ಕಾಶ್ಮೀರವನ್ನು ಭಾರತೀಯ ಯೋಧರ ಸ್ಮಶಾನವಾಗಿಸುತ್ತೇನೆಂದ ಸಲಾಹುದ್ದೀನ್ ಅವನ ಮಕ್ಕಳನ್ನು ಬಾಂಬರ್ ಆಗಿ ಕಳುಹಿಸುತ್ತಾನಾ? ಕಾಶ್ಮೀರದ ನಿಜ ಕದನ ಬಿಚ್ಚಿಟ್ಟಿರುವ ಮೇಜರ್ ಗೌರವ್ ಆರ್ಯ

 

ಜಮ್ಮು-ಕಾಶ್ಮೀರವನ್ನು ಭಾರತೀಯ ಪಡೆಗಳ ಸ್ಮಶಾನವನ್ನಾಗಿ ಮಾಡುತ್ತೇನೆ ಅಂತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕುಳಿತಿರುವ ಹಿಜ್ಬುಲ್ ಮುಜಾಹಿದೀನ್ ಉಗ್ರ ಸೈಯದ್ ಸಲಾಹುದ್ದೀನ್ ಹೇಳಿದ್ದು ಗೊತ್ತಲ್ಲ. ಅದಕ್ಕೆ ಭಾರತೀಯ ಸೇನೆಯ ನಿವೃತ್ತ ಮೇಜರ್ ಗೌರವ್ ಆರ್ಯ ತಮ್ಮ ಫೇಸ್ಬುಕ್ ಪೋಸ್ಟಿನಲ್ಲಿ ವಿವರವಾದ ಉತ್ತರ ಕೊಟ್ಟಿದ್ದಾರೆ.

ಯೆಸ್… ತಿಂಗಳುಗಳ ಹಿಂದಷ್ಟೇ ತಮ್ಮ ಸಾಮಾಜಿಕ ಮಾಧ್ಯಮದ ಪೋಸ್ಟಿನಿಂದ ವೈರಲ್ ಜನಪ್ರಿಯತೆ ಗಳಿಸಿದ ಮೇಜರ್ ಗೌರವ್ ಆರ್ಯ ಇನ್ನೊಮ್ಮೆ ಗುಡುಗಿದ್ದಾರೆ. ಸೇನೆಯನ್ನು ನಿಂದಿಸಿದ ದಿನವೇ ನಿನ್ನ ಸಾವು ಖಚಿತವಾಗಿತ್ತು ಅಂತ ಬುರ್ಹಾನ್ ವಾನಿಯ ಹತ್ಯೆ ಬೆನ್ನಲ್ಲೇ ಪತ್ರ ಬರೆದಿದ್ದ ಅವರು, ಇದೀಗ ಸಲಾಹುದ್ದೀನನಿಗೆ ‘ಕಾಶ್ಮೀರದಲ್ಲಿ ಯೋಧರ ಸ್ಮಶಾನ ಮಾಡುವುದಕ್ಕೆ ಜಿಹಾದಿಗಳನ್ನಾಗಿ ನಿನ್ನ ಮಕ್ಕಳನ್ನೇನಾದರೂ ಕಳುಹಿಸುತ್ತೀಯಾ’ ಅಂತ ಕೆಣಕಿದ್ದಾರೆ. ಏಕೆಂದರೆ ಸಲಾಹುದ್ದೀನ್ ನ ಸಂತಾನವೆಲ್ಲ ಭಾರತದಲ್ಲೇ ಬೇರೆ ಬೇರೆ ಉದ್ಯೋಗಗಳಲ್ಲಿ ಆರಾಮಾಗಿದ್ದಾರೆ. ಇದು ಕೇವಲ ಆಕ್ರೋಶದ, ವ್ಯಂಗ್ಯದ ಪೋಸ್ಟ್ ಅಲ್ಲ. ಬದಲಿಗೆ ಸಲಾಹುದ್ದೀನ್ ಹೇಗೆ ಅಸ್ತಿತ್ವ ಕಳೆದುಕೊಳ್ಳುತ್ತಿದ್ದಾನೆ, ಜಿಹಾದಿ ಪಡೆಗಳ ವಿಚಾರಧಾರೆ ಏನಿದೆ ಎಂಬುದರ ಕುರಿತೆಲ್ಲ ಬೆಳಕು ಚೆಲ್ಲುವಂಥದ್ದಿದು. ಓದಿ..

ಆತ್ಮಹತ್ಯಾ ಬಾಂಬರುಗಳನ್ನು ಉಪಯೋಗಿಸಿಕೊಂಡು ಕಾಶ್ಮೀರವನ್ನು ಭಾರತೀಯ ಯೋಧರ ಪಾಲಿಗೆ ಸ್ಮಶಾನವನ್ನಾಗಿ ಮಾಡುವುದಾಗಿ ಸೈಯದ್ ಸಲಾಹುದ್ದೀನ್ ಹೇಳಿದ್ದಾನೆ.

ಈತ ಬುರ್ಹಾನ್ ವಾನಿಯ ಗುರು. ಬುರ್ಹಾನ್ ವಾನಿ ಸಾಯಬೇಕೆಂದೇ ಆತ ಬಯಸಿದ್ದ. ಈ ಬಗ್ಗೆ ಗೊತ್ತಿಲ್ಲದಿದ್ದರೂ ಭಾರತೀಯ ಸೇನೆ ಆತನ ಬಯಕೆಯನ್ನು ಪೂರೈಸಿತು.

ಸಲಾಹುದ್ದೀನ್ ಬಹಳ ವೇಗದಲ್ಲಿ ತನ್ನ ಪ್ರಸ್ತುತತೆ ಕಳೆದುಕೊಳ್ಳುತ್ತಿದ್ದಾನೆ. ಹಫೀಜ್ ಸಯೀದ್ ಪ್ರಾಬಲ್ಯದ ಹತ್ತಿರಕ್ಕೂ ಈತ ಬರಲಾರ. ಭಾರತ ಸೇನೆ ವಿರುದ್ಧ ಉಗ್ರರನ್ನು ಮುನ್ನಡೆಸುವ ಹೊಳಪನ್ನೂ ಆತ ಕಳೆದುಕೊಂಡಿದ್ದಾನೆ. ಪಾಕ್ ಆಕ್ರಮಿತ ಕಾಶ್ಮೀರದ ಮುಜಫ್ಫರಾಬಾದಿನ ವೈಭವೋಪೇತ ಮನೆಯಲ್ಲಿ ವಾಸಿಸುತ್ತಿರುವ ಈತನ ಐವರೂ ಮಕ್ಕಳು ಭಾರತದಲ್ಲಿ ಒಂದೋ ಕೆಲಸದಲ್ಲಿ ಇಲ್ಲವೇ ಓದಿನಲ್ಲಿ ತೊಡಗಿಕೊಂಡು ಆರಾಮಾಗಿಯೇ ಇದ್ದಾರೆ.

ಈ ಸಲಾಹುದ್ದೀನನಿಗೆ ಬುರ್ಹಾನ್ ಸಾಯೋದು ಎರಡು ಕಾರಣಗಳಿಗೆ ಮುಖ್ಯವಾಗಿತ್ತು. ಪಿಒಕೆಯಲ್ಲಿ ಆರಾಮಾಗಿ ಕುಳಿತಿರುವ ಈತನನ್ನು ಮರೆಗೆ ಸರಿಸುವಂತೆ ಕಾಶ್ಮೀರಿ ಉಗ್ರರ ನಡುವಲ್ಲಿ ಬುರ್ಹಾನ್ ಜನಪ್ರಿಯತೆ ಬೆಳೆದು ನಿಂತಿತ್ತು. ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಸಂಪೂರ್ಣ ನಾಯಕತ್ವ ಹೊರುವುದಕ್ಕೆ ಬುರ್ಹಾನ್ ಗೆ ಸ್ಥಳೀಯ ಉಗ್ರರೆಲ್ಲ ಪುಸಲಾಯಿಸುತ್ತಿದ್ದರು. ಕಾಶ್ಮೀರದ ಉಗ್ರವಾದದಲ್ಲಿ ಸಲಾಹುದ್ದೀನ್ ದೇಹದ ಅಪೆಂಡಿಕ್ಸ್ ನಂತೆ ಕೆಲಸಕ್ಕೆ ಬರದ ಕಿರಿಕಿರಿ ಆಗಿಬಿಟ್ಟಿದ್ದ. ಬುರ್ಹಾನ್ ನಿಗೆ ವಿರುದ್ಧವಾಗಿ ತನ್ನ ನಾಯಕತ್ವ ಗಟ್ಟಿಗೊಳಿಸಿಕೊಳಅಲುವುದು ಆತನಿಗೆ ಬೇಕಿತ್ತು.

ಬುರ್ಹಾನನಿಗೆ ಅತಿ ಹತ್ತಿರದವರೇ ಆತನಿಗೆ ದ್ರೋಹ ಬಗೆದರು. ಜುಲೈ 6-7ರ ಆ ಕಾರ್ಯಾಚರಣೆಯಲ್ಲಿ ಸಲಾಹುದ್ದೀನನ ಕಾರ್ಯಸೂಚಿ ಜಾರಿಗೊಳಿಸುವವರೇ ಈತನಿಗೆ ವಂಚಿಸಿದರು. ನಮ್ಮ ರಾಷ್ಟ್ರೀಯ ರೈಫಲ್ಸ್ ಇದೆಯಲ್ಲ… ಅದು ಉಗ್ರ ನಿಗ್ರಹಕ್ಕಾಗಿಯೇ ರೂಪುಗೊಂಡ ಪ್ರತಿಷ್ಠಿತ ಪಡೆ. ಅವರಿಗೆ ಸಣ್ಣದೊಂದು ಪ್ರವೇಶ ಸಿಕ್ಕರೆ ಸಾಕು. ಸ್ಥಳೀಯ ಪಾನ್ ಶಾಪಿನಲ್ಲಿ ಉಗ್ರನೊಬ್ಬ ನಂಗೆ ದುಡ್ಡೇ ಬಂದಿಲ್ಲ ಮಾರಾಯ ಅಂತ ಹತಾಶೆ ಹೊರಗೆಡವಿದ್ದೋ, ಅಥವಾ ಇನ್ಯಾವುದೋ ಚಾಡಿಮಾತೋ ಅವಿಷ್ಟರದ್ದೇ ಜಾಡು ಹಿಡಿದು ಶಿಕಾರಿ ಮಾಡಿಬಿಡುತ್ತದೆ ರಾಷ್ಟ್ರೀಯ ರೈಫಲ್ಸ್.

ಬುರ್ಹಾನ್ ವಾನಿ ತಲೆದಂಡವಾಗಿದ್ದೇ ಹಿಜ್ಬುಲ್ ನ ಆಂತರಿಕ ಸಂಘರ್ಷದಿಂದ. ಭಾರತೀಯ ಸೇನೆ ಈ ಬಗ್ಗೆ ಏನೂ ತಲೆಕೆಡಿಸಿಕೊಳ್ಳುವುದಿಲ್ಲ. ಉಗ್ರನೊಬ್ಬನನ್ನು ಕೊಂದರು, ಮಿಷನ್ ಯಶಸ್ವಿ ಅಷ್ಟೆ. ಅದ್ಯಾವ ಮುಲಾಜೂ ಇಲ್ಲದೇ ಬುರ್ಹಾನ್ ವಾನಿಯಂಥ ನೂರು ಉಗ್ರರನ್ನು ಅವರು ಕೊಂದೊಗೆಯಬಲ್ಲರು. ಅವರ ಮಾನಸಿಕ ಸೌಧವನ್ನು ಆ ನಿಟ್ಟಿನಲ್ಲೇ ಕಟ್ಟಲಾಗಿದೆ.

ಅದಿರಲಿ. ಸೈಯದ್ ಸಲಾಹುದ್ದೀನ್ ಎಂಬುದು ಈತನ ನಿಜ ನಾಮಧೇಯವೂ ಅಲ್ಲ. ಶ್ರೀನಗರದ ಬಡ್ಗಾಮ್ ಬಳಿ 1946ರ ಫೆಬ್ರವರಿ 18ರಂದು ಹುಟ್ಟಿದವನು ಮೊಹಮದ್ ಯೂಸುಫ್ ಶಾ. ಅನಕ್ಷರಸ್ಥ, ಮೂಲಭೂತವಾದಿ ಜನರನ್ನು ಆಕರ್ಷಿಸುವುದು ಹೇಗೆ? ಇಸ್ಲಾಮಿಕ್ ವೈಭವದ ದಿನಗಳಲ್ಲಿ ಚಾಲ್ತಿಯಲ್ಲಿದ್ದ ಹೆಸರೊಂದಕ್ಕೆ ತನ್ನ ನಾಮಧೇಯ ಬದಲಿಸಿಕೊಂಡ.

ಅನ್-ನಸಿರ್ ಸಲಾಹ್ ಅದ್-ದಿನ್ ಯುಸುಫ್ ಇಬ್ನ ಅಯೂಬ್ ಅಲಿಯಾಸ್ ಸಲಾಹುದ್ದೀನ್ ಅಯೂಬಿ ಎಡಿ 1137 ರ ಕಾಲದ ಸುನ್ನಿ ಮುಸ್ಲಿಂ ಕುರ್ದ್. ಧರ್ಮಯುದ್ಧದಲ್ಲಿ ಕ್ರೈಸ್ತರ ವಿರುದ್ಧ ಹೋರಾಡಿದ ಈತ ಅನನ್ಯ ಜನರಲ್ ಹಾಗೂ ಉತ್ತಮ ಮನುಷ್ಯ ಎಂಬ ಶ್ರೇಯಸ್ಸು ಹೊಂದಿದವ. ಆ ದಿನಗಳಲ್ಲಿ ಮುಸ್ಲಿಮರು ಕ್ರೈಸ್ತರನ್ನು ಹಾಗೂ ಕ್ರೈಸ್ತರು ಮುಸ್ಲಿಮರನ್ನು ಕೊಲ್ಲುವಲ್ಲಿ, ಇಡಿ ಇಡೀ ಹಳ್ಳಿಯನ್ನೇ ಕೊಚ್ಚುವಾಗಲೂ ಯಾವುದೇ ಪಶ್ಚಾತಾಪ ಇರುತ್ತಿರಲಿಲ್ಲ. ಏಕೆಂದರೆ ಮಸೀದಿ ಮತ್ತು ಚರ್ಚುಗಳು ಅದನ್ನು ಧರ್ಮಕಾರ್ಯವಾಗಿಸಿದ್ದವು. ಅಂಥ ಸಮಯದಲ್ಲೂ ತನ್ನ ಯುದ್ಧದಲ್ಲಿ ನಾಗರಿಕತೆ ಮೆರೆದಿದ್ದಕ್ಕೆ ಅಯೂಬಿ ಸ್ಮರಿಸಲ್ಪಡುವ ವ್ಯಕ್ತಿತ್ವ. ಟರ್ಕಿಯ ಮುಸ್ತಫಾ ಕೆಮೆಲ್ ಅಟಾಟುರ್ಕ್ ಸಹ ಇಂಥ ಸಹಿಷ್ಣು ಪರಂಪರೆಗೆ ಸೇರಿದ್ದರು.

ಎಪ್ಪತ್ತು ವರ್ಷದ ಐಷರಾಮಿ ಗೋಸುಂಬೆ, ತನ್ನ ಪಾಳೆಯದವರನ್ನೇ ಕೊಲ್ಲುವ ಸಂಚುಗಾರ ಈ ಪರಂಪರೆಯ ಹೀರೋ ಆಗುತ್ತಾನೆಯೇ?

ಸಲಾಹುದ್ದೀನ್ ಬಗ್ಗೆ ವಿಕಿಪೀಡಿಯಾ  ಮಾಹಿತಿ ಹೀಗೆ ಹೇಳುತ್ತದೆ. ವಿವಾಹಿತ, ಐದು ಗಂಡು ಮಕ್ಕಳಿದ್ದಾರೆ. ಹಿರಿಯವ ಶಕೀಲ್ ಯೂಸುಫ್ ಶ್ರೀನಗರದ ಶೇರ್-ಇ- ಕಾಶ್ಮೀರ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಮೆಡಿಕಲ್ ಅಸಿಸ್ಟಂಟ್, ಎಂರಡನೆಯವ ಜಾವೆದ್ ಯೂಸುಫ್ ಶಿಕ್ಷಣ ಇಲಾಖೆಯಲ್ಲಿ ಕಂಪ್ಯೂಟರ್ ನಿರ್ವಾಹಕ, ಶಹಿದ್ ಯುಸೂಫ್ ಎಂಬಾತ ಕಾಶ್ಮೀರದ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯಲ್ಲಿ ರೀಸರ್ಚ್ ಫೆಲ್ಲೊ, ವಾಹಿದ್ ಯುಸುಫ್ ಮಹಾರಾಜ ಹರಿಸಿಂಗ್ ಸರ್ಕಾರಿ ವೈದ್ಯ ಕಾಲೇಜಿನಲ್ಲಿ ಅಧ್ಯಯನ ನಿರತ. ಕಿರಿಯವ ಎಂಟೆಕ್ ಓದುತ್ತಿದ್ದಾನೆ.

ಹಾಗಾದರೆ…

ಸಲಾಹುದ್ದೀನನ ಈ ಐವರು ಮಕ್ಕಳ ಪೈಕಿ ಆತ ಕಾಶ್ಮೀರವನ್ನು ಭಾರತೀಯ ಯೋಧರ ಸ್ಮಶಾನವಾಗಿಸುವುದಕ್ಕೆ ಯಾರನ್ನು ಆತ್ಮಹತ್ಯಾ ಬಾಂಬರ್ ಆಗಿ ಕಳುಹಿಸಲಿದ್ದಾನೆ? ಜಿಹಾದ್ ಎಂಬುದು ಬೇರೆಯವರ ಮಕ್ಕಳ ಹೆಣ ನೋಡುವುದಕ್ಕೆ ಮಾತ್ರವಾ?

ವಾಸ್ತವವೆಂದರೆ ಸಲಾಹುದ್ದೀನನಿಗೆ ತನ್ನ ಪ್ರಸ್ತುತತೆ ಇಲ್ಲವಾಗುತ್ತಿರುವ ಹತಾಶೆ ಇದು. ಪಾಕಿಸ್ತಾನವು ತನ್ನ ಉಗ್ರವಾದದ ಪ್ರಾಯೋಜಕತ್ವಕ್ಕೆ ಯಾವುದನ್ನು ಕಾಶ್ಮೀರ ಸಂಘರ್ಷ ಎಂದು ಕರೆಯುತ್ತದೆಯೋ ಅಲ್ಲಿ ಹೊಸ ಆಟಗಾರರು ಬಂದಿದ್ದಾರೆ. ಕಾಶ್ಮೀರದೊಂದಿಗೆ ಯಾವತ್ತೂ ಬೆಸೆದಿರದ ಪಂಜಾಬಿ ಮತ್ತು ಪಶ್ತೂನಿಗಳು ಇವರು. ವಿಶ್ವಸಂಸ್ಥೆಯಲ್ಲಿ ಆಜಾದಿ ಧ್ವನಿ ಮೊಳಗಿಸುವ ಯತ್ನಕ್ಕೂ ಇವರಿಗೂ ಸಂಬಂಧವೇ ಇಲ್ಲ. ಕಾಶ್ಮೀರ ಅವರಿಗೆ ಇನ್ನೊಂದು ದಾರುಲ್ ಹರ್ಬ್ ಅರ್ಥಾತ್ ಯುದ್ಧನೆಲ. ಅವರಿಗೆ ಕಾಶ್ಮೀರವೆಂಬುದು ಸಿರಿಯಾ, ಇರಾಕ್, ಲಿಬಿಯಾಗಳ ವಿಸ್ತರಣೆ. ವಹಾಬಿಯ ರಾಜಕೀಯ ಇಸ್ಲಾಮನ್ನು ಬಿತ್ತುವುದಕ್ಕೆ ಸಿಕ್ಕಿದ ಅವಕಾಶ. ಜನಮತಗಣನೆ ಅವರಿಗೆ ಅಪ್ರಸ್ತುತ. ಅವರ ಪರಿಕಲ್ಪನೆ ಏನಿದ್ದರೂ ಗಜ್ವಾ ಇ ಹಿಂದ್. ಭಾರತದ ಇಸ್ಲಾಮೇತರ ಕಾಫಿರರೆಲ್ಲ ಒಂದೋ ಕೊಲ್ಲಲ್ಪಡಬೇಕು ಇಲ್ಲವೇ ಅಧೀನಕ್ಕೊಳಗಾಗಬೇಕು.

ಕಾಶ್ಮೀರದಲ್ಲಿ ನಾವು ಯಾರ ಜತೆ ಸೆಣೆಸುತ್ತಿದ್ದೇವೆ ಎಂಬುದು ನಮಗೆ ಗೊತ್ತಿರಬೇಕು. ಅಲ್ಲಿನ ಐಎಸ್ ಐಎಸ್ ಧ್ವಜಗಳು, ಕಾಶ್ಮೀರಿ ನಾಯಕರು ಹೇಳುವಂತೆ ಕೆಲವೇ ತುಂಟ ಹುಡುಗರ ಕೆಲಸ ಎಂದು ನಂಬುವ ಅಗತ್ಯವಿಲ್ಲ.

ಇಂಥ ಪಾಂಡಿತ್ಯ ಚರ್ಚೆಗಳಲ್ಲಿ ಸಮಯ ವ್ಯಯಿಸದೇ ಭಾರತೀಯ ಸೇನೆ ದೇಶದ ವೈರಿಗಳನ್ನು ಕೊಲ್ಲುತ್ತಿದೆ. ಅದುವೇ ಅವರ ಮುಖ್ಯಪಾತ್ರ. ಭಾರತವನ್ನು ಎಲ್ಲ ಆಂತರಿಕ ಮತ್ತು ವಿದೇಶಿ ದಾಳಿಗಳಿಂದ ಕಾಪಾಡುವುದೇ ಅದರ ಏಕಮೇವ ಕಾರ್ಯಸೂಚಿ.

ಕಾಶ್ಮೀರವೆಂಬುದು ದೊಡ್ಡಾಟ ಎಂಬುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಲಷ್ಕರೆಯ ಕರಪತ್ರ ‘ನಾವೇಕೆ ಜಿಹಾದ್ ಮಾಡುತ್ತಿದ್ದೇವೆ’ ಎಂಬುದರಲ್ಲಿ ಸ್ಪಷ್ಟ ಉತ್ತರವಿದೆ. ಗಜ್ವಾ ಇ ಹಿಂದ್ ಸ್ಥಾಪನೆಗೆ ಅವರು ಹೋರಾಡಿ ಸಾಯಲು ಸಿದ್ಧರಿದ್ದಾರೆ. ಸರ್ವಪಕ್ಷ ನಿಯೋಗದಲ್ಲಿ ಪ್ರತ್ಯೇಕತಾವಾದಿಗಳನ್ನು ಪುಸಲಾಯಿಸಿಕೊಂಡಿರುವ ಪ್ರೌಢಿಮೆ ರಹಿತರಿಗೆ ಇವೆಲ್ಲ ಗೊತ್ತಾಗುವುದಿಲ್ಲ.

ಸಯದ್ ಸಲಾಹುದ್ದೀನ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡರೆ ಎದುರು ನಿಂತಿರುವ ನಿಜ ತೋಳಗಳ ಮೇಲಿನ ಗಮನ ಕಡಿಮೆಯಾಗಿಬಿಡುತ್ತದೆ.

ಭಾರತೀಯ ಸೇನೆಗೆ ಈ ವಿಷಯ ನಿರ್ಧಾರಕ್ಕೆ ಕೊಡಲಿದು ಸುಸಂದರ್ಭ. ಏನು ಮಾಡಲು ಸಮರ್ಥರಿದ್ದಾರೋ ಅದನ್ನವರು ಮಾಡುತ್ತಾರೆ. ಬೇಟೆಗೆ ಹೋಗುವುದಕ್ಕೆ ಬಿಡಿ ಅವರನ್ನು.

Leave a Reply