ಪಾಕಿಸ್ತಾನದ ಪರಮ ಮಿತ್ರ ಚೀನಾದಲ್ಲಿ ನಿಂತು ಪಾಕ್ ನೆಲದ ಉಗ್ರವಾದದ ವಿರುದ್ಧ ಜಗತ್ತೇ ಒಂದಾಗಬೇಕಿದೆಯೆಂಬ ಖಡಾಖಡಿ ಮಾತಾಡಿದ ಮೋದಿ

ಡಿಜಿಟಲ್ ಕನ್ನಡ ಟೀಮ್:

ಪಾಕಿಸ್ತಾನದ ಪರಮಮಿತ್ರ ಚೀನಾದ ನೆಲದಲ್ಲೇ ನಿಂತು, ಪಾಕ್ ವಿರುದ್ಧ ಧ್ವನಿ ಎತ್ತುವುದರಲ್ಲಿ ಒಂದು ಸ್ಥೈರ್ಯ- ನೇರವಂತಿಕೆ ಇದೆ. ಜಿ 20 ಸಮಾರೋಪ ಸಂದರ್ಭದಲ್ಲಿ ಮಾತನಾಡುತ್ತ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದು ಅದನ್ನೇ.

‘ದಕ್ಷಿಣ ಏಷ್ಯದ ಏಕೈಕ ರಾಷ್ಟ್ರ ಆ ಪ್ರಾಂತ್ಯದಲ್ಲಿ ಭಯೋತ್ಪಾದನೆಯನ್ನು ಹಬ್ಬಿಸುವುದರಲ್ಲಿ ನಿರತವಾಗಿದೆ. ಉಗ್ರವಾದವನ್ನೇ ಕೆಲ ರಾಷ್ಟ್ರಗಳು ನೀತಿಯನ್ನಾಗಿ ಮಾಡಿಕೊಂಡಿವೆ. ಜಾಗತಿಕ ಸಮುದಾಯಗಳು ಇದಕ್ಕೆ ತುರ್ತಾಗಿ ಪ್ರತಿಕ್ರಿಯಿಸುವಲ್ಲಿ ಹಾಗೂ ಹೋರಾಡುವಲ್ಲಿ ತ್ವರಿತ ಮನೋಭಾವ ತೋರಬೇಕು. ಉಗ್ರವಾದವನ್ನು ಬೆಂಬಲಿಸುವವರು ಹಾಗೂ ಪ್ರಾಯೋಜಿಸುವವರಿಗೆ ಪ್ರತಿಬಂಧ ಹೇರಿ ಏಕಾಂಗಿಯನ್ನಾಗಿಸಬೇಕಲ್ಲದೇ, ಉತ್ತೇಜನ ಕೊಡುವಂಥದ್ದಲ್ಲ.’ ಹೀಗೆಂದ ಪ್ರಧಾನಿ ಮೋದಿ ಪಾಕಿಸ್ತಾನವನ್ನು ಹೆಸರಿಸದಿದ್ದರೂ, ಉಗ್ರವಾದ ಪಸರಿಸುವ ಏಕೈಕ ರಾಷ್ಟ್ರವನ್ನಾಗಿ ಅದನ್ನು ಬೊಟ್ಟು ಮಾಡಿದರಲ್ಲದೇ, ಅಂತಾರಾಷ್ಟ್ರೀಯ ಸಮುದಾಯದ ಮೇಲೂ ಒತ್ತಡ ಹೇರಿದರು.

‘ಉಗ್ರವಾದದ ವಿರುದ್ಧ ಭಾರತದ್ದು ಶೂನ್ಯ ಸಹಿಷ್ಣುತೆ. ಹಾಗಲ್ಲದೇ ಇದನ್ನು ಎದುರಿಸುವುದಕ್ಕೆ ಇನ್ಯಾವ ಮಾರ್ಗವೂ ಸಾಕಾಗದು. ಉಗ್ರವಾದಿ ಎಂದಮೇಲೆ ನಮಗಾತ ಉಗ್ರವಾದಿ ಅಷ್ಟೇ’ ಎನ್ನುತ್ತ ವಿನಾಯತಿ ಇಲ್ಲದ ಭಾರತದ ಧೋರಣೆಯನ್ನು ಬಿಂಬಿಸಿದರು ಪ್ರಧಾನಿ ಮೋದಿ.

ಹಾಗೆ ನೋಡಿದರೆ ಜಿ 20 ಉದ್ದಕ್ಕೂ ನಾನಾ ದೇಶಗಳೊಂದಿಗಿನ ದ್ವಿಪಕ್ಷೀಯ ಮಾತುಕತೆಯಲ್ಲೂ ಇಂಥದೊಂದು ಒತ್ತಡವನ್ನು ಹೇರುತ್ತಲೇ ಬಂದರು ಮೋದಿ. ಚೀನಾ ಅಧ್ಯಕ್ಷ ಜಿನ್ಪಿಂಗ್ ಜತೆ ಮಾತನಾಡುವಾಗಲೂ ಪಾಕಿಸ್ತಾನದ ಉಗ್ರವಾದದ ಬಗ್ಗೆ ಗಮನ ಸೆಳೆಯುತ್ತ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾದ ಆರ್ಥಿಕ ಕಾರಿಡಾರ್ ಕುರಿತೂ ಕಳವಳ ವ್ಯಕ್ತಪಡಿಸಿದರು. ರಷ್ಯದ ಪುಟಿನ್, ಆಸ್ಟ್ರೇಲಿಯ ಪ್ರಧಾನಿ ಟರ್ನಬುಲ್, ಬ್ರಿಟಿಷ್ ಪ್ರಧಾನಿ ಥೆರೆಸಾ ಮೇ ಜತೆಗಿನ ಮಾತುಕತೆಯಲ್ಲೂ ಉಗ್ರವಾದದ ವಿಷಯದಲ್ಲಿ ಪಾಕಿಸ್ತಾನವನ್ನು ಏಕಾಂಗಿಯಾಗಿಸಬೇಕೆಂಬ ಆಗ್ರಹವೇ ಇತ್ತು.

ಆರ್ಥಿಕತೆ, ಹವಾಮಾನ ಬದಲಾವಣೆ ಅಂತೆಲ್ಲ ವಿಶ್ವನಾಯಕರು ಮಾತಾಡುತ್ತಿದ್ದರೆ, ನರೇಂದ್ರ ಮೋದಿ ಆರ್ಥಿಕ ಪರಿವರ್ತನೆಗಳ ಕುರಿತೂ ಮಾತನಾಡಿದರಾದರೂ, ‘ಜಗತ್ತು ಇವತ್ತು ಎದುರಿಸುತ್ತಿರುವ ಪ್ರಥಮ ಆತಂಕವೇ ಉಗ್ರವಾದ. ಇದಕ್ಕೆ ಯಾವುದೇ ಗಡಿಗಳಿಲ್ಲ. ಉಗ್ರವಾದಕ್ಕೆ ಪ್ರೋತ್ಸಾಹಿಸುವ ರಾಷ್ಟ್ರಗಳ ಮೇಲೆ ಕಠೋರ ನಿಲುವು ತಾಳಿ, ಅಲ್ಲಿ ಹಣದ ಹರಿವನ್ನು ನಿಲ್ಲಿಸಬೇಕು’ ಎಂಬುದೇ ಮುಖ್ಯ ಪ್ರತಿಪಾದನೆ ಆಗಿತ್ತು.

ಸೋಮವಾರದ ತಮ್ಮ ಮಾತಿನಲ್ಲೂ ಪ್ರಧಾನಿ, ಉಗ್ರವಾದಕ್ಕೆ ಹಣದ ಹರಿವನ್ನು ನಿಲ್ಲಿಸುವುದಕ್ಕೆ ಜಿ20 ರಾಷ್ಟ್ರಗಳು ತೆಗೆದುಕೊಂಡಿರುವ ಉಪಕ್ರಮಗಳು ಪ್ರಶಂಸಾರ್ಹ ಎಂದು ಹೇಳಿದರು.

ಪಾಕಿಸ್ತಾನದ ಜತೆಗಿನ ತಮ್ಮ ಮೈತ್ರಿ ಪರ್ವತಕ್ಕಿಂತಲೂ ಎತ್ತರ, ಸಮುದ್ರಕ್ಕಿಂತಲೂ ಆಳ ಎಂದಿದ್ದ ಚೀನಾ ನೆಲದಲ್ಲಾದ ಜಿ20ರ ಸಮಾವೇಶದ ಎರಡು ದಿನಗಳಲ್ಲಿ ಅದೇ ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯವನ್ನು ಪ್ರಚೋದಿಸುವುದಕ್ಕೆ ಮೋದಿಯವರ ಸರ್ವಪ್ರಯತ್ನವಿತ್ತು ಎಂಬುದು ಕೌತುಕದ ವಿಷಯ.

2 COMMENTS

Leave a Reply