಂಗದ ಸದ್ಯದ ಸ್ಥಿತಿಗೆ ಹಿಡಿದ ಕನ್ನಡಿಯೂ ಆಗಿದೆ.

ತಾಂತ್ರಿಕ ಬೆಳವಣಿಗೆಗಳಿಂದ ಇವತ್ತು ಚಿತ್ರ ನಿರ್ಮಾಣ ಸುಲಭವಾಗುತ್ತಿದೆ. ಇದರ ಜೊತೆಗೆ ಜಾಗತೀಕರಣಕ್ಕೆ ತೆರೆದು ಕೊಂಡ ಪರಿಣಾಮ ವಿಶ್ವ ಚಿತ್ರರಂಗದೊಂದಿಗೆ ಮುಖಾಮುಖಿಯಾಗ ಬಲ್ಲ ಅವಕಾಶವನ್ನು ಬಳಸಿಕೊಂಡ ಯುವ ಪೀಳಿಗೆ ಚಿತ್ರರಂಗದತ್ತ ಹೆಚ್ಚು ಹೆಚ್ಚು ಆಸಕ್ತರಾಗುತ್ತಿದ್ದಾರೆ. ಆದರೆ ಇದೇ ವೇಳೆಗೆ ಚಿತ್ರಮಂದಿರಗಳನ್ನು ನಡೆಸುವುದು ಆಕರ್ಷಕವಾಗಿ ಉಳಿದಿಲ್ಲ. ಸಿನಿಮಾಟೋಗ್ರಫಿ ಕಾಯಿದೆಯಲ್ಲಿ ತಿದ್ದುಪಡಿಯಾಗದ ಪರಿಣಾಮ ಚಿತ್ರಮಂದಿರಗಳನ್ನು ನಡೆಸಲು ಇರುವ ಕಾನೂನಿನ ತೊಡಕು ಹಲವಾರು.  ಇದರ ಜೊತೆಗೆ ಮಾಲ್‍ಗಳಲ್ಲಿ ಚಿತ್ರಗಳನ್ನು ನೋಡುವವರ ಸಂಖ್ಯೆ ಗಮನಾರ್ಹವಾಗಿ ಏರುತ್ತಿದ. ಅಲ್ಲಿ ಕನ್ನಡ ಚಿತ್ರಗಳು ಬಿಡುಗಡೆಯಾಗಲು ಸ್ಪಷ್ಟ ನಿಯಮಗಳಿಲ್ಲ.  ಈ ಬೆಳವಣಿಗೆಯನ್ನು ಎದುರಿಸಲು ವ್ಯಕ್ತಿಗತ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಇತ್ತೀಚಿಗೆ ಬರಗೂರು ರಾಮಚಂದ್ರಪ್ಪನವರು ತಮ್ಮ ‘ಮರಣದಂಡನೆ’ಚಿತ್ರವನ್ನು ಸಮಾನ ಆಸಕ್ತ ಸಂಘಟನೆಗಳ ಮೂಲಕ ಜನರಿಗೆ ತಲುಪಿಸುವ ಅಭಿಯಾನಕ್ಕೆ ಚಾಲನೆ ನೀಡಿದರು. ಬರಗೂರರ ಕಳೆದ ಎಂಟು ಚಿತ್ರಗಳು ಇದೇ ಮಾದರಿಯಲ್ಲೇ ಬಿಡುಗಡೆ ಕಂಡಿದ್ದವು. ‘ನಮ್ಮ  ಚಿತ್ರಗಳ ಥಿಯೇಟರ್ ಸಿಗುವುದು ಕಷ್ಟ, ಸಿಕ್ಕರೂ ಪ್ರೇಕ್ಷಕರು ಬರುವುದು ಇನ್ನೂ ಕಷ್ಟ. ಹೀಗಾಗಿ ಆಸಕ್ತ ಪ್ರೇಕ್ಷಕರ ಬಳಿಗೆ ನಾವೇ ಚಿತ್ರಗಳನ್ನು ತೆಗೆದುಕೊಂಡು ಹೋಗ ಬೇಕು’ ಎನ್ನುವುದು ಬರಗೂರರ ನಿಲುವು. ಇಂತಹ ಪ್ರಯತ್ನಗಳನ್ನು ಗಿರೀಶ್ ಕಾಸರವಳ್ಳಿ, ಪಿ.ಶೇಷಾದ್ರಿ, ಬಿ.ಸುರೇಶ್ ಎಲ್ಲರೂ ಮಾಡಿದ್ದಾರೆ. ಆದರೆ ಇವುಗಳು ಬಿಡಿ ಬಿಡಿ ಪ್ರಯತ್ನಗಳಾಗಿವೆಯೇ ಹೊರತು ಒಂದು ಚಳುವಳಿಯ ರೂಪವನ್ನು ಪಡೆದಿಲ್ಲ. ಇನ್ನೊಂದು ಮಾದರಿ ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರದ್ದು. ದಾರ್ಶನಿಕ ವಸ್ತುವನ್ನು ಶಿವರಾಜ್ ಕುಮಾರ್ ಅವರಂತಹ ಜನಪ್ರಿಯ ಕಲಾವಿದರ ಮೂಲಕ ತಲುಪಿಸುವ ಪ್ರಯತ್ನ ಒಂದು ಹಂತದ ಯಶಸ್ಸು ಪಡೆಯಿತು. 168 ಚಿತ್ರಮಂದಿರಗಳಲ್ಲಿ ಚಿತ್ರ ತೆರೆ ಕಂಡಿತು. ಆದರೆ ಮಹದಾಯಿ ವಿವಾದದ ಪರಿಣಾಮ ಮೂರು ದಿನಗಳಿಗೇ 23 ಚಿತ್ರಮಂದಿರಕ್ಕೆ ಇಳಿಯಿತು. ಇಂತಹ ಪ್ರಯತ್ನಗಳಲ್ಲಿ ಇರುವ ಸವಾಲು ಚಿತ್ರಮಂದಿರಗಳನ್ನು ಪಡೆಯುವುದು ಮಾತ್ರವಲ್ಲ ಉಳಿಸಿಕೊಳ್ಳುವುದೋ ಆಗಿದೆ ಎನ್ನುವುದಕ್ಕೆ ಇದು ನಿದರ್ಶನ.

ಕನ್ನಡ ಚಿತ್ರರಂಗಕ್ಕೆ ಆರಂಭಿಕ ದಿನಗಳಿಂದಲೂ ಆಸರೆಯಾಗಿದ್ದವು ಸಂಚಾರಿ, ಅರೆ ಖಾಯಂ ಚಿತ್ರಮಂದಿರಗಳು. 1960ರ ಸುಮಾರಿಗೆ ಕರ್ನಾಟಕದಲ್ಲಿ 1480 ಇಂತಹ ಚಿತ್ರಮಂದಿರಗಳು ಹಳ್ಳಿ ಹಳ್ಳಿಗಳಲ್ಲೂ ಇದ್ದವು. ಸುರಕ್ಷತೆ ಸಮಸ್ಯೆ ಇದ್ದರೂ ಕನ್ನಡ ಚಿತ್ರಗಳನ್ನು ಜನರಿಗೆ ತಲುಪಿಸುವಲ್ಲಿ ಅವುಗಳ ಕೊಡುಗೆ ಬಹಳ ದೊಡ್ಡದು. 1984ರ ಡಿಸಂಬರ್ 22ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿ ಸಂಚಾರಿ ಚಿತ್ರಮಂದಿರಗಳನ್ನು ನಿಷೇದಿಸಿತು. ಮುಂದಿನ ಮೂರು-ನಾಲ್ಕು ವರ್ಷಗಳಲ್ಲಿ ಸಂಚಾರಿ ಚಿತ್ರಮಂದಿರಗಳು ಕ್ರಮೇಣ ಇತಿಹಾಸ ಪುಟವನ್ನು ಸೇರಿದವು. ಇದಕ್ಕೆ ಪರ್ಯಾಯ ವ್ಯವಸ್ಥೆ ರೂಪುಗೊಳ್ಳಲೇ ಇಲ್ಲ. ಈಗ ಸಿಂಗಲ್ ಸ್ಕೀನ್ ಚಿತ್ರಮಂದಿರಗಳೂ ಇತಿಹಾಸ ಪುಟ ಸೇರುತ್ತಿವೆ. ಕಳೆದ ಹತ್ತು ವರ್ಷಗಳಲ್ಲಿ ಬೆಂಗಳೂರಿನ 34 ಚಿತ್ರಮಂದಿರಗಳೂ ಸೇರಿ 450 ಚಿತ್ರಮಂದಿರಗಳು ಇತಿಹಾಸ ಪುಟವನ್ನು ಸೇರಿವೆ. ಇದರ ಜೊತೆಗೆ ಏಳು ವಲಯಗಳಲ್ಲಿ ನಡೆಯುತ್ತಿದ್ದ ವಿತರಣೆ 1985ರ ನಂತರ ಜಿಲ್ಲಾವಾರು ಹಂಚಿಕೆಯಾಗಿ ಬದಲಾಯಿತು. ವಲಯವಾರು ವಿತರಕರು ಸದಭಿರುಚಿ ಹೊಂದಿದ್ದರು. ವ್ಯಾಪಾರಿ ಚಿತ್ರಗಳ ಜೊತೆಗೆ ಕಲಾತ್ಮಕ ಚಿತ್ರಗಳಿಗೂ ಅವಕಾಶ ನೀಡುತ್ತಿದ್ದರು. ಆದರೆ ಜಿಲ್ಲಾವಾರು ಪದ್ದತಿಯಲ್ಲಿ ಬದಲಾಗುವ ಕೈಗಳಿಂದ ಇದು ಸಾಧ್ಯವಾಗದಾಯಿತು. ತಮಿಳುನಾಡಿನಲ್ಲಿ 3400 ಚಿತ್ರಮಂದಿರಗಳಿವೆ. ‘ಎ’ಕೇಂದ್ರದ 800 ಚಿತ್ರಮಂದಿರಗಳಲ್ಲಿ ಸೋತ ಚಿತ್ರಗಳು ‘ಬಿ’ ಮತ್ತು ‘ಸಿ’ಕೇಂದ್ರದ ಉಳಿದ 2600 ಚಿತ್ರಮಂದಿರಗಳಲ್ಲಿ ಮತ್ತೊಮ್ಮೆ ಗೆಲುವಿಗೆ ಪ್ರಯತ್ನಿಸ ಬಹುದು. ಇದರ ಜೊತೆಗೆ ಅಲ್ಲಿ ಮಲ್ಟಿಪ್ಲಕ್ಸ್‍ ಸೇರಿದಂತೆ ಯಾವ ಚಿತ್ರಮಂದಿರದಲ್ಲೂ ಪ್ರವೇಶ ದರ 125 ರೂಪಾಯಿಯನ್ನು ದಾಟಬಾರದು ಎಂಬ ಕಟ್ಟು ನಿಟ್ಟಿನ ನಿಯಮವಿದೆ. ಆದರೆ ಕರ್ನಾಟಕದಲ್ಲಿ ‘ಎ’ಕೇಂದ್ರದಲ್ಲಿ ಸೋತರೂ ಗೆದ್ದರೂ ‘ಬಿ’ ಮತ್ತು ‘ಸಿ’ಕೇಂದ್ರದ ಚಿತ್ರಮಂದಿರಗಳಿಗೆ  ಪ್ರವೇಶ ದೊರಕುವುದು ಕಷ್ಟ.

ಇಂತಹದೇ ಸಮಸ್ಯೆಯನ್ನು 1998ರಲ್ಲಿ ಕೇರಳ ಎದುರಿಸಿತ್ತು. ಆಗ ಸರ್ಕಾರವೇ ಮುಂದಾಗಿ ‘ಚಿತ್ರಾಂಜಲಿ’ ‘ಕೇರಳೈ’ ‘ಶ್ರೀ’ಚಿತ್ರಮಂದಿರಗಳನ್ನು ರೂಪಿಸಿತು  ಮೂವತ್ತರಿಂದ ಐವತ್ತು ಸೀಟುಗಳ  ಈ ಚಿತ್ರಮಂದಿರಗಳು ಕೆಲಮಟ್ಟಿನ ಪರ್ಯಾಯವನ್ನು ರೂಪಿಸುವಲ್ಲಿ ಯಶಸ್ವಿಯಾದವು. ಇದೇ ಯೋಜನೆ ಅನುಸರಿಸಿ ಕರ್ನಾಟಕದಲ್ಲೂ ‘ಜನತಾ ಚಿತ್ರಮಂದಿರ’ ಎನ್ನುವ ಯೋಜನೆ ಕಳೆದ ಮೂರು ವರ್ಷಗಳಿಂದಲೂ  ಬಜೆಟ್‍ನಲ್ಲಿ ಪ್ರಸ್ತಾವನೆಗೊಳ್ಳುತ್ತಿದೆ. ಆದರೆ ಇದು ಸಾವಿರ ಆಸನಗಳ ಚಿತ್ರಮಂದಿರ ಸ್ಥಾಪಿಸಲು ನೆರವಾಗುವ ಯೋಜನೆ. ಇದರಿಂದ ಇರುವ ವ್ಯವಸ್ಥೆಯ ಸಮಸ್ಯೆಗಳೇ ಮುಂದುವರೆಯಲಿವೆ. ‘ಸಿನಿಮಾ ಸಮೂಹ ಮಾಧ್ಯಮ’ ಎನ್ನುವುದು ಹಾಲಿವುಡ್ ಸೃಷ್ಟಿಸಿ ಸುಳ್ಳು. ಒಂದು ಪುಸ್ತಕವನ್ನು ಓದುವಷ್ಟೇ ಆಪ್ತವಾಗಿ ಚಿತ್ರವನ್ನೂ ನೋಡಬಹುದು ಎನ್ನುವ ತಾತ್ವಿಕತೆಯಲ್ಲಿ ‘ಪರ್ಸನಲ್ ಸಿನಿಮಾಗಳು’ ಬರುತ್ತಿರುವ ಕಾಲ ಇದು. ಕನ್ನಡ ಚಿತ್ರರಂಗ ಹೀಗಾಗಿ ಬಿಡುಗಡೆಯ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರಬೇಕು. ಹಂಚಿಕೆ ವ್ಯವಸ್ಥೆಯೇ ಕುಸಿದಿರುವ ಈ ದಿನಗಳಲ್ಲಿ  ಕನ್ನಡ ಚಿತ್ರರಂಗ ಉಳಿಯಲು ಪ್ರಧಾನ ವಿತರಣೆ ಜೊತೆಗೆ ಪರ್ಯಾಯ ಮಾರ್ಗಗಳ ಕುರಿತೂ ಗಂಭೀರವಾಗಿ ಯೋಚಿಸ ಬೇಕಾಗಿದೆ. ಇದು ಕನ್ನಡ ಚಿತ್ರಂಗದ ಅಸ್ತಿತ್ವದ ಪ್ರಶ್ನೆ ಕೂಡ ಆಗಿದೆ ಎನ್ನುವುದನ್ನು ನಾವು ಮರೆಯುವಂತಿಲ್ಲ.

Leave a Reply