ಒಂದೇ ವರ್ಷದಲ್ಲಿ ಜಾಗತೀಕ ಮಟ್ಟದಲ್ಲಿನ ಬದಲಾವಣೆಯನ್ನು ಸಾರುತ್ತಿವೆ ಈ ಎರಡು ಚಿತ್ರಗಳು!

2016 ರ ಜಿ-20 ರಾಷ್ಟ್ರಗಳ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್ ಜತೆ ಮಾತುಕತೆ ನಡೆಸುತ್ತಿರುವ ಟರ್ಕಿ ಅಧ್ಯಕ್ಷ ರೆಸಪ್ ತಯಿಪ್ ಎರ್ಡೊಗನ್ ಅವರನ್ನು ಅಚ್ಚರಿಯ ಭಾವದಲ್ಲಿ ನೋಡುತ್ತಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ…

g-20 photo

2015 ರ ಜಿ-20 ರಾಷ್ಟ್ರಗಳ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಜತೆ ಟರ್ಕಿ ಅಧ್ಯಕ್ಷ ರೆಸಪ್ ತಯಿಪ್ ಎರ್ಡೊಗನ್ ಕೈಕುಲುಕುತ್ತಿರುವುದನ್ನು ಎಚ್ಚರಿಕೆಯ ಕಣ್ಣಿಂದ ನೋಡುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್…

ಡಿಜಿಟಲ್ ಕನ್ನಡ ಟೀಮ್:

ನಿನ್ನೆ ಜಿ-20 ರಾಷ್ಟ್ರಗಳ ಸಭೆ ಮುಕ್ತಾಯವಾಯ್ತು… ಈ ಸಭೆ ಮುಕ್ತಾಯವಾಗುತ್ತಿದ್ದಂತೆ ಕಳೆದ ವರ್ಷದ ಜಿ-20 ರಾಷ್ಟ್ರಗಳ ಸಭೆಯ ಹಾಗೂ ಈ ವರ್ಷದ ಜಿ-20 ರಾಷ್ಟ್ರಗಳ ಸಭೆಯ ಚಿತ್ರಗಳು ವ್ಯಾಪಕ ಚರ್ಚೆಗೆ ಕಾರಣವಾಗ್ತಿವೆ. ಅದೇನಂದ್ರೆ 2015ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಜತೆ ಟರ್ಕಿ ಅಧ್ಯಕ್ಷ ರೆಸಪ್ ತಯಿಪ್ ಎರ್ಡೊಗನ್ ಕೈಕುಲುಕುತ್ತಿರೋದು ಒಂದು ಚಿತ್ರವಾದರೆ, ಮತ್ತೊಂದು ಅದೇ ಟರ್ಕಿಯ ಅಧ್ಯಕ್ಷ, ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ ಜತೆಗೆ ಸ್ನೇಹ ಸಂಪಾದಿಸಿರೋದು. ಈ ಎರಡು ಚಿತ್ರಗಳಲ್ಲಿ ಅಮೆರಿಕ ಹಾಗೂ ರಷ್ಯಾ ಅಧ್ಯಕ್ಷರ ಮುಖ ಭಾವನೆ ಗಮನಾರ್ಹ… ಇದರೊಂದಿಗೆ ಜಾಗತಿಕ ಮಟ್ಟದ ಸ್ನೇಹ ಸಂಬಂಧದಲ್ಲಿ ಒಂದೇ ವರ್ಷದಲ್ಲಿ ಆಗಿರುವ ಬದಲಾವಣೆ ಯಾವ ರೀತಿ ಇದೆ ಎಂಬುದನ್ನು ಚರ್ಚಿಸಲಾಗ್ತಿದೆ.

ಅರೆಬಿಕ್ ಅಲ್ ಆನ್ ಸುದ್ದಿಯಾಹಿನಿಯ ವರದಿಗಾರ ಈ ಎರಡು ಚಿತ್ರಗಳನ್ನು ಟ್ವಿಟರ್ ನಲ್ಲಿ  ಹಾಕಿದ್ದು, ಹೊಸ ಚರ್ಚೆಗೆ ವೇದಿಕೆ ಕಲ್ಪಿಸಿದ್ದಾರೆ.

ಹೌದು, ಒಂದು ವರ್ಷ ಹಿಂದಕ್ಕೆ ಹೋದರೆ ನಮಗೆ ಕಾಣುವುದು ಟರ್ಕಿ ಅಮೆರಿಕದ ಸ್ನೇಹ ಸಂಬಂಧ ಹಾಗೂ ಟರ್ಕಿ ವಿರುದ್ಧ ರಷ್ಯಾದ ಮುನಿಸು. ಕಳೆದ ವರ್ಷ ಟರ್ಕಿ ರಾಜಧಾನಿ ಅಂಕಾರದಲ್ಲಿ ರಷ್ಯಾದ ಯುದ್ಧವಿಮಾನವನ್ನು ಹೊಡೆದು ಹಾಕಲಾಗಿತ್ತು. ಅದರಿಂದ ಸಹಜವಾಗಿಯೇ ಟರ್ಕಿ ವಿರುದ್ಧ ರಷ್ಯಾ ಕೋಪ ಹೆಚ್ಚಿತ್ತು. ಆದರೆ, ಒಂದೇ ವರ್ಷದಲ್ಲಿ ಪರಿಸ್ಥಿತಿ ಬದಲಾಗಿದೆ. ರಷ್ಯಾದ ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಕ್ಕೆ ಟರ್ಕಿಯು ರಷ್ಯಾಗೆ ಕ್ಷಮಾಪಣೆ ಪತ್ರ ಬರೆಯುವ ಮೂಲಕ ಅದರ ವಿಶ್ವಾಸ ಗಿಟ್ಟಿಸಿದೆ.

ಅಷ್ಟೇ ಅಲ್ಲ, ಟರ್ಕಿಯಲ್ಲಿ ಇತ್ತೀಚೆಗೆ ನಡೆದ ಮಿಲಿಟರಿ ಕ್ರಾಂತಿವಿಫಲಗೊಂಡ ಪರಿಣಾಮ ಅಧ್ಯಕ್ಷ ರೆಸಪ್ ತಯಿಪ್ ಎರ್ಡೊಗನ್ ತಮ್ಮ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಹೀಗೆ ಎರ್ಡೊಗನ್ ಅಧಿಕಾರ ಉಳಿಸಿಕೊಳ್ಳುವುದರ ಹಿಂದೆ ರಷ್ಯಾದ ಸಹಾಯ ಮಹತ್ತರವಾಗಿತ್ತು. ಅದೇನಂದ್ರೆ, ಈ ಮಿಲಿಟರಿ ಕ್ರಾಂತಿಯ ಬಗ್ಗೆ ಟರ್ಕಿಯ ಅಧ್ಯಕ್ಷ ಎರ್ಡೊಗನ್ ಅವರಿಗೆ ಮುಂಚಿತವಾಗಿಯೇ ಮಾಹಿತಿ ನೀಡಿದ್ದು ಇರಾನ್ ಮತ್ತು ರಷ್ಯಾ ಗುಪ್ತಚರ ಇಲಾಖೆಗಳು ಎಂಬ ಮಾತುಗಳಿವೆ. ಈ ಮಾಹಿತಿಗಳಿಂದ ಎಚ್ಚೆತ್ತ ಎರ್ಡೊಗನ್ ಮಿಲಿಟರಿ ಕ್ರಾಂತಿಯನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾದ. ಈ ಘಟನೆ ನಂತರ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳ ಜತೆಗೆ ಟರ್ಕಿಯ ಸಂಬಂಧ ದುರ್ಬಲಗೊಳ್ಳಲಾರಂಭಿಸಿತು.

ಟರ್ಕಿಯಲ್ಲಿನ ಈ ಮಿಲಿಟರಿ ಕ್ರಾಂತಿಗೆ ಮುಸ್ಲಿಂ ಧಾರ್ಮಿಕ ಚಿಂತಕ ಮುಹಮದ್ ಫೆತುಲ್ಲಾ ಗುಲೆನ್ ಅವರ ಕೈವಾಡವಿದೆ ಎಂದು ಶಂಕಿಸಲಾಗಿದೆ. 2013 ರಲ್ಲಿನ ಭ್ರಷ್ಟಾಚಾರ ಪ್ರಕರಣದಲ್ಲಿ ಧಾರ್ಮಿಕ ಚಿಂತಕ ಗುಲೆನ್ ಪ್ರಮುಖ ಆರೋಪಿಯಾಗಿದ್ದ. ಈ ಪ್ರಕರಣದ ನಂತರ ಗುಲೆನ್ ಎರ್ಡೊಗನ್ ವಿರುದ್ಧ ಸಂಚು ರೂಪಿಸಿ ಟರ್ಕಿಯಲ್ಲಿನ ಅಧಿಕಾರ ಬದಲಾವಣೆಗೆ ಪ್ರಯತ್ನ ನಡೆಸಿದ ಎಂಬ ಮಾತುಗಳು ಹರಿದಾಡಿವೆ. ಸದ್ಯ ಈ ಗುಲೆನ್ ಗೆ ಅಮೆರಿಕದಲ್ಲಿ ಆಶ್ರಯ ಸಿಕ್ಕಿದೆ.

ಅಮೆರಿಕ ಟರ್ಕಿಯ ಸಹಯೋಗದೊಂದಿಗೆ ಸಿರಿಯಾದಲ್ಲಿ ತಮ್ಮ ಕಾರ್ಯಾಚರಣೆ ನಡೆಸುತ್ತಿದೆ. ಈ ಗುಲೆನ್ ವಿಚಾರದಲ್ಲಿ ಟರ್ಕಿ ಮತ್ತು ಅಮೆರಿಕ ನಡುವೆ ಮನಸ್ತಾಪವಿದ್ದರೂ ಅವರ ಸ್ನೇಹ ಸಂಬಂಧ ತೀರಾ ಹದಗೆಟ್ಟಿಲ್ಲ. ಆದರೆ ಮಿಲಿಟರಿ ಕ್ರಾಂತಿ ಪ್ರಕರಣದಿಂದ ರಷ್ಯಾ ಜತೆಗಿನ ತನ್ನ ಸಂಬಂಧ ಗಟ್ಟಿಗೊಳ್ಳುತ್ತಿರುವುದು ಗಮನಾರ್ಹವಾಗಿದೆ.

1 COMMENT

Leave a Reply