ಹಿಂದೂ ಮಹಾಸಾಗರದಲ್ಲಿ ಸುನಾಮಿ ಅಣಕು ಕಾರ್ಯಾಚರಣೆ, ತೀರ ಪ್ರದೇಶದ 35,000 ಜನರ ಸ್ಥಳಾಂತರ  ಸವಾಲಿನ ಹೊಣೆ

 

author-ananthramuಹಿಂದೆ ಭಾರತದಲ್ಲಿ ಸುನಾಮಿ ಎನ್ನುವ ಹೆಸರನ್ನು ಬಹುಶಃ ಬಹಳ ಮಂದಿ ಕೇಳಿರಲಿಕ್ಕಿಲ್ಲ. 2004ರ ಡಿಸೆಂಬರ್ 26ರಂದು ಸುನಾಮಿ, ಭಾರತದ ಪೂರ್ವ ಕರಾವಳಿಯನ್ನು ಅಪ್ಪಳಿಸಿದಾಗ ಸುಮಾರು 10,000 ಮಂದಿ ಈ ಜಲಪ್ರಳಯಕ್ಕೆ ತುತ್ತಾದರು. ಚಂಡಮಾರುತ, ಅತಿವೃಷ್ಟಿ, ಅನಾವೃಷ್ಟಿ, ಬರ, ನೆರೆ- ಭಾರತದ ಉಪಖಂಡಕ್ಕೇನೂ ಹೊಸದಲ್ಲ. ಸಾಗರ ತಳದಲ್ಲಿ ದೊಡ್ಡ ಪ್ರಮಾಣದ ಭೂಕಂಪನವಾದರೆ ಸಾಗರದ ಹೆಬ್ಬಲೆಗಳ ಮೂಲಕ ಆ ಶಕ್ತಿ ಪ್ರವಹಿಸಿ, ಸುನಾಮಿ ಆಗುತ್ತದೆಂದು ವಿಜ್ಞಾನ ಪುಸ್ತಕಗಳಲ್ಲಷ್ಟೇ ಇತ್ತು. 2011ರ ಜಪಾನಿನ ತೊಹೊಕು ಭೂಕಂಪನ ಹುಟ್ಟಿಸಿದ ಸುನಾಮಿ, ಫುಕುಶಿಮ ಪರಮಾಣು ಸ್ಥಾವರಕ್ಕೆ ನೀಡಿದ ಪೆಟ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳವಳವನ್ನು ಎಬ್ಬಿಸಿತ್ತು. ಜಪಾನ್‍ಗೆ ಭೂಕಂಪನವೂ ಹೊಸತಲ್ಲ, ಸುನಾಮಿಯೂ ಹೊಸತಲ್ಲ.

ಇಂಡೋನೇಷ್ಯದ ಸುಮಾತ್ರ ಬಳಿ ಸಾಗರ ತಳದಲ್ಲಿ 9.1 ಪರಿಮಾಣದ ಭೂಕಂಪನವಾದಾಗ 30 ಮೀಟರು ಎತ್ತರದ ಅಲೆಗಳೆದ್ದಿದ್ದವು. ನಮ್ಮಲ್ಲಿ ಆಂಧ್ರಪ್ರದೇಶ, ತಮಿಳುನಾಡು, ಒಡಿಶ್ಶಾ ತೀರಗಳಲ್ಲಿ ಹೆಚ್ಚಿನ ದುರಂತವಾಯಿತು. ಮಾಲ್ಡವೀಸ್, ಸೊಮಾಲಿಯ, ಮ್ಯಾನ್ಮಾರ್ ಸೇರಿದಂತೆ 14 ದೇಶಗಳ 23,000 ಜನರು ಸುನಾಮಿಗೆ ಬಲಿಯಾಗಿದ್ದರು. ಭಾರತ ಇದನ್ನು ನಿರೀಕ್ಷಿಸಿರಲಿಲ್ಲ. ಅಂದಮೇಲೆ ಸಿದ್ಧತೆಯ ಮಾತೆಲ್ಲಿ? ಆದರೆ ಸಾಗರದ ಅಲೆಗಳಿಗೆ ಯಾವುದೂ ಅಡ್ಡಬರದಿದ್ದರೆ ಅದಕ್ಕೆ ಮಿತಿಯೇನಿಲ್ಲ. ಶ್ರೀಲಂಕ ದ್ವೀಪಕ್ಕೆ ಮೊದಲು ಅಲೆಗಳು ಅಪ್ಪಳಿಸಿದ್ದರಿಂದ ಹೆಚ್ಚಿನ ಶಕ್ತಿ ಅಲ್ಲೇ ವ್ಯಯವಾಯಿತು. ಭಾರತದ ಪೂರ್ವ ಕರಾವಳಿಯಲ್ಲಿ ಅದರಿಂದಾಗಿ ಸಾವಿನ ಪ್ರಮಾಣ ಕಡಿಮೆಯಾಯಿತು.

`ಕೆಟ್ಟಮೇಲೆಯೇ ಬುದ್ಧಿಬರುವುದು’ ಎನ್ನುವ ಮಾತು ನಮ್ಮ ಮಟ್ಟಿಗೆ ಅಕ್ಷರಶಃ ಸತ್ಯ. 2004ರ ಸುನಾಮಿ ಕಲಿಸಿದ ಪಾಠ ಬಲು ದೊಡ್ಡದು. ನಮ್ಮಲ್ಲಿ ಸುನಾಮಿ ಎಚ್ಚರಿಕೆ ವ್ಯವಸ್ಥೆಯನ್ನು ತಳಮಟ್ಟದಿಂದ ರೂಪಿಸಬೇಕಾಯಿತು. ಈಗಾಗಲೇ ಹೈದರಾಬಾದಿನಲ್ಲಿರುವ ರಾಷ್ಟ್ರೀಯ ಸಾಗರ ಮಾಹಿತಿ ಕೇಂದ್ರಕ್ಕೆ 2007ರಲ್ಲೇ `ಸುನಾಮಿ ಎಚ್ಚರಿಕೆ ವ್ಯವಸ್ಥೆ’ ಎಂಬ ಇನ್ನೊಂದು ಕೇಂದ್ರ ಜಂಟಿಯಾಯಿತು. ಭಾರತ ಲಗುಬಗೆಯಿಂದ ಹಿಂದೂ ಮಹಾಸಾಗರದ ಹದಿನೇಳು ಜಾಗಗಳಲ್ಲಿ ಸಾಗರದ ಅಲೆಗಳನ್ನು ಅಳೆಯುವ ಗೇಜ್‍ಗಳನ್ನು ಸ್ಥಾಪಿಸಿತು. ಮುನ್ನೂರು ಅಂತಾರಾಷ್ಟ್ರೀಯ ಭೂಕಂಪನ ಕೇಂದ್ರಗಳ ಸಂಪರ್ಕಜಾಲ ಪಡೆಯಿತು. ಈಗ ಈ ಕೇಂದ್ರ ಧೈರ್ಯವಾಗಿ ಹೇಳುತ್ತಿದೆ: `ಸುನಾಮಿ ಘಟಿಸಿದ ಹತ್ತು ನಿಮಿಷದ ಒಳಗೇ ನಮ್ಮ ಈ ಸಂಸ್ಥೆ ಎಚ್ಚರಿಕೆಯನ್ನು ಕೊಡಲು ಶಕ್ತವಾಗಿದೆ’ ಎಂದು.

ಹಾಗೆಂದು ಮಾಹಿತಿಗಳ ಕ್ರೋಡೀಕರಣ ಮಾಡುತ್ತ ಕೂಡುವುದಲ್ಲ. ಎಚ್ಚರಿಕೆಯನ್ನೂ ಕೊಟ್ಟು ದುರಂತವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆಮಾಡಲೂ ಬಹುದು.  ಆದರೆ ಸದಾ ಕಾಲ ಈ ಎಚ್ಚರಿಕೆಯ ವ್ಯವಸ್ಥೆ ಸರಿಯಾಗಿದೆಯೆ?, ಎಲ್ಲ ಸಂಪರ್ಕ ಸಾಧನಗಳೂ ಕೆಲಸ ಮಾಡುತ್ತಿವೆಯೆ? ಒಂದುವೇಳೆ ಆಪತ್ತು ಎದುರಾದಾಗ ರಕ್ಷಣೆ ಯಾವ ವೇಗದಲ್ಲಿರಬೇಕು? ತಂತ್ರಜ್ಞರ ಹೊಣೆಯೇನು? ಅಧಿಕಾರಿಗಳ ಕಾರ್ಯದ ವ್ಯಾಪ್ತಿ ಏನು? ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸುವುದು ಹೇಗೆ? ಎಂಬುದನ್ನು ಆಗಾಗ ಪರಿಶೀಲಿಸಬೇಕಾಗುತ್ತದೆ. ಹೀಗೆ ಮಾಡಬೇಕಾದರೆ ಸುನಾಮಿ ಸಂಭವಿಸಿದೆ ಎಂದು ಭಾವಿಸಿ ಅಣಕು ಕಾರ್ಯಾಚರಣೆಯನ್ನು ಮಾಡಿ ಸಫಲವಾದಾಗ ಮಾತ್ರ ನಾವು ಸಿದ್ಧವಾಗಿದ್ದೇವೆ ಎನ್ನಬಹುದು.

ಹಿಂದೂ ಮಹಾಸಾಗರಕ್ಕೆ ಹೊಂದಿಕೊಂಡಿರುವ 23 ದೇಶಗಳು-ಕೀನ್ಯಾ, ಪಾಕಿಸ್ತಾನ, ಮಡಗಾಸ್ಕರ್, ಮ್ಯಾನ್ಮಾರ್, ಒಮೆನ್, ಸಿಂಗಪುರ ಸೇರಿದಂತೆ, ಈ ತಿಂಗಳ 7 ಮತ್ತು 8 ರಂದು ಸುನಾಮಿ ಅಣಕು ಕಾರ್ಯಕ್ರಮದಲ್ಲಿ ಏಕಕಾಲದಲ್ಲಿ ಪಾಲ್ಗೊಳ್ಳಲಿವೆ. ಭಾರತಕ್ಕೆ ಸುನಾಮಿ ಎಚ್ಚರಿಕೆಯ ವ್ಯವಸ್ಥೆಯನ್ನು ಕಲ್ಪಿಸಲು ನೆರವಾದ ಯುನೆಸ್ಕೋದ ಇಂಟರ್ ಗೌವರ್ನಮೆಂಟಲ್ ಓಷಿಯನೋಗ್ರಫಿಕ್ ಕಮಿಷನ್ ಈ ಅಣಕು ಕಾರ್ಯಕ್ರಮದ ರೂವಾರಿ. ಹೈದರಾಬಾದಿನ ಸುನಾಮಿ ಎಚ್ಚರಿಕೆ ನೀಡುವ ಕೇಂದ್ರ 2007ರಲ್ಲಿ ಇಂಥ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈಗ ಈ ಕೇಂದ್ರಕ್ಕೆ ಹಿಂದೂ ಮಹಾಸಾಗರಕ್ಕೆ ಹೊಂದಿಕೊಂಡಿರುವ ಸುನಾಮಿಗೆ ತುತ್ತಾಗಬಹುದಾದ ದೇಶಗಳಿಗೆ ಎಚ್ಚರಿಕೆ ಕೊಡುವ ಹೊಣೆಯೂ ಬಂದಿದೆ. ಈಗ ಅದು ಸುನಾಮಿ ಸೇವಾ ಕೇಂದ್ರ.

`IO wave16’ (ಇಂಡಿಯನ್ ಓಷನ್ ವೇವ್, 2016) ಎಂಬುದು ಈ ಅಣಕು ಕಾರ್ಯಾಚರಣೆಯ ಸಂಕ್ಷಿಪ್ತ ಹೆಸರು. ಇದರ ಕಾರ್ಯಾಚರಣೆ ಅತ್ಯಂತ ಕ್ರಮಬದ್ಧವಾದ್ದು. ಇಂಡೊನೇಷ್ಯದ ಸುಮಾತ್ರ ದ್ವೀಪಕ್ಕೆ ದಕ್ಷಿಣ ಭಾಗದಲ್ಲಿರುವ ಸಮುದ್ರದಲ್ಲಿ ಈ ತಿಂಗಳ 7ರಂದು 9.2 ಪರಿಮಾಣದ ಭೂಕಂಪನವನ್ನು ಸೃಷ್ಟಿಸುವ ಸನ್ನಿವೇಶವನ್ನು ಅಣಕಿಸುವುದು (ಭಾರತೀಯ ಕಾಲಮಾನ 08.30).

ಎರಡನೆಯ ದಿನ ಇರಾನ್ ಮತ್ತು ಪಾಕಿಸ್ತಾನಕ್ಕೆ ದಕ್ಷಿಣದಲ್ಲಿರುವ ಮಕ್ರಾನ ವಹಾ ಕಂದಕದ ಬಳಿ 9.00 ಪರಿಮಾಣದ ಭೂಕಂಪನ ಸಂಭವಿಸುವಂತಹ ಸನ್ನಿವೇಶ ಸೃಷ್ಟಿಸಿವುದು. (ಭಾರತೀಯ ಕಾಲಮಾನ 11.30). ಈ ಎರಡೂ ಪರೀಕ್ಷೆಗಳನ್ನು ಪೂರೈಸಲು ಸುಮಾರು 12 ಗಂಟೆ ಕಾರ್ಯಪ್ರವೃತ್ತವಾಗಬೇಕಾಗುತ್ತದೆ. ಒಡನೆಯೇ ಭಾರತದ ಸುನಾಮಿ ಎಚ್ಚರಿಕೆಯ ಕೇಂದ್ರ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಹಿತಿ ಪಾಲುದಾರರಿಗೆ 15 ಬುಲೆಟಿನ್‍ಗಳನ್ನು ಹೊರಡಿಸುತ್ತದೆ. ಇದಕ್ಕಾಗಿ ಜಾಗತಿಕ ದೂರಸಂಪರ್ಕ ವ್ಯವಸ್ಥೆ, ಇ-ಮೇಲ್, ಫ್ಯಾಕ್ಸ್, ಎಸ್.ಎಂ.ಎಸ್.-ಇವೇ ಮುಂತಾದ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ. ಸುನಾಮಿ ಘಟಿಸಿರುವುದು ನಿಜವೇ ಎಂದು ಭಾವಿಸಿ, ಅಂಡಮಾನ್, ನಿಕೋಬರ್, ಆಂಧ್ರಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಗುಜರಾತ್, ಗೋವ ತೀರಗಳಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ತುಕಡಿ ಕಾರ್ಯಪ್ರವೃತ್ತವಾಗಿ, ಅಂದಾಜು 35,000 ಜನರನ್ನು ವಾಸ್ತವವಾಗಿ ಸ್ಥಳಾಂತರಿಸಲೇಬೇಕು. ಸಮುದ್ರತೀರದಿಂದ ನೂರು ಮೀಟರ್ ಪಾಸಲೆಯಲ್ಲಿ ಇರುವ ಜನರನ್ನು `ಸುನಾಮಿ ಸಂಭವಿಸುವ’ ಒಂದು ಗಂಟೆ ಮೊದಲು ಸ್ಥಳಾಂತರಿಸುವುದು ಮೊದಲ ಆದ್ಯತೆ. ಭಾರತದ ನೌಕಾಪಡೆ ಮತ್ತು ವಾಯಪಡೆಗಳೂ ಇದರಲ್ಲಿ ಭಾಗವಹಿಸಿ ಸಮುದ್ರದ ಪಾಲಾದವರನ್ನು ಹೇಗೆ ರಕ್ಷಿಸಬೇಕೆಂಬ ತಂತ್ರವನ್ನು ಅಣಕು ಮಾಡಲಿದೆ. ಈ ಕಾರ್ಯಕ್ರಮಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಕೈಜೋಡಿಸುತ್ತದೆ. ಈ ವರ್ಷದ ಮಾರ್ಚ್ 11ರಂದು ಕೇರಳದ ಕಣ್ಣೂರಿನ ಪಯ್ಯಾಮಳಮ್ ಬೀಚಿನಿಂದ 1000 ಮಂದಿಯನ್ನು ಹತ್ತಿರವಿದ್ದ ಸ್ಕೂಲಿಗೆ ಸ್ಥಳಾಂತರಿಸಿದ ನಂತರವೇ ಅಲ್ಲಿನ ಡೆಪ್ಯುಟಿ ಕಮೀಷನರ್ ಅವರಿಗೆ ಇದು ಸುನಾಮಿಯ ಅಣಕು ಕಾರ್ಯಾಚರಣೆಯ ಒಂದು ಭಾಗ ಎಂದು ಗೊತ್ತಾಗಿ ನಿಟ್ಟುಸಿರು ಬಿಟ್ಟಿದ್ದರು.

Print

ಈ ಹೊಣೆ ಇಷ್ಟಕ್ಕೇ ನಿಲ್ಲುವುದಿಲ್ಲ. ವಿಶ್ವಸಂಸ್ಥೆಯಲ್ಲಿ, ನೈಸರ್ಗಿಕ ವಿಕೋಪಗಳ ರಿಸ್ಕ್ ಕಡಿಮೆಮಾಡಲು ಒಂದು ಘಟಕವೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲಸಮಾಡುತ್ತಿದೆ. ಈ ಬಾರಿ ಅದು ಭಾರತ ಮತ್ತು ಸೀಷೆಲ್‍ಗಳಿಗೆ 7 ಮತ್ತು 8ರಂದು ಅದರ ಸದಸ್ಯರನ್ನು ಕಳಿಸಿ, ಅಣಕು ಕಾರ್ಯಕ್ರಮವನ್ನು ವರದಿಮಾಡಲು ಸೂಚಿಸಿದೆ. 2016ರ ನವೆಂಬರ್ 2ರಂದು ನಡೆಯುವ ಏಷ್ಯ ಕಾನ್ಫೆರೆನ್ಸ್ ನಲ್ಲಿ ಈ ಅಣಕು ಕಾರ್ಯಕ್ರಮವನ್ನು ಕುರಿತು ಸಂಪೂರ್ಣ ವಿವರವಿರುವ ಫಿಲಂ ಪ್ರದರ್ಶಿಸಬೇಕೆಂದೂ ಯೋಜಿಸಿದೆ. ಸದ್ಯಕ್ಕೆ ಭಾರತವು ಸೇರಿದಂತೆ 23 ದೇಶಗಳು ಈ ಗಂಭೀರ ಸಿದ್ಧತೆಯಲ್ಲಿ ತೊಡಗಿವೆ. ಅಣಕು ಕಾರ್ಯಕ್ರಮಕ್ಕೂ, ನಿಜವಾಗಿಯೂ ಸುನಾಮಿ ಘಟಿಸಿದಾಗ ಉಂಟಾಗುವ ಸನ್ನಿವೇಶಕ್ಕೂ ಈ ದೇಶಗಳಿಗೆ ವ್ಯತ್ಯಾಸ ಕಾಣುತ್ತಿಲ್ಲ. ಹೀಗಿದ್ದಾಗ ಮಾತ್ರ ನಿಜವಾದ ಸಂಕಷ್ಟ ಎದುರಾದಾಗ ಅದನ್ನು ನಿಭಾಯಿಸಬಹುದು.

Leave a Reply