ಯಾವತ್ತೋ ಆಗಬೇಕಿದ್ದ ಕೆಲಸ ಪೂರೈಸಿದ ಬಾಂಗ್ಲಾದೇಶಕ್ಕೆ ಧನ್ಯವಾದ, 1971ರ ಮಾರಣಹೋಮದ ಪಾತಕಿ ಗಲ್ಲಿಗೇರಿದ

ಡಿಜಿಟಲ್ ಕನ್ನಡ ಟೀಮ್:
30 ಲಕ್ಷ… 1971ರಲ್ಲಿ ಪಾಕಿಸ್ತಾನದ ಹಿಡಿತದಿಂದ ಬಾಂಗ್ಲಾದೇಶ ವಿಮೋಚನೆಯಾಗುವುದಕ್ಕೂ ಮುಂಚೆ ಪಾಕ್ ಪ್ರಾಯೋಜಿತ ಮೂಲಭೂತವಾದಿಗಳಿಂದ ಹತ್ಯೆಯಾದವರ ಸಂಖ್ಯೆ. ಇದರಲ್ಲಿ ಬಂಗಾಳಿ ಮಾತನಾಡುವ ಹಿಂದುಗಳು ಮತ್ತು ಮುಸ್ಲಿಮರು ಅತ್ಯಾಚಾರ- ಹತ್ಯೆಗೆ ಒಳಗಾದವರು.
ಶನಿವಾರ ರಾತ್ರಿ ಈ ಹತ್ಯಾಕಾಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಮಾತೆ ಇಸ್ಲಾಮಿ ಪ್ರಮುಖ ಮೀರ್ ಕಾಸಿಮ್ ಅಲಿಯನ್ನು ಗಲ್ಲಿಗೇರಿಸಲಾಗಿದೆ. ವಿಚಾರಣೆ ಮುಗಿದು ನ್ಯಾಯಾಲಯದಲ್ಲಿ ಅಪರಾಧ ಸಾಬೀತಾಗಿ ಶಿಕ್ಷೆಯಾಗುವುದಕ್ಕೆ ಇಷ್ಟು ಸಮಯ ಹಿಡಿದಿದ್ದು ನಿರಾಶಾದಾಯಕವೇ ಆದರೂ, ಕೊನೆಪಕ್ಷ ಅಷ್ಟರಮಟ್ಟಿಗಾದರೂ ನ್ಯಾಯ ದೊರೆಯಿತಲ್ಲ ಎನ್ನುವುದಕ್ಕೆ ಸಹಕಾರಿಯಾಗಿರುವ ವಿದ್ಯಮಾನವಿದು. ಗಲ್ಲಿಗೇರುತ್ತಿರುವ ಆರನೇ ಜಮಾತೆ ಪ್ರಮುಖ ಈತ.
ವಿಳಂಬಕ್ಕೆ ರಾಜಕೀಯ ಕಾರಣಗಳೂ ಇದ್ದವೆನ್ನಿ. ಈ ಪ್ರಕರಣಗಳ ತನಿಖೆ, ವಿಚಾರಣೆಗಳೆಲ್ಲ ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಆಡಳಿತದಲ್ಲಿ ಮಾತ್ರ ಪ್ರಗತಿಯಾಗುತ್ತಿದ್ದ ಸಂಗತಿ. ಉಳಿದಂತೆ, ಖಲೀದಾ ಜಿಯಾರ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಕ್ಷವು ತೀವ್ರವಾದಿಗಳ ಪರ, ಪಾಕಿಸ್ತಾನದ ಪರ. ಹಾಗೆಂದೇ ಮೀರ್ ಕಾಸಿಂ ಬಾಂಗ್ಲಾದೇಶದಲ್ಲಿ ದೊಡ್ಡ ಉದ್ಯಮಿಯಾಗಿ ಗುರುತಿಸಿಕೊಂಡಿದ್ದನಲ್ಲದೇ, ಅಭಿಪ್ರಾಯ ನಿರೂಪಣೆಯ ಮಾಧ್ಯಮರಂಗದಲ್ಲೂ ತನ್ನ ಸಾಮ್ರಾಜ್ಯ ಕಟ್ಟಿಕೊಂಡಿದ್ದ. ನಮ್ಮಲ್ಲಿ ಯಾಕೂಬ್ ಮೆಮೊನ್ ನನ್ನು ಗಲ್ಲಿಗೇರಿಸಬಾರದು ಎಂದು ಹೇಗೆ ಒಂದಿಷ್ಟು ಮಂದಿ ಖ್ಯಾತೆ ತೆಗೆದಿದ್ದರೋ ಬಾಂಗ್ಲಾದೇಶದಲ್ಲೂ ಕಾಸಿಮ್ ಪರ ವಕಾಲತ್ತು ಮಾಡಿದವರಿದ್ದಾರೆ. ಜಮಾತೆ ಇಸ್ಲಾಮಿಯಂತೂ ಪಾಕಿಸ್ತಾನಕ್ಕೆ ಪತ್ರ ಬರೆದು, ಕಾಸಿಮ್ ಗಲ್ಲುಶಿಕ್ಷೆ ವಿಷಯವನ್ನು ವಿಶ್ವಸಂಸ್ಥೆಗೆ ಒಯ್ದು ಬಾಂಗ್ಲಾದೇಶದ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಕೋರಿತ್ತು.
ಶೇಖ್ ಹಸೀನಾರ ಆಡಳಿತವಿದ್ದಾಗಲೂ ಬಾಂಗ್ಲಾದೇಶವೀಗ ಇಸ್ಲಾಂ ತೀವ್ರವಾದಿಗಳ ಪ್ರಭಾವದಿಂದ ತಪ್ಪಿಸಿಕೊಂಡಿಲ್ಲ. ಹಾಗೆಂದೇ ಅಲ್ಲಿ ಪ್ರತಿದಿನ ಹಿಂದುಗಳ ಕೊಲೆಯಾಗುತ್ತಿದೆ. ಮೂಲಭೂತವಾದವನ್ನು ಪ್ರಶ್ನಿಸಿದ ಬ್ಲಾಗರ್ ಗಳ ಹತ್ಯೆ ಆಗುತ್ತಿದೆ. ಉಗ್ರವಾದಿಗಳ ದಾಳಿಗೆ ಬಾಂಗ್ಲಾದೇಶ ಆಗಾಗ ಗುರಿಯಾಗುತ್ತಿದೆ.
ಹೀಗೆ ಮತ್ತೆ ಹತ್ಯೆಗಳಲ್ಲಿ ತೊಡಗಿಸಿಕೊಂಡವರಿಗೆ ಕಾಸಿಮ್ ಅಲಿಯ ಗಲ್ಲು ಸ್ವಲ್ಪಮಟ್ಟಿಗಾದರೂ ಎಚ್ಚರಿಕೆ ನೀಡುವಂತಿದೆ. ತಡವಾಗಿಯಾದರೂ ಕಾನೂನು ಕೊಲೆಗಾರರನ್ನು ತಲುಪದೇ ಬಿಡುವುದಿಲ್ಲ, ಇವತ್ತು ಬಾಂಗ್ಲಾದೇಶದ ಬೀದಿಯಲ್ಲಿ ಹಿಂದು ಅರ್ಚಕನನ್ನು ಕೊಂದು ಗೆದ್ದೆನೆಂದು ಬೀಗುತ್ತಿರುವವನ ಕುತ್ತಿಗೆಗೆ ಇಂದಲ್ಲ ನಾಳೆ ನೇಣು ಬಿಗಿಯಾಗಲಿದೆ ಎಂಬ ಸಂದೇಶವನ್ನು ಹೊರಡಿಸಿದ್ದೇ ಆದರೆ ಅಷ್ಟರಮಟ್ಟಿಗಾದರೂ ಬಾಂಗ್ಲಾದೇಶದ ನಡೆ ಆಪ್ಯಾಯ.

Leave a Reply