ಡಿಜಿಟಲ್ ಕನ್ನಡ ಟೀಮ್:
ಮೂರು ಬಾರಿ ತಲಾಕ್ ಹೇಳುವ ಮೂಲಕ ಮಡದಿಗೆ ವಿಚ್ಛೇದನ ಕೊಡುವ ನೀತಿಯನ್ನು ಬಿಡಬೇಕು ಎಂದು ಮುಸ್ಲಿಂ ಸಮುದಾಯದ ಮಹಿಳೆಯರು ನ್ಯಾಯಾಲಯದ ಮೆಟ್ಟಿಲೇರಿರುವುದು ಸರಿಯಷ್ಟೆ. ಇದಕ್ಕೆ ಪ್ರತಿವಾದಿಯಾಗಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ತನ್ನ ವಾದವನ್ನು ನ್ಯಾಯಾಲಯದ ಮುಂದಿರಿಸಿದೆ. ಧಾರ್ಮಿಕ ಕಾನೂನನ್ನು ಸಮರ್ಥಿಸುವ ಭರದಲ್ಲಿ ಪುರುಷ ಪ್ರಾಧಾನ್ಯ ಹಾಗೂ ಮಹಿಳೆಯ ತುಚ್ಛತೆಯನ್ನು ಕಣ್ಣಿಗೆ ರಾಚಿದಂತೆ ಕಟ್ಟಿಕೊಟ್ಟಿರುವ ಕೀರ್ತಿ ಈ ಮಂಡಳಿಗೆ ಸಲ್ಲಬೇಕು.
ಇದು ಧಾರ್ಮಿಕ ಭಾವನೆಯೊಂದಿಗೆ ಬೆರೆತುಕೊಂಡಿರುವ ವಿಷಯವೆಂದೋ ಅಥವಾ ಸಮುದಾಯದೊಳಗೇ ಬಗೆಹರಿಸಿಕೊಳ್ಳಬೇಕಾದದ್ದು ಎಂದೋ ಹೇಳಿದ್ದರೆ ತುಸುವಾದರೂ ಮರ್ಯಾದೆ ಉಳಿಯುತ್ತಿತ್ತು. ಆದರೆ ಇದು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರೋ 68 ಪುಟಗಳ ಅಫಿಡವಿಟ್ ನಲ್ಲಿ ಹೇಳಿರೋದೇನು ನೋಡಿ..
- ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗಂಡಸಿಗೆ ಹೆಚ್ಚು ಸಾಮರ್ಥ್ಯವಿರುತ್ತದೆ. ಆತ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡು, ಅವಸರವಿಲ್ಲದೇ ಸೂಕ್ತ ನಿರ್ಧಾರ ತೆಗೆದುಕೊಳ್ಳಬಲ್ಲ. ಹಾಗೆಂದೇ ಶರಿಯಾ ತಲಾಕ್ ಹಕ್ಕನ್ನು ಗಂಡಸಿಗೆ ಕೊಟ್ಟಿದೆ.
ಇದು ಮೊದಲ ಪ್ರತಿಪಾದನೆ. ಅಲ್ಲಿಗೆ ನಿರ್ಧಾರದ, ಯೋಚನೆಯ ಸಾಮರ್ಥ್ಯವೆಲ್ಲ ಹೆಂಗಸಿಗೆ ಇಲ್ಲ ಎಂದಂತಾಯಿತು. ಇವರು ಹೇಳುವಂತೆ ಅವಸರವಿಲ್ಲದೇ ನಿರ್ಧಾರ ತೆಗೆದುಕೊಳ್ಳುವ ಗಂಡಸು ಸಮಾಧಾನ ಚಿತ್ತದಿಂದಲೇ ವಿಚ್ಛೇದನದ ಪ್ರಕ್ರಿಯೆಗೆ ಒಳಗಾಗಬಹುದಲ್ಲ ಎಂಬ ಪ್ರಶ್ನೆ ಏಳುತ್ತದೆ. ಆದರೆ ಇವರು ಪ್ರತಿಪಾದಿಸುವ ‘ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವ ಗಂಡಸು’ ಎಂಬ ಪ್ರತಿಪಾದನೆ ಇನ್ನೊಂದು ವಾಕ್ಯದಲ್ಲೇ ಅಡಿಮೇಲಾಗಿಬಿಡುತ್ತದೆ!
- ಸಂಸಾರದಲ್ಲಿ ತೀವ್ರ ಸಂಘರ್ಷವಿದ್ದು, ಹೆಂಡತಿಯನ್ನು ಬಿಡಬೇಕಾಗಿ ಬಂದಾಗ ಕಾನೂನಿನ ಪ್ರಕ್ರಿಯೆಗಳಿಗೆಲ್ಲ ಒಳಗಾಗುತ್ತ ಇದ್ದರೆ ಗಂಡಸಿನ ಸಹನೆ ಹಾಳಾಗುತ್ತದೆ. ಆಗ ಸಂಬಂಧವನ್ನು ನಿವಾರಿಸಿಕೊಳ್ಳುವುದಕ್ಕೆ ಹೆಂಡತಿಯನ್ನೇ ಕೊಂದುಬಿಡುವ ಸಂಭವವಿದೆ. ಹೀಗಾಗಿ ತಲಾಕ್ ವ್ಯವಸ್ಥೆಯು ಮುಸ್ಲಿಂ ಹೆಂಗಸರು ಕೊಲೆಯಾಗುವುದನ್ನು ತಡೆದಿದೆ!
ಇದಪ್ಪಾ ವಾದ ಎಂದರೆ. ಕೊಲೆಯಾಗುವುದಕ್ಕಿಂತ ತಲಾಕ್ ಹೇಳಿಸಿಕೊಂಡು ತೊಲಗಿ ಎನ್ನುತ್ತಿದೆ ಈ ಮುಸ್ಲಿಂ ಮಂಡಳಿ!
ಇನ್ನು, ಬಹುಪತ್ನಿತ್ವವನ್ನು ಸಮರ್ಥಿಸಿಕೊಂಡಿರುವ ವಿಧಾನದಲ್ಲೂ ಹೆಣ್ಣೆಂದರೆ ಗಂಡಿನ ರಕ್ಷಣೆಯ ಮರ್ಜಿಯಲ್ಲಿ ಇರಬೇಕಾದವಳಷ್ಟೆ ಎಂಬುದರ ನಿರ್ಲಜ್ಜ ಪ್ರತಿಪಾದನೆ ಇದೆ.
- ಕುರಾನ್, ಹದಿತ್ ಮತ್ತು ಬಹುಜನ ಮತ ಅಭಿಪ್ರಾಯವು ಪುರುಷರು ಬಹುಪತ್ನಿಯರನ್ನು ಹೊಂದಲು ಅವಕಾಶ ಮಾಡಿಕೊಡುತ್ತದೆ. ಬಹುಪತ್ನಿತ್ವ ಎಂಬುದು ಇಸ್ಲಾಂನ ಪ್ರಾಥಮಿಕ ಮೂಲದಿಂದಲೇ ಆಚರಣೆಯಾಗುತ್ತಿದ್ದು, ಇದಕ್ಕೆ ನಿಷೇಧ ಹೇರಬಾರದು. ಮಹಿಳೆಯರ ಸಂಖ್ಯೆ ಹೆಚ್ಚಿದ್ದಾಗ ಆಕೆ ಯಾರದ್ದೋ ಇಟ್ಟುಕೊಂಡವಳೆನಿಸಿಕೊಳ್ಳುವುದಕ್ಕಿಂತ ಮದುವೆಯಾಗಿರುವುದೇ ಒಳ್ಳೆಯದಲ್ಲವೇ? ಇದು ಪುರುಷನ ಆಸೆ ತೀರಿಸಿಕೊಳ್ಳುವುದಕ್ಕಲ್ಲ, ಸಾಮಾಜಿಕ ಅಗತ್ಯಕ್ಕಾಗಿ ಇರುವಂಥದ್ದು.
ಭಿಕ್ಷೆ ನೀಡುತ್ತಿದ್ದೇವೆ ಎಂಬ ಧಾರ್ಷ್ಟ್ಯ ಇದಕ್ಕಿಂತ ನಿಖರವಾಗಿ ಹೊಮ್ಮುವುದಕ್ಕೆ ಸಾಧ್ಯವಿದೆಯೇ? ಹೆಂಗಸರ ಸಂಖ್ಯೆ ಹೆಚ್ಚಿರುವುದಕ್ಕೆ ಬಹುಪತ್ನಿತ್ವ ಎಂಬ ವಾದ ಹೊಸೆಯುವವರು, ಗಂಡಸರು ಹೆಚ್ಚಿರುವ ಪ್ರಾಂತ್ಯಗಳಲ್ಲಿ ಹೆಂಗಸಿಗೆ ಇಬ್ಬರನ್ನು ಮದುವೆಯಾಗಲು ಹೇಳುತ್ತಾರಂತಾ?
ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಪ್ರತಿಪಾದನೆಗಳು ಹೆಣ್ಣಿಗಂತೂ ಗೌರವ ತರುವಂತಿಲ್ಲ. ಅತ್ತ ಗಂಡಸು ಸಹ ತನ್ನ ಕಿರಿಕಿರಿಗಳನ್ನು ಕೊಲೆ ಮಾಡಿ ನಿವಾರಿಸಿಕೊಳ್ಳುವ ಜಾಯಮಾನದವನಿದ್ದಾನೆ ಎಂದು ಅಪ್ರಬುದ್ಧವಾಗಿ ಸಾರುತ್ತಿದೆ.
yaa allaa.. idu nyaya alla
bahala kheda vaaguttide.