ಡಿಜಿಟಲ್ ಕನ್ನಡ ಟೀಮ್:
ಜಮ್ಮು-ಕಾಶ್ಮೀರ ಸರ್ವಪಕ್ಷ ನಿಯೋಗದ ಎಡಪಂಥೀಯರು, ಸಮಾಜವಾದಿಗಳಿಗೆಲ್ಲ ಸರಿಯಾದ ಮಂಗಳಾರತಿಯೇ ಆಗಿದೆ. ಆದರೂ ಎಂದಿನಂತೆ ಇದು ತಮ್ಮ ಕಡೆಯಿಂದಾದ ಧೀರ ಪ್ರಯತ್ನ ಎಂದು ಅವರೆಲ್ಲ ಮುಖ ಅರಳಿಸಿಕೊಂಡಿದ್ದಾರೆ.
ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರ ನೇತೃತ್ವದಲ್ಲಿ ಕಾಶ್ಮೀರಕ್ಕೆ ತೆರಳಿದ್ದ ನಿಯೋಗದ ನಿಲುವು ಸೂಕ್ತವಾಗಿಯೇ ಇತ್ತು. ‘ಯಾರ ಜತೆಗಾದರೂ ಮಾತುಕತೆಗೆ ಸಿದ್ಧ. ಆದರೆ ಅದು ಭಾರತದ ಸಂವಿಧಾನ ಚೌಕಟ್ಟಿನಲ್ಲಿರುತ್ತದೆ. ಪ್ರತ್ಯೇಕತಾವಾದಿಗಳು ಸೇರಿದಂತೆ ಯಾರು ಬೇಕಾದರೂ ಬಂದು ಭೇಟಿ ಮಾಡಬಹುದು.’ ಮೇಲಿಂದ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಸಹ ಹುರಿಯತ್ ನಾಯಕರಿಗೆ ಮಾತುಕತೆ ಆಹ್ವಾನ ಇತ್ತಿದ್ದರು. ಅದನ್ನೂ ಅವರೆಲ್ಲ ತಿರಸ್ಕರಿಸಿದ್ದರು.
ಅಸದುದ್ದೀನ್ ಒವೈಸಿ, ಸೀತಾರಾಂ ಯೆಚೂರಿ, ಶರದ್ ಯಾದವ್ ಇವರಿಗೆಲ್ಲ ಇಷ್ಟು ಸಾಕಾಗಲಿಲ್ಲ. ನಿಯೋಗದ ಚೌಕಟ್ಟಿನಾಚೆ ನಿಂತು, ತಾವು ಶಾಂತಿ ಪ್ರವರ್ತಕರಾಗಿ ತೋರಿಸಿಕೊಳ್ಳುವ ಉಮೇದು. ಹಾಗೆಂದೇ ಭಾನುವಾರ ಪ್ರತ್ಯೇಕತಾವಾದಿಗಳ ಭೇಟಿಗೆ ಹೊರಟು ನಿಂತರು. ದುರಂತವೆಂದರೆ, ಗೃಹ ಬಂಧನದಲ್ಲಿರುವ ಸಯದ್ ಶಾ ಗಿಲಾನಿ, ಪೊಲೀಸ್ ಬಂಧನದಲ್ಲಿರುವ ಯಾಸಿನ್ ಮಲಿಕ್ ಈ ಸಂಸದರ ಮುಖ ನೋಡುವುದಕ್ಕೂ ಇಷ್ಟಪಡಲಿಲ್ಲ. ಹುರಿಯತ್ ನ ಅಬ್ದುಲ್ ಗಣಿ ಭಟ್ ಹಾಗೂ ಶಬಿರ್ ಶಾ ಮಾತುಕತೆಗೆ ನಿರಾಕರಿಸಿದರೂ ಇದ್ದಿದ್ದರಲ್ಲಿ ಚಹಾ ಕುಡಿತೀರಾ ಅಂತಾದರೂ ಕೇಳುವ ಸೌಜನ್ಯ ತೋರಿದರು. ಇನ್ನು, ಎಷ್ಟೆಂದರೂ ತಮ್ಮ ಭಾಯಿಜಾನ್ ಬಂದಿದ್ದಾನೆ ಎಂಬಂತೆ ಅಸದುದ್ದೀನ್ ಓವೈಸಿಯನ್ನು ಮಿರ್ವೈಜ್ ಉಮರ್ ಫಾರುಕ್ ಭೇಟಿಯನ್ನೇನೋ ಮಾಡಿದ. ಭಾರತ ಸಂವಿಧಾನ ಅಂದ್ರೆ ಏನು ಅಂತಲೇ ಕೇಳಿ ಕಳುಹಿಸಿದ.
ಮುಖ ಒರೆಸಿಕೊಂಡುಬಂದ ಓವೈಸಿ, ಶರದ್, ಯೆಚೂರಿಗಳೆಲ್ಲ ಮಾಧ್ಯಮದ ಮುಂದೆ ನಿಂತು, ‘ನಾವು ವಿಫಲರಾಗಿರಬಹುದು. ಆದರೆ ಇದೊಂದು ಪ್ರಯತ್ನದ ಆರಂಭ. ಕೇಂದ್ರವು ಇದನ್ನು ಮುಂದುವರಿಸಬೇಕು’ ಎಂದು ಎಂದಿನ ಉಪನ್ಯಾಸ ನೀಡಿದರು.
ಸರಿ. ಇದೇನೋ ಎಡಬಿಡಂಗಿಗಳ ಎಂದಿನ ಪ್ರಹಸನ ಎಂದು ನಕ್ಕು ಸುಮ್ಮನಾಗೋಣವೇ? ಇಲ್ಲ… ಇವರೆಲ್ಲ ಇಂಥ ತುಷ್ಟೀಕರಣದ ಮೂಲಕ ಜಮ್ಮು-ಕಾಶ್ಮೀರವನ್ನು ಹೇಗೆ ಹದಗೆಡಿಸುತ್ತಿದ್ದಾರೆ ಗೊತ್ತೇ? ಭಾರತದ ರಾಜಕಾರಣ ಕೇವಲ ಕಲ್ಲು ತೂರುವ ಕಣಿವೆ ಜನರನ್ನು ಹಾಗೂ ಪ್ರತ್ಯೇಕತಾವಾದಿಗಳನ್ನು ತುಷ್ಟೀಕರಿಸಿಕೊಂಡಿರುತ್ತದೆ ಎಂಬುದನ್ನು ನೋಡುತ್ತ ಸಾಕಾಗಿ ಹೋಗಿರುವ ಲಢಾಕಿನ ಜನರು, ನಮ್ಮನ್ನು ಕೇಂದ್ರಾಡಳಿತ ಪ್ರದೇಶ ಮಾಡಿಬಿಡಿ ಎನ್ನುತ್ತಿದ್ದಾರೆ. ಜಮ್ಮು-ಕಾಶ್ಮೀರದ ಹೆಸರಲ್ಲಿ ಬಿಡುಗಡೆಯಾಗುವ ಫಂಡು ಮತ್ತು ನಿರ್ದೇಶಿತ ನೀತಿಗಳೆಲ್ಲ ಕಾಶ್ಮೀರ ಕಣಿವೆಯ ಐದು ಜಿಲ್ಲೆಗಳನ್ನೇ ಗುರಿಯಾಗಿರಿಸಿಕೊಳ್ಳುವುದಾದರೆ ನಾವು ಈ ರಾಜ್ಯದಲ್ಲಿ ಏಕಾದರೂ ಇರಬೇಕು ಎಂಬ ಜನರ ಪ್ರಶ್ನೆಗಳನ್ನು ಪ್ರತಿನಿಧಿಸಿ ಲಢಾಕಿನ ಬಿಜೆಪಿ ಸಂಸದ ಈ ಬಗ್ಗೆ ಕೇಂದ್ರಕ್ಕೆ ಪತ್ರವನ್ನೂ ಬರೆದಿದ್ದಾರೆ.
ಜಮ್ಮು-ಕಾಶ್ಮೀರದ ಬಗ್ಗೆ ಭಾರಿ ಕಾಳಜಿ ಇರುವಂತೆ ತೋರಿಸಿಕೊಳ್ಳುತ್ತಿರುವ ಈ ಯೆಚೂರಿ, ಯಾದವ, ಓವೈಸಿಗಳೆಲ್ಲ ಇಸ್ಲಾಮಿಕ್ ಹಿಂಸಾಚಾರಕ್ಕೆ ನಲುಗಿ ಕಣಿವೆಯಿಂದ ಹೊರದಬ್ಬಿಸಿಕೊಂಡ ಕಾಶ್ಮೀರಿ ಪಂಡಿತರ ಸಮುದಾಯವನ್ನು ಎಷ್ಟು ಬಾರಿ ಭೇಟಿ ಮಾಡಿದ್ದಾರೆ? ಪ್ರತ್ಯೇಕತಾವಾದಿಗಳಂತಲ್ಲದೇ, ಮನೆಗೆ ಬಂದವರಿಗೆ ಚಹಾ ಕೊಡುವ ಔದಾರ್ಯವಂತೂ ಇವರಿಗಿತ್ತು. ಆದರೆ ತಥಾಕಥಿತ ಸೆಕ್ಯುಲರ್ ಚಹಾ ಮಾತ್ರ ಕುಡಿಯೋದು, ಅವಮಾನವಾದರೂ ಪರವಾಗಿಲ್ಲ ಎಂದು ಬೆನ್ನುಹುರಿ ಮುರಿದುಕೊಂಡಿದ್ದಾರಲ್ಲ ಈ ನೇತಾರರು?
ಪಾಕ್ ಆಕ್ರಮಿತ ಕಾಶ್ಮೀರದಿಂದ ನಿರಾಶ್ರಿತರಾಗಿ ಬಂದ ಸಮೂಹ ಹಾಗೂ ವೆಸ್ಟ್ ಪಾಕಿಸ್ತಾನ ನಿರಾಶ್ರಿತರ ಸಮೂಹಗಳೆಲ್ಲ ಜಮ್ಮು-ಕಾಶ್ಮೀರದಲ್ಲಿವೆ. ಇತ್ತೀಚೆಗೆ ಕೇಂದ್ರ ಸರ್ಕಾರ ಇವರ ಕಲ್ಯಾಣಕ್ಕಾಗಿ ಯೋಜನೆ ರೂಪಿಸುತ್ತಿರುವ ಸುದ್ದಿಯನ್ನೂ ನೀವು ಓದಿರುತ್ತೀರಿ. ಜಮ್ಮು-ಕಾಶ್ಮೀರ ಎಂದಕೂಡಲೇ ಪ್ರತ್ಯೇಕತಾವಾದಿಗಳೊಂದಿಗೆ, ಉಗ್ರರೊಂದಿಗೆ ಮಾತನಾಡುವುದು ಎಂಬ ಮಾದರಿಗೆ ಶರಣಾಗಿಬಿಟ್ಟಿರುವ ಇವರೆಲ್ಲ ಈ ನಿರಾಶ್ರಿತರನ್ನು ಒಮ್ಮೆಯಾದರೂ ಮಾತಾಡಿಸಿದ್ದಿದೆಯಾ? ವ್ಯಂಗ್ಯವೆಂದರೆ ಇವರೆಲ್ಲ ತಮ್ಮ ರಾಜಕೀಯ ಬಂಡವಾಳಕ್ಕೆ ದಲಿತರು-ಹಿಂದುಳಿದವರು ಅಂತ ಬಾಯಿ ದೊಡ್ಡ ಮಾಡಿಕೊಂಡಿರುವರೋ ಅದೇ ಸಮುದಾಯಕ್ಕೆ ಸೇರಿರುವ ನಿರಾಶ್ರಿತ ಮಂದಿ ಅಲ್ಲಿ ದೇಶದ ಉಳಿದೆಡೆ ಸಿಗುವ ಸೌಲಭ್ಯದಿಂದ ವಂಚಿತರಾಗಿ ಬದುಕುತ್ತಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ಕೇಂದ್ರದಿಂದ ಭರಪೂರ ಫಂಡು ಹೋಗುತ್ತದೆ ಖರೆ. ಆದರೆ, ಆರ್ಟಿಕಲ್ 370 ದೆಸೆಯಿಂದ ಮೀಸಲು ಸೌಲಭ್ಯಗಳಿಂದ, ಸರ್ಕಾರದ ಉನ್ನತ ನೌಕರಿಗಳಿಂದ ದೂರವಿರಬೇಕಾದ ಸ್ಥಿತಿ ಇವರಿಗಿದೆ. ಜಮ್ಮು-ಕಾಶ್ಮೀರ ಸಮಸ್ಯೆ ಎಂದಾಗ ಇವರನ್ನೂ ಮಾತನಾಡಿಸಬೇಕಲ್ಲವೇ? ಆದರೆ ತಥಾಕಥಿತ ಸೆಕ್ಯುಲರ್ ರಾಜಕಾರಣದ ವರಸೆ ಹೇಗಿದೆ ಎಂದರೆ- ನಾವು ದಲಿತರ ಬಗ್ಗೆ ಉತ್ಕಂಟಿತರಾಗಿ ಮಾತಾಡುತ್ತೇವೆ, ಎಲ್ಲಿಯವರೆಗೆ ಮುಸ್ಲಿಮರಿಗೆ ಬೇಜಾರಾಗುವ ಸಾಧ್ಯತೆ ಇಲ್ಲವೋ ಅಲ್ಲಿಯವರೆಗೆ ಮಾತ್ರ ಎಂಬಂತಾಗಿದೆ.
ಹಿಂಸಾಚಾರ ಇದ್ದದ್ದು ಕಾಶ್ಮೀರದಲ್ಲಿ ಮಾತ್ರವಾದ್ದರಿಂದ, ಅದಕ್ಕೆ ಸಂಬಂಧಿಸಿದವರೊಂದಿಗೆ ಮಾತುಕತೆ ಯತ್ನ ನಡೆಸಿದ್ದಾರಷ್ಟೆ ಎಂಬ ಸಮಜಾಯಿಷಿ ನೀಡುವವರಿಗೆ ಗೊತ್ತಿರಬೇಕು- ಇಂಥ ತುಷ್ಟೀಕರಣದ ಮೂಲಕ ಯೆಚೂರಿ ಯಾದವರ ಗಣ ನೀಡುತ್ತಿರುವ ಸಂದೇಶ ಏನೆಂದರೆ, ‘ಜಮ್ಮು, ಲಢಾಕ್ ಹಾಗೂ ಕಾಶ್ಮೀರದ ಶಾಂತ ಜನರೇ… ನಿಮ್ಮ ಮಾತುಗಳನ್ನೂ ನಾವು ಕೇಳಿಸಿಕೊಳ್ಳಬೇಕಿದ್ದರೆ ಕಲ್ಲೆತ್ತಿಕೊಳ್ಳಿ, ನೀವು ಹಿಂಸಾಚಾರದಲ್ಲಿ ತೊಡಗಿ.’
ಇದಕ್ಕಿಂತ ದೊಡ್ಡ ವಿಧ್ವಂಸ ಪ್ರಚೋದನೆ ಇನ್ನೇನಿದೆ?