ಬಿಗುವಲ್ಲೇ ಭಾರತ-ಚೀನಾಗಳ ಕೈಕುಲುಕು, ಒಬಾಮಾಗಿಲ್ಲ ಚೀನಾದ ಕೆಂಪುಹಾಸು, ಸಿರಿಯಾ ವಿಚಾರದಲ್ಲಿ ಅಮೆರಿಕ-ರಷ್ಯಾ ಸೊಕ್ಕು, ಮಾಲಿನ್ಯ ನಿಯಂತ್ರಣಕ್ಕೆ ಬಹುಪರಾಕು… ಜಿ 20 ಜಲಕು

ಡಿಜಿಟಲ್ ಕನ್ನಡ ಟೀಮ್:

ಚೀನಾದಲ್ಲಿ ಜಿ-20 ರಾಷ್ಟ್ರಗಳ ಸಮಾವೇಶ ಭಾನುವಾರ ಆರಂಭವಾಗಿದೆ. ಜಾಗತಿಕ ರಾಜಕಾರಣದ ಸೆಡವು, ಅಲ್ಲಲ್ಲೇ ರಾಜಿ ನಿಲುವು ಇಂಥವೆಲ್ಲದರ ರೋಚಕ ನೋಟಗಳನ್ನು ಈ ಬಲಾಢ್ಯ ರಾಷ್ಟ್ರಗಳು ಕಲೆಯುವ ವೇದಿಕೆ ಒದಗಿಸಿಕೊಡುತ್ತಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಜಿನ್ಪಿಂಗ್ ಅವರ ಭೇಟಿ ಆದ ಸಂದರ್ಭದಲ್ಲಿ ಚೀನಾ ಕಡೆಯಿಂದ ಬಂದಿರುವ ಹೇಳಿಕೆ- ‘ಭಾರತ ಮತ್ತು ಚೀನಾಗಳು ಬಹಳ ಕಷ್ಟಪಟ್ಟು ಉತ್ತಮಪಡಿಸಿಕೊಂಡಿರುವ ಬಾಂಧವ್ಯವನ್ನು ಉಳಿಸಿಕೊಳ್ಳಬೇಕು. ಪರಸ್ಪರರ ಕಾರ್ಯತಂತ್ರ ಮಹಾತ್ವಾಕಾಂಕ್ಷೆ ಗೌರವಿಸಿಕೊಂಡು ಸಾಗಬೇಕು.’

ಅಲ್ಲಿಗೆ ಚೀನಾದ ಕಣ್ಣಲ್ಲಿ ಭಾರತವೂ ಒಂದು ಕಾರ್ಯತಂತ್ರ ಸಮರ್ಥ ರಾಷ್ಟ್ರ ಎಂದಾಗಿದೆ. ವಿದೇಶ ಸಚಿವಾಲಯದ ಅಧಿಕಾರಿ ವಿಕಾಸ್ ಸ್ವರೂಪ್ ಅವರು ನೀಡಿರುವ ಮಾಹಿತಿ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ಪಾಕಿಸ್ತಾನದ ಪ್ರಶ್ನೆಯನ್ನು ಮಾತುಕತೆಯಲ್ಲಿ ತಂದಿರುವುದಲ್ಲದೇ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾದ ಉದ್ದೇಶಿತ ಆರ್ಥಿಕ ಕಾರಿಡಾರ್ ಕುರಿತೂ ಭಾರತದ ಕಳವಳವನ್ನು ಸ್ಪಷ್ಟಪಡಿಸಿದ್ದಾರೆ. ‘ಉಗ್ರವಾದಕ್ಕೆ ನಮ್ಮ ಪ್ರತಿಕ್ರಿಯೆಯು ರಾಜಕೀಯ ಪರಿಗಣನೆಯಿಂದ ಕೂಡಿರಬಾರದು’ ಎಂದು ಚೀನಾಕ್ಕೆ ಹೇಳುವ ಮೂಲಕ ‘ಚೀನಾ-ಪಾಕಿಸ್ತಾನದ ಸ್ನೇಹ ಏನೇ ಇದ್ದರೂ ಪಾಕ್ ಪ್ರೇರಿತ ಉಗ್ರವಾದದ ಖಂಡನೆಯಲ್ಲಿ ಚೀನಾ ಹಿಂದೆ ಬಾಳಬಾರದು’ ಎಂದು ಸೂಚಿಸಿದಂತಿದೆ. ಪರಸ್ಪರರು ಹೊಂದಿರುವ ನಕಾರಾತ್ಮಕ ಗ್ರಹಿಕೆಗಳನ್ನು ತೊಡೆದು ಹಾಕುವುದಕ್ಕೆ ನಿರಂತರ ಸಂವಹನ ವ್ಯವಸ್ಥೆಯೊಂದಿರಬೇಕು ಎಂಬ ಇಂಗಿತವನ್ನೂ ಪ್ರಧಾನಿ ವ್ಯಕ್ತಪಡಿಸಿದರೆನ್ನಲಾಗಿದೆ. ಎನ್ಎಸ್ಜಿ ಸದಸ್ಯತ್ವಕ್ಕೆ ಚೀನಾ ಆಕ್ಷೇಪ, ಜೈಷೆ ಉಗ್ರನ ಮೇಲೆ ಸಂಪೂರ್ಣ ಅಂತಾರಾಷ್ಟ್ರೀಯ ಪ್ರತಿಬಂಧಕ್ಕೆ ಚೀನಾ ಒಪ್ಪದೇ ಇರುವುದು ಇವೆಲ್ಲದರ ಪರಿಹಾರೋಪಾಯಕ್ಕೆ ಸಚಿವಾಲಯದ ಉನ್ನತ ಅಧಿಕಾರಿಗಳ ಮಾತುಕತೆಯ ವೇದಿಕೆಯೊಂದನ್ನು ಸೃಷ್ಟಿಸಿಕೊಳ್ಳುವ ಪ್ರಸ್ತಾವವೂ ಭಾರತದಿಂದ ಬಲವಾಗಿತ್ತು. ಒಟ್ಟೂ 35 ನಿಮಿಷಗಳು ಉಭಯ ನಾಯಕರು ಮಾತುಕತೆ ನಡೆಸಿದರು.

ಅಮೆರಿಕವನ್ನು ಅವಮಾನಿಸಿದ ಚೀನಾ

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಷ್ಯ, ಬ್ರಿಟನ್, ದಕ್ಷಿಣ ಕೊರಿಯಾ, ಬ್ರೆಜಿಲ್ ನಾಯಕರಿಗೆಲ್ಲ ವಿಮಾನ ಇಳಿಯುತ್ತಲೇ ಕೆಂಪುಕಂಬಳಿ ಹಾಕಿ ಯಥೋಚಿತ ಸ್ವಾಗತ ಕೋರಿರುವ ಚೀನಾ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಮಾತ್ರ ಸಾಮಾನ್ಯನಂತೆ ನಡೆಸಿಕೊಂಡಿದೆ. ಏರ್ಫೋರ್ಸ್ ಒನ್ ನ ಪ್ರಧಾನ ದ್ವಾರದಿಂದ ಇಳಿಯಬೇಕಾಗಿದ್ದ ಅಧ್ಯಕ್ಷರು ಬೇರೆ ದ್ವಾರದಲ್ಲಿ ಇಳಿಯಬೇಕಾಯಿತು. ಏಕೆಂದರೆ ಮುಖ್ಯದ್ವಾರಕ್ಕೆ ಲಗತ್ತಿಸುವಷ್ಟು ದೊಡ್ಡ ಏಣಿ ತಮ್ಮ ಬಳಿ ಇಲ್ಲ ಅಂದರು ಚೀನಿ ಅಧಿಕಾರಿಗಳು! ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕ ಹಾಗೂ ಚೀನಿ ಅಧಿಕಾರಿಗಳಿಗೆ ವಿಮಾನ ನಿಲ್ದಾಣದಲ್ಲಿ ಮಾತಿಗೆ ಮಾತು ಬೆಳೆದು- ‘ಇದು ನಮ್ಮ ದೇಶ-ನಮ್ಮ ನಿಲ್ದಾಣ’ ಅಂತ ಚೀನಿಯರು ಕೂಗಿಕೊಂಡಿರುವುದು ವರದಿಯಾಗಿದೆ. ಜಗತ್ತಿನ ಸೂಪರ್ ಪವರ್ ಸ್ಥಾನದ ಎರಡು ಧ್ರುವಗಳಾಗಿರುವ ಅಮೆರಿಕ- ಚೀನಾಗಳ ಜಟಾಪಟಿ ಗೊತ್ತಿರುವಂಥದ್ದೇ. ಇದೇನೂ ಆಕಸ್ಮಿಕವಾಗಿ ಆದದ್ದಲ್ಲ, ಅಮೆರಿಕಕ್ಕೆ ತಮ್ಮ ಪ್ರಾಶಸ್ತ್ಯವಿಲ್ಲ ಅಂತ ತೋರಿಸುವುದಕ್ಕೆ ಬೇಕಂತಲೇ ಮಾಡಿರುವುದು ಎಂಬುದು ರಾಜತಾಂತ್ರಿಕರ ವಿಶ್ಲೇಷಣೆ.

obama1

ಅಮೆರಿಕ ವರ್ಸಸ್ ರಷ್ಯ

ವಿಮಾನ ನಿಲ್ದಾಣದ ಅಸೌಖ್ಯವನ್ನೇನೂ ಬೆಳಸದೇ ಸಭೆಯಲ್ಲಿ ಪಾಲ್ಗೊಂಡ ಅಮೆರಿಕ ಅಧ್ಯಕ್ಷ ಒಬಾಮಾ, ತಮ್ಮ ಮಾತಿನಲ್ಲಿ- ಸಿರಿಯಾ ವಿಚಾರದಲ್ಲಿ ರಷ್ಯಾದ ಜತೆ ಅಮೆರಿಕಕ್ಕೆ ಭಿನ್ನಾಭಿಪ್ರಾಯವಿದೆ ಎಂಬುದನ್ನು ಬಹಿರಂಗವಾಗಿಯೇ ಸಾರಿದರು.

ಅಸಾದ್ ಹಾಗೂ ಇಸ್ಲಾಮಿಕ್ ಸ್ಟೇಟ್ ಉಗ್ರರ ನಡುವೆ ಪ್ರಕ್ಷುಬ್ಧವಾಗಿರುವ ಸಿರಿಯಾದಲ್ಲಿ ಅಮೆರಿಕ-ರಷ್ಯ ಜಂಟಿ ಮಿಲಿಟರಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ರಷ್ಯ ಅಸಾದ್ ಪರವಾಗಿದ್ದರೆ ಅಮೆರಿಕವು ಅಲ್ಲಿ ಅಸಾದ್ ಆಡಳಿತ ಕೊನೆಗೊಳಿಸಬೇಕೆಂದು ಹೊರಟಿತ್ತು. ಆಗ ಅಲ್ಲಿನ ಬಂಡಾಯ ಬಣವನ್ನು ಬೆಂಬಲಿಸಿದಾಗಲೇ ಐಎಸ್ ಐಎಸ್ ಉಗ್ರ ಸಂಘಟನೆ ಬಲವಾಯಿತು. ಪರಿಸ್ಥಿತಿ ಉಲ್ಟಾ ಹೊಡೆಯುತ್ತಿರುವ ಸೂಚನೆ ಸಿಗುತ್ತಿದ್ದಂತೆ ಅಮೆರಿಕವು ಅಸಾದ್ ಮೇಲಿನ ಗುರಿ ಬದಲಿಸಿ ರಷ್ಯದ ಜತೆ ಸೇರಿ ಐಎಸ್ ಐಎಸ್ ವಿರುದ್ಧ ಸೆಣೆಸುವುದು ಅನಿವಾರ್ಯವಾಯಿತು. ಜಿ 20 ಭಾಷಣದಲ್ಲಿ ಒಬಾಮಾ ಹೇಳುತ್ತಿರುವುದು ರಷ್ಯಾ ಸಮನ್ವಯ ಕಾಪಾಡುತ್ತಿಲ್ಲ ಅಂತ. ಹಾಗೆಯೇ ಐಎಸ್ ಐಎಸ್ ವಿರುದ್ಧ ಸೆಣೆಸುತ್ತಿರುವ ಇನ್ನೊಬ್ಬ ಮಿತ್ರ ಟರ್ಕಿ ಬಗ್ಗೆ ಭರವಸೆ ಮಾತಾಡಿದರು. ಆದರೆ ಇದೇ ಟರ್ಕಿಯ ಎರ್ದೊಗನ್, ಅಮೆರಿಕದ ಹಣ- ಮಿಲಿಟರಿ ಸಹಕಾರ ಬಳಸಿಕೊಂಡು ತನ್ನ ವಿರೋಧಿಗಳಾದ ಕುರ್ದ್ ಮುಸ್ಲಿಂ ಬಣಗಳನ್ನು ಕೊಲ್ಲುತ್ತಿರುವುದು ಜಗತ್ತಿಗೆ ನಿಧಾನವಾಗಿ ಅರಿವಾಗುತ್ತಿದೆ. ಆದರೆ ಒಬಾಮಾಗೆ ಮಾತ್ರ ರಷ್ಯಾ ಎದುರು ಸೊಕ್ಕು ತೋರಿ ಇವೆಲ್ಲ ವಾಸ್ತವಗಳನ್ನು ಮುಚ್ಚಿಡುವ ಹಪಾಹಪಿ.

ಅಂತೂ ಒಪ್ಪಿದ್ದು…

ಹಸಿರು ಮನೆ ಅನಿಲಗಳ ವಿಸರ್ಜನೆಯಲ್ಲಿ ಜಗತ್ತಿನ ಅತಿದೊಡ್ಡ ಮಾಲಿನ್ಯದ ದೇಶ ಚೀನಾವೇ. ಅದೀಗ ಮಾಲಿನ್ಯ ನಿಯಂತ್ರಣದ  ಪ್ಯಾರಿಸ್ ಒಪ್ಪಂದಕ್ಕೆ ಅನುಮೋದಿಸಿರುವುದು ಸಕಾರಾತ್ಮಕ ಅಂಶ. ಜಿಡಿಪಿಗೆ ಅನುಗುಣವಾಗಿ ಮಾಲಿನ್ಯ ವಿಸರ್ಜನೆ ತಗ್ಗಿಸುವ ಹಾಗೂ ಪಳೆಯುಳಿಕೆ ಮೂಲದ ಹೊರತಾದ ಶಕ್ತಿಮೂಲ ಅಭಿವೃದ್ಧಿಗೆ ಬದ್ಧತೆ ತೋರಬೇಕಿರುತ್ತದೆ. ಅಮೆರಿಕ ಹಾಗೂ ಚೀನಾಗಳು ಒಟ್ಟಾಗಿ ಜಗತ್ತಿನ ಶೇ. 40ರಷ್ಟು ಮಲಿನ ಅನಿಲ ವಿಸರ್ಜನೆ ಮಾಡುತ್ತಿವೆ. ಚೀನಾ ಒಪ್ಪಿಗೆಯೊಂದಿಗೆ ಇವೆರಡೂ ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಬದ್ಧತೆ ತೋರಿದಂತಾಗಿದೆ. ಪ್ಯಾರಿಸ್ ಹವಾಮಾನ ಒಪ್ಪಂದ ಸಮಾವೇಶದಲ್ಲಿ ಪಾಲ್ಗೊಂಡ 197 ದೇಶಗಳ ಪೈಕಿ ಶೇ. 55 ಮಂದಿ ಇದಕ್ಕೆ ಬದ್ಧತೆ ತೋರಿದ ನಂತರವಷ್ಟೇ ಒಪ್ಪಂದದ ಅನುಷ್ಠಾನ ಶುರುವಾಗುತ್ತದೆ. ಹೀಗೆ ಒಪ್ಪಿದವರ ದೇಶಗಳೆಲ್ಲದರ ವಿಸರ್ಜನಾ ಮೊತ್ತವೂ ಶೇ. 55 ಮೀರಬೇಕು. ಈವರೆಗೆ 24 ದೇಶಗಳು ಬದ್ಧತೆ ತೋರಿದ್ದರೂ ಜಾಗತಿಕ ವಿಸರ್ಜನೆಯಲ್ಲಿ ಅವುಗಳೆಲ್ಲದರ ಪ್ರಮಾಣ ಶೇ.1.08 ಮಾತ್ರವಾಗಿತ್ತು. ಚೀನಾದ ಬದ್ಧತೆ ಈ ಅರ್ಥದಲ್ಲಿ ಒಪ್ಪಂದಕ್ಕೆ ಬಲ ನೀಡಿದೆ.

Leave a Reply