ಸ್ವಾತಂತ್ರ್ಯಕ್ಕಾಗಿ ತಿಲಕರು ಆರಂಭಿಸಿದ ಗಣೇಶ ಉತ್ಸವ ಈಗ ಪಡೆದುಕೊಂಡಿರುವ ಸ್ವರೂಪವಾದ್ರು ಏನು?

author-geethaಮಾತುಕತೆ-1

‘ಹಬ್ಬಕ್ಕೆ ಊರಿಗೆ ಹೋಗಬೇಕು. ಒಂದು ವಾರ ರಜೆ ಬೇಕು’ ನನ್ನ ಮನೆ ಕೆಲಸ ಮಾಡಲು ನನಗೆ ಸಹಾಯ ಮಾಡುವ ಭಾಗ್ಯ ಕೇಳಿದಾಗ ಗಾಬರಿಯಾಯಿತು.

‘ಪ್ರತಿ ವರ್ಷ ಮೂರು ದಿನ ಹಾಕುತ್ತಿದ್ದೆ. ಈ ಬಾರಿ ಕೆಲಸ ಜಾಸ್ತಿ, ಬಂದ ಮೇಲೆ ಒಂದು ದಿನ ರೆಸ್ಟ್ ಬೇಕು. ಹೀಗಾಗಿ ಒಂದು ವಾರ ಬೇಕೇಬೇಕು.’

‘ಇಪ್ಪತ್ತು ಸಾವಿರ ಅಡ್ವಾನ್ಸ್ ಬೇಕು.’

ವಾರಕ್ಕೆ ಹೂಂ.. ಅನ್ನುವ ಮೊದಲೇ ಅವಳ ಎರಡನೇ ಬೇಡಿಕೆ!

‘ಅಲ್ಲಾ… ಇಪ್ಪತ್ತು ಸಾವಿರ!’

‘ಸಂಬಳದಲ್ಲಿ ಹಿಡ್ಕೊಳಿ. ಊರಲ್ಲಿ ಮನೆಗೆ ಸುಣ್ಣಬಣ್ಣ ಮಾಡಿಸಬೇಕು. ಹಬ್ಬ ಮಾಡಬೇಕು. ಹೆಣ್ಣು ಮಕ್ಕಳಿಗೆ ಉಡುಗೋರೆ ಕೊಡಬೇಕು. ಹಬ್ಬದ ಊಟಕ್ಕೆ ಒಂದೆಪ್ಪತ್ತು ಜನ ಆಗ್ತಾರೆ… ಭಟ್ಟರನ್ನು ಕರೆಸಿ ಅಡಿಗೆ ಮಾಡಿಸಬೇಕು. ತುಂಬಾ ಖರ್ಚಿದೆ. ದುಡ್ಡು ಬೇಕೇ ಬೇಕು.’

ಮಾತುಕತೆ-2

‘ಅಕ್ಕಾ…! ಗಣೇಶ ಕೊರಿಸ್ತೇವೆ ದುಡ್ಡು ಕೊಡಿ..’

‘ಆಂಟೀ.. ಈ ರಸ್ತೆಯ ಕೊನೆಯಲ್ಲೇ ಕೂರಿಸ್ತೀವಿ ಗಣೇಶನ್ನ ನಿಮ್ಮ ಕೈಲಾದಷ್ಟು ದುಡ್ಡು ಕೊಡಿ.’

‘ಮ್ಯೂಸಿಕ್ ಟ್ರೂಪ್ ಕರೆಸಿ ಆರ್ಕೆಸ್ಟ್ರಾ ಇಡಿಸ್ತೀವಿ. ಒಂದು ದಿನದ ಪೂಜೆಗೆ ದುಡ್ಡು ಕೊಡಿ ಆಂಟೀ’

‘ನಿಮ್ಮನ್ನೇ ಮುಖ್ಯ ಅತಿಥಿಗಳಾಗಿ ಕರಿತೀವಿ.. ದುಡ್ಡು ಕೊಡಿ ಆಂಟೀ’

‘ಗಣೇಶನ್ನ ಕೂರಿಸ್ತೀವಿ. ಅಂದ್ರೆ ದುಡ್ಡು ಕೊಡಲ್ಲ ಅಂತ ಹೇಳೋ ಹಾಗೆ ಇಲ್ಲ. ನಿಮಗೆ ತುಂಬಾ ಕಷ್ಟ ಬರುತ್ತೆ ಅಷ್ಟೇ.’

ಬೇಡಿಕೆಯಿಂದ ಧಮಕಿಯವರೆಗೂ ನಡೆಯುತ್ತದೆ, ಬೆಲ್ ಮಾಡಿ ದುಡ್ಡು ಕೇಳುವ ಹುಡುಗರ ಕಾಟ.

ಮಾತುಕಥೆ- 3

‘ಎಷ್ಟಕ್ಕೆ ರಸೀತಿ ಬರೆಯೋಣ ಸರ್? ನಾವು ಪ್ರತಿ ವರ್ಷ ಗಣೇಶ ಕೂರಿಸ್ತೀವಿ. ಈ ಏರಿಯಾದಲ್ಲೇ ಫ್ಯಾಕ್ಟರೀ ನಡೆಸ್ತಾ ಇದೀರಿ.. ನಾವಿಬ್ಬರೂ ಚೆನ್ನಾಗಿರಬೇಕು ಅಲ್ಲವೇ?’

ನನ್ನ ಮಗ ಕತ್ತೆತ್ತಿ ನೋಡಿ ಏನು ಎತ್ತ ಎಂದು ವಿಚಾರಿಸುವ ಮೊದಲೇ ಗುಂಪಿನಲ್ಲಿ ಇದ್ದ ಮತ್ತೊಬ್ಬ…

‘ಏ.. ಹತ್ತು ಸಾವಿರ ಬರಿಯೋ.. ಕೊಡ್ತಾರೆ.. ಗಣೇಶಂಗೆ ಇಲ್ಲ ಅನ್ನೋಕ್ಕೆ ಆಗುತ್ತಾ? ಇಲ್ಲ ಅಂದರೆ ಮುಂದೆ ವಿಘ್ನಗಳನ್ನು ಎದುರಿಸಬೇಕಾಗುತ್ತದೆ. ಇವರ ಫ್ಯಾಕ್ಟರಿಯಲ್ಲಿ ಹೆಣ್ಣುಮಕ್ಕಳೂ ಕೆಲಸ ಮಾಡುತ್ತಾರೆ. ಗಣೇಶ ಎಲ್ಲರಿಗೂ ಒಳ್ಳೆಯದು ಮಾಡಬೇಕಲ್ಲವೇ?’

‘ಅಷ್ಟೆಲ್ಲಾ ಕೊಡೋಕ್ಕೆ ಆಗೊಲ್ಲ.. ರಸೀತಿಯಲ್ಲಿ ನಿಮಗೆ ಬೇಕಾದಂತೆ ಬರೆದುಕೊಳ್ಳಲು ಆಗುವುದಿಲ್ಲ.’

ಜುಗ್ಗಾಡಿದರೂ ದುಡ್ಡು ಕೊಟ್ಟು ಕಳಿಸಲೇ ಬೇಕು… ಅಷ್ಟೇ. ಒಂದು ನಾಲ್ಕು ಸಾವಿರ ಕಡಿಮೆ!

ಮಾತುಕಥೆ- 4

‘ಇದು ನೋಡಿ.. ಪೂಡೆಗಳ ವಿವರ.. ನೀವು ಯಾವ ಪೂಜೆ ಬೇಕಾದರೂ, ಯಾವ ದಿನ ಬೇಕಾದರೂ ಮಾಡಿಸಬಹುದು. ನಿಮಗೆ ಬರಲು ಆಗದಿದ್ದರೆ ಪ್ರಸಾದ ಮನೆಗೇ ಕಳಿಸಿಕೊಡ್ತೀವಿ.’

‘ಇಲ್ಲ.. ನಮ್ಮ ಮನೇಲೇ ಪೂಜೆ ಮಾಡ್ತೀನಲ್ಲಾ ಅಷ್ಟು ಸಾಕು ನನಗೆ..’

‘ಪರ್ವಾಗಿಲ್ಲ… ಪೂಜೆ ಮಾಡಿಸದಿದ್ದರೆ ಪರ್ವಾಗಿಲ್ಲ. ನಮ್ಮ ಸಂಜೆಯ ಕಾರ್ಯಕ್ರಮಕ್ಕೆ ಬನ್ನಿ, ಅದರ ವಿವರಗಳು ಈ ಬ್ರೋಚರ್ರಿನಲ್ಲಿ ಇದೆ. ನಾವು world famous troupe ಗಳನ್ನೇ ಕರಿಸೋದು. ಸೋನು ನಿಗಂ, ರಘು ದೀಕ್ಷಿತ್…’

‘ಓ…’ ಚೆಂದದ ಬ್ರೋಚರ್! ಅಷ್ಟೇ ಹೆಸರು ವಾಸಿ ಕಲಾವಿದರು… ಅಂತಹವರ Live performance ನೋಡುವುದು, ಕೇಳುವುದು ಅಂದರೆ…

‘ನಿಮಗೆ ಕಾಂಪ್ಲಿಮೆಂಟರಿ ಪಾಸ್ ಗಳನ್ನು ಕೊಡುತ್ತೇವೆ.’

‘ಓ.. ಥ್ಯಾಂಕ್ಸ್’

‘ನೀವು ಯಾವುದಕ್ಕೆ ಬರ್ತೀರಿ ಹೇಳಿ.. ಹಾಗೇ ಒಂದು ಸಣ್ಣ ಹೆಲ್ಪ್ ಬೇಕು..’

‘ಹೇಳಿ’ ಅಂದೆ.

‘ಸ್ಟಾರ್ performers ಗೆಲ್ಲಾ ಪಂಚತಾರಾ ಹೊಟೇಲಿನಲ್ಲಿ ರೂಂ ಬುಕ್ ಮಾಡಿದ್ದೇವೆ. ಅವರ ಜೊತೆ ಬರೋರಿಗೆ ನಿಮ್ಮ ಹೊಟೇಲ್ಲಿನಲ್ಲಿ ರೂಮುಗಳನ್ನು ಕೊಡಲಾಗುತ್ತಾ? ಹತ್ತು ರೂಮು, ಹತ್ತು ದಿನಕ್ಕೆ… complimentary ಕೊಟ್ಟುಬಿಡಿ… ಪ್ಲೀಸ್’

‘ಡಿಸ್ಕೌಂಟ್ ಕೊಡಬಹುದು ಆದರೆ free ಆಗಿ ಕೊಡೋಕ್ಕೆ ತುಂಬಾ ಕಷ್ಟ, ಆಗೊಲ್ಲ..’

‘ಯೋಚನೆ ಮಾಡಿ, ಫೋನ್ ಮಾಡಿ ತುಂಬಾ ಹೊಟೇಲ್ಲಿನವರು ಸಿದ್ಧರಿದ್ದಾರೆ. ನಿಮ್ಮ ಪರಿಚಯ ನನಗೆ ಇದೆಯಲ್ಲವೇ… ಅದಕ್ಕೆ ಕೇಳ್ದೆ.’

Complimentary passಗಳ ಬಗ್ಗೆ ಮುಂದೆ ಮಾತನಾಡದೆ bye ಹೇಳಿ ತಾಂಬೂಲ ತೆಗೆದುಕೊಂಡು ಹೊರಟಳು ಸ್ನೇಹಿತೆ.

****

ಅಷ್ಟೇ ಒಂದಲ್ಲ, ಎರಡಲ್ಲ… ನನ್ನ ಅನುಭವದ್ದೇ ನಾಲ್ಕು ಘಟನೆಗಳನ್ನು ಕೊಟ್ಟಿದ್ದೇನೆ (ನೆನಪಿಗೆ ಬಂದಿದ್ದು ಇಷ್ಟೇ!) ಬೇರೆಯವರ ಅನುಭವಗಳನ್ನು ಕೇಳಿದರೆ ಇನ್ನೆಷ್ಟು ಅನುಭವಗಳು ಸಿಕ್ಕಬಹುದು?

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬಾಲಗಂಗಾಧರ ತಿಲಕರು ಜನರನ್ನು ಒಗ್ಗೂಡಿಸಲು, ಗಣೇಶನ ಹಬ್ಬವನ್ನು ಸಾರ್ವಜನಿಕವಾಗಿ ಮಾಡಲು ಕರೆ ಕೊಟ್ಟು ಪ್ರೇರೇಪಿಸಿದರು. ಅದರ ಸೌಲಭ್ಯವನ್ನು ನಮ್ಮ ದೇಶ ಪಡೆದುಕೊಂಡಿತು ಎಂಬುದು ಇತಿಹಾಸ.

ಆದರೆ ಈಗ, ಹೀಗೆ ಪೂಜೆ ಮಾಡುತ್ತಿರುವುದು ಯಾವುದಕ್ಕೆ? ಯಾರಿಗಾಗಿ? ಇದರ ಫಲ ಉಣ್ಣುವುದು ಯಾರು?

ಫೀಲ್ಡಿದ್ದರೆ ಅಲ್ಲಿ, ಖಾಲಿ ನಿವೇಶನ ಇದ್ದರೆ ಅಲ್ಲಿ, ಸಾರ್ವಜನಿಕ ಪಾರ್ಕ್ ಇದ್ದರೆ ಅಲ್ಲಿ… ಅದ್ಯಾವುದೂ ಇಲ್ಲದಿದ್ದರೆ ರಸ್ತೆಯಲ್ಲಿ ಶಾಮಿಯಾನ ಹಾಕಿ ಅಲ್ಲಿಯೇ ಗಣಪತಿಯನ್ನು ಕೂರಿಸಿ, ಲೇಟೆಸ್ಟ್ ಹಾಡುಗಳನ್ನು ಜೋರಾಗಿ ಹಾಕಿ… ಕುಣಿಯಲು ಸಾಧ್ಯವಾದರೆ ಕುಣಿದು (ಕುಡಿದು ಕೂಡ ಎಂದು ಪತ್ರಿಕೆ ಹಲವು ಖಾಲಿಬಾಟೆಲಿಗಳ ಛಾಯಾಚಿತ್ರಗಳೊಡನೆ ಸಾಬೀತುಪಡಿಸಿತ್ತು. ಒಂದೆರಡು ವರ್ಷಗಳ ಹಿಂದೆ!) ಸಂಭ್ರಮಿಸುವುದರಲ್ಲಿ ಯಾವ ಅರ್ಥವಿದೆ?

ಕಲಾವಿದರು ಅವರ ಕಲೆಯನ್ನು ಪ್ರಸ್ತುತಪಡಿಸಲು ಎನ್ನಲು ಅದಕ್ಕೆ ರಾಜ್ಯೋತ್ಸವ ಆಚರಣೆ ಇದೆ. ಗಣೇಶನಿಗೆ ತೋರಬೇಕಾದ ಭಕ್ತಿ, ಪ್ರೀತಿ, ಯಾವುದೂ ಇಲ್ಲ ಇದ್ದರೂ ಕಾಣುತ್ತಲಂತೂ ಇಲ್ಲ. ಪುಡಾರಿಗಳು, ಕಾರ್ಪೊರೇಟರ್ ಗಳು ಅವರುಗಳ ಶಿಷ್ಯರು ತಮ್ಮ ಶಕ್ತಿ ಸಾಮರ್ಥ್ಯ ತೋರಿಸಲು ಮಾಡುತ್ತಿರುವ ಆಚರಣೆಯಾಗಿ ಅಷ್ಟೇ ಉಳಿದಿದೆ. ಈ ಗಣೇಶನ ಪೆಂಡಾಲ್, ಪೂಜೆಗಳು, ಸಾಂಸ್ಕೃತಿಕ ಆಚರಣೆಗಳು ಎಂದು ಅನ್ನಿಸುತ್ತಿಲ್ಲ.

ಪೆಂಡಾಲ್ ಹಾಕುವವರು, ಚೇರು, ಮೈಕುಗಳನ್ನು ಬಾಡಿಗೆಗೆ ಕೊಡುವವರು ದುಡ್ಡು ಮಾಡಿಕೊಳ್ಳುತ್ತಾರೇನೋ.. ನ್ಯಾಯವಾಗಿ ಕಷ್ಟಪಟ್ಟು ದುಡಿಯುವವರಿಗೆ ಕಷ್ಟವೇ. ಅಂಗಡಿ, ಆಫೀಸು, ಫ್ಯಾಕ್ಟರೀ ಇಟ್ಟುಕೊಂಡಿರುವವರಿಗೆ ಅನಾನುಕೂಲದ ಜೊತೆಗೆ ದುಡ್ಡೂ ಕೊಡಬೇಕು. ಇನ್ನು ವಿಸರ್ಜನೆಯ ಸಮಯದಲ್ಲಿ ರಸ್ತೆಗಳಲ್ಲಿ ಸಂಚರಿಸಲಾಗದಷ್ಟು ಅಡೆ ತಡೆಗಳು ಈ ಮೆರವಣಿಗೆಯಿಂದ. ದೊಡ್ಡ ದೊಡ್ಡ ವಿಗ್ರಹಗಳು, ಸಣ್ಣ ಸಣ್ಣ ಕೆರೆ ಕೊಳಗಳನ್ನು ಮುಳುಗಿಸಿಬಿಡುತ್ತವೆ. ಹೂವು, ಪೇಪರ್ರು, ಬಂಟಿಂಗು… ಒಂದೇ ಎರಡೇ… ಎಲ್ಲೆಲ್ಲೂ ತಿಪ್ಪೆ, ಕಸದ ರಾಶಿ.

ಮನೆಯಲ್ಲಿ ತಂದೆತಾಯಿಯೊಂದಿಗೆ, ಹೆಂಡತಿ, ಮಕ್ಕಳೊಂದಿಗೆ, ಅಣ್ಣ ತಮ್ಮಂದಿರೊಂದಿಗೆ ಮಾಡದೆ, ರಸ್ತೆಯಲ್ಲಿ ಗುಂಪು ಕಟ್ಟಿಕೊಂಡು ಮಾಡುವ ಪೂಜೆಗೆ ಏನು ಫಲ? ಅದು ಕಷ್ಟವೆನ್ನಿಸಿದರೆ ಮನೆಮಂದಿಯೆಲ್ಲಾ ಸಮೀಪದ ಗಣೇಶನ ದೇವಸ್ಥಾನಕ್ಕೆ ಹೋಗಿ ನಮಸ್ಕರಿಸಿ ಬರಬಹುದು. ಹಲವು ದೇವಸ್ಥಾನಗಳೇ ಈ ಬಗೆಯ ಸಾಮೂಹಿಕ ಸಂಭ್ರಮಾಚರಣೆಗೆ ರಸ್ತೆ ಪಾರ್ಕುಗಳನ್ನು ಆಕ್ರಮಿಸಿಕೊಳ್ಳುತ್ತಿರುವುದನ್ನು ನೋಡಿದಾಗ ಈ ದೇವಸ್ಥಾನಗಳ ಒಡೆತನ ಯಾರದು ಎಂಬ ಪ್ರಶ್ನೆಯೂ ಏಳುತ್ತದೆ.

ಅಲ್ಲಿ, ಇಲ್ಲಿ ದುಡ್ಡು ಚಂದಾ ಎತ್ತಿ, ರಾಜಕಾರಣಿಗಳ ಪರೋಕ್ಷ ಬೆಂಬಲದಿಂದ ನಡೆಯುವ ಈ ಗಣೇಶನ ಪೂಜೆ (ಉತ್ಸವ, ಸಮಾರಂಭ) ಯಿಂದ ಆಗುವ ಲಾಭಗಳು ನನ್ನ ಗಮನಕ್ಕೆ ಬಂದಿಲ್ಲ.

ಲಾಭವಿಲ್ಲದೆ ಯಾರೂ ಮಾಡುವುದಿಲ್ಲ. ಸಾರ್ವಜನಿಕ ಲಾಭ, ನಷ್ಟದ ಬಗ್ಗೆ ನನ್ನ ಮಾತು, ಲೇಖನ.

Leave a Reply