ಕಾವೇರಿ: ಮುಮಂ- ನಾರಿಮನ್ ಭೇಟಿ, ಬಿಬಿಎಂಪಿ ಸ್ಥಾನಕ್ಕೆ ಜೆಡಿಎಸ್ ಟಾರ್ಗೆಟ್, ಎಎಪಿ ಸಂದೀಪ್ ವಿರುದ್ಧ ಮಹಿಳೆಯ ದೂರು- ಅದು ಒಪ್ಪಿತ ಕಾಮವಾಗಿರಲಿಲ್ಲ!, ವಿಯೆಟ್ನಾಂ ಭೇಟಿಯಲ್ಲಿ ಬಲವಾಯ್ತು ರಕ್ಷಣೆ

ಬೆಂಗಳೂರಿನ ಮಲ್ಲೇಶ್ವರಂನಲ್ಲಿರೋ ಮಾರ್ಗೋಸಾ ರಸ್ತೆಯಲ್ಲಿ ಬೃಹತ್ ಮರವೊಂದು ಶನಿವಾರ ಬೆಳಗ್ಗೆ ಶಿರಡಿಯಿಂದ ಬೆಂಗಳೂರಿಗೆ ಬರುತ್ತಿದ್ದ ಐರಾವತ ಬಸ್ ಮೇಲೆ ಬಿದ್ದಿದೆ. ಪರಿಣಾಮ ಈ ಪ್ರದೇಶದ ಸುತ್ತಮುತ್ತ ಕೆಲಕಾಲ ಟ್ರಾಫಿಕ್ ಸಮಸ್ಯೆ ತೀವ್ರವಾಗಿತ್ತು. ಬಸ್ ನಲ್ಲಿದ್ದ 40 ಪ್ರಯಾಣಿಕರು ಸುರಕ್ಷಿತವಾಗಿದ್ದು, ಯಾವುದೇ ಅಪಾಯವಾಗಿಲ್ಲ…

ಡಿಜಿಟಲ್ ಕನ್ನಡ ಟೀಮ್:

ನಾರಿಮನ್ ಭೇಟಿಯಾದ ಸಿಎಂ

ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಶುಕ್ರವಾರ ಸುಪ್ರೀಂ ಕೋರ್ಟ್ ‘ಬದುಕಿ ಹಾಗೂ ಬದುಕಲು ಬಿಡಿ ಎಂಬ ತತ್ವದ ಮೇಲೆ ತ.ನಾಡಿಗೆ ನೀರು ಬಿಡಬೇಕು’ ಎಂದು ಕರ್ನಾಟಕಕ್ಕೆ ಸಲಹೆ ನೀಡಿತ್ತಾದರೂ ಸದ್ಯಕ್ಕೆ ನೆರೆ ರಾಜ್ಯಕ್ಕೆ ನೀರು ಹರಿಸದಿರಲು ಸರ್ಕಾರ ತೀರ್ಮಾನಿಸಿದೆ. ಸೋಮವಾರ ಮುಂದಿನ ವಿಚಾರಣೆ ನಡೆಯಲಿದ್ದು, ನ್ಯಾಯಾಲಯದಿಂದ ಅಂತಿಮ ತೀರ್ಪು ಬರುವವರೆಗೂ ನೀರು ಬಿಡುವುದು ಬೇಡ ಎಂಬ ನಿಲುವಿಗೆ ಬಂದಿದೆ ಸರ್ಕಾರ. ಈ ಸಂಬಂಧ ತಮ್ಮ ಮುಂದಿನ ನಡೆಯ ಬಗ್ಗೆ ಚರ್ಚಿಸುವ ಸಲುವಾಗಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶನಿವಾರ ನವದೆಹಲಿಯಲ್ಲಿ ರಾಜ್ಯದ ಪರ ವಕೀಲರಾದ ಫಾಲಿ ನಾರಿಮನ್ ಅವರನ್ನು ಭೇಟಿ ಮಾಡಿದರು. ಸಿ.ಎಂ ಜತೆಗೆ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಹಾಗೂ ಇಲಾಖೆ ಅಧಿಕಾರಿಗಳು ಸಾಥ್ ನೀಡಿದ್ದರು.

ಬಿಬಿಎಂಪಿ ಮೇಯರ್ ಸ್ಥಾನ ಕೊಡೋರಿಗೆ ಬೆಂಬಲ ಅಂತು ಜೆಡಿಎಸ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಜತೆ ಕೈಜೋಡಿಸಿದ್ದ ಜೆಡಿಎಸ್ ಈಗ ಮೇಯರ್ ಸ್ಥಾನ ತಮ್ಮ ಪಕ್ಷದವರಿಗೆ ಬೇಕು ಎಂದಿದೆ. ತಮ್ಮ ಪಕ್ಷದ ಅಭ್ಯರ್ಥಿ ಮೇಯರ್ ಆಗಲು ಯಾರು ಬೆಂಬಲಿಸುತ್ತಾರೋ ಅವರೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸುವುದಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಮುಂದೆ ಆಯ್ಕೆ ಇಟ್ಟಿದ್ದಾರೆ ಪಕ್ಷದ ವರಿಷ್ಠರಾದ ಎಚ್.ಡಿ ದೇವೇಗೌಡ. ಪದ್ಮನಾಭನಗರದ ನಿವಾಸದಲ್ಲಿ ಪಾಲಿಕೆಯ 14 ಸದಸ್ಯರ ಜತೆ ಸಭೆ ನಡೆಸಿದ ಗೌಡರು ತಮ್ಮ ನಿರ್ಧಾರವನ್ನು ಎರಡು ರಾಷ್ಟ್ರೀಯ ಪಕ್ಷಗಳಿಗೆ ರವಾನಿಸಿದ್ದಾರೆ. ಈ ಹಿಂದೆ 12 ಸ್ಥಾಯಿ ಸಮಿತಿಗಳ ಪೈಕಿ ಕೇವಲ 2 ಸ್ಥಾನವನ್ನು ಮಾತ್ರ ಜೆಡಿಎಸ್ ಗೆ ನೀಡಿದ್ದರ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ರು.

ಹಿರಿಯ ಕಾರ್ಯಕರ್ತರಿಗೆ ನಿಗಮ ಸ್ಥಾನ

ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ಹಿರಿಯ ಕಾರ್ಯಕರ್ತರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಕಲ್ಪಿಸಲು ಹಿರಿಯ ನಾಯಕರು ನಿರ್ಧರಿಸಿದ್ದಾರೆ. ಶನಿವಾರ ನವದೆಹಲಿಯಲ್ಲಿ ಈ ಬಗ್ಗೆ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಹಾಗೂ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಭೇಟಿ ಮಾಡಿದ ನಂತರ ಕಾರ್ಯಕರ್ತರಿಗೆ ಈ ಅಧಿಕಾರ ನೀಡಲು ಸಮ್ಮತಿ ಸಿಕ್ಕಿದೆ. ಹಬ್ಬದ ನಂತರ ಪ್ರಕಟಣೆ ಹೊರಬೀಳುವ ನಿರೀಕ್ಷೆ ಇದೆ.

ಸಂದೀಪ್ ಕುಮಾರ್ ವಿರುದ್ಧ ಮಹಿಳೆಯಿಂದ ದೂರು

ದೆಹಲಿಯ ಮಾಜಿ ಸಚಿವ ಎಎಪಿ ಪಕ್ಷದ ಸಂದೀಪ್ ಕುಮಾರ್ ವಿರುದ್ಧದ ಆಕ್ಷೇಪಾರ್ಹ ಸಿಡಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಆ ಸಿಡಿಯಲ್ಲಿದ್ದ ಮಹಿಳೆ ಈಗ ಸಂದೀಪ್ ಕುಮಾರ್ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ‘ನಾನು ಪಡಿತರ ಚೀಟಿಗೆ ಸಂಬಂಧಿಸಿದಂತೆ ಮಾತನಾಡಲು ಸಂದೀಪ್ ಅವರನ್ನು ಭೇಟಿಯಾಗಲು ಹೋಗಿದ್ದೆ. ಆಗ ನನಗೆ ಪಾನೀಯದಲ್ಲಿ ಮದ್ದು ಬೆರೆಸಿ ಕುಡಿಸಿದ್ದರು. ನಂತರ ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾರೆ’ ಎಂದು ಆಕೆ ದೂರಿನಲ್ಲಿ ಆರೋಪಿಸಿದ್ದಾಳೆ. ಇದಕ್ಕೂ ಮುನ್ನ ಶನಿವಾರ ಈ ಪ್ರಕರಣದಿಂದ ಪಕ್ಷವನ್ನು ಮುಜುಗೊರಕ್ಕೀಡು ಮಾಡಿದ ಕಾರಣ ಕೊಟ್ಟು ಸಂದೀಪ್ ಕುಮಾರ್ ಅವರನ್ನು ಆಮ್ ಆದ್ಮಿ ಪಕ್ಷ ವಜಾಗೊಳಿಸಿದೆ.

ಸರ್ವಪಕ್ಷ ನಿಯೋಗ ಸಲಹೆ ಮೇರೆಗೆ ಕಾಶ್ಮೀರ ಸಮಸ್ಯೆ ಬಗೆಹರಿಸ್ತೇವೆ

ಕಾಶ್ಮೀರದಲ್ಲಿ ಎದ್ದಿರುವ ಸಮಸ್ಯೆಯನ್ನು ಸರ್ವಪಕ್ಷ ನಿಯೋಗದ ಶಿಫಾರಸ್ಸಿನ ಮೇರೆಗೆ ಬಗೆಹರಿಸಲಾಗುವುದು ಎಂದಿದ್ದಾರೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್. ಶನಿವಾರ ಈ ಕುರಿತು ಮಾತನಾಡಿದ ಅವರು ಹೇಳಿದಿಷ್ಟು… ‘ಸರ್ವಪಕ್ಷ ನಿಯೋಗ ಭಾನುವಾರ ಕಣಿವೆ ರಾಜ್ಯಕ್ಕೆ ಭೇಟಿ ನೀಡಲಿದೆ. ಈ ಬಗ್ಗೆ ಇಂದು ಎಲ್ಲ ಪಕ್ಷದ ನಾಯಕರು ಸೇರಿ ಚರ್ಚಿಸಿದ್ದೇವೆ. ಪ್ರತಿಯೊಬ್ಬರು ತಮ್ಮ ಸಲಹೆಗಳನ್ನು ನೀಡಿದ್ದಾರೆ. ಈ ನಿಯೋಗ ಕಾಶ್ಮೀರಕ್ಕೆ ಭೇಟಿ ನೀಡಿ ಮರಳಿದ ನಂತರ ಮತ್ತೊಮ್ಮೆ ಸಭೆ ನಡೆಸಿ ಸಲಹೆಗಳನ್ನು ನೀಡಲಿವೆ. ಅದರ ಆಧಾರದ ಮೇಲೆ ಕೇಂದ್ರವು ಈ ವಿಚಾರವನ್ನು ಬಗೆಹರಿಸಲಿದೆ.’

ಹರ್ಯಾಣ ಮಾಜಿ ಸಿಎಂ ಮನೆ ಮೇಲೆ ಸಿಬಿಐ ದಾಳಿ

ಗುರುಗ್ರಾಮದಲ್ಲಿ ರೈತರಿಂದ ಜಮೀನು ವಶಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಕಾನೂನು ಉಲ್ಲಂಘನೆ ಹಾಗೂ ಅವ್ಯವಹಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಹರ್ಯಾಣ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಅವರ ಮನೆ ಮೇಲೆ ಸಿಬಿಐ ದಾಳಿ ನಡೆದಿದೆ. ಈ ಪ್ರಕರಣದಲ್ಲಿ ₹ 1500 ಕೋಟಿಯಷ್ಟು ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಹೂಡಾ ಅವರ ನಿವಾಸದ ಜತೆಗೆ ಅವರ ಸರ್ಕಾರದ ಕಾಲದಲ್ಲಿದ್ದ ಕಾರ್ಯದರ್ಶಿ ಎಂ.ಎಲ್ ತಯಾಲ್, ಯುಪಿಎಸ್ಸಿ ಸದಸ್ಯ ಚಟ್ಟರ್ ಸಿಂಗ್ ಹಾಗೂ ಐಎಎಸ್ ಅಧಿಕಾರಿ ಎಸ್.ಎಸ್ ಧಿಲ್ಲೊನ್ ಅವರ ಮನೆ ಸೇರಿಂದಂತೆ 18 ಸ್ಥಳಗಳಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ.

ವಿಯೆಟ್ನಾಂಗೆ ರಕ್ಷಣಾ ನೆರವು ವಿಸ್ತರಿಸಿದ ಭಾರತ

ತಮ್ಮ ರಕ್ಷಣಾ ಒಪ್ಪಂದವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಭಾರತವು ವಿಯೆಟ್ನಾಂ 500 ಮಿಲಿಯನ್ ಡಾಲರ್ ಹೆಚ್ಚುವರಿ ನೆರವನ್ನು ನೀಡಿದೆ. ಇದೇ ವೇಳೆ 12 ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಆ ಪೈಕಿ ಕಡಲ ತೀರದಲ್ಲಿ ಗಸ್ತು ಹಡಗಿನ ನಿರ್ಮಾಣವೂ ಸೇರಿಕೊಂಡಿದೆ. ಉಭಯ ದೇಶಗಳ ನಾಯಕರು ಸಭೆ ನಡೆಸಿದ ನಂತರ, ಎರಡು ದೇಶಗಳ ರಕ್ಷಣಾ ವಲಯದಲ್ಲಿ ಸಹಕಾರ ವೃದ್ಧಿಸಿಕೊಳ್ಳಲು ಮುಂದಾಗಿದ್ದೇವೆ ಎಂದರು ಭಾರತ ಪ್ರಧಾನಿ ನರೇಂದ್ರ ಮೋದಿ. ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲೇ ಭಾರತ ಮತ್ತು ವಿಯೆಟ್ನಾಂ ನಡುವಣ ಈ ಒಪ್ಪಂದಗಳು ಚೀನಾಗೆ ಮತ್ತಷ್ಟು ತಲೆ ಬಿಸಿ ಹೆಚ್ಚಲಿದೆ.

modi tour

ವಿಯೆಟ್ನಾಂ ಭೇಟಿ ವೇಳೆ ಭೌದ್ಧ ಪಾಠಶಾಲೆಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಭಿಕ್ಕುಗಳೊಂದಿಗೆ ಬೆರೆತರು.

₹ 6600 ಕೋಟಿ ಮೌಲ್ಯದ ಮಲ್ಯ ಆಸ್ತಿ ಸ್ವಾಧೀನ ಸ್ವತ್ತು ಅಂತೂ ಇಡಿ

ಹಣ ದುರುಪಯೋಗ ಪ್ರಕರಣದ ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಉದ್ಯಮಿ ವಿಜಯ್ ಮಲ್ಯ ಅವರಿಗೆ ಸೇರಿದ್ದ ₹6600 ಕೋಟಿ ಮೌಲ್ಯದ ಆಸ್ತಿಯನ್ನು ಸ್ವಾಧೀನದ ಸ್ವತ್ತು ಎಂದು ವಿವರ ಸಲ್ಲಿಸಿದೆ. ಮಲ್ಯ ಅವರಿಗೆ ಸಂಬಂಧಿಸಿದಂತೆ ಎರಡು ವಿಭಿನ್ನ ಹಣ ದುರುಪಯೋಗ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದೆ. ಮಲ್ಯ ಅವರಿಗೆ ನೇರವಾಗಿ ಹಾಗೂ ಪರೋಕ್ಷವಾಗಿ ಸಂಬಂಧಿಸಿದ ಆಸ್ತಿಯನ್ನು ಸ್ವಾಧೀನ ಸ್ವತ್ತು ಎಂದು ಪರಿಗಣಿಸಿದೆ.

Leave a Reply