ಬಿಜೆಪಿ- ಆರೆಸ್ಸೆಸ್ ದೇಶದ ಐಡೆಂಟಿಟಿ ಒಳಗೆ ಹುಟ್ಟಿಕೊಳ್ಳುತ್ತಿರುವ ಭಾಷೆಯ ಪ್ರಶ್ನೆಗಳು, ಗೋವಾದಲ್ಲಿ ಶುರುವಾದದ್ದು ಬೇರೆಡೆಗೂ ತಾಗದೇ ಇರದು

ಪ್ರವೀಣ್ ಕುಮಾರ್

ಸುಭಾಷ್ ವೆಲಿಂಗಕರ್. ಗೋವಾದಲ್ಲಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಆರೆಸ್ಸೆಸ್ ವ್ಯಕ್ತಿ. ಪರ್ಯಾಯ ರಾಜಕೀಯ ಬಣಕ್ಕಾಗಿ ಕೆಲಸ ಮಾಡುವುದಾಗಿ ಹೇಳಿದೊಡನೆ ಇವರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ಎಲ್ಲ ಹುದ್ದೆಗಳಿಂದ ಕೆಳಗಿಳಿಸಿದೆ.

ಬಿಜೆಪಿ ಹಾಗೂ ಮನೋಹರ ಪರಿಕರ್ ಮೇಲೆ ರೋಷ ಹೊರಹಾಕುತ್ತಿರುವಷ್ಟು ಇವರು ಆರೆಸ್ಸೆಸ್ ಮೇಲೇನೂ ದೂರುತ್ತಿಲ್ಲ. ಅಲ್ಲದೇ ಬಿಜೆಪಿ ಜತೆ ಇವರಿಗೆ ಮುನಿಸು ಬಂದಿರುವ ಕಾರಣವೂ ವಿಶಿಷ್ಟವೇ. ಗೋವು, ಮತಾಂತರ, ಮಂದಿರ… ಇತ್ಯಾದಿ ವಿಷಯಗಳಲ್ಲಿ ಬಿಜೆಪಿಯಲ್ಲಿರುವವರು ತಮ್ಮ ಕಾರ್ಯಸೂಚಿಗೆ ತಕ್ಕುದಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೆಸ್ಸೆಸ್ಸಿಗರು ಅಸಮಾಧಾನಪಡುವಂಥದ್ದು ಇದ್ದೇ ಇದೆ. ಆದರೆ ಸುಭಾಷ್ ವೆಲಿಂಗಕರ್ ಹೊರಹೋಗುತ್ತಿರುವುದು ಭಾಷೆಯ ವಿಚಾರ ಇಟ್ಟುಕೊಂಡು ಎಂಬುದು ಕುತೂಹಲಕಾರಿ.

ಭಾರತೀಯ ಭಾಷಾ ಸುರಕ್ಷಾ ಮಂಚ್ (ಬಿಬಿಎಸ್ಎಂ) ಸಂಘಟನೆ ಮೂಲಕ ಸುಭಾಷ್ ಗೋವಾ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧವೇ ತಿರುಗಿಬಿದ್ದರು. ಶಾಲೆಗಳಲ್ಲಿ ಸ್ಥಳೀಯ ಭಾಷೆಗಳಾದ ಕೊಂಕಣಿ ಮತ್ತು ಮರಾಠಿ ಭಾಷೆಗೆ ಹೆಚ್ಚಿನ ಒತ್ತು ಸಿಗಬೇಕೆಂಬುದು ಬಿಬಿಎಸ್ಎಂ ಮುಖ್ಯ ಬೇಡಿಕೆ. ಅಲ್ಲದೆ ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ನೀಡಲಾಗುತ್ತಿರುವ ಅನುದಾನವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿತ್ತು. ತಮ್ಮ ಈ ಹೋರಾಟದ ಭಾಗವಾಗಿ, ಇತ್ತೀಚೆಗೆ ಗೋವಾಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೂ ಕಪ್ಪು ಬಾವುಟ ಪ್ರದರ್ಶಿಸಿದ್ದರು.

ರಿಯಾಲಿಟಿ ಚೆಕ್ ಇಂಡಿಯಾ ಎಂಬ ಬ್ಲಾಗ್ ಈ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಿನ್ನ ಆಯಾಮವೊಂದನ್ನು ಮುಂದಿರಿಸಿದೆ. ಆ ಪ್ರಕಾರ…

ಗೋವಾದಲ್ಲಿ ಕೊಂಕಣಿ ಮತ್ತು ಮರಾಠಿ ಮಾಧ್ಯಮ ಶಾಲೆಗಳಿಗೆ ಪ್ರತಿಯಾಗಿ ಆಂಗ್ಲ ಮಾಧ್ಯಮ ಶಿಕ್ಷಣ ನೀಡುತ್ತಿರುವಲ್ಲಿ ಹೆಚ್ಚಿನ ಸಂಸ್ಥೆಗಳು ಇರುವುದು ಚರ್ಚ್ ಅಧೀನದಲ್ಲಿ. ಅಂದರೆ, ಸರ್ಕಾರ ಇವುಗಳಿಗೆ ಹಣ ಒದಗಿಸುವುದೆಂದರೆ ಚರ್ಚುಗಳಿಗೆ ಫಂಡ್ ಮಾಡಿದಂತೆ. 1990ರಿಂದಲೂ ಪ್ರಾಥಮಿಕ ಶಿಕ್ಷಣದಲ್ಲಿ ಕೊಂಕಣಿ ಮತ್ತು ಮರಾಠಿಗೆ ಮಾತ್ರ ಸರ್ಕಾರದ ಅನುದಾನ ಎಂಬುದು ಗೋವಾದ ನೀತಿಯಾಗಿತ್ತು. ಇದರರ್ಥ ಆಂಗ್ಲ ಮಾಧ್ಯಮ ನಡೆಸುವುದಕ್ಕೆ ಪ್ರತಿಬಂಧವಿತ್ತು ಎಂದಲ್ಲ. ಆದರೆ ಸರ್ಕಾರಿ ಅನುದಾನ ಸಿಗುತ್ತಿರಲಿಲ್ಲ. 2011ರಲ್ಲಿ ಕಾಂಗ್ರೆಸ್ ಸರ್ಕಾರ ಇದನ್ನು ಬದಲಿಸಿ ಆಂಗ್ಲ ಮಾಧ್ಯಮ ಶಾಲೆಗಳಿಗೂ ಅನುದಾನ ಶುರು ಮಾಡಿದ ತಕ್ಷಣವೇ ಕೊಂಕಣಿ ಮತ್ತು ಮರಾಠಿ ಮಾಧ್ಯಮದ ಸುಮಾರು 130 ಶಾಲೆಗಳು ಆಂಗ್ಲ ಮಾಧ್ಯಮಕ್ಕೆ ಬದಲಾದವು. 2012ರಲ್ಲಿ ಗೋವಾದಲ್ಲಿ ಅಧಿಕಾರ ಹಿಡಿದ ಬಿಜೆಪಿ ಸರ್ಕಾರ, ಆಂಗ್ಲ ಮಾಧ್ಯಮಕ್ಕೆ ಅನುದಾನ ಕಡಿತಗೊಳಿಸುವ ಭರವಸೆಯನ್ನು ಆರೆಸ್ಸೆಸ್ಸಿಗೆ ನೀಡಿತ್ತಾದರೂ, ಆ ಬಗ್ಗೆ ಯಾವ ಆಸಕ್ತಿಯನ್ನೂ ವಹಿಸದಿರುವುದು, ಗೋವಾ ಆರೆಸ್ಸೆಸ್ ಮುಖ್ಯಸ್ಥರಾಗಿದ್ದ ಸುಭಾಷ್ ವೆಲಿಂಗಕರ್ ಸಿಡಿದೇಳಲು ಕಾರಣ.

ಬಿಜೆಪಿಯನ್ನು ಈ ಭಾಷಾ ಬಿಕ್ಕಟ್ಟು ಭವಿಷ್ಯದಲ್ಲಿ ಬೇರೆ ಬೇರೆ ರಾಜ್ಯಗಳಲ್ಲೂ ಕಾಡಬಹುದಾ? ಹೌದೆನ್ನಲು ಕೆಲ ಕಾರಣಗಳಿವೆ. ಪ್ರಾದೇಶಿಕ ಭಾಷೆಗಳಿಗೆ ಮಹತ್ವ ನೀಡುವ ವಿಚಾರದಲ್ಲಿ ಈ ಹಿಂದಿನ ಸರ್ಕಾರಗಳು ಉತ್ತಮವಾಗಿದ್ದವು ಎಂದೇನೂ ಅಲ್ಲ. ಆದರೆ ಬಿಜೆಪಿಯನ್ನು ಈ ಪ್ರಶ್ನೆ ಕಾಡಲಿರುವುದು ಅದರ ಅಭಿವೃದ್ಧಿ ರಾಜಕಾರಣದ ಹಿನ್ನೆಲೆಯಲ್ಲಿ. ಭಾರತವನ್ನು ಆರ್ಥಿಕ ಶಕ್ತಿಯಾಗಿ ರೂಪುಗೊಳಿಸುವುದು, ಉದ್ಯೋಗ ಇಂಥ ಕನಸುಗಳ ಮೇಲೆ ಬಿಜೆಪಿ ಆಡಳಿತವಿದೆ. ಉದ್ಯೋಗ ನೀಡಿಕೆ, ಸಂಪತ್ತಿನ ಹಂಚಿಕೆಯಲ್ಲಿ ಅದು ಉದ್ಯಮಶೀಲತೆ, ಡಿಜಿಟಲೀಕರಣ ಇಂಥ ಮಾರ್ಗದ ಮೂಲಕ ಯತ್ನಿಸುತ್ತಿದೆ. ಹೀಗೆ ಆರ್ಥಿಕ ಅಭಿವೃದ್ಧಿ ಎಂದಾದಾಗ ಈ ಪ್ರಕ್ರಿಯೆಯಲ್ಲಿ ಭಾಷೆಗೆ ಯಾವ ಸ್ಥಾನ ಎಂಬ ಪ್ರಶ್ನೆ ಸಹಜವಾಗಿ ಬರುತ್ತದೆ. ಎಲ್ಲರಿಗೂ ಇಂಟರ್ನೆಟ್ ಬ್ಯಾಂಕಿಂಗ್- ಮೊಬೈಲ್ ಬ್ಯಾಂಕಿಂಗ್ ಒದಗಿಸುತ್ತೇವೆ ಎಂದಾಗ ಹರ್ಷವೇನೋ ಆಗುತ್ತದೆ. ಆದರೆ ಯಾವ ಭಾಷೆಯಲ್ಲಿ ಎಂಬ ಪ್ರಶ್ನೆ ಒಡನೆಯೇ ಹುಟ್ಟುತ್ತದೆ. ಸಾಮಾನ್ಯ ಕನ್ನಡಿಗನೋ, ತಮಿಳಿಗನೋ ಮೊದಲು ಇಂಗ್ಲಿಷ್- ಹಿಂದಿ ಕಲಿತು ನಂತರ ಈ ಎಲ್ಲ ಸೇವೆಗಳನ್ನು ಪಡೆಯುವ ಸ್ಥಿತಿ ಬರುತ್ತದೆಯೋ ಎಂಬ ಆತಂಕ ಇದ್ದೇ ಇದೆ. ಇಂಗ್ಲಿಷ್- ಹಿಂದಿ ಬಲ್ಲವರು ಸಹ ಭಾಷಾ ಗುರುತುಗಳನ್ನು ಬಿಟ್ಟುಕೊಡಲಾರರು. ಅದರಲ್ಲೇನಿದೆ, ಅಷ್ಟರಮಟ್ಟಿಗೆ ಇಂಗ್ಲಿಷ್ ಕಲಿಯೋಣ ಎಂಬ ಸಮಜಾಯಿಷಿಯನ್ನು ಈ ಹಂತದಲ್ಲಿ ಹಲವರು ಉತ್ಸುಕರಾಗಿ ಹೇಳಿಬಿಡಬಹುದಾದರೂ, ಬಿಜೆಪಿಯ ಅಭಿವೃದ್ಧಿ ನೀತಿ ನಿಜಕ್ಕೂ ಪಸರಿಸಿದ್ದೇ ಆದರೆ ಅದರೊಂದಿಗೆ ಐಡೆಂಟಿಟಿ ಪ್ರಶ್ನೆಗಳು ಎದ್ದೇ ಸಿದ್ಧ. ನಮ್ಮ ಪಟ್ಟಣಗಳ ರಸ್ತೆಗಳ ಮೈಲುಗಲ್ಲುಗಳೂ ಪ್ರಾದೇಶಿಕ ಭಾಷೆ ಕಡೆಗಣಿಸಿ ಇಂಗ್ಲಿಷ್- ಹಿಂದಿಗಳನ್ನು ಹೊದ್ದು ಕುಳಿತರೆ, ಅದನ್ನು ಓದಬಲ್ಲ ಮನಸ್ಸು ಸಹ ಸಹಜವಾಗಿ ಪ್ರತಿಭಟಿಸುತ್ತದೆ. ಏಕೆಂದರೆ ಅದರಲ್ಲಿ ನಮ್ಮ ಗುರುತಿನ ಪ್ರಶ್ನೆ ಇದೆ. ಈ ಐಡೆಂಟಿಟಿ ಮಹತ್ವದ ಬಗ್ಗೆ ಬಿಜೆಪಿಯಂಥ ರಾಜಕೀಯ ಪಕ್ಷಕ್ಕೆ ಯಾರೇನೂ ಹೇಳಬೇಕಾಗಿಲ್ಲ.

ನರೇಂದ್ರ ಮೋದಿ ರೀತಿಯಲ್ಲೇ ಮನೋಹರ ಪರಿಕರ್ ಸಹ ಕೆಲಸಗಾರ, ಅಭಿವೃದ್ಧಿ ಚಹರೆಯೇ. ಆದರೆ ಗೋವಾದಲ್ಲಿ ಸ್ವಂತ ಪರಿವಾರದವರಿಂದ ಎದುರಾಗಿರುವ ಪ್ರಶ್ನೆ ಬೇರೆಯದೇ ನೆಲೆಯದ್ದು. ಇಂಥದೇ ಭಾಷೆಯ ಪ್ರಶ್ನೆಗಳು ನಿಧಾನವಾಗಿ ಕೇಂದ್ರ ಬಿಜೆಪಿಯನ್ನು ಸುತ್ತಿಕೊಳ್ಳುವ ಸಾಧ್ಯತೆಗಳೆಲ್ಲ ಇವೆ. ಇತ್ತ, ಮಾತೃಭಾಷೆ ಪರವಾಗಿಯೇ ನಾವು ಕಾರ್ಯಕಾರಿ ಸಭೆಗಳಲ್ಲಿ ನಿರ್ಣಯ ಸ್ವೀಕರಿಸಿದ್ದೇವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೇಳಿ ಸುಮ್ಮನಾಗುವುದಾದರೆ ಅದು ಸಮಾಧಾನ ಮೂಡಿಸದು.

Leave a Reply