ಚಿನ್ನದ ಪದಕದ ಹೊಸ್ತಿಲಲ್ಲಿ ಯೋಗೇಶ್ವರ್ ದತ್? ಈ ಸಿಹಿಸುದ್ದಿ ಅಧಿಕೃತವಾಗೋಕೆ ಬಾಕಿ ಇರೋದು ಎರಡೇ ಹೆಜ್ಜೆ!

ಡಿಜಿಟಲ್ ಕನ್ನಡ ಟೀಮ್:

ಭಾರತದ ಭರವಸೆಯ ಕುಸ್ತಿಪಟು ಯೋಗೇಶ್ವರ್ ದತ್ ಕೊರಳನ್ನು ಚಿನ್ನದ ಪದಕ ಅಲಂಕರಿಸಲಿದೆ? ಹೀಗೊಂದು ಸುದ್ದಿ ಶುಕ್ರವಾರ ರಾತ್ರಿ ಅಂತಾರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಸಂಸ್ಥೆ (ವಾಡಾ) ಅಂಗಣದಿಂದ ಹಾರಿ ಬಂದಿದೆ… ಸದ್ಯಕ್ಕೆ ಈ ಬಗ್ಗೆ ಬಂದಿರೋದು ಮೂಲಗಳ ಮಾಹಿತಿಯಾಗಿದ್ದು, ಅಧಿಕೃತ ಹೇಳಿಕೆ ಬಾಕಿ ಇದೆ. ಈ ಸಿಹಿ ಸುದ್ದಿ ಖಚಿತವಾಗೋಕೆ ಇನ್ನೆರಡು ಹೆಜ್ಜೆ ಬಾಕಿ ಇದೆ.

ಮೊನ್ನೆಯಷ್ಟೇ ಯೋಗೇಶ್ವರ್ ದತ್ ಕಂಚಿನ ಪದಕದಿಂದ ಬೆಳ್ಳಿಗೆ ಬಡ್ತಿ ಪಡೆಯುತ್ತಿರೋ ಸುದ್ದಿ ಕೇಳಿದ್ದ ಭಾರತೀಯ ಕ್ರೀಡಾಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಈಗ ಅದು ಬೆಳ್ಳಿಯಲ್ಲ ಚಿನ್ನ ಅನ್ನೋ ಮೂಲಗಳ ಮಾಹಿತಿ ಅಭಿಮಾನಿಗಳಲ್ಲಿನ ಕುತೂಹಲವನ್ನು ದುಪ್ಪಟ್ಟು ಮಾಡಿದೆ.

ಬೆಳ್ಳಿಯಾಗಿ ಪರಿವರ್ತನೆಯಾಗಿದ್ದ ಯೋಗೇಶ್ವರ್ ದತ್ ಪದಕ ಚಿನ್ನ ಆಗುತ್ತಿರೋದು ಹೇಗೆ? ಎಂಬ ಪ್ರಶ್ನೆಗೆ ಸಿಗೋದು ಈ ಹಿಂದಿನ ಉತ್ತರ, ಡೋಪಿಂಗ್ ಮರು ಪರೀಕ್ಷೆ. ಹೌದು, ವಾಡಾ ಈ ಉದ್ದೀಪನ ಮದ್ದು ಸೇವನೆ ಮತ್ತು ಮೋಸದಾಟವನ್ನು ತಡೆಯುವ ನಿಟ್ಟಿನಲ್ಲಿ 2000 ರಿಂದೀಚೆಗೆ ಅಥ್ಲೀಟ್ ಗಳ ಡೋಪಿಂಗ್ ಪರೀಕ್ಷಾ ಮಾದರಿಗಳನ್ನು 10 ವರ್ಷಗಳ ಕಾಲ ಶೇಖರಿಸುವ ವ್ಯವಸ್ಥೆ ಹೊಂದಿದೆ. ಇತ್ತೀಚೆಗೆ ವಾಡಾ 2008ರ ಬೀಜಿಂಗ್ ಹಾಗೂ 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳ ಮಾದರಿಯನ್ನು ಮರು ಪರೀಕ್ಷೆಗೆ ಒಳಪಡಿಸಲು ಮುಂದಾಗಿದೆ. ಪರಿಣಾಮ ಉದ್ದೀಪನ ಮದ್ದು ಸೇವನೆ ಮಾಡಿದ್ದ ಹಲವು ಅಥ್ಲೀಟ್ ಗಳು ಈಗ ಸಿಕ್ಕಿ ಬೀಳುತ್ತಿದ್ದಾರೆ. ಈಗ ಮರು ಪರೀಕ್ಷೆಯಲ್ಲಿ ಲಂಡನ್ ಒಲಿಂಪಿಕ್ಸ್ ನ ಪುರುಷರ 60 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದ ಅಜರ್ಬಜೇನಿನ ತೊಘ್ರುಲ್ ಅಸ್ಗರೋವ್ ಸಹ ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ ಎಂಬ ಮಾಹಿತಿಗಳು ಬಂದಿವೆ.

ಬೆಳ್ಳಿ ಪದಕ ಗೆದ್ದಿದ್ದ ರಷ್ಯಾ ಕುಸ್ತಿಪಟು ಬೆಸಿಕ್ ಕೊಡುಖೊವ್ ಡೋಪಿಂಗ್ ನಲ್ಲಿ ಸಿಕ್ಕಿ ಬಿದ್ದ ಪರಿಣಾಮ ಯೋಗೇಶ್ವರ್ ದತ್ ಕಂಚಿನ ಪದಕ ಬೆಳ್ಳಿಯಾಗಿ ಮಾರ್ಪಟ್ಟಿತ್ತು. ಈಗ ಚಿನ್ನ ಗೆದ್ದಿದ್ದ ತೊಘ್ರುಲ್ ಅಸ್ಗರೋವ್ ಸಹ ಡೋಪಿಂಗ್ ನಲ್ಲಿ ಸಿಕ್ಕಿಬಿದ್ದಿರೋದು ನಿಜವೇ ಆಗಿ ಅಧಿಕೃತ ಮಾಹಿತಿ ಹೊರ ಬಂದ್ರೆ, ಬೆಳ್ಳಿಯಾಗಿರೋ ಯೋಗೇಶ್ವರ್ ದತ್ ಪದಕ ಚಿನ್ನಕ್ಕೆ ಬಡ್ತಿ ಪಡೆಯಲಿದೆ.

ಯೋಗೇಶ್ವರ್ ದತ್ ಮುಂಚೂಣಿಯಲ್ಲಿದ್ದಾರೆ ಏಕೆ?

ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಪಡೆದ ಇಬ್ಬರು ಕುಸ್ತಿಪಟುಗಳು ಭಾರತದ ಯೋಗೇಶ್ವರ್ ದತ್ ಹಾಗೂ ಅಮೆರಿಕದ ಕೊಲ್ಮನ್ ಸ್ಕಾಟ್. ಕಂಚು ಗೆದ್ದವರಲ್ಲಿ ಇಬ್ಬರು ಆಟಗಾರರಿದ್ದರೂ ಪದಕ ಬಡ್ತಿಯಾಗೋ ವಿಚಾರದಲ್ಲಿ ಯೋಗೇಶ್ವರ್ ಅವರೇ ಮುಂಚಿಣಿಯಲ್ಲಿದ್ದಾರೆ ಯಾಕೆ? ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ ಅದಕ್ಕೆ ಉತ್ತರ ಹೀಗಿದೆ ನೋಡಿ…

ಕಂಚಿನ ಪದಕಕ್ಕಾಗಿ ನಡೆದ ರೆಪಚೇಜ್ ಸುತ್ತಿನಲ್ಲಿ ಯೋಗೇಶ್ವರ್ ದತ್ 7-1 ಅಂತರದಲ್ಲಿ ಉತ್ತರ ಕೊರಿಯಾದ ಜಾಂಗ್ ಮ್ಯೊಂಗ್ ವಿರುದ್ಧ ಗೆದ್ದಿದ್ದರು. ಮತ್ತೊಂದು ಪಂದ್ಯದಲ್ಲಿ ಕೊಲ್ಮನ್ 6-2 ಅಂಕಗಳ ಅಂತರದಲ್ಲಿ ಜಪಾನಿನ ಕೆನಿಚಿ ಯುಮೊಟೊ ವಿರುದ್ಧ ಗೆದ್ದಿದ್ದರು. ಈ ಎರಡು ಪಂದ್ಯಗಳಲ್ಲಿ ಯೋಗೇಶ್ವರ್ ದತ್ ಹೆಚ್ಚು ಅಂಕಗಳ ಅಂತರದಲ್ಲಿ ಜಯಿಸಿದ್ದ ಪರಿಣಾಮ ಪದಕದ ಬಡ್ತಿಯಲ್ಲಿ ಕೋಲ್ಮನ್ ಅವರಿಗಿಂತ ಯೋಗೇಶ್ವರ್ ದತ್ ಮುಂಚೂಣಿಯಲ್ಲಿದ್ದಾರೆ

ಯೋಗೇಶ್ವರ್ ದತ್ ಅವರ ಪರೀಕ್ಷಾ ಮಾದರಿಯನ್ನು 2012ರ ಒಲಿಂಪಿಕ್ಸ್ ಸಮಯದಲ್ಲೇ ತೆಗೆದುಕೊಳ್ಳಲಾಗಿದ್ದು, ಚಿನ್ನದ ಪದಕ ನೀಡುವ ಮುನ್ನ ಯೋಗೇಶ್ವರ್ ದತ್ ಅವರ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ತೊಘ್ರುಲ್ ಅಸ್ಗರೋವ್ ಅವರ ಮರು ಪರೀಕ್ಷೆಯ ಫಲಿತಾಂಶ ಬಗ್ಗೆ ವಾಡಾ ವಿಶ್ವ ಕುಸ್ತಿ ಸಂಸ್ಥೆಗೆ ಅಧಿಕೃತ ಮಾಹಿತಿ ನೀಡಬೇಕಿರೋದು ಒಂದೆಡೆಯಾದ್ರೆ. ಮತ್ತೊಂದೆಡೆ 2012ರಲ್ಲಿ ಪಡೆಯಲಾಗಿರುವ ಯೋಗೇಶ್ವರ್ ದತ್ ಮಾದರಿಯನ್ನು ಮರು ಪರೀಕ್ಷೆಗೆ ಒಳಪಡಿಸಬೇಕಿದೆ. ಈ ಎರಡು ಹಂತದ ಪ್ರಕ್ರಿಯೆ ಪೂರ್ಣಗೊಂಡ ನಂತರವಷ್ಟೇ ಯೋಗೇಶ್ವರ್ ದತ್ ಗೆ ಚಿನ್ನದ ಪದಕ ಒಲಿಯುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯುತ್ತದೆ. ಈ ಎಲ್ಲ ಪ್ರಕ್ರಿಯೆಗಳು ನಿರೀಕ್ಷೆಯಂತೆ ಸಾಗಿದರೆ, ಭಾರತಕ್ಕೆ ಚಿನ್ನದ ಪದಕ ಲಭಿಸೋದು ಖಚಿತವಾಗಲಿದೆ. ಇದರೊಂದಿಗೆ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ವೈಯಕ್ತಿಕ ವಿಭಾಗದಲ್ಲಿ ಸಿಕ್ಕ ಎರಡನೇ ಚಿನ್ನ ಎಂಬ ಹೆಗ್ಗಳಿಕೆ ಒಂದೆಡೆಯಾದ್ರೆ, ಚಿನ್ನ ಗೆದ್ದ ಮೊದಲ ಭಾರತೀಯ ಕುಸ್ತಿಪಟು ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ ಯೋಗೇಶ್ವರ್ ದತ್.

Leave a Reply