ಒಬಾಮಾಗೆ ‘ಡ್ಯಾಶ್ ಡ್ಯಾಶ್’ ಮಗನೇ ಅಂತ ಬಯ್ದು ಅಮೆರಿಕದ ಜತೆ ಮಾತುಕತೆಯನ್ನೇ ಕ್ರ್ಯಾಶ್ ಮಾಡಿಕೊಂಡ ಪಿಲಿಪ್ಪೀನ್ಸ್ ಅಧ್ಯಕ್ಷ, ಇದು ಚೀನಾದ ಅದೃಷ್ಟ!

ಡಿಜಿಟಲ್ ಕನ್ನಡ ಟೀಮ್:

ಮಾತು ಆಡಿದರೆ ಹೋಯ್ತು… ಎಂಬ ಗಾದೆಗೊಂದು ಹೊಸ ಪುರಾವೆ ಪಿಲಿಪ್ಪೀನ್ಸ್ ಅಧ್ಯಕ್ಷ ರೊಡ್ರಿಗೊ ದುತೆರ್ತೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಈತನ ನಡುವೆ ಇಂದು ಮಾತುಕತೆ ನಡೆಯಬೇಕಿತ್ತು. ಆದರೆ ಇದಕ್ಕೆ ಪೂರ್ವಭಾವಿಯಾಗಿ ನಡೆದ ಪತ್ರಿಕಾಗೋಷ್ಟಿಯಲ್ಲಿ ದುತೆರ್ತೆ ಎಡವಟ್ಟು ಮಾಡಿಕೊಂಡ. ಅಮೆರಿಕದ ಅಧ್ಯಕ್ಷನನ್ನು ಅವಾಚ್ಯ ಶಬ್ದದಲ್ಲಿ ನಿಂದಿಸಿದ ಪರಿಣಾಮ ಶ್ವೇತಭವನವು ಮಾತುಕತೆ ರದ್ದು ಮಾಡಿದೆ.

ಪಿಲಿಪ್ಪೀನ್ಸ್ ನಲ್ಲಿ ಮಾದಕ ವಸ್ತು ವ್ಯಸನವನ್ನು ಮಟ್ಟ ಹಾಕುತ್ತೇನೆ ಎಂಬ ಭರವಸೆ ನೀಡಿ ಆರಿಸಿ ಬಂದವ ದುತೆರ್ತೆ. ಹೀಗೆ ಡ್ರಗ್ಸ್ ಮಟ್ಟ ಹಾಕುವ ಕಾರ್ಯದಲ್ಲಿ 2 ಸಾವಿರಕ್ಕೂ ಹೆಚ್ಚು ಸಾವುಗಳಾಗಿವೆ. ಮುಗ್ಧರೂ ಸತ್ತಿದ್ದಾರೆಂಬ ಆರೋಪಗಳಿವೆ. ಪಿಲಿಪ್ಪೀನ್ಸ್ ಜತೆಗಿನ ಮಾತುಕತೆ ಸಂದರ್ಭದಲ್ಲಿ ಅಮೆರಿಕವೇನಾದರೂ ಈ ಮಾನವ ಹಕ್ಕುಗಳ ಉಲ್ಲಂಘನೆ ವಿಷಯ ಎತ್ತಿದರೆ ನಿಮ್ಮ ಉತ್ತರ ಏನಾಗಿರುತ್ತದೆ ಅಂತ ಸ್ಥಳೀಯ ಪತ್ರಕರ್ತರು ಕೇಳಿದರು. ‘ಅಮೆರಿಕವೇ ಯುದ್ಧಗಳಲ್ಲಿ ಮಾಡಿರುವ ಮಾನವ ಹಕ್ಕು ಉಲ್ಲಂಘನೆಗಳ ಕತೆ ಬೇಕಷ್ಟಿದೆ. ಹೀಗಿರುವಾಗ ನಮ್ಮ ಬಗ್ಗೆ ಕೇಳಲು ಬಂದರೆ ಬಿಡ್ತೇನಾ? ‘…..’ ಮಗನೇ ಮೊದ್ಲು ನಿಂದು ನೋಡ್ಕಳಲೇ ಅಂತ ಒಬಾಮಾನನ್ನು ಅಲ್ಲಿಯೇ ನಿಂದಿಸಬೇಕಾಗುತ್ತದೆ’ ಎಂಬ ಉತ್ತರ ದುತೆರ್ತೆಯಿಂದ ಬಂದಿದೆ. ಮೊದಲೇ ಚೀನಾದ ಜಿ20ರಲ್ಲಿ ಭಾಗವಹಿಸಲು ಹೋದ ಅಮೆರಿಕ ಅಧ್ಯಕ್ಷಗೆ ಕೆಂಪುಹಾಸಿನ ಸ್ವಾಗತವೇ ಸಿಗದೇ ಮುಜುಗರವಾಗಿತ್ತು. ನನ್ಮಗನೇ… ಬೈಗುಳ ಕೇಳುತ್ತಲೇ ಶ್ವೇತಭವನ ಪಿಲಿಪ್ಪೀನ್ಸ್ ಜತೆಗಿನ ಮಾತುಕತೆಯನ್ನು ರದ್ದುಗೊಳಿಸಿದೆ.

ಇದೀಗ ವಿಷಾದದ ಧ್ವನಿಯಲ್ಲಿ ಮಾತಾಡುತ್ತಿರುವ ಪಿಲಿಪ್ಪೀನ್ಸ್ ಅಧ್ಯಕ್ಷ, ಬದಲಾದ ದಿನಾಂಕವೊಂದರಲ್ಲಿ ಮಾತುಕತೆ ನಡೆಸುತ್ತೇವೆ ಎನ್ನುತ್ತಿದ್ದಾರೆ. ಈ ಹಿಂದೆ ಪೋಪ್ ಅವರಿಗೂ ….ಮಗನೇ ನಿಂದನೆ ಪ್ರಯೋಗಿಸಿದ ಕುಖ್ಯಾತಿ ದುತೆರ್ತೆಯದ್ದು. ಆದರೆ ಈ ಸಂಯಮವಿಲ್ಲದ ಹುಚ್ಚಾಟಕ್ಕೆ ಮಹತ್ವದ ಮಾತುಕತೆ ಬಲಿಯಾಗಿ ಅತ್ತ ಚೀನಾ ನಗಾಡಿಕೊಳ್ಳುವಂತಾಗಿದೆ. ಏಕೆಂದರೆ ದಕ್ಷಿಣ ಚೀನಾ ಸಮುದ್ರದ ಮೇಲಿನ ಚೀನಾ ಪಾರುಪತ್ಯದ ವಿರೋಧಿ ಗುಂಪಿನಲ್ಲಿ ವಿಯೆಟ್ನಾಂ, ತೈವಾನ್ ಮಲೇಷ್ಯಗಳ ಜತೆ ಪಿಲಿಪ್ಪೀನ್ಸ್ ಸಹ ಇದೆ. ಹೇಗ್ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಚೀನಾ ವಿರುದ್ಧವೇ ತೀರ್ಪು ಬಂದಿದ್ದರೂ ಅದನ್ನು ಚೀನಾ ಗೌರವಿಸುತ್ತಿಲ್ಲ. ಈ ಸಂದರ್ಭದಲ್ಲಿ ಈ ಚಿಕ್ಕ ರಾಷ್ಟ್ರಗಳಿಗೆಲ್ಲ ಚೀನಾ ವಿರುದ್ಧ ನಿಲ್ಲುವುದಕ್ಕೆ ಅಮೆರಿಕ ನೆರವು ಬೇಕೆ ಬೇಕು. ಇವರ ಹಿತಾಸಕ್ತಿ ಮಾತ್ರವಲ್ಲದೇ ಇಲ್ಲಿ ಅಮೆರಿಕ- ಭಾರತಗಳ ಹಿತಾಸಕ್ತಿಯೂ ಇದೆ.

ದಕ್ಷಿಣ ಚೀನಾ ಸಮುದ್ರದ ಕೆಲ ದ್ವೀಪ ಗಡಿಗಳನ್ನು ಪಿಲಿಪ್ಪೀನ್ಸ್ ಯೋಧರೇ ತೀರ ವಿಷಮ ಪರಿಸ್ಥಿತಿಗಳ ನಡುವೆಯೂ ಕಾಯುತ್ತಿದ್ದಾರೆ. ಚೀನಿ ನೌಕಾಸೈನ್ಯ ಆಗಾಗ ಇವರನ್ನು ಹೆದರಿಸಿಕೊಂಡೇ ಇದೆಯಾದರೂ ಗಡಿ ದಾಟಿಲ್ಲ. ಏಕೆಂದರೆ ಅಮೆರಿಕದ ಬೆಂಬಲ ಹೊಂದಿರುವ ಇವರನ್ನು ಮುಟ್ಟಿದರೆ ಗಂಭೀರ ಸ್ವರೂಪದ ಸಂಘರ್ಷ ತೆಗೆದುಕೊಳ್ಳುತ್ತದೆಂಬ ಕಾರಣದಿಂದ.

ಇಂಥ ಪರಿಸ್ಥಿತಿಯಲ್ಲಿ ಪಿಲಿಪ್ಪೀನ್ಸ್ ಅಧ್ಯಕ್ಷ ತನ್ನ ಹರಕು ಬಾಯಿಯಿಂದ ಎಸಗಿರುವ ವಿಧ್ವಂಸ ಆತ್ಮಘಾತುಕ ಹಾಗೂ ಜಗತ್ತಿಗೂ ಮಾರಕ.

ಸೌತ್ ಚೀನಾ ಸಮುದ್ರ ವಿಚಾರದಲ್ಲಿ ಪಿಲಿಪ್ಪೀನ್ಸ್ ವರ್ಸಸ್ ಚೀನಾ ಅಧ್ಯಾಯವನ್ನು ಬಿಬಿಸಿಯ ವರದಿಯೊಂದರಲ್ಲಿ ಕಾಣಬಹುದು.

Leave a Reply